ಇತ್ತೀಚೆಗಷ್ಟೇ ನಮ್ಮನ್ನು ಅಗಲಿದ ನಟ ಸಂಚಾರಿ ವಿಜಯ್ ಅವರು ಜೀವನದಲ್ಲಿ ಸಾಕಷ್ಟು ಮಹತ್ವಾಕಾಂಕ್ಷೆಗಳನ್ನು ಹೊಂದಿದ್ದರು. ಅದರಲ್ಲಿ ‘ಉಸಿರು’ ಎನ್ನುವ ಸಂಘಟನೆಯೊಂದಿಗೆ ಅವರು ಹಂಚಿಕೊಂಡ ವಿಚಾರಗಳೂ ಇದ್ದವು. ಅವುಗಳನ್ನು ನೆರವೇರಿಸಲು ‘ಉಸಿರು’ ಕೋವಿಡ್ ಆಕ್ಸಿಜನ್ ಕೇರ್ ಸೇವಾ ಸಂಸ್ಥೆಯ ಸ್ಥಾಪಕ ಕವಿರಾಜ್ ತಮ್ಮ ಸಂಘಟನೆಯೊಂದಿಗೆ ಮುಂದೆ ಬಂದಿದ್ದಾರೆ. ಆ ಬಗ್ಗೆ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಮಾಹಿತಿ ಹೀಗಿದೆ.
ಉಸಿರು ಬಳಗ ಸಂಚಾರಿ ವಿಜಯ್ ಅವರ ಅಪೂರ್ಣ ಆಸೆಗಳನ್ನ ಪೂರೈಸಲು ಹೊರಟಿದೆ. ಎಚ್ ಡಿ ಕೋಟೆ ಬುಡಕಟ್ಟು ಜನಾಂಗದ ಹಾಡಿಯ ಮನೆಗಳ ಶಿಥಿಲಗೊಂಡ ಮೇಲ್ಚಾವಣಿಗಳಿಗೆ ಉತ್ತಮ ಗುಣಮಟ್ಟದ ಟಾರ್ಪಲ್ ಹೊದಿಕೆ ಹೊದಿಸುವ ವಿಚಾರವಾಗಿ ವಿಜಯ್ ನಮ್ಮ ಬಳಗದಲ್ಲಿ ಬಹಳ ಆಸಕ್ತಿ ವಹಿಸಿದ್ದರು. ಅಷ್ಟೇ ಅಲ್ಲದೆ ಗುಲ್ಬರ್ಗಾ ಜಿಲ್ಲೆಯ ಕಡುಬಡತನದ ಕುಟುಂಬವೊಂದರ ನಾಲ್ಕು ವರ್ಷದ ಹೆಣ್ಣು ಮಗುವೊಂದರ ಹೃದಯ ಚಿಕಿತ್ಸೆಗೆ ನೆರವಾಗಲು ವಿಜಯ್ ಮುಂದಾಗಿದ್ದರು . ಸದ್ಯ ತಿಳಿದು ಬಂದ ಮಾಹಿತಿಯಂತೆ ಆ ಮಗು ಕೊರೊನಾ ಸೋಂಕಿನಿಂದ ಚೇತರಿಸಿಕೊಳ್ಳುತ್ತಿದೆ. ಸಂಪೂರ್ಣ ಸುಧಾರಿಸಿದ ನಂತರ ಈ ಜವಾಬ್ದಾರಿಯನ್ನು ನಿರ್ವಹಿಸುತ್ತೇವೆ. ಇವೆರೆಡೂ ಕಾರ್ಯಗಳನ್ನು ಪೂರೈಸುವ ಮೂಲಕ ವಿಜಯ್ ಅವರಿಗೆ ಗೌರವ ನಮನ ಸಲ್ಲಿಸಲು ನಾವು ಬದ್ಧರಾಗಿದ್ದೇವೆ. ವಿಜಯ್ ಸಾರ್ ನಿಮ್ಮೊಂದಿಗೆ ಸದಾ ನಮ್ಮ ಉಸಿರು