ಕನ್ನಡ ತಾರೆಯರ ವಿರುದ್ಧದ ಅಭಿಯಾನ!

ಕನ್ನಡ ಸಿನಿಮಾ ಕಲಾವಿದರು ಸಾಮಾಜಿಕ ಸಮಸ್ಯೆಗಳ‌ ವಿರುದ್ಧ ಪ್ರತಿಭಟಿಸಿ ನ್ಯಾಯ ಒದಗಿಸಬಲ್ಲರು ಎಂದು ಸಾಬೀತು ಪಡಿಸಿದವರು ಡಾ.ರಾಜ್ ಕುಮಾರ್. ಡಾ. ರಾಜ್ ತಾವು ಬದುಕಿರುವವರೆಗೂ ಯಾವುದೇ ರಾಜಕೀಯ ಪಕ್ಷಗಳ ಪರ ಪ್ರಚಾರವನ್ನೂ ಮಾಡಲಿಲ್ಲ. ಅಭಿಪ್ರಾಯ ಹೇಳುವ ಅಗತ್ಯ ಬಂದಾಗ ಅಧಿಕಾರದಲ್ಲಿರುವ ಪಕ್ಷವನ್ನೂ ಎದುರು ಹಾಕಿಕೊಳ್ಳಬಲ್ಲ ತಾಕತ್ತು ಅವರಲ್ಲಿತ್ತು. ಆ ಗತ್ತು ಈಗ ಯಾರಲ್ಲೂ ಇಲ್ಲ ಎನ್ನುವುದು ಸಾಬೀತಾಗಿದೆ. ನಿರ್ಮಾಪಕರನ್ನೇ ಅನ್ನದಾತರು ಎಂದು ಕರೆಯುತ್ತಿದ್ದ ಅವರು ರೈತರ ಕಷ್ಟ ಎಂದರೆ ಸುಮ್ಮನಿರುತ್ತಿದ್ದರಾ? ‘ಬಂಗಾರದ ಮನುಷ್ಯ’ ಎನ್ನುವ ಒಂದು ಸಿನಿಮಾದಿಂದಲೇ ಹಲವರು ರೈತರಾಗಲು ಪ್ರೇರಣೆ ಕೊಟ್ಟ ಅವರು, ರೈತರ ಸಮಸ್ಯೆ ಎಂದರೆ ಎದ್ದು ಬರುತ್ತಿದ್ದರು. ಈಗ ಬಿಡಿ, ಜನ ಎಲ್ಲದರಲ್ಲೂ ರಾಜಕೀಯ ಕಾಣುತ್ತಾರೆ. ಮಾತನಾಡಿದರೆ ಕಷ್ಟ ಎಂದು ಈಗ ಸುಮ್ಮನಿರುವವರೇ ಹೆಚ್ಚು. ರೈತ, ಸೈನಿಕರ ವಿಚಾರ ಬಂದಾಗ ಆಡಳಿತ ನಡೆಸುವುದು ಯಾವ ಪಕ್ಷ ಎನ್ನುವುದು ಮುಖ್ಯವಾಗುವುದಿಲ್ಲ. ಶಾಂತಿಯುತ ಪ್ರತಿಭಟನೆಯಲ್ಲೇ ಉಪವಾಸ ಸಾಯಿತ್ತಿರುವ ರೈತರ ಪರ ಒಂದು ಹೇಳಿಕೆ ನೀಡುವ ಧೈರ್ಯ ನಮ್ಮ ಸ್ಟಾರ್ ಗಳಿಗೆ ಯಾಕಿಲ್ಲ? ಈ ಬಗ್ಗೆ ಹಿರಿಯ ಪತ್ರಕರ್ತ, ಸಾಮಾಜಿಕ ಕಾರ್ಯಕರ್ತ ದಿನೇಶ್ ಅಮೀನಮಟ್ಟು ಬರೆದಿರುವ ಬರಹ ಇಲ್ಲಿದೆ.

ಕೊರೊನಾ ಪರಿಣಾಮದ ಪ್ರೇಕ್ಷಕರ ಬರಗಾಲದ ನಂತರ ಇದ್ದಕ್ಕಿದ್ದಂತೆ ಸಾಲುಸಾಲು ಕನ್ನಡ ಚಿತ್ರಗಳು ಬಿಡುಗಡೆಯಾಗುತ್ತಿವೆ, ಚಿತ್ರಮಂದಿರಗಳನ್ನು ತುಂಬುವ ಅಭಿಯಾನ ಬಿರುಸು ಪಡೆದಿದೆ. ಟಿವಿ ಚಾನೆಲ್ ಗಳಂತೂ ಚಿತ್ರಮಂದಿರಗಳು ತುಂಬಿ ತುಳುಕಾಡುತ್ತಿವೆ ಎಂಬಂತೆ ಪೇಯ್ಡ್ ಕ್ಯಾಂಪೇನ್ ನಡೆಸುತ್ತಿವೆ. ಚಿತ್ರನಟ-ನಟಿಯರು, ನಿರ್ದೇಶಕರು, ನಿರ್ಮಾಪಕರು ಚಾನೆಲ್ ಗಳ ತೆರೆಯ ಮೇಲೆ ಕಾಣಿಸಿಕೊಂಡು ಪ್ರೇಕ್ಷಕಪ್ರಭುವಿಗೆ ಕೈಮುಗಿದು,ಕಾಲಿಗೆರಗಿ ಕರೆಯುತ್ತಿದ್ದಾರೆ.

ನಿಜ, ಕೊರೊನಾದಿಂದಾಗಿ ಚಿತ್ರರಂಗ ಕಷ್ಟದಲ್ಲಿದೆ ಪ್ರೇಕ್ಷಕರೂ ಚಿತ್ರನೋಡಿ ಸಹಕರಿಸಬೇಕು. ಆದರೆ ನಮ್ಮ ಅನ್ನದಾತರೂ ಕಷ್ಟದಲ್ಲಿದ್ದಾರಲ್ಲಾ, ಅನ್ನತಿನ್ನುವ ಈ ನಟ-ನಟಿಯರೂ ಅವರಿಗೂ ನೆರವಾಗಬೇಕಲ್ಲ? ಇಲ್ಲಿಯ ವರೆಗೆ ಎಷ್ಟು ಮಂದಿ ನಟ-ನಟಿಯರು,ನಿರ್ದೇಶಕ ನಿರ್ಮಾಪಕರು ರೈತರ ಪರವಾಗಿ ದನಿ ಎತ್ತಿದ್ದಾರೆ? ಹ್ಯಾಟ್ರಿಕ್, ಕಿಚ್ಚು, ಡಿಚ್ಚು,ಪವರ್, ಗೋಲ್ಡ್,ಸಿಲ್ವರ್ ಗಳಲ್ಲಿ ಯಾರಾದರೂ ಬಾಯಿ ಬಿಟ್ಟಿದ್ದಾರಾ?

ಕನ್ನಡ ಸಿನೆಮಾಗಳ ಬಹುಪಾಲು ಪ್ರೇಕ್ಷಕರು ಹಳ್ಳಿಗಳಲ್ಲಿದ್ದಾರೆ, ನಗರ-ಪಟ್ಟಣಗಳಲ್ಲಿಯೂ ಕನ್ನಡ ಚಿತ್ರಗಳನ್ನು ಹೆಚ್ಚು ನೋಡುವವರು ಗ್ರಾಮೀಣ ಪ್ರದೇಶದಿಂದ ಬಂದವರು. ನೆಟ್ ಫ್ಲಿಕ್ಸ್, ಅಮೆಜಾನ್ ಪ್ರೇಕ್ಷಕರಾಗಿ ಪರಿವರ್ತನೆಗೊಂಡಿರುವ ನಗರ-ಪಟ್ಟಣಗಳಲ್ಲಿ ಹುಟ್ಟಿಬೆಳೆದವರು, ಯುವಜನರು ಚಿತ್ರಮಂದಿರದ ಕಡೆ ತಲೆಹಾಕುವುದಿಲ್ಲ.

