ಡಾ.ರಾಜ್ ಕುಮಾರ್ ಅವರ ಕುಟುಂಬದ ಚಿತ್ರಗಳನ್ನು ಒಳಗೊಂಡಿರುವ ಕ್ಯಾಲೆಂಡರ್ ಅದು. `ಅಖಿಲ ಕರ್ನಾಟಕ ಡಾ.ಶಿವರಾಜ್ ಕುಮಾರ್ ಸೇನಾಸಮಿತಿ’ಯವರು ತಯಾರಿಸಿರುವಂಥ ನೂತನ ವರ್ಷದ ಕ್ಯಾಲೆಂಡರ್ ಅನ್ನು ಡೈನಾಮಿಕ್ ಹೀರೋ ದೇವರಾಜ್ ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಅವರು, ಈ ವರ್ಷ ಮಾಡಿದ ಮೊದಲ ಪುಣ್ಯದ ಕೆಲಸ ಎಂದರೆ ಅದು ಅಣ್ಣಾವ್ರ ಭಾವಚಿತ್ರವಿರುವ ಈ ಕ್ಯಾಲೆಂಡರ್ ಬಿಡುಗಡೆ ಮಾಡಿರುವಂಥದ್ದು ಎಂದರು.
“ಕಳೆದ ವರ್ಷವು ಎಲ್ಲರಿಗೂ ದುರದೃಷ್ಟಕರವಾಗಿತ್ತು. ಈ ವರ್ಷ ಅವುಗಳನ್ನೆಲ್ಲ ಮರೆಯುವಂತೆ ಇರುತ್ತದೆ. ಅದರ ಲಕ್ಷಣ ಎನ್ನುವ ಹಾಗೆ ನನಗೆ ಈ ಕ್ಯಾಲೆಂಡರ್ ಬಿಡುಗಡೆಗೊಳಿಸುವ ಅವಕಾಶ ದೊರಕಿದೆ ಎಂದು ದೇವರಾಜ್ ಹೇಳಿದ್ದಾರೆ. “ನಾನು ತುಂಬ ಸಲ ನೋಡಿದ ಅಣ್ಣಾವ್ರ ಸಿನಿಮಾಗಳಲ್ಲಿ `ಶ್ರಿನಿವಾಸ ಕಲ್ಯಾಣ’ವೂ ಒಂದು. ಅದೇ ಸಿನಿಮಾದ ಕೃಷ್ಣಾವತಾರದ ಚಿತ್ರವನ್ನೇ ಈ ಕ್ಯಾಲೆಂಡರ್‌ನಲ್ಲಿಯೂ ಬಳಸಲಾಗಿದೆ. ಇದೇ ರೀತಿ ಎಲ್ಲ ವರ್ಷವೂ ನಿಮ್ಮಿಂದ ಕ್ಯಾಲೆಂಡರ್ ಹೊರಬರಲಿ” ಎಂದು ದೇವರಾಜ್ ಈ ಸಂದರ್ಭದಲ್ಲಿ ಶುಭ ಕೋರಿದರು.
ವರ್ಷದ ಎಲ್ಲ ಹನ್ನೆರಡು ತಿಂಗಳ ಒಂದೊಂದು ಪುಟದಲ್ಲಿಯೂ ಪಾರ್ವತಮ್ಮ ರಾಜ್ ಕುಮಾರ್ ಅವರನ್ನು ಕ್ಯಾಮೆರಾದಲ್ಲಿ ಕ್ಲಿಕ್ ಮಾಡುತ್ತಿರುವ ರಾಜ್ ಕುಮಾರ್, ಚಿ. ಉದಯಶಂಕರ್ ಅವರೊಂದಿಗೆ ಸಮಾಲೋಚನೆ ನಡೆಸುತ್ತಿರುವ ಚಿತ್ರ ಸೇರಿದಂತೆ ಡಾ. ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಪುನೀತ್ ರಾಜ್ ಕುಮಾರ್ ಸೇರಿದಂತೆ ರಾಜ್ ಕುಟುಂಬದ ವೈವಿಧ್ಯಮಯ, ಆಕರ್ಷಕ ಚಿತ್ರಗಳು ಇದರಲ್ಲಿವೆ.