ಅಂತಿಮ ಸಂಸ್ಕಾರದಲ್ಲಿ ಅನ್ಯಾಯವಾಗಿಲ್ಲ!

ಹಿರಿಯ ನಟಿ ಜಯಾ ಅವರು ನಿನ್ನೆ ನಿಧನರಾದ ಬಗ್ಗೆ ಈಗಾಗಲೇ ನಾವು ಮಾಹಿತಿ ನೀಡಿದ್ದೇವೆ. ಆದರೆ ಇಂದು ಅವರ ಮೃತದೇಹವನ್ನು ರಸ್ತೆ ಬದಿಯಲ್ಲಿರಿಸಿ ಅವಮಾನ ಮಾಡಲಾಗಿದೆ ಎನ್ನುವ ವಿಡಿಯೋ‌ ಒಂದು ಹರಿದಾಡುತ್ತಿದ್ದು, ಅದರ ಬಗ್ಗೆ ವಿವರವಾದ ಮಾಹಿತಿಯನ್ನು ಇಲ್ಲಿ ನೀಡುತ್ತಿದ್ದೇವೆ.

ಇದು ನಟಿ ಜಯಾ ಅವರ ಸಹೋದರ ಮಲ್ಲೇಶ್ ಅವರ ಪುತ್ರಿ ರಾಜೇಶ್ವರಿಯವರು ಘಟನೆಯ ಬಗ್ಗೆ ನೀಡಿರುವ ಸ್ಪಷ್ಟೀಕರಣ.

“ಸ್ಮಶಾನದಲ್ಲಿ ಸಂಸ್ಕಾರಕ್ಕೆ ನಿಗದಿಗೊಳಿಸಿದ ಸಮಯ ಇಂದು ಬೆಳಿಗ್ಗೆ 11.30 ಆಗಿತ್ತು. ನಾವು 11 ಗಂಟೆಯ ಸಂದರ್ಭದಲ್ಲೇ ಅಲ್ಲಿಗೆ ತಲುಪಿದ್ದೆವು. ಕೊರೊನಾ ಕಾರಣ ಹೊಸ ನಿಯಮದ ಪ್ರಕಾರ ಸ್ಮಶಾನದ ಹೊರಭಾಗದಲ್ಲೇ ಅಂತಿಮ ಕಾರ್ಯಗಳನ್ನು ನಡೆಸಿ ಒಳಗಡೆ ಅಗ್ನಿಸ್ಪರ್ಶಕ್ಕೆ ಮಾತ್ರ ಅವಕಾಶ ನೀಡಲಾಗುತ್ತಿತ್ತು. ಸ್ಮಶಾನದ ಹೊರಭಾಗ ರಸ್ತೆಯ ಬದಿಯಲ್ಲೇ ಇತ್ತು. ಹಾಗಾಗಿ ನಾವು ಕೂಡ ಅಲ್ಲೇ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಬೇಕಿತ್ತು.
ಇದರ ಜೊತೆಗೆ ಅಲ್ಲೊಂದು ರಾಜಕಾರಣಿಗಳ ಕಾರ್ಯಕ್ರಮ ನಡೆದಿತ್ತು. ಹಾಗಾಗಿ ನಮಗೆ ಸ್ಮಶಾನ ಪ್ರವೇಶಕ್ಕೆ ಅನುಮತಿ ದೊರಕಲು ಸಂಜೆಯಾದೀತು ಎಂದು ಅಧಿಕೃತರು ತಿಳಿಸಿದ್ದರು. ಆದರೆ ಹೀಗೆ ರಸ್ತೆ ಬದಿಯಲ್ಲಿರುವುದು ಹಿರಿಯ ನಟಿಯ ಮೃತದೇಹ ಮತ್ತು ಆಕೆಯ ಸಂಬಂಧಿಕರು ಎನ್ನುವ ಮಾಹಿತಿಯನ್ನು ರಾಜಕಾರಣಿಗಳ ಗಮನಕ್ಕೆ ತಂದೊಡನೆ ಅವರು ತಕ್ಷಣವೇ ಸ್ಮಶಾನ ಬಿಟ್ಟುಕೊಟ್ಟರು. ಅಷ್ಟು ಹೊತ್ತಿಗೆ ಗಂಟೆ ಹನ್ನೆರಡು ಆಗಿತ್ತು. ಆದರೆ ಅದಾಗಲೇ ಸಾಕಷ್ಟು ಮಾಧ್ಯಮದವರು ಮತ್ತು ಸಾರ್ವಜನಿಕರು ಮೃತದೇಹದ ಚಿತ್ರೀಕರಣ ಮಾಡುತ್ತಿದ್ದರು. ಈ‌ ದಿನಗಳಲ್ಲಿ ಒಂದಷ್ಟು ಖಾಸಗಿ‌ ವಾಹಿನಿಯವರು ಕೂಡ ಮೊಬೈಲಲ್ಲೇ ಶೂಟ್ ಮಾಡುವ ಕಾರಣ, ಯಾರನ್ನೂ ತಡೆಯಲು ಹೋಗಲಿಲ್ಲ. ಅದೇ ಸಂದರ್ಭದಲ್ಲಿ ಸಾರ್ವಜನಿಕರು ಈ ವಿಡಿಯೋ ಮಾಡಿದ್ದಾರೆ. ಅವರು ವಿಡಿಯೋ ಮಾಡಿರುವ ಉದ್ದೇಶ ಇಂಥ ಹಿರಿಯ ನಟಿಯ ಅಂತ್ಯ ಸಂಸ್ಕಾರದಲ್ಲಿ ಚಿತ್ರರಂಗ ಅಥವಾ ಕಿರುತೆರೆಯನ್ನು ಪ್ರತಿನಿಧಿಸುವ ಯಾರೊಬ್ಬರೂ ಉಪಸ್ಥಿತರಿರಲಿಲ್ಲ ಎನ್ನುವುದಷ್ಟೇ ಆಗಿತ್ತು.

