ಚಿತ್ರರಂಗದಲ್ಲಿಯೂ ಮನ್ವಂತರ ಸಂಭವಿಸುತ್ತಿರುತ್ತದೆ. ಪ್ರೇಮಲೋಕ, A ಆದ ಬಳಿಕ ಮುಂಗಾರುಮಳೆ ಬಂದಂತೆ ಇಲ್ಲಿ ಹೊಸದೊಂದು ಪ್ರಾರಂಭಕ್ಕೆ ಮುನ್ನುಡಿ ಬರೆದು ಕುಳಿತಿದ್ದಾರೆ ಮನು ಕಲ್ಯಾಡಿ. ಕ್ರೇಜಿಸ್ಟಾರ್ ಪುತ್ರ ಮನುರಂಜನ್‌ರನ್ನು ನಾಯಕರನ್ನಾಗಿಸಿ ಪ್ರಾರಂಭ ಎನ್ನುವ ಚಿತ್ರದ ನಿರ್ದೇಶನ, ನಿರ್ಮಾಣ ಮಾಡಿದ್ದಾರೆ ಮನು. ಹಿಂದೆ ಇಪ್ಪತ್ತರ ಹರೆಯದಲ್ಲಿ ಪ್ರೇಮಲೋಕ ನೀಡಿದ ರವಿಚಂದ್ರನ್ ಅವರಂತೆ ಮನುವಿಗೂ ಅದೇ ವಯಸು. ಹಾಗಂತ ಮತ್ತೆ ಆ ಇತಿಹಾಸ ಮರುಕಳಿಸುತ್ತದೆ ಎನ್ನುವ ಮಹತ್ವಾಕಾಂಕ್ಷೆಯೇನೂ ಈ ಮನುವಿಗಿಲ್ಲ. ಆದರೆ ಮಾಡಿರುವ ಸಾಹಸ ಸಣ್ಣಮಟ್ಟಿನದ್ದೇನಲ್ಲ ಎನ್ನುವುದು ಎಲ್ಲರಿಗೂ ಅರ್ಥವಾಗಿದೆ. ಸಿನಿಮಾದ ಕೆಲಸ ಸಂಪೂರ್ಣವಾಗಿದೆ. ಚಿತ್ರಕ್ಕೆ ಸೆನ್ಸಾರ್ ಪ್ರಮಾಣ ಪತ್ರ ನೀಡಿದೆ. ಚಿತ್ರ ಬಿಡುಗಡೆಗೆ ಸಿದ್ಧವಾಗಿರುವ ಈ ಸಂದರ್ಭದಲ್ಲಿ ನಿರ್ದೇಶಕ ಮನು ಸಿನಿಕನ್ನಡದ ಜೊತೆಗೆ ತಮ್ಮ ಮನಸು ಬಿಚ್ಚಿ ಮಾತನಾಡಿದ್ದಾರೆ.
ಚಿತ್ರರಂಗಕ್ಕೆ ನಿಮ್ಮ ಪ್ರವೇಶವಾಗಿದ್ದು ಹೇಗೆ?
ನಾಯಕನಾಗಿ ಚಿತ್ರೋದ್ಯಮಕ್ಕೆ ಬರಬೇಕು ಎನ್ನುವುದೇ ನನ್ನ ಆಸೆಯಾಗಿತ್ತು. ಎಸ್ ಆರ್ ಬ್ರದರ್ಸ್ ಅಂದರೆ ಎಕೆ 47' ರೈಟರ್,
ನಂಜುಂಡಿ’ ಡೈರೆಕ್ಟರ್ ನನಗೆ ಅಣ್ಣ ಆಗಬೇಕು. ಅವರು ನನಗೆ ರಾಮು ಬ್ಯಾನರ್‌ನ ಮುಂಬೈ' ಸಿನಿಮಾಗೆ ಡೈಲಾಗ್ ಬರೆಯಲು ಅವಕಾಶ ಮಾಡಿಕೊಟ್ಟರು. ಆಗ ನನಗೆ ಹದಿನೇಳು ವರ್ಷವಷ್ಟೇ. ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ ಹೀರೋ. ಅದರಲ್ಲಿನ ನನ್ನ ಡೈಲಾಗ್ ನೋಡಿ ಸಾಕಷ್ಟು ಆಫರ್ಸ್ ಬರುತ್ತಿದ್ದವು. ಆದರೆ ನನಗೆ ಒಪ್ಪಿಕೊಳ್ಳೋದಿಕ್ಕೆ ಭಯ ಇತ್ತು. ಬಹುಶಃ ಚಿಕ್ಕ ವಯಸ್ಸಾಗಿರುವ ಕಾರಣ ಆ ಭಯ ಬಂದಿರಬಹುದು. ಮಾತ್ರವಲ್ಲ, ನನ್ನ ಡೈಲಾಗ್ ಬಗ್ಗೆ ಎಲ್ಲರೂ ಮೆಚ್ಚಿದ್ದರೂ ಆ ಚಿತ್ರ ಫ್ಲಾಪ್ ಆಗಿದ್ದೇ ನನಗೆ ದೊಡ್ಡ ಆತಂಕ ತಂದಿತ್ತು. ಒಂದು ವರ್ಷ ಇಂಡಸ್ಟ್ರಿ ಬಿಟ್ಟು ಮನೆಯಲ್ಲೇ ಇದ್ದೆ. ಆಗ ಒಂದು ಕತೆ ಬರೆದೆ. ಆ ಕತೆಯನ್ನು ರಾಮು ಸರ್ ಬ್ಯಾನರಲ್ಲಿ ನಾನೇ ಡೈರೆಕ್ಟ್ ಮಾಡಬೇಕಿತ್ತು. ಕಾರಣಾಂತರಗಳಿಂದ ಅದು ಕೂಡ ಸೆಟ್ಟೇರಲೇ ಇಲ್ಲ. ಆಗ ನನಗೆ ಇನ್ನು ನನ್ನಿಂದ ಏನೂ ಆಗಲ್ಲ ಎನ್ನುವ ಭಾವನೆ ಮೂಡಿ, ನಾನು ಮಾಡಿದ
ಅಪರೂಪ’ ಎನ್ನುವ ಕತೆಯನ್ನು ನಿರ್ದೇಶಕ ಮಹೇಶ್ ಬಾಬು ಅವರಿಗೆ ಕೊಟ್ಟೆ. ಅದರಲ್ಲಿ ಚಿತ್ರಕತೆ, ಸಂಭಾಷಣೆ ಕೂಡ ನನ್ನದೇ ಆಗಿತ್ತು. ಅದು ಕಾರ್ಯರೂಪಕ್ಕೆ ಬಂದೊಡನೆ ಮತ್ತೆ ನನ್ನ ಕನಸು ಕೈಗೂಡತೊಡಗಿತು. ಮನೋರಂಜನ್ ಪರಿಚಯವಾದರು.
ಕ್ರೇಜಿಸ್ಟಾರ್ ಪುತ್ರನನ್ನು ನಿರ್ದೇಶಿಸಲು ಭಯವಾಯಿತೇ?
`ಪ್ರಾರಂಭ’ ನನ್ನ ಮನೆಯ ಸಿನಿಮಾ ಆಗಿದ್ದ ಕಾರಣ ನನಗೆ ಆತಂಕವೇನೂ ಇರಲಿಲ್ಲ. ಮಾತ್ರವಲ್ಲ, ನಾನು ಬರಹಗಾರನಾಗಿರುವುದರಿಂದ ನನ್ನ ಕಾನ್ಸೆಪ್ಟ್ ಮೇಲೆ ನನಗೆ ನಂಬಿಕೆ ಇತ್ತು. ನನ್ನ ನಂಬಿಕೆ ಹೆಚ್ಚಿಸುವಂಥ ತಂಡವೂ ಜತೆಯಲ್ಲಿತ್ತು. ಹೀರೋ ಮನು ತುಂಬಾನೇ ಸಪೋರ್ಟ್ ಮಾಡಿದ್ದಾರೆ. ಅವರಿಗೂ ಕತೆ ಇಷ್ಟವಾದ ಮೇಲೆಯೇ ಈ ಚಿತ್ರ ಒಪ್ಪಿಕೊಂಡಿದ್ದರು. ಟೆಕ್ನಿಕಲಿ ನಾನು ತುಂಬ ಸ್ಟ್ರಾಂಗ್ ಆಗಿದ್ದ ಕಾರಣ ನನಗೆ ಯಾರ ಸಪೋರ್ಟ್ ಕೂಡ ಬೇಕಾಗಿರಲಿಲ್ಲ. ಚಿತ್ರದಲ್ಲಿ ಹೊಸ ನಾಯಕಿ, ಹೊಸ ಸಂಗೀತ ನಿರ್ದೇಶಕರನ್ನು ಪರಿಚಯಿಸಿದ್ದೀನಿ. ನಾಯಕನನ್ನು ಬಿಟ್ಟು ಚಿತ್ರದ ಪ್ರಮುಖ ಪಾತ್ರಗಳನ್ನೆಲ್ಲ ಸಾಧ್ಯವಾದಷ್ಟು ಹೊಸಬರಿಂದಲೇ ಮಾಡಿಸಿದ್ದೀನಿ. ಹೊಸಬರಿಂದ ಮಾತ್ರವಲ್ಲ, ಪ್ರಾಣಿಗಳಿಂದ ಕೂಡ ನಟನೆ ತೆಗೆಸುವ ಚಾಲೆಂಜಿಂಗ್ ಸಂದರ್ಭ ಈ ಚಿತ್ರದ ಮೂಲಕ ನನಗೆ ಎದುರಾಗಿತ್ತು.
ಪ್ರಾರಂಭ ಚಿತ್ರದ ತಂಡವನ್ನು ಕಟ್ಟಿದ ಬಗೆ ಹೇಗೆ?
ನಾನು ಮ್ಯೂಸಿಕ್ ಡೈರೆಕ್ಟರ್ ಸೇರಿಕೊಂಡು ಸುಮಾರು ಏಳು ವರ್ಷಗಳಿಂದ ಯಾವುದೋ ಕಿರುಚಿತ್ರ ಮಾಡಬೇಕು ಎಂದು ಓಡಾಡುತ್ತಿದ್ದೆವು. ಈ ಚಿತ್ರ ಮಾಡುವಾಗ ಅವರ ಕೈನಲ್ಲಿಯೂ ಯಾವುದೇ ಚಿತ್ರಗಳಿರಲಿಲ್ಲ. ಗೆಳೆಯನಾಗಿ ಇದನ್ನು ಮಾಡುತ್ತಾನೆ ಎನ್ನುವ ನಂಬಿಕೆಯಿಂದ ಒಪ್ಪಿಸಿದೆ. ತುಂಬ ಚೆನ್ನಾಗಿ ಕೆಲಸ ಮಾಡಿದ್ದಾನೆ. ನಾಯಕಿಯ ವಿಚಾರಕ್ಕೆ ಬಂದರೆ ನನಗೆ ಒಬ್ಬಳು ಸಿಂಪಲ್ ಹುಡುಗಿ ಬೇಕಿತ್ತು. ಯಾಕೆಂದರೆ ಪೂರ್ತಿ ಕತೆ ನಾಯಕನ ಮೇಲೆ ಹೋಗುತ್ತದೆ. ಹಾಗಾಗಿ ಡಾಮಿನೇಟ್ ಮಾಡುವಂಥ ನಾಯಕಿಯ ಅಗತ್ಯ ಇರಲಿಲ್ಲ. ಆದರೂ ಆಡಿಶನ್ ಮಾಡಿಯೇ ಈ ಸಿಂಪಲ್ ಹುಡುಗಿಯನ್ನು ನಾಯಕಿಯನ್ನಾಗಿ ಆರಿಸಿದೆ. ಉಳಿದಂತೆ ಹೆಚ್ಚಿನ ಕಲಾವಿದರನ್ನು ರಂಗಭೂಮಿಯಿಂದ ಆರಿಸಿಕೊಂಡಿದ್ದೇನೆ. ರಂಗಭೂಮಿ ಕಲಾವಿದರಿಗೆ ಗೌರವ ಕೊಡುವುದನ್ನು ನಾನು ಹಿರಿಯರಿಂದ ಕಲಿತಿದ್ದೇನೆ. ಹಾಗಾಗಿ ಅಲ್ಲಿಂದ ಬರುವ ಕಲಾವಿದರಿಗೆ ಚಿತ್ರದಲ್ಲಿ ಪ್ರಾಮುಖ್ಯತೆ ನೀಡಿದ್ದೇನೆ.
ನಿಮಗೆ ನಿರ್ದೇಶನಕ್ಕೆ ಸ್ಫೂರ್ತಿ ಯಾರು?
ನನಗೆ ಚಿಕ್ಕಂದಿನಿಂದಲೂ ಸಿನಿಮಾಗಳೆಂದರೇನೇ ಇಷ್ಟ. ಡಾ.ರಾಜ್ ಕುಮಾರ್, ವಿಷ್ಣುವರ್ಧನ್ ಅವರಿಂದ ಹಿಡಿದು ಈಗಿನ ಅಪ್ಪು ಸರ್ ಮತ್ತು ದರ್ಶನ್ ಸರ್ ತನಕ ಎಲ್ಲ ಕಲಾವಿದರೂ ಇಷ್ಟವಾಗುತ್ತಾರೆ. ನನಗೆ ಪುಟ್ಟಣ್ಣ ಕಣಗಾಲ್ ಸಿಕ್ಕಾಪಟ್ಟೆ ಫೇವರಿಟ್ ನಿರ್ದೇಶಕರು. ಇವತ್ತಿನ ಜನರೇಶನ್‌ನಲ್ಲಿ ಪ್ರಶಾಂತ್ ನೀಲ್ ತುಂಬಾನೇ ಇಷ್ಟವಾಗುವ ಡೈರೆಕ್ಟರ್. ಸದ್ಯದ ಮಟ್ಟಿಗೆ ಅವರಂತೆ ಪಾತ್ರಗಳಿಗೆ ನ್ಯಾಯ ಒದಗಿಸುವ ಮತ್ತೋರ್ವ ನಿರ್ದೇಶಕರು ನನಗೆ ಬೇರೆ ಗೊತ್ತಿಲ್ಲ. ಜೀವನದಲ್ಲಿ ಸಿನಿಮಾ ಮಾಡಿದರೆ `ಕೆಜಿಎಫ್’ನಂಥ ಒಂದು ಚಿತ್ರ ಮಾಡಬೇಕು ಎನ್ನುವ ಆಸೆ ನನ್ನಲ್ಲಿದೆ.