ಇತ್ತೀಚೆಗೆ ‘ಆ್ಯಕ್ಟ್ 1978’ ಚಿತ್ರದ ನಿರ್ದೇಶಕ ಮಂಸೋರೆ ಮತ್ತು ಕತೆಗಾರ ಟಿ.ಕೆ.ದಯಾನಂದ್ ಹಾಗೂ ‘ಬೆಲ್ ಬಾಟಂ’ ಚಿತ್ರದ ನಿರ್ದೇಶಕ ಜಯತೀರ್ಥ ಅವರು ರೈತರ ಹೋರಾಟವನ್ನು ಬೆಂಬಲಿಸಿದರು ಎನ್ನುವ ಕಾರಣಕ್ಕೆ ‘ಅರ್ಬನ್ ನಕ್ಸಲ್ ಸಿನೆಮಾ ಬಹಿಷ್ಕರಿಸಿ’ ಎಂದು ಭಕ್ತರು ಕ್ಯಾಂಪೇನ್ ಶುರುಮಾಡಿದ್ದರು. ಈ ಎರಡುರೂಪಾಯಿ ಗಿರಾಕಿಗಳ ಪೋಸ್ಟ್ ಗಳಿಗೆ ಯಾರೂ ಕವಡೆಕಾಸಿನ ಕಿಮ್ಮತ್ತು ಕೊಟ್ಟಿಲ್ಲ ಎನ್ನುವುದು ಬೇರೆ ಮಾತು. ( ನನ್ನೊಬ್ಬ ಗೆಳೆಯ ಈ ಕ್ಯಾಂಪೇನ್ ನೋಡಿ ಆ್ಯಕ್ಟ್1978 ಚಿತ್ರವನ್ನು ಎರಡನೇ ಬಾರಿ ನೋಡಿದನಂತೆ)

ಇದನ್ನೇ ತಿರುಗಿಸಿ ಕೊಡಲು ಅವಕಾಶ ಕೂಡಿ ಬಂದಿದೆ. “ ನಿಮ್ಮ ಚಿತ್ರಗಳನ್ನು ನೋಡಬೇಕಾದರೆ ಮೊದಲು ನೀವು ರೈತರ ಹೋರಾಟದ ಪರವಾಗಿ ಮಾತನಾಡಿ” ಎಂದು ಕನ್ನಡ ಚಿತ್ರನಟ-ನಟಿಯರ ಮೇಲೆ ಒತ್ತಡ ಹಾಕಬಾರದೇಕೆ? ರೈತರ ಪರವಾಗಿ ಮಾತನಾಡದ ನಟ-ನಟಿಯರ ಚಿತ್ರಗಳನ್ನು ವೀಕ್ಷಿಸುವುದಿಲ್ಲ ಎಂದು ರೈತರು ಮತ್ತು ಅವರ ಪರವಾಗಿರುವವರು ಗಟ್ಟಿದನಿಯಲ್ಲಿ ಹೇಳುವ ಅಭಿಯಾನ ಯಾಕೆ ನಡೆಸಬಾರದು? ಕೇವಲ ಕಂಗನಾ, ಅಕ್ಷಯಕುಮಾರ್ ಗಳನ್ನು ಗೇಲಿಮಾಡುತ್ತಾ ಕೂತರೆ ಸಾಕೇ?
ನಮ್ಮ ಕನ್ನಡ ಸಂಘಟನೆಗಳು ಇದರ ಬಗ್ಗೆಯೂ ಒಂದು ಟ್ವಿಟರ್ ಅಭಿಯಾನ ನಡೆಸಲಿ.

ಈ ದುರಿತ ಕಾಲದಲ್ಲಿ ಡಾ.ರಾಜ್ ಕುಮಾರ್ ಇದ್ದಿದ್ದರೆ ರೈತರ ಪರವಾಗಿ ಬೀದಿಯಲ್ಲಿರುತ್ತಿದ್ದರು. ನಮ್ಮ ಕನ್ನಡ ಚಿತ್ರ ನಟ-ನಟಿಯರನ್ನೆಲ್ಲ ಸೇರಿಸಿ ಡಾ.ರಾಜ್ ಕುಮಾರ್ ಅವರ ಬಂಗಾರದ ಮನುಷ್ಯ ಚಿತ್ರವನ್ನು ತೋರಿಸಿ ‘ರಾಜೀವ’ನನ್ನು ನೆನಪು ಮಾಡಿಕೊಡಬೇಕು. ಪ್ರತಿ ರೈತ ಹೋರಾಟದ ಸಭೆಗಳಲ್ಲಿ ಕಡ್ಡಾಯವಾಗಿ ಈ ಚಿತ್ರವನ್ನು ಪ್ರದರ್ಶಿಸಬೇಕು. ಕೊನೆಗೂ ಚಿತ್ರಗಳ ಮೂಲಕ ಅಜರಾಮರವಾಗಿ ಉಳಿದಿರುವ ರಾಜ್ ಕುಮಾರ್ ಅವರೇ ನಮಗೆ ಆಪತ್ಪಾಂಧವ.

Recommended For You

Leave a Reply

error: Content is protected !!
%d bloggers like this: