ರಾಜು ದೇವಸಂದ್ರ ಅವರ ನಿರ್ದೇಶನದ ಮೂರನೇ ಚಿತ್ರ ಕತ್ಲೆಕಾಡು. ಈ ಹಿಂದೆ ಅಕ್ಷತೆ' ಮತ್ತು
ಗೋಸಿಗ್ಯಾಂಗ್’ ಎನ್ನುವ ಚಿತ್ರವನ್ನು ನಿರ್ದೇಶಿಸಿರುವ ಅವರು ಪ್ರಸ್ತುತ ಸೆಕೆಂಡ್ ಲೈಫ್' ಎನ್ನುವ ತಮ್ಮ ನಾಲ್ಕನೇ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ನಿರತರಾಗಿದ್ದಾರೆ. ಅದರ ಗ್ಯಾಪ್ ನಲ್ಲಿ ಹೊರತಂದಿರುವ
ಕತ್ಲೆಕಾಡು’ ಒಂದು ರೀತಿ ಲಾಕ್ಡೌನ್ ವೇಳೆ ಪೂರ್ಣವಾದ ಚಿತ್ರ. ಚಿತ್ರದ ಸಬ್ಜೆಕ್ಟ್ ಕೂಡ ಒಂದು ಕಾಡಿನೊಳಗೆ ಲಾಕ್ಡೌನ್ ಆದಂತಿದೆ ಎನ್ನುವುದು ವಿಶೇಷ.
ಚಿತ್ರದ ನಾಯಕ ಲಾಲು ಮೂಲಕ ನಿರ್ಮಾಪಕರ ಪರಿಚಯವಾಯಿತು. ಚಿತ್ರದಲ್ಲಿ ನಾಲ್ಕು ಮಂದಿ ಖಳನಟರಿದ್ದಾರೆ. ಅವರಲ್ಲಿ ಒಬ್ಬೊಬ್ಬರಿಗೂ ಒಂದೊಂದು ರೀತಿಯ ಮ್ಯಾನರಿಸಮ್ ಇರುತ್ತದೆ. ಚಿತ್ರದಲ್ಲಿ ಅದುವೇ ಪ್ರಮುಖ ಆಕರ್ಷಣೆಯಾಗಿರುತ್ತದೆ. ಪ್ರತಿ ಕ್ಷಣವೂ ಕುತೂಹಲದಲ್ಲೇ ಸಾಗುವ ಚಿತ್ರ ಇದು. ಒಂದು ಸಿನಿಮಾ ಟ್ರೇಲರ್ ಯಾವ ರೀತಿಯಲ್ಲಿ ಸಾಗುತ್ತದೆಯೋ ಪೂರ್ತಿ ಚಿತ್ರ ಅಷ್ಟೇ ವೇಗ ಮತ್ತು ಆಕರ್ಷಕವಾಗಿ ಮೂಡಿ ಬಂದಿದೆ. ಇದು ಕಡಿಮೆ ಕಾಲಾವಧಿಯಲ್ಲಿ ಭರಪೂರ ಮನರಂಜನೆ ನೀಡುವಂಥ ಚಿತ್ರ. ಎರಡು ಗಂಟೆಯ ಒಳಗೆ ಪೂರ್ತಿ ಚಿತ್ರ ಮುಗಿದು ಹೋಗುತ್ತದೆ. ಆದರೆ ಎಂಟು ಫೈಟು ಮತ್ತು ಎರಡು ಹಾಡನ್ನು ಹೊಂದಿರುವ ಸಿನಿಮಾ ಇದು. ಆದರೂ ಈ ಚಿತ್ರವನ್ನು ಇಪ್ಪತ್ತೇ ದಿನದಲ್ಲಿ ಚಿತ್ರೀಕರಣ ಪೂರ್ತಿ ಮಾಡಲಾಗಿದೆ. ಅದಕ್ಕೆ ಛಾಯಾಗ್ರಾಹಕರು ನೀಡಿರುವ ಅದ್ಭುತ ಸಹಕಾರವೇ ಪ್ರಮುಖ ಕಾರಣ. ಎಲ್ಲಕ್ಕಿಂತ ಮುಖ್ಯವಾಗಿ ಇಂದಿಗೆ ಬಹಳ ಅಗತ್ಯವೆನಿಸುವ ಪ್ರಕೃತಿಯ ಬಗ್ಗೆ ಕಾಳಜಿ ತೋರುವಂಥ ಸಂದೇಶ ಚಿತ್ರದಲ್ಲಿದೆ. ಹಾಗಾಗಿ ಒಂದು ಒಳ್ಳೆಯ ಚಿತ್ರವನ್ನು ಕನ್ನಡದ ಪ್ರೇಕ್ಷಕರಿಗೆ ನೀಡುವ ಸಂತೃಪ್ತಿ ತಮಗೆ ಇದೆ ಎಂದು ರಾಜು ದೇವಸಂದ್ರ ಹೇಳುತ್ತಾರೆ.
ಲಾಲು ನಾಯಕ
ಉರ್ದು ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರಗಳನ್ನು ಮಾಡಿದ್ದಂಥ ಲಾಲು ಕನ್ನಡ ಚಿತ್ರಗಳಲ್ಲಿ ಗುರುತಿಸಬೇಕು ಎನ್ನುವ ಕನಸು ಹೊಂದಿದ್ದರು. “ಪಾತ್ರ ನೀಡುವ ಮೊದಲೇ ಕಾಸು ಕೇಳಿ, ಆಮೇಲೆ ಕೈ ಕೊಡುವವರೇ ಹೆಚ್ಚು. ಅಂಥವರ ನಡುವೆ ಆರಂಭದಿಂದಲೇ ತಮಗೆ ಸಣ್ಣಪುಟ್ಟ ಪಾತ್ರ ನೀಡಿ ಪ್ರೋತ್ಸಾಹಿಸಿದವರು ನಿರ್ದೇಶಕ ರಾಜು ದೇವಸಂದ್ರ” ಎನ್ನುತ್ತಾರೆ ಲಾಲ್. ರಾಜು ಅವರು ಅಸಿಸ್ಟೆಂಟ್, ಅಸೋಸಿಯೇಟ್ ಡೈರೆಕ್ಟರ್ ಆಗಿದ್ದ ದಿನಗಳಿಂದಲೂ ತಮ್ಮನ್ನು ಗುರುತಿಸಿ ಸಣ್ಣ ಪಾತ್ರಗಳಿಗೆ ಚಾನ್ಸ್ ನೀಡುತ್ತಿದ್ದರು. ಹಾಗಾಗಿ ಇಂದು ನಾನು ನಾಯಕನಾಗುವ ಅವಕಾಶ ಬಂದಾಗಲೂ ಅವರೇ ನಿರ್ದೇಶಕರಾಗಬೇಕೆನ್ನುವ ನಿರ್ಧಾರಕ್ಕೆ ನಾನು ಬಂದೆ ಎನ್ನುತ್ತಾರೆ ಲಾಲು. ಆದರೆ ಅದಕ್ಕೂ ಮೊದಲು ತಮ್ಮನ್ನು ನಂಬಿ ನಾಯಕನಾಗಿಸಲು ಮುಂದೆ ಬಂದಂಥ ಹಿರಿಯ ಸ್ನೇಹಿತ ನಿಯಾಜುದ್ದೀನ್ ಅವರನ್ನು ಜೀವನ ಪೂರ್ತಿ ಮರೆಯಲು ಸಾಧ್ಯವಿಲ್ಲ ಎನ್ನುವುದು ಲಾಲು ಅಭಿಪ್ರಾಯ.
ನಿರ್ಮಾಪಕನಾದ ಗಾಯಕ ನಿಯಾಜುದ್ದೀನ್
‘ಕತ್ಲೆ ಕಾಡು’ ಚಿತ್ರದ ನಿರ್ಮಾಪಕರಾಗಿ ಮಾತ್ರವಲ್ಲ ಗಾಯಕರಾಗಿಯೂ ಗುರುತಿಸಿಕೊಂಡವರು ನಿಯಾಜುದ್ದೀನ್. ನಿಯಾಜುದ್ದೀನ್ ಕಳೆದ ಮೂವತ್ತು ವರ್ಷಳಿಂದ ಹವ್ಯಾಸಿ ಗಾಯಕರು. ಇದರ ನಡುವೆ ಎರಡು ಉರ್ದು ಸಿನಿಮಾಗಳಲ್ಲಿ ನಟಿಸಿದ ಕೀರ್ತಿಯೂ ಇವರಿಗೆ ಇದೆ. ಅವುಗಳ ಹೆಸರು ‘ಸಾಡು ಮೇರ ಜಾಡು’ ಮತ್ತು ‘ಲೇನೆ ಕೆ ದೇನೆ.’ ಎರಡು ಚಿತ್ರಗಳಲ್ಲಿಯೂ ಶಬೀರ್ ಸಂಗೀತವಿದ್ದು, ಎರಡರಲ್ಲಿಯೂ ಗಾಯಕರಾಗಿ ಗುರುತಿಸಿಕೊಂಡಂಥ ಪ್ರತಿಭೆ ನಿಯಾಜುದ್ದೀನ್. ಪ್ರಸ್ತುತ ಅವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ನಿರ್ಮಾಣ ಕ್ಷೇತ್ರಕ್ಕೂ ಕಾಲಿಟ್ಟಿದ್ದಾರೆ. ನಿಯಾಜುದ್ದೀನ್ ನಿರ್ಮಿಸಿರುವ ಚಿತ್ರದ ಹೆಸರೇ ಕತ್ಲುಕಾಡು.
ಸಿನಿಮಾದಲ್ಲಿ ನಟಿಸಬೇಕೆಂದು ಗಾಂಧಿನಗರದ ತುಂಬ ಅಲೆದಾಡುತ್ತಿದ್ದ ಶಿವಾಜಿನಗರದ ಲಾಲ್[ಖಾದರ್ ಷರೀಫ್] ನನ್ನೇ ಕರೆದು ನಾಯಕನಾಗಿಸಿದ್ದಾರೆ ನಿಯಾಜುದ್ದೀನ್.
“ಚಿತ್ರದಲ್ಲಿ ಲಾಲು ನಾಯಕನಾಗಿ ನಟಿಸಿದ್ದಾರೆ. ನಾನು ಕೂಡ ಒಬ್ಬ ಫಾರೆಸ್ಟ್ ಆಫೀಸರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಸ್ನೇಹಿತನಿಗಾಗಿ ಒಂದು ಒಳ್ಳೆಯ ಸಂದೇಶ ಇರುವ ಚಿತ್ರ ಮಾಡಬೇಕು ಎನ್ನುವ ಆಸೆ ಇತ್ತು. ಇಂಗ್ಲೀಷ್ ನಲ್ಲಿ ಇವಿಲ್ ಡೆಡ್ ನನಗೆ ತುಂಬ ಇಷ್ಟವಾದ ಸಿನಿಮಾ. ಹಾಗಾಗಿ ಕಾಡಿನ ಸಬ್ಜೆಕ್ಟ್ ಇರಿಸಿಕೊಂಡು ಚಿತ್ರ ಮಾಡಬೇಕು ಎಂದು ಹೊರಟಾಗ ನಿರ್ದೇಶಕ ರಾಜು ದೇವಸಂದ್ರ ಅವರನ್ನು ಲಾಲು ಪರಿಚಯಿಸಿದರು. ಅವರು ಕನ್ನಡದ ನೇಟಿವಿಟಿಗೆ ಮತ್ತು ನಮ್ಮ ಬಜೆಟ್ ಗೆ ತಕ್ಕ ಹಾಗೆ ಒಂದು ಒಳ್ಳೆಯ ಕಾಡಿನ ಕತೆ ಇರುವುದಾಗಿ ಹೇಳಿದರು. ಸ್ಟೋರಿ ನನಗೆ ಇಷ್ಟವಾಯಿತು. ಚಿತ್ರದಲ್ಲಿ ಎರಡು ಹಾಡುಗಳಿದ್ದು, ನಾನು ಗಾಯಕನಾಗಿರುವುದರಿಂದ ನಿರ್ದೇಶಕರು ನನ್ನಿಂದಲೇ ಹಾಡಿಸಿದ್ದಾರೆ. ಅದರಲ್ಲಿ ಒಂದು ಕಾಡಿನ ಕುರಿತಾದ ಹಾಡು. ಮತ್ತೊಂದು ಮನುಷ್ಯನ ದುರಾಸೆಯ ನೋವಿನ ಹಾಡು. ಎರಡು ಗೀತೆಗಳು ಕೂಡ ಎಲ್ಲರಿಗೂ ಇಷ್ಟವಾಗುತ್ತದೆ ಎಂದು ನಂಬಿದ್ದೇನೆ” ಎನ್ನುತ್ತಾರೆ ನಿಯಾಜುದ್ದೀನ್.
ಸಿಂಧು ರಾವ್ ಸೇರಿದಂತೆ ಮೂವರು ನಾಯಕಿಯರು
ಚಿತ್ರದ ನಾಯಕಿಯಾಗಿ ನಟಿಸಿರುವ ಸಿಂಧು ರಾವ್ ಅವರಿಗೆ ಕತ್ಲೆಕಾಡು’ ಅವರಿಗೆ ಏಳನೆಯ ಚಿತ್ರ. ಈ ಹಿಂದೆ
ಕೋಟಿಗೊಂದು ಲವ್ ಸ್ಟೋರಿ’ ಮತ್ತು `ಗಂಡ ಊರಿಗೆ ಹೋದಾಗ’ ಚಿತ್ರಗಳ ಪಾತ್ರಗಳ ಮೂಲಕ ಗುರುತಿಸಿಕೊಂಡವರು ಸಿಂಧು ರಾವ್. ಕತ್ಲೆ ಕಾಡು ಚಿತ್ರದಲ್ಲಿ ಸಿಂಧೂ ಅವರ ಪಾತ್ರದ ಹೆಸರು ಸಂಜನಾ. ಟ್ರಿಪ್‍ಗೆಂದು ಫ್ರೆಂಡ್ಸ್ ಜತೆಗೆ ಕಾಡಿಗೆ ಹೊರಟಿರುತ್ತಾರೆ. ದಟ್ಟ ಕಾಡಿನ ನಡುವೆ ಸಿಕ್ಕಿಕೊಂಡ ಬಳಿಕ ಏನಾಗುತ್ತದೆ ಎನ್ನುವುದೇ ಚಿತ್ರದ ಕತೆ. ಚಿತ್ರದಲ್ಲಿ ಮೂವರು ನಾಯಕಿಯರಿದ್ದಾರೆ. ಸಂಹಿತಾ ಶಾ ಅವರಲ್ಲಿ ಒಬ್ಬರು. ಇದು ಅವರಿಗೆ 13ನೇ ಚಿತ್ರ. ಇದುವರೆಗೆ ಕನ್ನಡ ಸೇರಿದಂತೆ ತಮಿಳು, ತೆಲುಗು ಜತೆಗೆ ತುಳು ಭಾಷೆಯ ಸಿನಿಮಾದಲ್ಲಿ ಕೂಡ ನಟಿಸಿದ ಕೀರ್ತಿ ಇವರದ್ದು.