ಲೂಸಿಯಾ ಪವನ್ ಗೆ ಉಪ್ಪಿಯ ಆಫರ್ !

`ಪೊಟ್ರೇಟ್ ಆಫ್ ಎ ಲೇಡಿ ಆನ್ ಫೈರ್’ ಕಳೆದ ವರ್ಷ ತೆರೆಕಂಡ ಫ್ರೆಂಚ್ ಚಿತ್ರ. ಅದು ಬಾಕ್ಸ್ ಆಫೀಸ್ ಗೆಲವು ಮಾತ್ರವಲ್ಲ, ಸಾಕಷ್ಟು ಪ್ರಶಸ್ತಿಗಳನ್ನು ಬಾಚಿಕೊಂಡ ಚಿತ್ರ. ಕನ್ನಡದ ಜನಪ್ರಿಯ ನಿರ್ದೇಶಕ ಪವನ್ ಕುಮಾರ್ ನೇತೃತ್ವದಲ್ಲಿ ವಿನೂತನವಾಗಿ ಸ್ಥಾಪಿಸಲ್ಪಟ್ಟ ಎಫ್ ಯು ಸಿ (ಫಿಲ್ಮ್ ಮೇಕರ್ಸ್ ಯುನೈಟೆಡ್ ಕ್ಲಬ್) ವತಿಯಿಂದ ಚಿತ್ರದ ಬಗ್ಗೆ ಭಾನುವಾರ ರಾತ್ರಿ ಸಂವಾದ ಏರ್ಪಡಿಸಲಾಗಿತ್ತು. ಖ್ಯಾತ ನಟಿ ಪ್ರಿಯಾಮಣಿ, ನಿರ್ದೇಶಕಿ ಕವಿತಾ ಲಂಕೇಶ್, ಛಾಯಾಗ್ರಾಹಕ ಮನೋಹರ್ ಜೋಷಿ ಅವರೊಂದಿಗೆ ರಿಯಲ್ ಸ್ಟಾರ್ ಉಪೇಂದ್ರ ಅವರು ಕೂಡ ಈ ಸಂವಾದದಲ್ಲಿ ಭಾಗಿಯಾಗಿದ್ದು ವಿಶೇಷವಾಗಿತ್ತು.

ಎಫ್ ಯು ಸಿನಲ್ಲಿ ಇದುವರೆಗೆ ಮೂವತ್ತರಷ್ಟು ನಿರ್ದೇಶಕರು ಸೇರ್ಪಡೆಯಾಗಿದ್ದಾರೆ. ಆದರೆ ಆ ಪಟ್ಟಿಯಲ್ಲಿ ನಿರ್ದೇಶಕ ಉಪೇಂದ್ರ ಅವರು ಇರಲಿಲ್ಲ. ಆದರೆ ಸಂವಾದದಲ್ಲಿ ಪಾಲ್ಗೊಂಡ ಅವರು ಪವನ್ ಮತ್ತಿತರರ ಜತೆಗೆ ನಡೆಸಿದ ಆತ್ಮೀಯ ಮಾತುಕತೆ ಸಂವಾದಕ್ಕೆ ಸಂಭ್ರಮ ನೀಡಿತು. ಸಂವಾದಕ್ಕೆ ಮೊದಲು ವೀಕ್ಷಿಸಿದ ಫ್ರೆಂಚ್ ಚಿತ್ರಕ್ಕೆ ಪೂರಕವಾಗಿ ಸರಾಸರಿ ಸಿನಿಮಾ ಮೇಕಿಂಗ್ ವಿಚಾರದ ಕುರಿತಾಗಿ ಈ ನಾಲ್ವರು ಹಂಚಿಕೊಂಡ ಅಭಿಪ್ರಾಯಗಳು ಆಸಕ್ತಿದಾಯಕವಾಗಿತ್ತು.

