ಏನೇ ಸಮಸ್ಯೆಗಳಿದ್ದರೂ ಇತರರಿಗೆ ತೋರಿಸದ ಮನುಷ್ಯ ಬಾಲಸುಬ್ರಹ್ಮಣ್ಯಂ ಎಂದು ತೆಲುಗಿನ ಖ್ಯಾತ ಸಂಗೀತ ನಿರ್ದೇಶಕರೊಬ್ಬರು ಹೇಳಿದ ಮಾತು. ಇದು ನಿಜ ಕೂಡ. ಅವರ ಈ ಗುಣವನ್ನು ಅವರು ಆಸ್ಪತ್ರೆಗೆ ದಾಖಲಾಗುವ ಸಂದರ್ಭದಲ್ಲಿಯೂ ತೋರಿಸಿದ್ದರು. ತಾವು ವೆಂಟಿಲೇಟರ್ ಚಿಕಿತ್ಸೆಗೆ ಒಳಗಾಗುತ್ತಿದ್ದರೂ ಅಲ್ಲಿಂದಲೇ ಕೈ ಎತ್ತಿ ಹೆಬ್ಬೆರಳು ತೋರಿಸುವ ಮೂಲಕ ಇತರರಿಗೆ ಧೈರ್ಯ ತುಂಬಿದ ಧೀಮಂತ. ಆದರೆ ಅವರು ನಿಧನರಾದ ಸುದ್ದಿ ಮಾತ್ರ ಎಂಥ ಧೀಮಂತರಿಗೂ ಆತಂಕ ತುಂಬುವಂತೆ ಮಾಡಿರುವುದು ಸತ್ಯ.
ಕಳೆದ 51 ದಿನಗಳಿಂದ ಹೈದರಾಬಾದ್‌ನ ಎಂಜಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಎಸ್‌ಪಿಬಿಯವರ ಕೃತಕ ಉಸಿರಾಟಕ್ಕೆ ಇಂದು ಮಧ್ಯಾಹ್ನ ತೆರೆ ಬಿದ್ದಿದೆ. ಕಳೆದ ಎರಡು ದಿನಗಳಿಂದ ತೀರ ಗಂಭೀರ ಪರಿಸ್ಥಿತಿಯಲ್ಲಿದ್ದ ಎಸ್‌ಪಿಬಿ ಅದಕ್ಕೂ ಮೊದಲು ಆರುವ ದೀಪ ಜೋರಾಗಿ ಬೆಳಗುವಂತೆ ಒಂದಷ್ಟು ಚೇತರಿಕೆಯ ವರ್ತನೆ ತೋರಿಸಿದ್ದರು. ಹಾಗಂತ ಅವರ ಪುತ್ರ ಎಸ್‌ಪಿಬಿ ಚರಣ್ ಅವರೇ ಸಾಮಾಜಿಕ ಜಾಲತಾಣದಲ್ಲಿ ಎರಡು ದಿನಕ್ಕೊಮ್ಮೆ ಮಾಹಿತಿ ನೀಡುತ್ತಿದ್ದರು. ಚರಣ್ ಅವರು ತನ್ನ ತಂದೆಯ ಯೂಟ್ಯೂಬ್ ವಾಹಿನಿ, ತಮ್ಮ ಇನ್ಸ್ಟಾಗ್ರಾಂ ಮೂಲಕ ನಿತ್ಯವೂ ಅವರ ಆರೋಗ್ಯದ ಬಗ್ಗೆ ನೇರವಾಗಿ ಮಾಹಿತಿ ಹಂಚಿಕೊಳ್ಳುತ್ತಿದ್ದರು. ಬಹುಶಃ ತಂದೆಯ ಆಕಾಂಕ್ಷೆಯಂತೆ ಅವರು ಕೂಡ ಅನಾರೋಗ್ಯ ಅಷ್ಟೇನೂ ದೊಡ್ಡ ಮಟ್ಟದಲ್ಲಿಲ್ಲ. ಚಿಕಿತ್ಸೆಯಲ್ಲಿದ್ದರೂ ಸಹ ನನ್ನ ತಂದೆ ಸುಧಾರಿಸಿಕೊಳ್ಳುತ್ತಿರುವುದನ್ನು ನಾನು ಕಾಣುತ್ತಿದ್ದೇನೆ. ಅವರು ಸಂಪೂರ್ಣವಾಗಿ ಗುಣಮುಖರಾಗುತ್ತಾರೆ ಎನ್ನುವ ಭರವಸೆ ಇದೆ ಎಂದೇ ವರದಿ ನೀಡುತ್ತಿದ್ದರು. ಯಾಕೆಂದರೆ ಬಾಲಸುಬ್ರಹ್ಮಣ್ಯಂ ಅವರಿಗೂ ಅಭಿಮಾನಿಗಳನ್ನು ಆತಂಕದಲ್ಲಿರಿಸುವುದು, ಸ್ನೇಹಿತರಿಗೆ ಚಿಂತೆ ನೀಡುವುದು, ಯಾರದೋ ಕರುಣೆಗೆ ಒಳಪಡುವುದು ಇಷ್ಟವಿರಲಿಲ್ಲ. ಅದೇ ಕಾರಣದಿಂದಲೇ ಆಸ್ಪತ್ರೆಗೆ ದಾಖಲಾಗುವಾಗ ಹೇಗೆ ಧೈರ್ಯದಿಂದ ಮಾತನಾಡಿ ಮಾಹಿತಿ ನೀಡಿದ್ದರೋ, ಅಲ್ಲಿ ಸೇರಿಕೊಂಡ ಮೇಲೆಯೂ ” ನಾನು ಚೆನ್ನಾಗಿದ್ದೇನೆ ಯಾರೂ ಫೋನ್ ಮಾಡುವ ತೊಂದರೆ ತೆಗೆದುಕೊಳ್ಳಬೇಡಿ” ಎಂದೇ ಹೇಳಿದ್ದರು.
ಆಂಧ್ರಪ್ರದೇಶದ ಗಾಯಕನಾದರೂ ಕನ್ನಡಿಗರ ಅಭಿಮಾನದ ಬಗ್ಗೆ ಎಲ್ಲ ರಾಜ್ಯಗಳಲ್ಲಿಯೂ ನೇರವಾಗಿ ಹೇಳಿಕೊಳ್ಳುತ್ತಿದ್ದರು. ಹಾಡಿರುವ ಒಟ್ಟು ಹಾಡುಗಳಲ್ಲಿ ಕನ್ನಡದಲ್ಲೇ ಅತಿ ಹೆಚ್ಚು ಹಾಡುಗಳಿಗೆ ಧ್ವನಿಯಾಗಿರುವ ದಾಖಲೆ ಇವರದು. ಅವರು ಮದುವೆಯಾಗಿದ್ದು ಕರ್ನಾಟಕದ ಹೆಣ್ಣು ಮಗಳನ್ನೇ. ಹಾಗಾಗಿ ಕರ್ನಾಟಕ ನನಗೆಲ್ಲವನ್ನು ಕೊಟ್ಟಿದೆ. ಮುಂದಿನ ಜನ್ಮ ಏನಿದ್ದರೂ ಕನ್ನಡ ನಾಡಲ್ಲೇ ಎನ್ನುತ್ತಿದ್ದರು. ಕಡಿಮೆ ಎಂದರೂ ಸರಾಸರಿ ದಿನಕ್ಕೆ ಎರಡರಂತೆ ವರ್ಷಕ್ಕೆ ಏಳುನೂರು ಗೀತೆಗಳನ್ನು ಹಾಡುತ್ತಿದ್ದರು! ಕನ್ನಡ, ತುಳು, ಕೊಂಕಣಿ, ತಮಿಳು, ಮಲಯಾಳಂ, ತೆಲುಗು, ಇಂಗ್ಲಿಷ್, ಹಿಂದಿ, ಒರಿಯಾ, ಸಂಸ್ಕೃತ ಸೇರಿದಂತೆ ಹದಿನಾಲ್ಕು ಭಾಷೆಗಳಲ್ಲಿ ನಲವತ್ತು ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡಿದ್ದಾರೆ. ಕನ್ನಡದಲ್ಲಿ ಮಾಮರವೆಲ್ಲೋ ಕೋಗಿಲೆ ಎಲ್ಲೋ, ತರಿಕೆರೆ ಏರಿ ಮೇಲೆ, ಆಸೆಯ ಭಾವಾ ಮತ್ತು ಕನಸಲೂ ನೀನೇ ಮೊದಲಾದ ಹಾಡುಗಳು ತಮಗೆ ಫೇವರಿಟ್ ಎಂದು ಅವರೇ ಸಂದರ್ಶನವವೊಂದರಲ್ಲಿ ಹೇಳಿಕೊಂಡಿದ್ದರು.
