ಐವತ್ತೊಂದಕ್ಕೆ ಕಾಲಿಟ್ಟ ವಿವೇಕಾನಂದ..!

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ, ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಸುಗಳ ಅಂತರಂಗದ ಚಳವಳಿ’ ಎನ್ನುವ ವಾಕ್ಯದ ಕೊನೆಯಲ್ಲಿ ವಿವೇಕಾನಂದ ಹೆಚ್.ಕೆ ಎನ್ನುವ ಹೆಸರು! ಇಂಥದೊಂದು ಅಂಕಿತದೊಂದಿಗೆ ಕಳೆದ ಐದು ವರ್ಷಗಳಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ ಲೇಖನಗಳಿಗೆ ಲೆಕ್ಕವಿಲ್ಲ. ನಿತ್ಯವೂ ಒಂದು ಪ್ರಚಲಿತ ವಿದ್ಯಮಾನವನ್ನೆತ್ತಿಕೊಂಡು ಅದರ ಸಾಧಕ ಬಾಧಕಗಳನ್ನು ನಿಷ್ಪಕ್ಷಪಾತವಾಗಿ ಜನರ ಮುಂದೆ ಇರಿಸುವ ವಿವೇಕಾನಂದ ಅವರಿಗೆ ಇಂದು ಐವತ್ತೊಂದು ವರ್ಷ. ಅವರು ಯಾರು ಎನ್ನುವ ಕುತೂಹಲಗಳಿಗೆ ತೆರೆ ಎಳೆಯುವಂಥ ವಿಶೇಷ ಸಂದರ್ಶನ ಇಲ್ಲಿದೆ.

ಈ ರೀತಿಯ ಬರಹಗಳನ್ನು ಎಷ್ಟು ಸಮಯಗಳಿಂದ ಬರೆಯುತ್ತಿದ್ದೀರಿ?

ಸುಮಾರು ಐದು ವರ್ಷಗಳಾಯಿತು. ನನಗೆ ಮೊದಲಿನಿಂದಲೂ ಬರೆಯುವುದರಲ್ಲಿ ತುಂಬ ಆಸಕ್ತಿ. ಲಂಕೇಶ್, ಅಗ್ನಿ ಸೇರಿದಂತೆ ಸಾಕಷ್ಟು ಪತ್ರಿಕೆಗಳಿಗೆ ಬರೆಯುತ್ತಿದ್ದೆ. ಆನಂತರ ಸಾಮಾಜಿಕ ಜಾಲತಾಣಕ್ಕಾಗಿಯೇ ಬರೆಯತೊಡಗಿದೆ. ಹಲವಾರು ಬಾರಿ ನನ್ನ ಹೆಸರನ್ನು ತೆಗೆದು ಬಳಸಿದ್ದಾರೆ. ಕಮರ್ಷಿಯಲ್ಲಾಗಿ ಬಳಸಿದ್ದನ್ನೂ ನೋಡಿದ್ದೇನೆ. ಆದರೆ ನಾನು ಯಾವತ್ತೂ ಅವುಗಳಿಗೆ ಆಕ್ಷೇಪ ವ್ಯಕ್ತಪಡಿಸಿಲ್ಲ. ಹಾಗಂತ ನನಗೆ ಹಣದ ಅಗತ್ಯ ಇಲ್ಲವೆಂದು ಅಲ್ಲ. ಆದರೆ ನಾನಾಗಿ ಹಣದ ಹಿಂದೆ ಬೀಳೋದು ಬೇಡ ಎನ್ನುವುದು ನನ್ನ ನಿರ್ಧಾರ. ಯಾಕೆಂದರೆ ನನಗೆ ಬರಹದ ಮೂಲ ಉದ್ದೇಶ ಈಡೇರಬೇಕು. ಅಂದರೆ ಲೇಖನದಲ್ಲಿದ್ದ ವಿಚಾರ ಜನರನ್ನು ತಲುಪಬೇಕು. ಅದೇ ಮುಖ್ಯ.