ಆದರೆ ಯಾವಾಗ ಜಯಾ ಅವರ ಮೃತದೇಹ ಎನ್ನುವ ಮಾಹಿತಿ ದೊರಕಿತೋ ತಕ್ಷಣವೇ ಒಳಗಡೆ
ಕಾರ್ಯಕ್ರಮದಲ್ಲಿ ಇದ್ದವರೇ ಬಂದು ತಾವೇ ಮೃತದೇಹವನ್ನು ಹೊತ್ತು ಒಳಗೊಯ್ದಿದ್ದಾರೆ. ಅಂತಿಮ ಸಂಸ್ಕಾರದ ಸಂದರ್ಭದಲ್ಲಿ ಭಾಗಿಯಾಗಿದ್ದಾರೆ”

ಅಂದಹಾಗೆ ರಾಜೇಶ್ವರಿ ಅವರು ನೀಡಿರುವ ಹೇಳಿಕೆಗೆ ಪೂರಕವಾಗಿ ಜಯಾ ಅವರ ಅಂತ್ಯ ಸಂಸ್ಕಾರದ ಸಂದರ್ಭದಲ್ಲಿ ಪಾಲ್ಗೊಂಡ ಶಾಸಕ ಜಮೀರ್ ಅಹಮದ್ ಮತ್ತು ತಂಡದ ಚಿತ್ರವನ್ನು ಇಲ್ಲಿ ಕಾಣಬಹುದು.

ಅಂದಹಾಗೆ ಶಾಸಕ ಜಮೀರ್ ಅಹಮದ್ ಅವರು ಅಕ್ಕಿಕಿಟ್ ಹಂಚುತ್ತಿದ್ದ ಕಾರಣ ಹೊರಗಡೆ ಇರುವವರು ಅರ್ಧಗಂಟೆ ಹೆಚ್ಚು ಸಮಯ ಕಾಯಬೇಕಾಯಿತು ಎನ್ನುವುದು ಸತ್ಯ.

Recommended For You

Leave a Reply

error: Content is protected !!
%d bloggers like this: