
ನಿರ್ದೇಶಿಸಿದ ಪ್ರಥಮ ಚಿತ್ರದಲ್ಲೇ ಕನ್ನಡಕ್ಕೊಬ್ಬ ಸ್ಟಾರ್ ನ ನೀಡಿದವರು ದುನಿಯಾ ಸೂರಿ. ಇತ್ತೀಚೆಗಷ್ಟೇ ಅವರದೇ ನಿರ್ದೇಶನದ `ಬ್ಯಾಡ್ಮ್ಯಾನರ್ಸ್’ನ ಮುಹೂರ್ತ ನೆರವೇರಿದೆ. ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಚಿತ್ರದ ಪೂಜೆ ನಡೆದಾಗ ನಿರ್ದೇಶಕ ಸೂರಿ, ನಾಯಕ ಅಭಿಷೇಕ್, ಸುಮಲತಾ ಅಂಬರೀಷ್, ನಿರ್ಮಾಪಕ ಕೆ.ಎಂ ಸುಧೀರ್ , ಛಾಯಾಗ್ರಹಕ ಶೇಖರ್, ಸಂಭಾಷಣೆಕಾರ ಮಾಸ್ತಿ ಮೊದಲಾದವರು ಉಪಸ್ಥಿತರಿದ್ದರು.
ಮಗನ ಎರಡನೇ ಚಿತ್ರಕ್ಕೆ ಕ್ಲ್ಯಾಪ್ ಮಾಡಿ ಶುಭ ಕೋರಿದ ಸುಮಲತಾ ಅವರು ಈ ಸಂದರ್ಭದಲ್ಲಿ ಪಾಲ್ಗೊಳ್ಳಲಿಕ್ಕಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೂ ಆಹ್ವಾನ ನೀಡಿದ್ದರು. ಆದರೆ ದೇವಾಲಯಕ್ಕೆ ಬಂದರೆ ಅಭಿಮಾನಿಗಳು ಸೇರುವ ಕಾರಣ, ನಿತ್ಯವೂ ಬರುವ ಭಕ್ತರಿಗೆ ಅನಾನುಕೂಲವಾಗಬಹುದು ಎಂದಿದ್ದಾರೆ ದರ್ಶನ್. ಹಾಗಾಗಿ ನೇರವಾಗಿ ಮಂಡ್ಯದಲ್ಲಿ ನಡೆಯುತ್ತಿದ್ದ ಚಿತ್ರೀಕರಣದ ಸೆಟ್‌ಗೇನೇ ಬಂದು ತಂಡಕ್ಕೆ ಶುಭ ಕೋರಿದ್ದಾರೆ. ದರ್ಶನ್ ಬಂದಿರುವುದು ಗೊತ್ತಾದ ತಕ್ಷಣ ಸೂರಿಯವರು ಕೂಡ ಆಗಮಿಸಿ ಸ್ವಾಗತಿಸಿದ್ದಾರೆ. “ಅದಾಗಲೇ ಚಿತ್ರೀಕರಣ ನಡೆಯುತ್ತಿರೋದ್ರಿಂದ , ಸೆಟ್ ಒಳಗೆ ಬಂದು ತೊಂದರೆ ಆಯ್ತಾ?” ಎಂದು ಕೇಳಿದ್ದಾರೆ ದರ್ಶನ್. ತೊಂದರೆ ಆಗೋದಾದ್ರೆ, ಹೊರಗಡೆ ನಿಂತ್ಕೋತೀನೀ ಎಂದು ತಮ್ಮ ಎಂದಿನ ಸರಳತೆ ತೋರಿಸಿದ್ದಾರೆ. ದರ್ಶನ್ ಅಂಥವರನ್ನು ಸೆಟ್ ನಿಂದ ಹೊರಗೆ ಕಳಿಸಿ ಕನ್ನಡದ ಯಾವ ನಿರ್ದೇಶಕ ತಾನೇ ಶೂಟಿಂಗ್ ಮಾಡ್ತಾರೆ ಹೇಳಿ? ಸೂರಿ ಬೇರೆ ದರ್ಶನ್ ಗೆ ಮೊದಲೇ ಆತ್ಮೀಯ ವ್ಯಕ್ತಿ. ಅವರಿಬ್ಬರೂ ಒಟ್ಟಾಗಿ ಚಿತ್ರ ಮಾಡಿಲ್ಲದೇ ಇರಬಹುದು. ಆದರೆ ಸುಂಟರಗಾಳಿ ಚಿತ್ರದಿಂದಲೇ ಆತ್ಮೀಯತೆ ಇರುವವರು.

ಸುಂಟರಗಾಳಿ ನಿರ್ದೇಶಕ ಸಾಧು ಕೋಕಿಲ ಅವರಿಗೆ ಸೂರಿ ಅಸೋಸಿಯೇಟ್ ಆಗಿ ಕೆಲಸ ಮಾಡಿದ್ದರು. ಆ ನಂತರ ಕೂಡ ಸೂರಿ ನಿರ್ದೇಶನದ ಚಿತ್ರಗಳನ್ನು ನೋಡಿ ಮೆಚ್ಚಿದ್ದಾರೆ ದರ್ಶನ್. ನಿಮ್ಮಂಥ ನಿರ್ದೇಶಕರ ಕೈಗೆ ನಮ್ಮ ಅಭಿ ಸಿಕ್ಕಿರೋದು ಖುಷಿಯಾಗಿದೆ ಎಂದಿದ್ದಾರೆ. ತಮ್ಮನಂಥ ಅಭಿಯನ್ನು ಚೆನ್ನಾಗಿ ಬಳಸ್ಕೊಳ್ಳಿ ಎಂದು ಹಾರೈಸಿದ್ದಾರೆ. ಅಂದಹಾಗೆ ದರ್ಶನ್ ಅಂಬರೀಷ್ ಅವರಿಗೆ ಕೊಡ್ತಿದ್ದಂಥ ಗೌರವ ಇದೀಗ ಅಭಿಷೇಕ್ ದರ್ಶನ್ ಅವರ ಮೇಲಿಟ್ಟಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಸುಮಲತಾ ಅವರು ನಮ್ಮ ಯಾವುದೇ ಕೆಲಸಗಳಿದ್ದರೂ ಚಾಮುಂಡಿ ತಾಯಿಯ ಆಶೀರ್ವಾದ ಪಡೆದೇ ಶುರು ಮಾಡ್ತೇವೆ. ಹಾಗಾಗಿಯೇ ಅಭಿ ಮತ್ತು ಸೂರಿಯ ಈ ಚಿತ್ರಕ್ಕೂ ನಾವು ಇಲ್ಲಿಗೇನೇ ಬಂದಿದ್ದೇವೆ. ಅಂದಹಾಗೆ ಮೊದಲ ದಿನದ ಚಿತ್ರೀಕರಣ ಮಂಡ್ಯದಿಂದಲೇ ಆರಂಭವಾಗಿದೆ. ಆ ಕಾರಣಕ್ಕಾಗಿ ಕೂಡ ಖಷಿಯಾಗಿದೆ ಎಂದಿದ್ದಾರೆ. ದರ್ಶನ್ ನಮ್ಮ ಕುಟುಂಬದ ಸದಸ್ಯನೇ ಆಗಿಹೋಗಿದ್ದಾರೆ. ಹಾಗಾಗಿ ಅವರು ನಾನು ಮತ್ತು ಅಭಿ ಇರುವಲ್ಲೆಲ್ಲ ಖಂಡಿತವಾಗಿ ಇರುತ್ತಾರೆ ಎಂದು ಅಭಿಮಾನದಿಂದ ಹೇಳಿದ್ದಾರೆ ಸುಮಲತಾ.

ಹೆಚ್ಚಿನ ಮಾಹಿತಿಗಾಗಿ Positive Picture YouTube link click ಮಾಡಿ