ಎಲ್ಲವನ್ನೂ ಇಷ್ಟೊಂದು ನಿಷ್ಪಕ್ಷಪಾತವಾಗಿ ಬರೆಯಲು ಹೇಗೆ ಸಾಧ್ಯವಾಗುತ್ತದೆ?

ಬದುಕೇ ಹಾಗೆ ತಾನೇ? ಎಲ್ಲರನ್ನೂ ಪ್ರೀತಿಸಬೇಕು. ಬ್ರಾಹ್ಮಣರನ್ನೋ, ದಲಿತರನ್ನೋ , ಒಂದು ಪಕ್ಷವನ್ನೋ ದ್ವೇಷಿಸಿದರೆ ದ್ವೇಷ ನಮ್ಮ ಮನಸು ಸೇರಿಕೊಳ್ಳುತ್ತದೆ. ನಮ್ಮ ಮನಸ್ಸಲ್ಲಿ ಪ್ರೀತಿ ಮಾತ್ರ ಇರಬೇಕು ಎಂದರೆ ನಾವು ಎಲ್ಲರನ್ನೂ ಪ್ರೀತಿಸಬೇಕು. ನಾವು ಕಲಿತ ಒಳ್ಳೆಯದನ್ನು ಎಲ್ಲರಿಗೂ ಹೇಳಬೇಕು. ನಮಗೆ ಎಲ್ಲರಲ್ಲಿ ಕಾಣುವ ತಪ್ಪನ್ನು ಕೂಡ ಹೇಳಬೇಕು. ಆದರೆ ಆ ತಪ್ಪಿಗಾಗಿ ಆ ವ್ಯಕ್ತಿಯನ್ನು ದ್ವೇಷಿಸಬಾರದು!

ನಿಮ್ಮ ಹಿನ್ನೆಲೆ ಏನು..?

ನನ್ನ ಹಿನ್ನೆಲೆ ಮಾಧ್ಯಮ ಲೋಕದಲ್ಲೇ ಇದೆ. ಇತಿಹಾಸದಲ್ಲಿ ಎಂ.ಎ ಮಾಡಿದ ಬಳಿಕ ಪತ್ರಿಕೋದ್ಯಮದಲ್ಲಿ ಡಿಪ್ಲೊಮಾ ಮಾಡಿದ್ದೆ. ಅದರ ಜತೆಯಲ್ಲಿ ಆದರ್ಶ ಫಿಲ್ಮ್ ಇನ್ಸ್ಟಿಟ್ಯೂಟ್‌ ಸೇರಿಕೊಂಡು ನಟನಾ ವಿಭಾಗದಲ್ಲಿಯೂ ಡಿಪ್ಲೊಮಾ ಮಾಡಿದ್ದೆ. ಎಂ.ಎ ಮಾಡುತ್ತಿದ್ದಾಗಲೇ ದೂರದರ್ಶನದಲ್ಲಿ ಕ್ಯಾಶುವಲ್ ಪ್ರೊಡಕ್ಷನ್ ಅಸಿಸ್ಟೆಂಟ್ ಆಗಿ ಕೆಲಸ ಮಾಡಿದ್ದೆ. ನಾನು ಒಬ್ಬ ಜಾಹೀರಾತುಗಳ ನಿರ್ದೇಶಕನಾಗಿ, ನಿರ್ಮಾಪಕನಾಗಿ ಗುರುತಿಸಿಕೊಂಡವನು. ಅದಕ್ಕೂ ಮೊದಲು ಸಿಡಿದೆದ್ದ ಪಾಂಡವರು, ಗಾಯ ಮೊದಲಾದ ಒಂದಷ್ಟು ಸಿನಿಮಾಗಳಲ್ಲಿಯೂ ನಟಿಸಿದ್ದೇನೆ. ಝೀ ವಾಹಿನಿಗಾಗಿ `ಏಕೆ ಹೀಗೆ ನಮ್ಮ ನಡುವೆ’ ಎನ್ನುವ ಧಾರಾವಾಹಿಯನ್ನೂ ನಿರ್ಮಿಸಿದ್ದೆ. ಆದರೆ ನನಗೆ ಇವೆಲ್ಲಕ್ಕಿಂತಲೂ ಹೆಚ್ಚಿನದನ್ನು ಬದುಕು ಕಲಿಸಿತು.

ನಿಮ್ಮ ಜೀವನದಲ್ಲಿ ಬದಲಾವಣೆ ಮೂಡಿಸಿದ ಘಟನೆ ಯಾವುದು?

ನಾನು ಜೀವನದಲ್ಲಿ ಸಾಕಷ್ಟು ದುಡಿಮೆ ಮಾಡಿದ್ದೇನೆ. ಹಣವನ್ನೂ ಗಳಿಸಿದ್ದೇನೆ. ಹಾಗೆಯೇ ಸುಮಾರು 22 ದೇಶಗಳನ್ನು ಸುತ್ತಾಡಿದ್ದೇನೆ. ಅಷ್ಟೆಲ್ಲ ಶ್ರೀಮಂತಿಕೆ ಕಂಡ ನಾನು ಹಣದಲ್ಲಿ ವಂಚನೆಗೊಳಗಾಗಿ ಬೀದಿ ಸೇರುವಂತಾದೆ. ನನಗೆ ಕೋಟಿಗಟ್ಟಲೆ ದುಡ್ಡು ಬರಬೇಕಾಗಿತ್ತು. ದುಡ್ಡು ಕೊಡಬೇಕಾದವರ ಮೇಲೆ ಕೇಸ್ ಹಾಕಿದರೂ ಲಾಯರ್ ಫೀಸ್ ಕಟ್ಟಲಿಕ್ಕೂ ದುಡ್ಡಿಲ್ಲದ ಪರಸ್ಥಿತಿ ಆಗಿತ್ತು. ದಿನದ ಊಟಕ್ಕೂ ಗತಿಯಿಲ್ಲದ ಪರಿಸ್ಥಿತಿಗೆ ಬಂದಿದ್ದೆ. ನಾನು ತುಂಬ ಅವಮಾನಗಳನ್ನು ಎದುರಿಸಬೇಕಾಯಿತು. ಆದರೆ ಅದಕ್ಕೆ ಪ್ರತಿಕ್ರಿಯೆಯಾಗಿ ದ್ವೇಷ ಮತ್ತು ಪ್ರೀತಿಯ ಎರಡು ಆಯ್ಕೆಗಳು ನನಗೆ ಇದ್ದವು. ನಾನು ಪ್ರೀತಿಯನ್ನೇ ಆಯ್ದುಕೊಂಡೆ.

ನಿಮ್ಮ ಜನಪ್ರಿಯ ಪ್ರಾಜೆಕ್ಟ್‌ಗಳ ಬಗ್ಗೆ ಹೇಳಿ

ಎಂಬತ್ತರ ದಶಕದಲ್ಲಿ ನಾನು ದೂರದರ್ಶನದಲ್ಲಿ ಕಾರ್ಯಕ್ರಮ ನಿರೂಪಕನಾಗಿದ್ದೆ! ನಾನು ವೃತ್ತಿಯಲ್ಲಿದ್ದಾಗ ಬೆಂಗಳೂರು ದೂರದರ್ಶನದಲ್ಲಿ ನನ್ನನ್ನು ಸೇರಿಸಿ ಇನ್ನೊಬ್ಬರು ಮಾತ್ರ ಪುರುಷ ನಿರೂಪಕರಿದ್ದೆವು. ಇನ್ನೊಬ್ಬರು ರವಿಶಂಕರ್ ಅಂತ; ಅವರು ಖ್ಯಾತ ಲೇಖಕಿ ಮಂಗಳಾ ಸತ್ಯನ್ ಅವರ ಪುತ್ರ. ಬಳಿಕ ದೂರದರ್ಶನದ ಧಾರಾವಾಹಿಗಳಿಗೆ ಮಾರ್ಕೆಟಿಂಗ್ ಮಾಡುತ್ತಿದ್ದೆ. ನಾನು ಜಾಹೀರಾತು ಮಾಡಲಾರಂಭಿಸಿದ ಮೇಲೆ ಪ್ರಜಾವಾಣಿ',ವಿಜಯ ಕರ್ನಾಟಕ’, `ವಿಜಯವಾಣಿ’ ಮೊದಲಾದ ಜನಪ್ರಿಯ ದಿನ ಪತ್ರಿಕೆಗಳ ಟಿ.ವಿ ಜಾಹೀರಾತುಗಳಲ್ಲಿ ರಮೇಶ್ ಅರವಿಂದ್ ಮೊದಲಾದವರನ್ನು ನಿರ್ದೇಶಿಸಿದ್ದೇನೆ. ಜಿಆರ್‌ಎಸ್ ಫ್ಯಾಂಟಸಿ ಪಾರ್ಕ್ ಮುಂತಾದ ಬಹುಭಾಷಾ ಜಾಹೀರಾತುಗಳ ನಿರ್ದೇಶನವೂ ಸೇರಿದಂತೆ ನಿರ್ದೇಶನ ವಿಭಾಗದಲ್ಲಿ ಸಾಕಷ್ಟು ಅನುಭವ ಪಡೆದಿದ್ದೇನೆ. ನಟಿ ತಾರಾ ಅಭಿನಯದ ಪೊಲಿಯೋ ಜಾಗೃತಿ ಜಾಹೀರಾತು ಸೇರಿದಂತೆ ಬಹಳಷ್ಟು ಸರ್ಕಾರಿ ಜಾಹೀರಾತುಗಳನ್ನು ನಾನೇ ನಿರ್ದೇಶಿಸಿದ್ದೆ. ನಿರ್ಮಾಣದಿಂದ ಹಿಡಿದು ಮತ್ತು ವಾಹಿನಿಗಳಲ್ಲಿ ಪ್ರಸಾರವಾಗುವ ತನಕ ಅದರಲ್ಲಿ ಭಾಗಿಯಾಗುತ್ತಿದ್ದೆ.ಆದರೆ ಕಳೆದ ಐದಾರು ವರ್ಷಗಳಲ್ಲಿ ಯಾವುದೇ ಪ್ರಾಜೆಕ್ಟ್ ಮಾಡಿಲ್ಲ.

ವಿವೇಕಾನಂದ್ ಅವರು ಪ್ರಸ್ತುತ ಆರ್‌ಟಿ ನಗರದ ತಮ್ಮ ನಿವಾಸದಲ್ಲಿ ತಾಯಿ, ಪತ್ನಿ ಮತ್ತು ಮಗನೊಂದಿಗೆ ವಾಸವಾಗಿದ್ದಾರೆ. ಕೊರೊನಾ ಸಮಸ್ಯೆ ಸಂಪೂರ್ಣವಾಗಿ ಮುಗಿದ ಬಳಿಕ ಹೊಸದಾಗಿ ಸಮಾಜಮುಖಿ ಚಟುವಟಿಕೆಯ ಕಡೆಗೆ ಗಮನ ನೀಡಲು ಸಿದ್ಧರಾಗಿದ್ದಾರೆ. ಅವರಿಗೆ ಸಿನಿಕನ್ನಡ.ಕಾಮ್ ಮತ್ತು ಓದುಗರ ಪರವಾಗಿ ಜನ್ಮ ದಿನದ ಶುಭಾಶಯಗಳು

Recommended For You

Leave a Reply

error: Content is protected !!
%d bloggers like this: