ಚಾಲೆಂಜಿಂಗ್ ಸ್ಟಾರ್ ನಟನೆಯ ‘ರಾಬರ್ಟ್’ ಚಿತ್ರತಂಡ ಹೊಸ ಸಿನಿಮಾ ಸ್ಕ್ರಿಪ್ಟ್ ಪೂಜೆಯನ್ನು ಇಂದು ಬೆಳಿಗ್ಗೆ ಸರಳವಾಗಿ ನೆರವೇರಿಸಿದೆ. ತಮ್ಮ ಮುಂದಿನ ಸಿನಿಮಾ ದರ್ಶನ್ ಅವರ ನಾಯಕತ್ವದ ಐತಿಹಾಸಿಕ ಸಬ್ಜೆಕ್ಟ್ ಹೊಂದಿರುವ ಚಿತ್ರವಾಗಲಿದೆ ಎನ್ನುವುದನ್ನು ಈಗಾಗಲೇ ಘೋಷಿಸಿದ್ದ ನಿರ್ಮಾಪಕ ಉಮಾಪತಿಯವರು ಇದೀಗ ಅಧಿಕೃತವಾಗಿ ಸ್ಕ್ರಿಪ್ಟ್ ಪೂಜೆಯ ಮೂಲಕ ಚಾಲನೆ ನೀಡಿದ್ದಾರೆ. ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡರ ಜತೆಗೆ ಸಿನಿಕನ್ನಡ. ನಡೆಸಿರುವ ವಿಶೇಷ ಮಾತುಕತೆ ಇಲ್ಲಿದೆ.
ಯಾವ ಇತಿಹಾಸ ಪುರುಷನ ಚಿತ್ರ ಇದು?
ದಯವಿಟ್ಟು ಕ್ಷಮಿಸಿ. ಅದನ್ನು ರಿವೀಲ್ ಮಾಡಲು ಇದು ತುಂಬ ಅರ್ಲಿ ಆಯಿತು. ಸದ್ಯಕ್ಕೆ ಸ್ಕ್ರಿಪ್ಟ್ ಲೆವಲಲ್ಲಿದೆ. ಇವತ್ತು ದೇವರ ಆಶೀರ್ವಾದ ತೆಗೆದುಕೊಂಡಿದ್ದೇವೆ ಅಷ್ಟೇ. ಅಂದರೆ ಇಂದಿನಿಂದ ಸ್ಕ್ರಿಪ್ಟ್ ಬರವಣಿಗೆ ಶುರುವಾಗಲಿದೆ. ಹಾಗಾಗಿ ಸದ್ಯಕ್ಕೆ ಚಾಲನೆ ಸಿಕ್ಕ ಸುದ್ದಿಯಷ್ಟೇ ಸಾಕು. ಯಾಕೆಂದರೆ ನಾವು ಅಂದುಕೊಂಡಿರುವುದನ್ನು ಸುದ್ದಿ ಮಾಡುವುದಕ್ಕಿಂತ ಸ್ಕ್ರಿಪ್ಟ್ ರೂಪದಲ್ಲಿ ಎಲ್ಲರಿಗೂ ಒಪ್ಪಿಗೆಯಾದ ಮೇಲೆ ನಿಮಗೆ ತಿಳಿಸಿದರೆ ಅದು ಅರ್ಥಪೂರ್ಣವಾಗುತ್ತದೆ.
ದರ್ಶನ್ ಅವರು ಏನು ಹೇಳಿದ್ದಾರೆ?
ದರ್ಶನ್ ಅವರೇ ಇವತ್ತು ಪೂಜೆ ಮಾಡುವಂತೆ ಸೂಚಿಸಿದ್ದಾರೆ. ಅವರು ಮೈಸೂರಿನ ತೋಟದಲ್ಲಿದ್ದಾರೆ. ನಮ್ಮದು ‘ರಾಬರ್ಟ್’ ಸಂಪೂರ್ಣವಾಗಿ ಮುಗಿದಿದೆ. ಅದರಲ್ಲಿ ಏನೂ ಪೆಂಡಿಂಗ್ ಇಲ್ಲ. ಥಿಯೇಟರ್ ತೆರೆದೊಡನೆ ಸಿನಿಮಾ ಬಿಡುಗಡೆಯ ವ್ಯವಸ್ಥೆಯೂ ನಡೆಯುತ್ತದೆ.