ಡಾ.ರಾಜ್ ಕುಮಾರ್ ಅವರನ್ನು ನೆನಪಿಸಿಕೊಂಡ ಉಪೇಂದ್ರ

ಉಪೇಂದ್ರ ಅವರು ಒಂದು ದೃಶ್ಯಕ್ಕೆ ಕಲಾವಿದರನ್ನು ಹೇಗೆ ತಯಾರಿ ಮಾಡುತ್ತಾರೆ ಎನ್ನುವುದು ಪವನ್ ಕುಮಾರ್ ಅವರು ಉಪೇಂದ್ರರಿಗೆ ಕೇಳಿದಂಥ ಪ್ರಶ್ನೆ. ಆದರೆ ಅವರು ತಾವು ನಿರ್ದೇಶಕ ಮತ್ತು ನಟ ಕೂಡ ಆಗಿರುವುದರಿಂದ ಎಲ್ಲ ಪಾತ್ರಗಳಲ್ಲಿಯೂ ನಾನೇ ಪ್ರವೇಶ ಮಾಡಿ ನಟನೆಯನ್ನು ವಿವರಿಸುತ್ತೇನೆ. ಉಳಿದಂತೆ ಕೆಲವೊಮ್ಮೆ ಲೊಕೇಶನ್‌ಗೆ ಹೋದಾಗ ಕೆಲವು ದೃಶ್ಯಗಳನ್ನು ಅನಿರೀಕ್ಷಿತವಾಗಿ ಬದಲಾಯಿಸಬೇಕಾಗುತ್ತದೆ. ಅದಕ್ಕೆ ನಿರ್ದೇಶಕರಾಗಲೀ, ಕಲಾವಿದರಾಗಲೀ ಸಿದ್ಧರಾಗಿರಬೇಕಾಗುತ್ತದೆ ಎಂದು ಉಪೇಂದ್ರ ಹೇಳಿದರು. ಸಿನಿಮಾ ನಟನೆಯ ಸನ್ನಿವೇಶಗಳು ಹಲವು ಬಾರಿ ಕ್ಯಾಮೆರಾದ ಮುಂದೆಯೇ ಬದಲಾಗುತ್ತದೆ. ಇದನ್ನು ಅಣ್ಣಾವ್ರು ಕೂಡ ಒಪ್ಪುತ್ತಾರೆ ಎಂದ ಉಪ್ಪಿ, “ನಾನು ನೋಡಿದ ಅವರ ಸಂದರ್ಶನವೊಂದರಲ್ಲಿ ಹೇಳಿದ್ದಂಥ ಒಂದು ಮಾತು ನೆನಪಾಯಿತು. ಅವರು ಸಿಕ್ಕಾಪಟ್ಟೆ ಯೋಜನೆ ಹಾಕುತ್ತಿದ್ದರಂತೆ “ಹೀಗೆಲ್ಲ ನಟಿಸಬೇಕು” ಎಂದು. ಆದರೆ ಸ್ಟಾರ್ಟ್ ಕ್ಯಾಮೆರಾ ಆಕ್ಷನ್ ಎಂದೊಡನೆ ಎಲ್ಲವೂ ತಲೆಯಿಂದ ಹೊರಟೇ ಹೋಗುತ್ತಿತ್ತಂತೆ” ಎಂದು ಕ್ಯಾಮೆರಾ ಮುಂದಿನ ಸ್ಪಾಂಟೆನಿಯಸ್ ನಟನೆಯನ್ನು ಸಮರ್ಥಿಸಿಕೊಂಡರು.

ಪ್ರಿಯಾಮಣಿಗೆ ಸ್ಕ್ರಿಪ್ಟೇ ಇಲ್ಲದ ಚಿತ್ರಕ್ಕೆ ನಟಿಸಲು ಆಹ್ವಾನ..!

ನನ್ನ ಮಗಳು ಆರಾಧ್ಯ ಕೂಡ ಸ್ಕ್ರಿಪ್ಟ್ ಮಾಡಲು ಶುರು ಮಾಡಿದ್ದಾಳೆ. ಆದರೆ ಆಕೆಗೆ ಕತೆ ಬರೆಯುವಾಗ ಮುಂದೇನು ಅಂತ ಗೊತ್ತಿರಲ್ಲ. ಒಂದು ರೀತಿಯಲ್ಲಿ ಅದೇ ನಿಜವಾದ ಲೈಫ್. ನಮಗೂ ನಾಳೆ ಏನು ಎನ್ನುವುದರ ಬಗ್ಗೆ ಸರಿಯಾದ ಅರಿವು ಇರುವುದಿಲ್ಲ ಎಂದು ಹೇಳಿದ ಉಪೇಂದ್ರ ಬಹುಶಃ ಪ್ರಿಯಾಮಣಿಯವರು ಕೂಡ ಇದನ್ನು ಒಪ್ಪುತ್ತಾರೆ ಎಂದುಕೊಳ್ಳುತ್ತೇನೆ. ಯಾಕೆಂದರೆ ಅವರು ಕೂಡ ಟೇಕ್ ತೆಗೆಯುವ ನಿಮಿಷಗಳ ಮೊದಲು ಕೂಡ ನಮ್ಮೊಂದಿಗೆ ಸಾಧಾರಣವಾಗಿ ಇರುತ್ತಾರೆ. ಆಕ್ಷನ್ ಹೇಳಿದ ತಕ್ಷಣ ಒಮ್ಮೆಲೆ ಪಾತ್ರವಾಗಿ ಬದಲಾಗುವುದನ್ನು ನೋಡಿದ್ದೇನೆ ಎಂದರು. ಉಪ್ಪಿಯ ಮಾತುಗಳನ್ನು ಒಪ್ಪಿದ ಪ್ರಿಯಾಮಣಿ, “ನನಗೆ ಅದು ಅಭ್ಯಾಸವಾಗಿದೆ. ಹಾಗಂತ ಆ ನನ್ನ ರೀತಿಯೇ ಮಾದರಿ ಎಂದು ನಾನು ಹೇಳುವುದಿಲ್ಲ. ಆದರೆ ಅದರಿಂದಾಗಿ ಹಲವು ಬಾರಿ ನೈಜವಾಗಿ ನಟಿಸಲು ಸಹಾಯವಾಗಿದೆ. ಕಳೆದ ವರ್ಷ ನಾನು ಮನೋಜ್ ಬಾಜಪೇಯಿ ಅವರೊಂದಿಗೆ ನಟಿಸಿದ ವೆಬ್ ಸೀರೀಸ್ `ದಿ ಫ್ಯಾಮಿಲಿ ಮ್ಯಾನ್’ ನಲ್ಲಿ ಕೂಡ ನಾವಿಬ್ಬರು ಲೊಕೇಶನ್ನಲ್ಲೇ ಮಾತನಾಡಿ ಹೆಚ್ಚಿ ಸಿದ್ಧತೆಗಳಿಲ್ಲದೆ ತಕ್ಷಣ ನಟಿಸುತ್ತಿದ್ದೆವು. ಅಂಥ ದೃಶ್ಯಗಳು ಚೆನ್ನಾಗಿ ಬಂದಿವೆ ಕೂಡ” ಎಂದರು. ಪ್ರಿಯಾಮಣಿ ತಮ್ಮ ದೃಶ್ಯಗಳನ್ನು ತಾವೇ ತಯಾರು ಮಾಡಿಕೊಂಡಿದ್ದನ್ನು ಕೇಳಿದೊಡನೆ ಉಪೇಂದ್ರ, “ಹಾಗಾದರೆ ಸ್ಕ್ರಿಪ್ಟೇ ಇಲ್ಲದ ಒಂದು ಸಿನಿಮಾ ಮಾಡ್ತೀನಿ, ನೀವೇ ಹೀರೋಯಿನ್ ಬನ್ನಿ” ಎಂದು ಪ್ರಿಯಾಮಣಿಗೆ ತಮಾಷೆಯ ಆಹ್ವಾನ ನೀಡಿದರು.