ಆದರೆ ಒಬ್ಬ ಗಾಯಕನಿಗಾಗಿ ಹಿಂದೆಂದೂ ಮಿಡಿಯದಿರುವ ಮಾದರಿಯಲ್ಲಿ ದೇಶದಾದ್ಯಂತ ಶೋಕ ವ್ಯಕ್ತವಾಗುತ್ತಿದೆ. ಅದಕ್ಕೆ ಗಾಯಕ ಎನ್ನುವುದರ ಜತೆಗೆ ಅವರ ಆದರ್ಶಪೂರ್ಣ ವ್ಯಕ್ತಿತ್ವದ ಮಾದರಿಯೂ ಕಾರಣ ಎಂದು ಹೇಳಲೇಬೇಕು. ತಮ್ಮನ್ನು ನಾಸ್ತಿಕ ಎಂದು ಕರೆದುಕೊಳ್ಳುವ ಪದ್ಮಭೂಷಣ ಕಮಲಹಾಸನ್ ಅವರಿಂದ ಹಿಡಿದು ಮೆಗಾಸ್ಟಾರ್ ಚಿರಂಜೀವಿ ತನಕ ಪ್ರತಿಯೊಬ್ಬರು ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯ ಸುಧಾರಣೆಯಾಗಲೆಂದು ಪ್ರಾರ್ಥಿಸಿದ್ದರು. ನಮ್ಮ ದೇಶದ ಶ್ರೇಷ್ಠ ಸಂಗೀತ ನಿರ್ದೇಶಕ ಎನಿಸಿಕೊಂಡಿರುವ ಇಳಯರಾಜಾ ಅವರನ್ನು ಸೇರಿದಂತೆ ಬಹುತೇಕ ಗಾಯಕರನ್ನು ಸಿನಿಮಾ ಸಂಗೀತ ಲೋಕಕ್ಕೆ ಪರಿಚಯಿಸಿದ ಕೀರ್ತಿ ಎಸ್ಪಿ ಬಾಲಸುಬ್ರಹ್ಮಣ್ಯಂ ಅವರಿಗೆ ಸಲ್ಲುತ್ತದೆ. ಬಾಲಸುಬ್ರಹ್ಮಣ್ಯಂ ಅವರು ಕನ್ನಡ ಸೇರಿದಂತೆ ದಕ್ಷಿಣ ಭಾರತದ ಎಲ್ಲ ಭಾಷೆಗಳ ಸ್ಟಾರ್ ನಟರಿಗೆ ಹಾಡಿದ್ದು, ಅವರ ಹಾಡುಗಳಿಗೆ ಎಲ್ಲರೂ ಮನಸೋತಿರುವ ಕಾರಣ ಅಸಂಖ್ಯಾತ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ಹಿಂದಿಯಲ್ಲಿ ಸಲ್ಮಾನ್ ಖಾನ್, ಕಮಲ ಹಾಸನ್ ಸೇರಿದಂತೆ ಮಲಯಾಳಂನಲ್ಲಿಯೂ ಹಾಡಿ ಗುರುತಿಸಿಕೊಂಡವರು ಎಸ್‌ಪಿಬಿ. ಸುಮಾರು ಐದೂವರೆ ದಶಕಗಳಿಂದ ಹಿಟ್ ಹಾಡುಗಳನ್ನೇ ನೀಡುತ್ತಾ ಬಂದಿರುವ ಕಾರಣ, ಇಂದು ಬದುಕಿರುವ ಎಲ್ಲ ಜಮಾನದ ವ್ಯಕ್ತಿಗಳು ಕೂಡ ತಮ್ಮ ಯೌವನದ ಪ್ರಭಾವಯುತ ಪ್ರೇಮಗೀತೆಗಳಲ್ಲಿ ಎಸ್ಪಿಬಿಯವರನ್ನೇ ನೆನಪಿಸಿಕೊಳ್ಳುತ್ತಾರೆ.
ಕೊರೊನಾ ಹಾವಳಿ ಭಾರತದಲ್ಲಿ ಆರಂಭವಾದಾಗ ಎದುರಾದ ದೊಡ್ಡ ದುರಂತ ಲಾಕ್ಡೌನ್ ಮತ್ತು ಆ ಮೂಲಕ ಬೀದಿಯಲ್ಲಿ ಹೆಣವಾದ ದಿನಗೂಲಿ ಕಾರ್ಮಿಕರದ್ದಾಗಿತ್ತು. ಅಂಥದೇ ಮತ್ತೊಂದು ದೊಡ್ಡ ದುರಂತ ಎಂದರೆ ಎಸ್‌ಪಿ ಬಾಲಸುಬ್ರಹ್ಮಣ್ಯಂ ಅವರ ಸಾವು. ಇವೆರಡಕ್ಕೆ ಕಾರಣವಾದ ಕೋವಿಡ್19 ಒಂದು ಅಳಿಸಲಾರದ ಕಪ್ಪು ಚುಕ್ಕೆಯಾಗಿ ಇತಿಹಾಸದಲ್ಲಿ ಉಳಿಯುವುದು ಖಚಿತ.