ಸಿನಿಮಾ ಬಿಡುಗಡೆಗೆ ಮೊದಲು ಪ್ರಾಯೋಗಿಕವಾಗಿ ಹಳೇ ಹಿಟ್ ಸಿನಿಮಾ ಪ್ರದರ್ಶಿಸುವ ಬಗ್ಗೆ ಏನು ಹೇಳ್ತೀರ?
ಅಂಥದ್ದೊಂದು ‘ಟ್ರಯಲ್ ಆ್ಯಂಡ್ ಎರರ್ ಮೆಥಡ್’ ಖಂಡಿತವಾಗಿ ಒಳ್ಳೆಯದೇ. ಯಾಕೆಂದರೆ ಮೊದಲು ಜನಗಳಿಗೆ ಕಾನ್ಫಿಡೆನ್ಸ್ ಬರಬೇಕು. ಒಂದು ವೇಳೆ ಏಕಾಏಕಿ ರಾಬರ್ಟ್ ರಿಲೀಸ್ ಮಾಡಿದರೂ ಸಹ, ಫ್ಯಾನ್ಸ್ ಖಂಡಿತವಾಗಿ ಬರುತ್ತಾರೆ. ಆದರೆ ಫ್ಯಾಮಿಲಿ ಆಡಿಯನ್ಸ್ ಬರಲ್ಲ. ಹಾಗಾಗಿ ಹಳೆಯ ಹಿಟ್ ಪ್ರದರ್ಶಿಸಿ ಜನರ ರೆಸ್ಪಾನ್ಸ್ ಹೇಗಿದೆ ಎಂದು ಪರೀಕ್ಷೆ ಮಾಡೋದು ಒಳ್ಳೆಯದೇ. ಕ್ರೌಡ್ ಬಂದರೆ ನಮಗೂ ಧೈರ್ಯವಾದೀತು. ಆದರೆ ನಾವು ಆ ಬಗ್ಗೆ ಇನ್ನೂ ಯೋಚನೆ ಮಾಡಿಲ್ಲ. ಯಾಕೆಂದರೆ ಸದ್ಯಕ್ಕೆ ಇದು ನಮ್ಮ ಕೈ ಮೀರಿರುವ ಸಂಗತಿ. ಎಲ್ಲವೂ ಭಗವಂತನ ಕೈಯ್ಯಲ್ಲಿದೆ.
ದೊಡ್ಡ ಬಜೆಟ್ ನಿರ್ಮಾಪಕರ ಲಾಕ್ಡೌನ್ ಸಂಕಷ್ಟ ನಿಮಗೂ ಎದುರಾಯಿತೇ?
ಮುಖ್ಯವಾಗಿ ದೇವರ ದಯದಿಂದ ನಾನು ಎಲ್ಲೂ ಸಾಲ ಮಾಡದೆ, ಚಿತ್ರ ಸಂಪೂರ್ಣ ಮಾಡಿದ್ದೇನೆ. ಸಾಲ ಮಾಡಿದ್ದರೆ ಕಷ್ಟವಾಗುತ್ತಿತ್ತು. ಆದರೆ ಲಾಕ್ಡೌನ್ ಸಂದರ್ಭದಲ್ಲಿ ನಾನು, ದರ್ಶನ್ ಸರ್ ಮತ್ತು ಒಂದಷ್ಟು ಜನ ಫಾರೆಸ್ಟ್ ವಿಸಿಟ್ ಮಾಡಿದ್ದೆವು. ಬಹುಶಃ ದರ್ಶನ್ ಅವರು ಹೋಗಿರುವುದು ನಿಮಗೂ ಗೊತ್ತಿದೆ. ಆ ಸಂದರ್ಭದಲ್ಲಿ ನಾನೂ ಇದ್ದೆ. ನೈಸ್ ರೋಡ್ ಹತ್ತಿರ ಫಿಲ್ಮ್ ಸಿಟಿ ಕೆಲಸಗಳು ನಡೆಯುತ್ತಿವೆ. ಅದು ಐದು ವರ್ಷಗಳ ಯೋಜನೆ. ಸುಮಾರು 250 ಕೋಟಿ ಪ್ರಾಜೆಕ್ಟ್ ಅದು. ಅದಕ್ಕಾಗಿ ಸರ್ಕಾರವನ್ನು ಎದುರು ನೋಡಿ ಸಾಕಾಯಿತು. ಹಿಂದೆಯೇ ಎಲ್ಲರ ಸಹಕಾರದೊಂದಿಗೆ ಶುರು ಮಾಡಿದ್ದರೆ ಈ ಹೊತ್ತಿಗೆ ಮುಗಿದಿರಬೇಕಿತ್ತು.