ಆದರೆ ಕವಿತಾ ಲಂಕೇಶ್ ಇದನ್ನು ಒಪ್ಪಿಕೊಳ್ಳಲು ಸಿದ್ಧರಿರಲಿಲ್ಲ. “ಬಹುಶಃ ನಾನು ಕಾರ್ಪೊರೇಟ್ ಡಾಕ್ಯುಮೆಂಟರಿ ಮಾಡಿ, ಬಳಿಕ ಆ ಶಿಸ್ತಿನಲ್ಲಿ ಚಿತ್ರರಂಗಕ್ಕೆ ಬಂದ ಕಾರಣ ಇರಬಹುದು; ಮೊದಲೇ ಬೌಂಡ್ ಸ್ಕ್ರಿಪ್ಟ್ ತಯಾರು ಮಾಡಿಕೊಂಡಿರುತ್ತೇನೆ. ನನ್ನ ಪ್ರಕಾರ ಪ್ರತಿ ಸ್ಕ್ರಿಪ್ಟ್ ಗೂ ಅದರದ್ದೇ ಆದ ಗ್ರಾಮರ್ ಇದೆ. ಅದನ್ನು ತಕ್ಷಣಕ್ಕೆ ಮುರಿದು ಬದಲಾಯಿಸಲಾಗದು” ಎಂದರು. ತಕ್ಷಣ ಪ್ರತಿಕ್ರಿಯಿಸಿದ ಉಪೇಂದ್ರ , “ಸ್ಕ್ರಿಪ್ಟ್ ಖಂಡಿತವಾಗಿ ಬೇಕು. ನಾನು ಕೂಡ ಸ್ಕ್ರಿಪ್ಟ್ ಮಾಡಲು ಆರು ತಿಂಗಳು, ಒಂದು ವರ್ಷ ತೆಗೆದುಕೊಂಡಿರ್ತೀನಿ. ಸ್ಕ್ರಿಪ್ಟ್ ಇಲ್ಲದೆ ಚಿತ್ರೀಕರಣಕ್ಕೆ ಹೋಗುವುದೇ ನನ್ನಿಂದ ಸಾಧ್ಯವಿಲ್ಲ. ಆದರೆ ಚಿತ್ರೀಕರಣದ ಜಾಗದಲ್ಲಿ ಒಂದು ಸಣ್ಣ ಬದಲಾವಣೆ ಮಾಡದಿದ್ದರೆ ಶೂಟಿಂಗ್ ನಡೆಯುವುದಿಲ್ಲ ಎನ್ನುವ ಸಂದರ್ಭ ಬಂದಾಗ ‘ಇಲ್ಲ ಸ್ಕ್ರಿಪ್ಟ್ ಪ್ರಕಾರವೇ ತೆಗೆಯಬೇಕು’ ಎಂದು ಹಠ ಹಿಡಿದು ಕೂರದೇ, ತಕ್ಷಣ ಹೊಸತಾಗಿ ಬದಲಾಯಿಸಲು ತಯಾರಾಗಿರಬೇಕು” ಎಂದರು. ಉಪೇಂದ್ರ ಅವರ ಗರಡಿಯಲ್ಲೇ ಗುರುತಿಸಿಕೊಂಡು ಜನಪ್ರಿಯರಾಗಿರುವ ಛಾಯಾಗ್ರಾಹಕ ಮನೋಹರ್ ಜೋಷಿ ಕೂಡ ಇದನ್ನು ಸಮರ್ಥಿಸಿದರು. “ನಾನು ಇತರ ಕೆಲವು ಛಾಯಾಗ್ರಾಹಕರಂತೆ ನನಗೆ ಮೊದಲೇ ತಿಳಿಸಿದ ಮಾದರಿಯಲ್ಲೇ ಶೂಟ್ ಮಾಡಬೇಕು ಎಂದು ಹಠ ಮಾಡುವುದಿಲ್ಲ. ಯಾಕೆಂದರೆ ಸಿನಿಮಾ ಎನ್ನುವುದು ಅಂತಿಮವಾಗಿ ನಿರ್ದೇಶಕರ ಕನಸು. ಅವರು ಕಂಡಿದ್ದನ್ನು ಸಾಕಾರಗೊಳಿಸುವುದಷ್ಟೇ ನಮ್ಮ ಕೆಲಸ. ಆದುದರಿಂದಲೇ ನಾನು ಚಿತ್ರ ಆರಂಭವಾಗುತ್ತಿದ್ದಂತೆ ನಿರ್ದೇಶಕರ ಜತೆಗೆ ಆತ್ಮೀಯವಾಗಿದ್ದುಕೊಂಡು ಚಿತ್ರದ ಕುರಿತಾದ ಅವರ ಸಂಪೂರ್ಣ ದೃಷ್ಟಿಕೋನವನ್ನು ತಿಳಿಯಲು ಪ್ರಯತ್ನಿಸುತ್ತೇನೆ” ಎನ್ನುವ ಮೂಲಕ ಅಚ್ಚರಿ ನೀಡಿದರು.

ಲೂಸಿಯಾ ಘಟನೆ ನೆನಪಿಸಿಕೊಂಡ ಪವನ್ ಕುಮಾರ್

ಯಾರು ಏನೇ ಹೇಳಿದರು ಕೂಡ ಸ್ಕ್ರಿಪ್ಟ್ ನಲ್ಲಿರುವುದನ್ನು ಸಂದರ್ಭಕ್ಕೆ ತಕ್ಕಂತೆ ಬದಲಾಯಿಸುವುದನ್ನು ಒಪ್ಪಿಕೊಳ್ಳದ ಪವನ್ ಕುಮಾರ್ ಆದರೆ ತಾವು ಕೂಡ ಅನಿವಾರ್ಯ ಸಂದರ್ಭದಲ್ಲಿ ಒಮ್ಮೆ ಲೊಕೇಶನ್ ಶಿಫ್ಟ್ ಮಾಡಬೇಕಾಗಿ ಬಂದಿದ್ದನ್ನು ಹೇಳಿಕೊಂಡರು. “ಅದು ಲೂಸಿಯಾ ಚಿತ್ರದ ಶೂಟಿಂಗ್ ಸಂದರ್ಭ. ಚಿತ್ರದಲ್ಲಿ ಸ್ಟಾರ್ ನಟನೊಬ್ಬ ಪ್ರೇಯಸಿಯ ಜತೆಗೆ ಮಾತನಾಡುವ ಸನ್ನಿವೇಶ ಇರುತ್ತದೆ. ಸ್ಕ್ರಿಪ್ಟ್ ಪ್ರಕಾರ ನಾನು ಸ್ಟಾರ್ ನ ಬಿಲ್ಡಪ್‌ ಗೆ ತಕ್ಕಂತೆ `ಲೀಲಾ ಪ್ಯಾಲೇಸ್’ ನಲ್ಲಿ ನಾಯಕಿಯೊಡನೆ ಮಾತನಾಡಬೇಕಿತ್ತು. ಆದರೆ ನಮ್ಮ ನಿರ್ಮಾಪಕರಿಗೆ ಲೀಲಾ ಪ್ಯಾಲೇಸ್ ಬಾಡಿಗೆ ಕಟ್ಟುವಷ್ಟು ದುಡ್ಡು ಇರಲಿಲ್ಲ. ಸೆಟ್ ಹಾಕುವ ದುಡ್ಡೂ ಇರಲಿಲ್ಲ. ಹಾಗಾಗಿ ಒಂದು ಕಾಫಿ ಶಾಪ್ ನಲ್ಲಿ ರಾತ್ರಿ ಹನ್ನೊಂದು ಗಂಟೆಯ ಬಳಿಕ ಚಿತ್ರೀಕರಣ ನಡೆಸುವ ಅನುಮತಿ ಪಡೆದುಕೊಂಡೆವು. ವಿಪರ್ಯಾಸ ಏನೆಂದರೆ ಅಲ್ಲಿ ಇತರ ಕಸ್ಟಮರ್ಸ್ ಆಗಿ ಅಭಿನಯಿಸಲು ಜ್ಯೂನಿಯರ್ ಆರ್ಟಿಸ್ಟನ್ನು ಕರೆದು ತರುವಷ್ಟು ದುಡ್ಡು ಕೂಡ ನಿರ್ಮಾಪಕರಲ್ಲಿ ಇರಲಿಲ್ಲ! ಹಾಗೆ ಖಾಲಿ ಬಿದ್ದ ಕಾಫಿ ಶಾಪ್ ತೋರಿಸುವ ಸಂದರ್ಭದಲ್ಲಿ ದೃಶ್ಯದ ಸಮರ್ಥನೆಗೆ ಎನ್ನುವಂತೆ ಆ ಸ್ಟಾರ್ ಹೇಳುವಂತೆ ಒಂದು ಡೈಲಾಗ್ ಸೇರಿಸಿದೆ. “ನಾನು ನಿನ್ನಲ್ಲಿ ಮಾತನಾಡಲಿಕ್ಕಾಗಿ ಇಡೀ ಕಾಫಿಶಾಫ್ ಬುಕ್ ಮಾಡಿದ್ದೇನೆ” ಎನ್ನುವುದು ಆ ಸಂಭಾಷಣೆ ಆಗಿತ್ತು. ವಿಚಿತ್ರ ಏನೆಂದರೆ ಥಿಯೇಟರಲ್ಲಿ ಆ ಡೈಲಾಗ್‌ಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕವು. ಆದರೆ ಅದು ಹಣಕಾಸಿನ ಅನಿವಾರ್ಯತೆಯಿಂದ ಬದಲಾಯಿಸಲದ ದೃಶ್ಯಕ್ಕೆ ಸಿಕ್ಕಂಥ ಪ್ರಶಂಸೆ ಆಗಿತ್ತು” ಎಂದು ಪವನ್ ಹೇಳಿ ಮುಗಿಸಿದಾಗ ಉಪೇಂದ್ರರ ಮುಖದಲ್ಲಿ ನಗುವಿತ್ತು. “ಅದನ್ನೇ ಹೇಳಿದ್ದು, ಸಿನಿಮಾ ಎನ್ನುವುದು ಒಂದು ಮ್ಯಾಜಿಕ್. ನಮ್ಮ ಪ್ರಯತ್ನದ ನಡುವೆ ಅದು ತನ್ನಿಂದ ತಾನೇ ಆಗಿ ಬಿಡುತ್ತದೆ. ಇಟ್ ಹ್ಯಾಪನ್ಸ್! ಅದರಲ್ಲೇ ನಿಮಗೆ ಈ ಥ್ರಿಲ್‌ ಸಿಗೋದು” ಎಂದ ರಿಯಲ್ ಸ್ಟಾರ್ ಉಪೇಂದ್ರ ಅವರು ಪವನ್ ಕುಮಾರನ್ನು ಕೂಡ ತಮ್ಮ ಟ್ರ್ಯಾಕ್ ಗೆ ತರಲು ಪ್ರಯತ್ನಿಸಿದರು!

“ಇಲ್ಲ ಸರ್ ಹಾಗಂತ ಅನಿರೀಕ್ಷಿತವಾಗಿ ಎಂದೋ ಸಂಭವಿಸುವುದರ ಮೇಲೆ ನಾವು ಭರವಸೆ ಇಡೋದು ಹೇಗೆ? ಒಬ್ಬ ಗುರಿಕಾರ ನೂರಾರು ಬಾರಿ ಒಟ್ಟಾರೆ ಶೂಟ್ ಮಾಡಿದಾಗ ಅದರಲ್ಲಿ ಒಂದು ಬಾಣ ಗುರಿ ತಲುಪಿದ್ದನ್ನೇ ಗೆಲುವಿನ ರೀತಿ ಎಂದುಕೊಂಡರೆ ಹೇಗೆ? ಗುರಿಗೆಂದೇ ಪ್ರಯತ್ನಿಸಿ ಸೋಲೋದು ಬೆಟರಲ್ವ? ಎನ್ನೋದು ನನ್ನ ಪ್ರಶ್ನೆ” ಎಂದರು ಪವನ್. “ಖಂಡಿತವಾಗಿ ಗುರಿ ಗೆಲ್ಲುವ ಶ್ರಮ ಇರಬೇಕು ಅದರ ಜತೆಯಲ್ಲೇ ಹೊಂದಿಕೊಳ್ಳುವ ಗುಣವೂ ಇರಬೇಕು. ಕೆಲವೊಂದು ಸಂದರ್ಭಗಳೇ ನಮಗೆ ಪಾಠ ಕಲಿಸುತ್ತವೆ ಎಂದು ಅವುಗಳನ್ನು ಪರಿಗಣಿಸಬೇಕು” ಎಂದರು ಉಪೇಂದ್ರ. ಇಬ್ಬರೂ ಕೂಡ ತಮ್ಮ ವಾದಗಳಲ್ಲಿ ಕಾಂಪ್ರಮೈಸ್ ಮಾಡಿಕೊಳ್ಳಲು ತಯಾರಿರದೇ ಹೋದರೂ ಅವರಿಬ್ಬರೂ ನಿರ್ದೇಶಕರಾಗಿ ಗೆದ್ದಿರುವ ಕಾರಣ ವೀಕ್ಷಕರಿಗೆ ಅವರ ಮಾತುಗಳಿಂದ ಕಲಿಯುವ ಅವಕಾಶವಂತೂ ಖಂಡಿತವಾಗಿ ಇತ್ತು.