`ಪ್ರಾರಂಭ’ದಲ್ಲಿ ನೀವು ನಟನೆ ಕೂಡ ಮಾಡಿದ್ದೀರ?
ನಾನು ನಿರ್ದೇಶಿಸುವ ಚಿತ್ರದಲ್ಲಿ ಒಂದು ಸಣ್ಣ ಪಾತ್ರವನ್ನೂ ಮಾಡಬಾರದು ಎಂದು ಮೊದಲೇ ತೀರ್ಮಾನಿಸಿದ್ದೆ! ಒಂದು ವೇಳೆ ನಟಿಸಿದರೆ ಅದು ಎರಡು ದೋಣಿ ಮೇಲೆ ಕಾಲಿಟ್ಟಂತಾದೀತು ಎಂದು ನನಗೆ ಗೊತ್ತಿದೆ. ನಾನು ನಟಿಸಲಿರುವ ಚಿತ್ರವನ್ನು ಬೇರೆಯವರು ನಿರ್ದೇಶಿಸುತ್ತಾರೆ. ಆಕ್ಚುಯಲಿ ಅಂಥದೊಂದು ಕತೆ ಎಲ್ಲ ರೆಡಿಯಾಗಿದೆ. ಅದಕ್ಕೆ ಸ್ಕ್ರಿಪ್ಟ್ ಎಲ್ಲ ನಾನೇ ಮಾಡಿದ್ದೇನೆ. ಆ ಪಾತ್ರಕ್ಕಾಗಿ ಒಂದಷ್ಟು ಬಾಡಿ ಬಿಲ್ಡ್ ಮಾಡಿಕೊಳ್ಳಬೇಕಿದೆ. ಇದುವರೆಗೆ `ಪ್ರಾರಂಭ’ದ ಸಂಭ್ರಮದಲ್ಲಿದ್ದ ಕಾರಣ ನನಗೆ ವೈಯಕ್ತಿಕವಾಗಿ ಸಮಯ ಸಿಗುತ್ತಿರಲಿಲ್ಲ. ಆದರೆ ಇನ್ನು ನಾನು ಕೂಡ ತಯಾರಾಗಬೇಕಿದೆ. ಅದರ ನಿರ್ದೇಶಕರು ಯಾರು, ಸಿನಿಮಾ ಹೇಗಿರುತ್ತದೆ? ಯಾರೆಲ್ಲ ದೊಡ್ಡ ಕಲಾವಿದರು ಇರಲಿದ್ದಾರೆ ಎನ್ನುವ ಬಗ್ಗೆ ಮುಂದೆ ಡಿಟೇಲಾಗಿ ತಿಳಿಸುತ್ತೇನೆ.
ಪ್ರಾರಂಭ ಚಿತ್ರದ ಕತೆಗೆ ನಿಮಗೆ ಸ್ಫೂರ್ತಿ ಏನು?
ಪ್ರಾರಂಭದಲ್ಲಿ ನನ್ನ ಲವ್ ಸ್ಟೋರಿ ಇದೆ! ಹಾಗಂತ ಇದು ಟ್ರೂ ಸ್ಟೋರಿ ಅಲ್ಲ. ಸಿನಿಮಾಗೆ ಬೇಕಾದ ಹಾಗೆ ನೀಟಾಗಿ ಪಾಲಿಶ್ ಮಾಡಿದ್ದೇನೆ. ಟ್ರೇಲರ್ ನೋಡಿದವರು ಇದೇನೋ ಅರ್ಜುನ್ ರೆಡ್ಡಿ ಮಾದರಿಯ ಸಿನಿಮಾ ಎಂದುಕೊಂಡಿದ್ದಾರೆ. ಆದರೆ ಇದೊಂದು ಫ್ಯಾಮಿಲಿ ಸ್ಟೋರಿ. ಹಾಗಾಗಿ ಇದು ನನ್ನ ಸ್ಟೋರಿ ಅನಿಸೋದಕ್ಕಿಂತ ನೋಡುತ್ತಿರುವ ಪ್ರತಿಯೊಬ್ಬ ಪ್ರೇಕ್ಷಕನಿಗೆ ತನ್ನದೇ ಸ್ಟೋರಿ ಅಂತ ಅನಿಸುವ ಸಾಧ್ಯತೆ ಇದೆ.