ಇದೀಗ ಚಿತ್ರರಂಗಕ್ಕೆ ಶಿವಣ್ಣ ನಾಯಕತ್ವ ವಹಿಸಿರುವುದಕ್ಕೆ ದರ್ಶನ್ ಏನಂತಾರೆ?
ಆ್ಯಕ್ಚುಯಲಿ ಆ ಸಂದರ್ಭದಲ್ಲಿ ನಾನು ಅವರು ಮುತ್ತತ್ತಿ ಅರಣ್ಯದಲ್ಲಿದ್ದೆವು. ನಾವು ಗಿಡ ನೆಟ್ಟಿದ್ದು ಮರುದಿನ ನ್ಯೂಸಲ್ಲಿ ಕೂಡ ಬಂದಿತ್ತು ನೋಡಿ. ಶಿವಣ್ಣ ತಮ್ಮ ಮನೆಯಲ್ಲಿ ಮೀಟಿಂಗ್ ಇಟ್ಕೊಂಡಿರೋದಾಗಿ ಸ್ವತಃ ದರ್ಶನ್ ಅವರಿಗೆ ಫೋನ್ ಮಾಡಿದ್ರು. ಅವರಿಬ್ಬರು ತುಂಬ ಚೆನ್ನಾಗೇ ಇದ್ದಾರೆ. ಆದರೆ ಅವಸರದಲ್ಲಿ ಹೊರಟು ಬರಲು ಸಾಧ್ಯವಾಗಿರಲಿಲ್ಲ ಅಷ್ಟೇ. ಈ ಅರಣ್ಯ ಸಂದರ್ಶನದ ಯೋಜನೆ ಮೂರು ತಿಂಗಳ ಹಿಂದೆಯೇ ಹಾಕಲಾಗಿತ್ತು. ಹೀಗೊಂದು ಚರ್ಚೆ ನಡೆದು ಮನವಿ ಸಲ್ಲಿಕೆಯಾಗ್ತಿರೋದರ ಬಗ್ಗೆ ದರ್ಶನ್ ಮೆಚ್ಚಿ ಮಾತನಾಡಿದ್ದಾರೆ. ಅನಿವಾರ್ಯವಾಗಿ ಬರದೇ ಇರೋದಕ್ಕೆ ಬೇರೆ ಕತೆ ಕಟ್ಟೋದರಲ್ಲಿ ಅರ್ಥವಿಲ್ಲ.
ನಿರ್ದೇಶಕ ತರುಣ್ ಮಾತು
ಇದೇ ಸಂದರ್ಭದಲ್ಲಿ ಸಿನಿಕನ್ನಡ.ಕಾಮ್ ಜತೆಗೆ ಮಾತನಾಡಿದ ನಿರ್ದೇಶಕ ತರುಣ್ ಹೇಳಿದ್ದು ಇಷ್ಟೇ. “ಇಂದು ಹೊಸ ಚಿತ್ರಕ್ಕೆ ಸ್ಕ್ರಿಪ್ಟ್ ಬರೆಯಲು ಶ್ರೀಕಾರ ಹಾಕಿದ್ದೇನೆ. ಬಸವವೇಶ್ವರ ನಗರದ ನಮ್ಮ ಕಚೇರಿಯಲ್ಲಿ ಸಣ್ಣದಾಗಿ ನಡೆಸಿದ ಸ್ಕ್ರಿಪ್ಟ್ ಪೂಜೆ ಇದು. ಬ್ಯಾಕ್ ಟು ಬ್ಯಾಕ್ ದರ್ಶನ್ ಅವರ ಸಿನಿಮಾ ಮಾಡುತ್ತಿರುವುದಕ್ಕೆ ಖುಷಿಯಿದೆ.”