ಸಂವಾದದ ಕೊನೆಯಲ್ಲಿ “ನೀವು ಬೇಗ ನಿಮ್ಮ ತಯಾರಿ ಮಾಡಿಕೊಂಡು ನನಗೆ ಒಂದು ಸ್ಟೋರಿ ಹೇಳಿ” ಎಂದು ಪವನ್ ಕುಮಾರ್ ಅವರಿಗೆ ಹೇಳುವ ಮೂಲಕ ಉಪೇಂದ್ರ ಅವರು ಪವನ್ ನಿರ್ದೇಶನದ ಚಿತ್ರದಲ್ಲಿ ನಟಿಸುವ ಆಕಾಂಕ್ಷೆ ವ್ಯಕ್ತಪಡಿಸಿದರು. ಅದಕ್ಕೆ ಪವನ್ ಕುಮಾರ್ ಕೂಡ ಕೋವಿಡ್ ಮುಗಿಯಲಿ ಎಂದು ತಮ್ಮ ಸಹಮತ ವ್ಯಕ್ತಪಡಿಸಿದರು. “ಇಂಥ ಚರ್ಚೆಗಳು ನಡೆಯುತ್ತಿರಬೇಕು, ಆದರೆ ನೀವು ನಮ್ಮನ್ನು ಹೊರಗಿಟ್ಟಿದ್ದೀರ” ಎಂದು ಉಪ್ಪಿ ಮಾಡಿದ ಆಪಾದನೆಗೆ, ” ಖಂಡಿತವಾಗಿ ಇಲ್ಲ ಸರ್, ನೀವು ಎಫ್ ಯು ಸಿ ಗೆ ಬಂದರೆ ಅದೇ ನಮಗೆ ಗ್ರೇಟ್ ಥಿಂಗ್, ಪ್ಲೀಸ್ ಬನ್ನಿ” ಎಂದು ಕೈ ಮುಗಿದರು. ಈ ಸಂವಾದವನ್ನು ಗಮನಿಸಿದವರಿಗೆ ಎಫ್ ಯು ಸಿಗೆ ಉಪೇಂದ್ರರ ಪ್ರವೇಶ ಮತ್ತು ಮುಂದಿನ ದಿನಗಳಲ್ಲಿ ಉಪ್ಪಿ ಮತ್ತು ಪವನ್ ಕುಮಾರ್ ಸಂಗಮದ ಅದ್ಭುತ ಕನ್ನಡ ಚಿತ್ರದ ಕಲ್ಪನೆಗಳು ತಲೆಯಲ್ಲಿ ಓಡಾಡತೊಡಗಿವೆ.

Recommended For You

Leave a Reply

error: Content is protected !!