ಸಂಯುಕ್ತಾ ಹೆಸರಿನಲ್ಲಿ ಈ ಹಿಂದೆ ಏನೇ ಕಿರಿಕ್‌ಗಳು ನಡೆದಿರಬಹುದು. ಆದರೆ ಇದು ಅವುಗಳ ಆಧಾರದಲ್ಲಿ ನೋಡಬೇಕಾದ ಘಟನೆಯೇ ಅಲ್ಲ. ಯಾಕೆಂದರೆ ಇದನ್ನು ಸ್ವತಃ ಆಕೆಯೇ ಸಾಕ್ಷ್ಯಾಧಾರ ಸಮೇತ ಸಾಬೀತು ಪಡಿಸಿದ್ದಾರೆ. ಎಚ್ ಎಸ್ ಆರ್ ಬಡಾವಣೆಯ ಪಾರ್ಕ್ ಒಂದರಲ್ಲಿ ಸಂಯುಕ್ತಾ ತಮ್ಮ ಸ್ನೇಹಿತೆಯರೊಂದಿಗೆ ‘ಹುಲ ಹೂಪ್’ ಅಭ್ಯಾಸ ಮಾಡುತ್ತಿದ್ದಾಗ ಮಹಿಳೆಯೋರ್ವರು ಅವರ ಮೇಲೆ ದಾಳಿಗೆ ಮುಂದಾಗಿದ್ದಾರೆ. ಮಾತ್ರವಲ್ಲ, ಆಕೆಯೊಂದಿಗೆ ಒಂದಷ್ಟು ಮಂದಿ ಯುವಕರು ಕೂಡ ಸೇರಿಕೊಂಡು ಪೊಲೀಸರಿಗೆ ದೂರು ನೀಡಿ ಅವರು ಮುಂದೆಯೇ ಗೇಟ್ ಗೆ ಬೀಗ ಹಾಕಿ ದೌರ್ಜನ್ಯ ಮೆರೆದಿದ್ದಾರೆ.
ಇದು ನಿನ್ನೆ ಅಂದರೆ ಶುಕ್ರವಾರ ಸಂಜೆ ನಡೆದ ಘಟನೆ. ಬೆಂಗಳೂರಿನ ಎಚ್ ಎಸ್ ಆರ್ (ಹೊಸೂರು-ಸರ್ಜಾಪುರ-ರೋಡ್ ) ಬಡಾವಣೆಯಲ್ಲಿರುವ ಅಗರ ಕೆರೆ ಪಕ್ಕದ ಉದ್ಯಾನವನಕ್ಕೆ ಸಂಯುಕ್ತಾ ಹೆಗ್ಡೆ ಮತ್ತು ಇಬ್ಬರು ಗೆಳತಿಯರು ಆಗಮಿಸಿದ್ದರು. ಸಂಜೆ ಸೂರ್ಯನ ಬೆಳಕಿನಲ್ಲಿ ಅವರು ವ್ಯಾಯಾಮ ನಡೆಸಿದ್ದರು. ಸಂಯುಕ್ತಾ ಸ್ಪೋರ್ಟ್ಸ್ ಬ್ರಾ ಮತ್ತು ಪ್ಯಾಂಟ್ ಧರಿಸಿದ್ದು ಹುಲ ಹೂಪ್ ಎನ್ನುವ ಮೈಗೆ ರಿಂಗ್ ಹಾಕಿ ತಿರುಗಿಸುವ ಕಸರತ್ತು ನಡೆಸಿದ್ದರು. ದಿಢೀರನೆ ಅದೇನಾಯಿತೋ ಗೊತ್ತಿಲ್ಲ. ಅಲ್ಲೇ ವಾಕಿಂಗ್ ನಿರತೆಯಾಗಿದ್ದ ಮಹಿಳೆಯೊಬ್ಬರು ಆವೇಶದಿಂದ ಇವರ ಬಳಿಗೆ ಬಂದಿದ್ದಾರೆ. “ನೀವೇನು ಕ್ಯಾಬರೆ ನರ್ತಕಿಯರ? ಎಂಥ ಬಟ್ಟೆ ಧರಿಸಿದ್ದೀರ ನೀವು? ವೇಶ್ಯೆಯರು..!” ಎನ್ನುವ ಅಸಭ್ಯ ಪದ ಬಳಕೆ ಮಾಡುವುದರ ಜತೆಗೆ ಸಂಯುಕ್ತಾ ಮತ್ತು ಹುಡುಗಿಯರನ್ನು ತಮ್ಮ ಮೊಬೈಲಲ್ಲಿ ವಿಡಿಯೋ ಮಾಡಿ ಸೆರೆ ಹಿಡಿದಿದ್ದಾರೆ. ಮಾತ್ರವಲ್ಲ, ಕೈ ಬೀಸಿ ಹೊಡೆಯುವುದಕ್ಕೂ ಮುಂದಾಗಿದ್ದಾರೆ. ಈ ಕಡೆ ಸಂಯುಕ್ತಾ ಕೂಡ ವಿಡಿಯೋ ಮಾಡುವುದನ್ನು ಕಂಡು ಅಂಜಿದ್ದಾರೆ! “ಇಂಥ ಬಟ್ಟೆ ಧರಿಸಿ ಬಂದು ಬಳಿಕ ಏನೇನೋ ಆಯ್ತು ಎಂದು ಅತ್ಕೊಂಡು ಬರಬೇಡಿ!” ಎಂದಿದ್ದಾರೆ! ಆಕೆಯ ಕಿರುಚಾಟ ಕೇಳಿ ಸೇರಿದ ಹತ್ತಾರು ಯುವಕರು ಕೂಡ ಅದೇ ಮಹಿಳೆಗೆ ಬೆಂಬಲಿಸಿ ಸಂಯುಕ್ತಾ ವಿರುದ್ಧ ಅರಚಾಡಿದ್ದಾರೆ! “ಕನ್ನಡ ಚಿತ್ರರಂಗದಲ್ಲಿ ನಡೆಯುತ್ತಿರುವ ಡ್ರಗ್ ಆರೋಪ ಪಟ್ಟಿಯಲ್ಲಿ ಈಕೆಯ ಹೆಸರನ್ನು ಸೇರಿಸಿ ಒಳಗೆ ಹಾಕಬೇಕು ಎನ್ನುವ ಮಾತುಗಳನ್ನು ಅವರು ಆಡಿದ್ದಾರೆ. ಅಷ್ಟರಲ್ಲಿ ಪೊಲೀಸರ ಆಗಮನವಾಗಿದೆ. ಆದರೆ ಅವರು ಕೂಡ ಸಂಯುಕ್ತಾ ಪರವಾಗಿ ನಿಲ್ಲಲು ಹಿಂಜರಿದ ಹಾಗೆ ಕಂಡು ಬಂದಿರುವುದು ವಿಪರ್ಯಾಸ.
ಈ ಬಗ್ಗೆ ಹೇಳಿಕೊಂಡಿರುವ ಸಂಯುಕ್ತಾ ಹೆಗ್ಡೆ “ಅದೃಷ್ಟವಶಾತ್ ಬಂದವರಲ್ಲೊಬ್ಬ ಪೊಲೀಸ್ ಅಧಿಕಾರಿ ನಾವು ಯಾವ ತಪ್ಪನ್ನು ಮಾಡಿಲ್ಲ ಎನ್ನುವುದನ್ನು ಕೊನೆಗೂ ಮನಗಂಡು ನಮ್ಮನ್ನು ಬಿಟ್ಟುಬಿಟ್ಟಿದ್ದಾರೆ. ಸಂಯುಕ್ತಾ ಹೆಗ್ಡೆ ಟ್ವಿಟ್ಟರಲ್ಲಿ ಸೂಚಿಸಿರುವಂತೆ ಆರೋಪ ಮಾಡಿದ ಮಹಿಳೆಯ ಹೆಸರು ಕವಿತಾ ರೆಡ್ಡಿ. ವಿಚಿತ್ರ ಏನೆಂದರೆ ಆಕೆ ಕೂಡ ವರ್ಕೌಟ್ ಮಾಡುವಂಥ ಟೀ ಶರ್ಟ್ ಪ್ಯಾಂಟ್ ಧರಿಸಿಯೇ ಬಂದಿದ್ದರು!
