ಕಲಾಕ್ಷೇತ್ರದಲ್ಲಿ `ಗುಲಾಬಿ ಗ್ಯಾಂಗ್-2′

ಕಳೆದ ಒಂದೆರಡು ವರ್ಷಗಳಿಂದ ರಂಗಭೂಮಿಯಲ್ಲಿ ಜನಪ್ರಿಯವಾಗಿರುವ ನಾಟಕ `ಗುಲಾಬಿ ಗ್ಯಾಂಗು’. ಇದೀಗ ಅದರ ಎರಡನೇ ಭಾಗ ಕೂಡ ಅಷ್ಟೇ ಹೆಸರಿನೊಂದಿಗೆ ಮುನ್ನುಗ್ಗುತ್ತಿದೆ. ಈ ನಾಟಕದ ಕತೆ ನೈಜ ಘಟನೆಯನ್ನು ಆಧಾರವಾಗಿಸಿ ಮಾಡಿರುವುದು ವಿಶೇಷ. ಶೋಷಿತ ಮಹಿಳೆಯರಿಗೆ ನ್ಯಾಯ ಒದಗಿಸಲು ಸ್ವತಃ ಮಹಿಳೆಯೋರ್ವಳು ತಂಡ ಕಟ್ಟಿ ಹೋರಾಡಿದ ಕತೆ ಇದು. ಉತ್ತರ ಪ್ರದೇಶದ ಬಾಂಡ ಜಿಲ್ಲೆಯ ಅನಕ್ಷರಸ್ಥ ಮಹಿಳೆ ಸಂಪತ್ ಪಾಲ್ ಅವರ ಈ ಜೀವನಗಾಥೆಯನ್ನು ನಾಟಕವಾಗಿಸಿದವರು ಸಿನಿಮಾ, ರಂಗಭೂಮಿಯಲ್ಲಿ ಹೆಸರಾಗಿರುವ ಪ್ರವೀಣ್ ಸೂಡ. ಈ ನಾಟಕದಲ್ಲಿ ಸಂಪತ್ ಪಾಲ್ ಪಾತ್ರ ನಿರ್ವಹಿಸಿ ರಂಗಕ್ಕೆ ಕಳೆ ತರುತ್ತಿರುವವರು ಪ್ರವೀಣ್ ಸಹೋದರಿ ನಯನಾ ಸೂಡ. ಈ ಮಹಿಳಾ ಪ್ರಧಾನ ಕತೆಗೆ ನಿರ್ದೇಶನ ನೀಡಿ ಸಂಗೀತ ಸಾಹಿತ್ಯ ನೀಡಿರುವವರು ನಯನಾ ಪತಿ ರಾಜ್ ಗುರು! ಒಟ್ಟಿನಲ್ಲಿ ಪ್ರತಿಭಾವಂತರ ಕುಟುಂಬವೊಂದು ಕುಟುಂಬ ಸಮೇತ ನೋಡುವಂಥ ನಾಟಕವನ್ನು ಯಶಸ್ವಿಯಾಗಿ ಪ್ರದರ್ಶಿಸುತ್ತಿದೆ.

ರಾಜ್ ಗುರು ಹೊಸ ಕೋಟೆಯವರ ನಿರ್ದೇಶನದ ನಾಟಕ ಎಂದರೆ ಅಲ್ಲಿನ ರಂಗ ವಿನ್ಯಾಸ, ಸಂಗೀತದ ಬಗ್ಗೆ ಕೂಡ ನಿರೀಕ್ಷೆಗಳಿರುತ್ತವೆ. ಮನಮುಟ್ಟುವ ಸಂಭಾಷಣೆ, ಹೃದಯ ಸೇರುವಂಥ ರಾಗಾಲಾಪನೆ ಮೂಲಕ ರಾಜ್ ಗುರು ಅವರು ಪ್ರತಿಬಾರಿಯೂ ತಮ್ಮ ಮೇಲೆ ಪ್ರೇಕ್ಷಕರಿಗೆ ಇರುವ ನಿರೀಕ್ಷೆಗೆ ನಿರಾಶೆ ಮೂಡಿಸಿದವರಲ್ಲ. ಅದೇ ಸಂದರ್ಭದಲ್ಲಿ ಕಲಾವಿದೆಯಾಗಿ ನಯನಾ ಸೂಡ ಅವರ ನಟನೆ, ನಡಿಗೆ, ವಸ್ತ್ರ ವಿನ್ಯಾಸಕಿಯಾ ಉಡುಗೆ ಎಲ್ಲವೂ ರಂಗಭೂಮಿಗೊಂದು ವಿಶೇಷ ಕೊಡುಗೆ ಎಂದೇ ಹೇಳಬೇಕು. ಗುಲಾಬಿ ಗ್ಯಾಂಗ್ ನಾಟಕ ಮೊದಲ ಪ್ರದರ್ಶನದಿಂದ ಹಿಡಿದು ಇಲ್ಲಿಯವರೆಗೆ ಪ್ರತಿಬಾರಿಯೂ ಕಿಕ್ಕಿರಿದ ಪ್ರೇಕ್ಷಕರನ್ನು ಕಂಡಿರುವುದು ನಾಟಕದ ಯಶಸ್ಸಿಗೆ ಸಾಕ್ಷಿ. ಅದಕ್ಕೆ ಮತ್ತೊಂದು ಪ್ರಮುಖ ಕಾರಣ ಇದು ಉತ್ತರ ಪ್ರದೇಶದ ಮಹಿಳೆಯ ಕತೆಯಾದರೂ ಪ್ರತಿಯೊಬ್ಬ ಭಾರತೀಯ ಮಹಿಳೆ ಕೂಡ ಅನುಭವಿಸಿದ ಅಥವಾ ಕಣ್ಣೆದುರು ಕಂಡಂಥ ಘಟನೆಗಳೇ ಆಗಿವೆ. ಶೋಷಿತ ಮಹಿಳೆಯರು ಈ ನಾಟಕ ಕಂಡು ಸಂಘಟಿತರಾದರೆ, ಉಳಿದವರನ್ನು ಅವರ ಪರವಾಗಿ ನಿಲ್ಲಿಸುವಂಥ ಶಕ್ತಿ ಈ ರಂಗರೂಪಕದಲ್ಲಿದೆ.

ಅಂದಹಾಗೆ ಈ ನಾಟಕ ರಂಗ ಪಯಣ' ತಂಡದ ಕೊಡುಗೆ. ನಯನಾ ಸೂಡ ನೇತೃತ್ವದಲ್ಲಿ ಉತ್ಸಾಹಿ ಯುವ ಪ್ರತಿಭಾವಂತರು ಸೇರಿ ಹುಟ್ಟು ಹಾಕಿರುವ ರಂಗ ತಂಡವೇ ರಂಗ ಪಯಣ.ಶ್ರದ್ಧಾ’ ಎನ್ನುವುದು ಈ ತಂಡದಿಂದ ಹೊರ ಬಂದ ಮೊದಲ ನಾಟಕ. ಚಂದ್ರಗಿರಿಯ ತೀರದಲ್ಲಿ',ಒಂದಾನೊಂದು ಕಾಲದಲ್ಲಿ’, ಬದುಕು ಜಟಕಾ ಬಂಡಿ' ಮೊದಲಾದ ಹಲವು ನಾಟಕಗಳಿಂದ ಗಮನ ಸೆಳೆದ ಈ ತಂಡ ಪ್ರಸ್ತುತ ಹೆಚ್ಚು ಹೆಸರು ಮಾಡುತ್ತಿರುವುದುಗುಲಾಬಿ ಗ್ಯಾಂಗ್’ ಮೂಲಕ. ಅದಕ್ಕೆ ಮಹಿಳಾ ಕಲಾವಿದರೇ ಪ್ರಮುಖ ಭೂಮಿಕೆಯಲ್ಲಿರುವುದು ಕೂಡ ಒಂದು ಪ್ರಧಾನ ಕಾರಣ ಇದ್ದರೂ ಇರಬಹುದು. ಸಾಮಾನ್ಯವಾಗಿ ರಂಗಭೂಮಿಯಲ್ಲಿ ಮಹಿಳಾ ಪಾತ್ರಗಳಿಗೆ ಹೆಚ್ಚಿನ ಅವಕಾಶ ಸಿಗುವುದು ಕಡಿಮೆ ಎಂದೇ ಹೇಳಬಹುದು. ಆದರೆ ಇಲ್ಲಿ ನಾಟಕದ ಎಲ್ಲ ಪ್ರಮುಖ ಪಾಸಿಟಿವ್ ಪಾತ್ರಗಳನ್ನು ಮಹಿಳೆಯರೇ ನಿಭಾಯಿಸುತ್ತಾರೆ. ಹಾಗಂತ ಎಲ್ಲಿಯೂ ಬೋರ್ ಹೊಡೆಸುವುದೇ ಇಲ್ಲ. ಮಹಿಳೆಯ ವೈವಿಧ್ಯಮಯ ಶಕ್ತಿಯ ಅನಾವರಣವನ್ನು ಕತೆಯಲ್ಲಿಯೂ, ರಂಗದಲ್ಲಿಯೂ ಅನಾವರಣಗೊಳಿಸುವ ಶಕ್ತಿ ಗುಲಾಬ್ ಗ್ಯಾಂಗ್ ನಾಟಕಕ್ಕೆ ಇದೆ. ನಾಳೆ ಅಂದರೆ ಮಾರ್ಚ್ ಮೂರರಂದು ರವೀಂದ್ರ ಕಲಾ ಕ್ಷೇತ್ರದಲ್ಲಿ ಸಂಜೆ ಏಳು ಗಂಟೆಗೆ `ಗುಲಾಬಿಗ್ಯಾಂಗು-2′ ನಾಟಕ ಪ್ರದರ್ಶನಗೊಳ್ಳಲಿದೆ. ಸಾಮಾನ್ಯವಾಗಿ ಸಿನಿಮಾ ಆಗಲೀ ನಾಟಕವಾಗಲೀ ಎರಡನೇ ಭಾಗ ಮಾಡಿದಾಗ ಮೊದಲು ಸಿಕ್ಕ ಪ್ರೋತ್ಸಾಹ ಸಿಗುವುದು ಕಡಿಮೆ. ಅದನ್ನು ಸುಳ್ಳು ಮಾಡಿರುವ ಪ್ರಯೋಗ ಇದು. ಕಲಾಸಕ್ತರು ಖಂಡಿತವಾಗಿ ವೀಕ್ಷಿಸಬೇಕಾದ ನಾಟಕ ಇದು.

Recommended For You

Leave a Reply

error: Content is protected !!
%d bloggers like this: