ನಮ್ಮಲ್ಲಿ ಪ್ರಶಸ್ತಿ ಬಂದರೂ ಫಲವಿಲ್ಲವೇಕೆ..?!

ಅನಿರುದ್ಧ ಜಟ್ಕರ್ ಅವರು ಈಗ ಜನಪ್ರಿಯತೆಯ ತುದಿ ತಲುಪಿರುವುದು ‘ಜೊತೆ ಜೊತೆಯಲಿ ಎನ್ನುವ ಕಿರುತೆರೆ ಧಾರಾವಾಹಿಯ ಮೂಲಕ. ಆದರೆ ಅವರ ಹಿನ್ನೆಲೆ, ಬೆಳೆದು ಬಂದ ದಾರಿ, ಅವರಿಗಿರುವ ಅನುಭವ, ಪ್ರತಿಭೆಯನ್ನು ಗಮನಿಸಿದರೆ ಇಂದಿನ ಯಾವ ಸಿನಿಮಾ ಸ್ಟಾರ್ ಗೂ ಕಡಿಮೆ ಇಲ್ಲ. ಆದರೆ ಇಂಥ ಸ್ಫುರದ್ರೂಪಿಯನ್ನು ನಾಯಕನಾಗಿಸಿ ಒಂದೊಳ್ಳೆಯ ಚಿತ್ರ ಮಾಡುವವರು ನಮ್ಮ ಚಿತ್ರರಂಗದಲ್ಲಿ ಇಲ್ಲ! ರೂಪ, ಸೌಂದರ್ಯ ಪಕ್ಕಕ್ಕಿಡಿ; ಶ್ರೇಷ್ಠ ನಟನಾಗಿ ದೇಶ ಗುರುತಿಸಿದರೂ ಒಳ್ಳೆಯ ಅವಕಾಶ ಮರೀಚಿಕೆಯೇ! ಅಂದಹಾಗೆ ಇದು ಅನಿರುದ್ಧ್ ಅವರ ಅಂತರಂಗ. ಯಾವ ಕಾರಣಕ್ಕಾಗಿ ಅವರು ಈ ರೀತಿಯ ಮಾತುಗಳನ್ನಾಡಿದರು ಎನ್ನುವ ಬಗ್ಗೆ ವಿವರವಾದ ಮಾಹಿತಿ ಇಲ್ಲಿದೆ. ಸ್ವತಃ ಸೆನ್ಸೇಷನಲ್ ಸ್ಟಾರ್ ಅನಿರುದ್ಧ್ ಜಟ್ಕರ್ ಅವರು ಸಾಮಾಜಿಕ ಜಾಲತಾಣದಲ್ಲಿ ಬಂದು ವಿಡಿಯೋ ಮೂಲಕ ಹಂಚಿಕೊಂಡ ವಿಚಾರಗಳನ್ನು ‘ಸಿನಿಕನ್ನಡ’ಕ್ಕಾಗಿ ಅಕ್ಷರ ರೂಪಕ್ಕಿಳಿಸಿದ್ದಾರೆ ಯುವ ಬರಹಗಾರ್ತಿ ಸೌಮಿನಿ ಬಡೆಕ್ಕಿಲ.

