ಪುಟ್ಟಗೌರಿ ಮದುವೆ ಧಾರಾವಾಹಿಯ ಮೂಲಕ ಕಿರುತೆರೆಯ ಮೆಚ್ಚಿನ ನಟಿಯಾಗಿ ಗುರುತಿಸಿಕೊಂಡವರು ರಂಜನಿ ರಾಘವನ್. ಪ್ರಸ್ತುತ ಯಶವಂತ್ ನಿರ್ದೇಶನದ ‘ಕನ್ನಡತಿ’ ಧಾರಾವಾಹಿಯಲ್ಲಿ ಉಪನ್ಯಾಸಕಿಯಾಗಿ ಗಮನ ಸೆಳೆದಿರುವ ನಿಜ ಜೀವನದಲ್ಲಿ ರಂಜನಿ ಕೊರೊನಾ ವಾರಿಯರ್ ಆಗುವ ಮೂಲಕ ಗಮನ ಸೆಳೆದಿದ್ದಾರೆ.
ಅವರು ಸ್ವತಃ ಫೇಸ್ಬುಕ್ ನಲ್ಲಿ ಹಂಚಿಕೊಂಡಿರುವ ಹಾಗೆ ಸಿವಿಲ್ ಪೊಲೀಸ್ ವಾರ್ಡನ್ ಆಗಿದ್ದಾರೆ. ಧಾರಾವಾಹಿ ಮಾತ್ರವಲ್ಲ ಸಿನಿಮಾದಲ್ಲಿ ಕೂಡ ನಾಯಕಿಯಾಗಿರುವ ರಂಜನಿ ನಟಿಸಿರುವ ಹೊಸ ಚಿತ್ರ ‘ಠಕ್ಕರ್’ ಬಿಡುಗಡೆಗೆ ಕಾದಿದೆ. ಚಿತ್ರದಲ್ಲಿ ದರ್ಶನ್ ಅಕ್ಕನ ಮಗ ಮನೋಜ್ ಜತೆಗೆ ನಾಯಕಿಯಾಗಿರುವ ರಂಜನಿಯಂಥ ಜನಪ್ರಿಯ ನಟಿ ಈ ರೀತಿ ಪೊಲೀಸ್ ಇಲಾಖೆಯೊಂದಿಗೆ ಕೈ ಜೋಡಿಸಿರುವುದು ಖಂಡಿತವಾಗಿ ಸಾರ್ವಜನಿಕರಲ್ಲಿ ಜಾಗೃತಿಯನ್ನು ಮೂಡಿಸುವುದರಲ್ಲಿ ಸಂದೇಹವಿಲ್ಲ. ಅದಕ್ಕಾಗಿ ರಂಜನಿಯವರಿಗೆ ಅಭಿನಂದನೆಗಳು. ಈ ಕುರಿತಾಗಿ ರಂಜನಿಯವರು ಫೇಸ್ಬುಕ್ ನಲ್ಲಿ ಹಂಚಿಕೊಂಡದ್ದು ಹೀಗೆ.
ನಮಸ್ಕಾರ. ನಿಮಗೆಲ್ಲರಿಗೂ ತಿಳಿದಿರುವಂತೆ ರಾಜ್ಯದಲ್ಲಿ ಕೋವಿಡ್ ಕೇಸಸ್ ದಿನೇ ದಿನೇ ಹೆಚ್ಚಾಗುತ್ತಿದೆ. ಹಾಗಾಗಿ ಕರೋನಾ ನಿಯಂತ್ರಣ ಹಾಗೂ ಕರೋನಾ ನಿಯಮಗಳನ್ನು ಜಾರಿಗೊಳಿಸುವುದು ಸರಕಾರಕ್ಕೆ ಹಾಗೂ ಪೊಲೀಸ್ ಇಲಾಖೆಗೂ ಅತಿ ದೊಡ್ಡ ಸವಾಲಾಗಿದೆ. ಈ ನಿಟ್ಟಿನಲ್ಲಿ ಸದ್ಯ ಪೊಲೀಸರಿಗೆ ಜನರ ಸೇವೆಯ ಅವಶ್ಯಕತೆ ಇದ್ದು, ಬೆಂಗಳೂರಿನ ನಿವಾಸಿಗಳನ್ನು ಸಿವಿಲ್ ಪೊಲೀಸ್ ವಾರ್ಡನ್ ಆಗಿ ಸೇವೆಮಾಡುವಂತೆ ಕರೆ ನೀಡಿದ್ದಾರೆ. ನಾನು ಕೂಡ ಸಿವಿಲ್ ಪೊಲೀಸ್ ವಾರ್ಡನ್ ಆಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಹಾಗೆ, ಸದೃಢ ಹಾಗೂ ಸೇವಾ ಮನಸ್ಸಿನ ಯುವಜನತೆಯನ್ನು ಸ್ವಯಂಸೇವಕರಾಗಿ ಈ ಕಾರ್ಯದಲ್ಲಿ ಸೇರುವಂತೆ ಸೂಚಿಸುತ್ತೇನೆ – ರಂಜನಿ ರಾಘವನ್