ಸಂಯುಕ್ತಾ ಅಲ್ಲಿ ನಡೆದ ಪ್ರತಿಯೊಂದು ಘಟನೆಯನ್ನು ಕೂಡ ಇನ್ಸ್ಟಾಗ್ರಾಮಲ್ಲಿ ಲೈವ್ ಮಾಡಿದ್ದರು. ಹಾಗಾಗಿಯೇ ಹೆಚ್ಚಿನ ಆಪಾದನೆಯಿಂದ ಹೊರಗೆ ಉಳಿಯಲು ಸಾಧ್ಯವಾಯಿತು. ಪೊಲೀಸರ ಮುಂದೆಯೇ ಕಿರುಚಾಡುತ್ತಿದ್ದ ಆ ಮಹಿಳೆ ಸಂಜನಾಳನ್ನು ನಂಗನಾಚ್ ಮಾಡುತ್ತಿದ್ದಳು ಎಂದು ಆರೋಪಿಸಿದ್ದು ವಿಚಿತ್ರವಾಗಿತ್ತು. ಮಾತ್ರವಲ್ಲ ಆ ಮಹಿಳೆ ಹಲ್ಲೆ ನಡೆಸಲು ಪ್ರಯತ್ನಿಸಿರುವ ವಿಡಿಯೋವನ್ನು ತೋರಿಸಿದ ಮೇಲೆಯೂ ಪೊಲೀಸರು ಸಂಯುಕ್ತಾ ಪರವಾಗಿ ನಿಲ್ಲದೆ ಮಹಿಳೆ ಮತ್ತು ತಂಡಕ್ಕೆ ಕಿರುಚಾಡಲು ಅವಕಾಶ ನೀಡಿದ್ದು ಅಕ್ಷಮ್ಯ ಎಂದೇ ಹೇಳಬಹುದು. ಅದರಲ್ಲಿಯೂ ಸಂಯುಕ್ತಾ ಮತ್ತು ಸ್ನೇಹಿತೆಯರು ಅಲ್ಲಿ ದೊಡ್ಡ ಅಪರಾಧ ಮಾಡಿ ಪರಾರಿಯಾಗುತ್ತಿದ್ದಾರೆ ಎಂದು ಬಿಂಬಿಸುವಂತೆ ಗೇಟ್‌ಗೆ ಬೀಗ ಜಡಿದು ಭಯಪಡಿಸಿರುವ ರೀತಿ ಭಯಾನಕವಾಗಿತ್ತು. ಆದರೆ ಉದ್ಯಾನದಲ್ಲಿ ವ್ಯಾಯಾಮ ನಿರತರಾಗಿದ್ದುಕೊಂಡು ಘಟನೆಗೆ ಸಾಕ್ಷಿಯಾದ ಒಬ್ಬರು ವೈದ್ಯರು ಸೇರಿದಂತೆ ಒಂದಷ್ಟು ಮಂದಿ ಸಂಯುಕ್ತಾ ಪರವಾಗಿ ವಿಡಿಯೋ ಹೇಳಿಕೆ ನೀಡಿದ್ದರೆನ್ನುವುದು ಸಮಾಧಾನಕರ ಸಂಗತಿ. ಅವರು ಪೊಲೀಸ್ ಜತೆಗೆ ಸಂಯುಕ್ತಾರನ್ನು ವಹಿಸಿಕೊಂಡು ಮಾತನಾಡಿದರು. ಮಹಿಳೆ ಸಂಜನಾ ವಿರುದ್ಧ ಕೆಟ್ಟ ಪದಪ್ರಯೋಗಗಳನ್ನು ಮಾಡುತ್ತಿದ್ದರೂ ಆಕೆಯ ಬಗ್ಗೆ ಮೇಡಮ್ ಎಂದು ಗೌರವದಿಂದಲೇ ಮಾತನಾಡುತ್ತಿದ್ದ ಸಂಜನಾ ದೃಶ್ಯಗಳಲ್ಲಿ ಕಂಡಂತೆ ಯಾವ ತಪ್ಪನ್ನೂ ಮಾಡಿರಲಿಲ್ಲ. ಆದರೆ ಕಿರುಚಾಡುತ್ತಿದ್ದ ಮಹಿಳೆ ಆಧಾರ ರಹಿತವಾಗಿ ಕೆಟ್ಟ ಆರೋಪ ಮಾಡುತ್ತಿದ್ದುದು ಕಂಡು ಬರುತ್ತಿತ್ತು.
ಘಟನೆಯ ವಿಡಿಯೋ ಲಿಂಕ್ ಗಾಗಿ ಕ್ಲಿಕ್ ಮಾಡಿ
ಒಟ್ಟಿನಲ್ಲಿ ಉದ್ಯಾನಕ್ಕೆ ವ್ಯಾಯಾಮಕ್ಕೆಂದು ಬರುವವರು ದೈಹಿಕ ಆರೋಗ್ಯದ ಜತೆಗೆ ಮಾನಸಿಕ ಆರೋಗ್ಯದಲ್ಲಿಯೂ ತುಸು ಉತ್ತಮ ಹಂತವನ್ನು ಕಾಯ್ದುಕೊಳ್ಳುವ ಅಗತ್ಯ ಇದೆ ಎನ್ನುವುದನ್ನು ನಿನ್ನೆಯ ಘಟನೆ ಸಾಬೀತು ಪಡಿಸಿದೆ. ಯಾಕೆಂದರೆ, ಸಾರ್ವಜನಿಕವಾಗಿ ಧರಿಸುವ ವಸ್ತ್ರದ ಶೈಲಿ ಕಾಲದಿಂದ ಕಾಲಕ್ಕೆ ಬದಲಾಗುತ್ತಲೇ ಇದೆ. ಸಂಯುಕ್ತಾರ ಬಟ್ಟೆಯ ಬಗ್ಗೆ ಆರೋಪಿಸುವ ಮಹಿಳೆ ತೊಟ್ಟಂಥ ಸ್ಪೋರ್ಟ್ಸ್ ಟೀಶರ್ಟ್ ಮತ್ತು ಪ್ಯಾಂಟ್ ವರ್ಷಗಳ ಹಿಂದೆ ಭಾರತೀಯ ಮಹಿಳೆಯ ವಸ್ತ್ರ ಶೈಲಿಯ ಪಟ್ಟಿಯಲ್ಲೇ ಇರಲಿಲ್ಲ! ಮಾತ್ರವಲ್ಲ, ಆ ಬಟ್ಟೆಯಲ್ಲಿ ಮಹಿಳೆ ಇಂದಿಗೂ ನಮ್ಮ ದೇಶದ ಹಳ್ಳಿಗೆ ಕಾಲಿಟ್ಟರೆ ಆಕೆಯ ಬಟ್ಟೆ ಕಂಡೇ ಅಡ್ಡಡ್ಡ ಬಿದ್ದು ನಗಬಹುದಾದ ಪರಿಸ್ಥಿತಿ ಜನರೊಳಗೆ ಇಲ್ಲದೇ ಇಲ್ಲ. ಆದರೆ ಬೆಂಗಳೂರಿನಂಥ ಆಧುನಿಕ ನಗರದಲ್ಲಿ, ಅದರಲ್ಲಿಯೂ ಬಹುಸಂಸ್ಕೃತರು ತುಂಬಿದ ಉದ್ಯಾನವನದೊಳಗೆ , ಸೂರ್ಯ ಮುಳುಗುವುದಕ್ಕೂ ಮುನ್ನ ವ್ಯಾಯಾಮಕ್ಕೆಂದು ಬಂದ ಹುಡುಗಿಯ ಸ್ಪೋರ್ಟ್ಸ್ ಬ್ರಾ ಕಂಡು ಮಹಿಳೆಯೇ ಉದ್ರೇಕಗೊಳ್ಳುತ್ತಾಳೆ ಎಂದರೆ ಆಕೆಗೆ ಏನೋ ಮಾನಸಿಕ ಸಮಸ್ಯೆ ಇರುವುದು ಖಚಿತ. ಅದಕ್ಕೆ ಒಂದಷ್ಟು ನೈತಿಕ ಪೊಲೀಸ್ ಗಿರಿ ಮಾಡುವವರ ಬೆಂಬಲ ಬೇರೆ!
ಒಂದು ವೇಳೆ ಧ್ವನಿ ಎತ್ತುವುದೇ ಆದರೆ ಪಾರ್ಕ್ ಪಕ್ಕದಲ್ಲೇ ಕಸ ತಂದು ಹಾಕುವ, ಪಾರ್ಕ್ ಸಂಧಿಯಲ್ಲೇ ಮೂತ್ರಶಂಕೆ ಮಾಡುವ, ಪಾರ್ಕ್ ಮೂಲೆಯಲ್ಲೇ ವ್ಯಭಿಚಾರ ನಡೆಸುವ ಘಟನೆಗಳು ಬೆಂಗಳೂರಿನ ಹಲವೆಡೆ ನಿತ್ಯ ನಡೆಯುತ್ತಿರುತ್ತವೆ. ಅವನ್ನೆಲ್ಲ ತಡೆಯುವ ಪ್ರಯತ್ನವನ್ನು ಪ್ರಾಮಾಣಿಕವಾಗಿ ಮಾಡಬೇಕೇ ಹೊರತು ಹುಡುಗಿಯೊಬ್ಬಳ ವಸ್ತ್ರಧಾರಣೆಯ ಸ್ವಾತಂತ್ರ್ಯವನ್ನು ಕಸಿದು ಹೆಸರು ಮಾಡಿಕೊಳ್ಳುವುದಲ್ಲ.