“ಸಂಚಾರಿ  ವಿಜಯವರು ನಮ್ಮನ್ನು  ಇಷ್ಟು ಬೇಗ  ಬಿಟ್ಟು ಹೋಗಿದ್ದು ನಿಜಕ್ಕೂ ಒಂದು ದೊಡ್ಡ  ದುರಂತ. ಅದನ್ನು ಅರಗಿಸಿಕೊಳ್ಳಲು  ತುಂಬಾ ಕಷ್ಟ ಆಗ್ತಿದೆ. ಆದರೂ ಅವರು ನಮ್ಮನ್ನು ಸಂಪೂರ್ಣವಾಗಿ ಬಿಟ್ಟು ಹೋಗಿಲ್ಲ ಎಂದೇ ಹೇಳಬಹುದು. ಯಾಕೆಂದರೆ ಅವರ ಚಿತ್ರಗಳ ಮುಖಾಂತರ ಕಣ್ಮುಂದೆ ಮತ್ತು ಅಂಗಾಗ ದಾನದ ಮೂಲಕ‌ ಜಗದ ಮುಂದೆ ನಾಯಕರಾಗಿ ಉಳಿದಿದ್ದಾರೆ. ಇಂಥ ಸಂಕಷ್ಟದ  ಸಮಯದಲ್ಲಿ ಅವರ ಕುಟುಂಬದವರು ವಿಜಯ್ ಯವರ ಅಂಗಾಗಳನ್ನ  ದಾನ ಮಾಡುವುದಾಗಿ ತೆಗೆದುಕೊಂಡ ನಿರ್ಧಾರಕ್ಕೆ  ನಾನು ನನ್ನ ಕುಟುಂಬದವರ ಪರವಾಗಿ ಕೋಟಿ ಕೋಟಿ ನಮನಗಳನ್ನು ಸಲ್ಲಿಸುತ್ತೇನೆ. ಜೊತೆಗೆ ನಮ್ಮ  ಸಂತಾಪ ಕೂಡ ಸೂಚಿಸುತ್ತೇವೆ.

ಹೆಲ್ಮೆಟ್ ಬಗ್ಗೆ ಉದಾಸೀನತೆ ಬೇಡ

ನನಗೆ ಬೇಜಾರಾಗಿದ್ದು ಏನು ಅಂದರೆ ಅಪಘಾತದ ಸಮಯದಲ್ಲಿ ವಿಜಯ್ ಯವರು ಹೆಲ್ಮೆಟ್ ಧರಿಸದೇ ಇದ್ದಿದ್ದು. ಈ ಸಂದರ್ಭದಲ್ಲಿ ನಾನು ಪ್ರತಿಯೊಬ್ಬರಲ್ಲೂ ಕಳಕಳಿಯಿಂದ ಕೈ ಮುಗಿದು ಕೇಳಿಕೊಳ್ಳುತ್ತೇನೆ  ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುವಾಗ ಮುಂದೆ ಹಾಗೂ ಹಿಂದೆ ಕೂತಿರುವರು  ಕೂತಿರುವವರು ದಯವಿಟ್ಟು ಹೆಲ್ಮೆಟ್ ಕಡ್ಡಾಯವಾಗಿ ಧರಿಸಿ. ಇದರಿಂದ ದೊಡ್ಡ ಅಪಘಾತದಿಂದ  ತಪ್ಪಿಸಿಕೊಳ್ಳಬಹುದು. ಹೆಲ್ಮೆಟ್ ಗಿಂತ ಅದರೊಳಗಿರುವ ನಿಮ್ಮ ಜೀವ ನಮಗೆಲ್ಲ ತುಂಬ ಅಮೂಲ್ಯವಾಗಿದೆ.

ಇಲ್ಲಿ ಪ್ರತಿಭೆ, ಪ್ರಶಸ್ತಿಗೆ ಮನ್ನಣೆ ಇಲ್ಲವೇ?!

ಸಂಚಾರಿ ವಿಜಯ್ ಯವರು ತುಂಬಾ ದೊಡ್ಡ ಪ್ರತಿಭಾವಂತ ಕಲಾವಿದರು. ಹಾಗಾಗಿಯೇ ರಾಷ್ಟ್ರ ಪ್ರಶಸ್ತಿ ವಿಜೇತರು. ಆದರೆ ಪ್ರಶಸ್ತಿ ಪಡೆದ ಮೇಲೆಯೂ ಅವರಿಗೆ ಅಷ್ಟೊಂದು ದೊಡ್ಡ ಅವಕಾಶಗಳೇನೂ ಇರಲಿಲ್ಲ! ಜನಪ್ರಿಯತೆ ಇದ್ದರೂ ಅವಕಾಶ ಸಿಗದ ಒಂದು ಸಂದರ್ಭವನ್ನು ನಾನು ಕೂಡ ಅನುಭವಿಸಿದ್ದೇನೆ,ನೋಡಿದ್ದೇನೆ. ತುಂಬಾ ಜನರು ಹೇಳುತ್ತಾರೆ ‘ನಿಮ್ಮ ಅಭಿನಯ ಚೆನ್ನಾಗಿದೆ; ಸಿನಿಮಾ ಚೆನ್ನಾಗಿದೆ, ಪ್ರತಿಭೆ ಅದ್ಭುತವಾಗಿದೆ’ ಎಂದು. ಆದರೆ‌ ನಮ್ಮ ಚಿತ್ರರಂಗದಲ್ಲಿ ಅದನ್ನು ಪ್ರದರ್ಶಿಸಲು ಸರಿಯಾದ ಅವಕಾಶಗಳೇ ಸಿಗಲ್ಲ. ಮಾರುಕಟ್ಟೆಯಲ್ಲಿ ಕೂಡ ಬರುವ ಮಾತು “ನೀವು ಒಳ್ಳೆ ಕಲಾವಿದರು, ಆದರೆ ನಿಮ್ಮ ಮೇಲೆ ಅಷ್ಟೊಂದು ಹೂಡಿಕೆ ಹಾಕೋಕೆ ಆಗಲ್ಲ..! ನಿಮ್ಮನ್ನು ನಾಯಕ ನಟನನ್ನಾಗಿ ಹಾಕೊಂಡು ಸಿನಿಮಾ ಮಾಡೋಕೆ ಆಗಲ್ಲ..!!” ಈ ತರ ಮಾತುಗಳ ಜೊತೆ ಸಾಕಷ್ಟು ಅವಮಾನ ಕೂಡ ಬರುತ್ತವೆ. ಈ ತರಹದ ದುಸ್ಥಿತಿ ಆದಷ್ಟು ಬೇಗ ನಿಲ್ಲಬೇಕು.

ಮಲಯಾಳಂ‌ ಚಿತ್ರರಂಗ ಹೇಗಿದೆ ಗೊತ್ತಾ?

ನಾನು ಬೇರೆ ಚಿತ್ರರಂಗಗಳ ಜೊತೆ ನಮ್ಮ ಚಿತ್ರರಂಗವನ್ನು ಹೋಲಿಸಲೇಬೇಕು ಎಂದು ಹೇಳುವುದಿಲ್ಲ. ಆದರೆ ಒಳ್ಳೆಯದು ಎಲ್ಲೇ ಇದ್ದರೂ ನೋಡಿ ಕಲಿಯುವುದರಲ್ಲಿ ತಪ್ಪೇನಿದೆ? ಉದಾಹರಣೆಗೆ ಮಲಯಾಳಂ ಸಿನಿಮಾಗಳನ್ನೇ ನೋಡಿ. ಅವರ ಕಥೆಯನ್ನು ನೋಡಿದಾಗ ನಾವು ಗಮನಿಸಬಹುದು ಅವರು ಸಾಕಷ್ಟು ಮುಂದುವರಿದಿದ್ದಾರೆ. ನಾವು ಸಹ ಮುಂದುವರಿಯೋಣ. ಸಾಮಾನ್ಯವಾಗಿ ಬಹಳಷ್ಟು ಜನರು ಸೌಂದರ್ಯ, ಲಕ್ಷಣವೇ ಹೀರೋಯಿಸಮ್ ಎಂದುಕೊಳ್ಳುತ್ತಾರೆ‌. ಆದರೆ ಅದನ್ನು ಬದಲಾಯಿಸಲು ಚಿತ್ರರಂಗದಿಂದ ಸಾಧ್ಯವಿದೆ. ಉದಾಹರಣೆಗೆ ಒಬ್ಬ ಹೀರೋನಲ್ಲಿ ನಿರೀಕ್ಷಿಸುವ ಸೌಂದರ್ಯ ಇಲ್ಲದವರನ್ನು ನಾಯಕರನ್ನಾಗಿ ಮಾಡಿ ಮಲಯಾಳಂನಲ್ಲಿ ಹಲವಾರು ಚಿತ್ರಗಳು ಬರುತ್ತಿವೆ. ಯಾಕೆಂದರೆ ಅಲ್ಲಿ ಕಲಾವಿದರಲ್ಲಿನ ಪ್ರತಿಭೆಯನ್ನು ಬಳಸುತ್ತಾರೆ. ಅಲ್ಲಿ ಪ್ರತಿಭೆಗಳಿಗೆ ತಕ್ಕಂತೆ ಸಾಕಷ್ಟು ಅವಕಾಶಗಳು ಇವೆ. ಆ ತರಹದ ವಾತಾವರಣ ನಮ್ಮ ಚಿತ್ರರಂಗದಲ್ಲಿ ಕೂಡ ಆಗಬೇಕು .

ಸರ್ಕಾರ ಕೂಡ ಪ್ರೋತ್ಸಾಹಿಸಬೇಕು

ರಾಷ್ಟ್ರ ಪ್ರಶಸ್ತಿ , ರಾಜ್ಯ ಪ್ರಶಸ್ತಿ ಸಿಕ್ಕಾದ ಮೇಲೆ ಸರ್ಕಾರ ಅಥವಾ ಕೇಂದ್ರ ಸರ್ಕಾರ ಇಂತಿಷ್ಟು ಗೌರವ ಧನ ಎಂದು ಕೊಡುತ್ತಾರೆ. ಆದರೆ ಅದು ಸಾಕಾಗುತ್ತದೆಯೇ? ಇವತ್ತಿನ ಕಾಲದಲ್ಲಿ ಖಂಡಿತವಾಗಿ ಸಾಕಾಗದು. ಒಂದು ಪೆನ್ಷನ್ ಮಾದರಿಯಲ್ಲಿ ಕೊಟ್ಟರೆ ಅದು ಬಸುಕಿಗೆ ಸಹಾಯವಾದೀತೇನೋ. ಜೊತೆಗೆ ಸರ್ಕಾರಗಳು ಕೆಲವು ಶೈಕ್ಷಣಿಕ ಸಂಸ್ಥೆಗಳನ್ನು ನಡೆಸುತ್ತವೆ. ‘ದಿ ಫಿಲಂ ಟೆಲಿವಿಷನ್ ಇನ್ಟಿಟ್ಯೂಟ್ ಆಫ್ ಇಂಡಿಯಾ’  (FTTI) ಅಥವಾ ರಾಷ್ಟ್ರೀಯ ನಾಟಕ ಶಾಲೆಗಳು ಆಗಿರಬಹುದು  ನಮ್ಮ  ದೇಶದಲ್ಲೂ  ಸಾಕಷ್ಟು ಶೈಕ್ಷಣಿಕ  ಬೇರೆ  ಸಂಸ್ಥೆಗಳು ಇವೆ. ಹಾಗೆಯೇ ಹೊರ ದೇಶಗಳಲ್ಲೂ ಕೂಡ ಸಾಕಷ್ಟು ಇವೆ. ಅಂತಹ ಸಂಸ್ಥೆಗಳಿಗೆ ಇಂಥವರನ್ನು ಕರೆಸಿ ಇವರ ಅನುಭವವನ್ನು ಹಂಚಿಕೊಳ್ಳುವ ಅವಕಾಶ ಕಲ್ಪಿಸಿ ಕೊಟ್ಟು ಇವರಿಗೆ ಏನಾದರೂ  ಗೌರವ ಧನ ನೀಡಿದರೆ ತುಂಬಾ ಸಹಾಯ ಆಗಬಹುದು. ನಮ್ಮ ಸಿನಿಮಾ ಸಂಘಟನೆಗಳು ಕೂಡ ಉದಾಹರಣೆಗೆ ನಿರ್ಮಾಪಕರ ಸಂಘ, ವಾಣಿಜ್ಯ ಮಂಡಳಿ, ಕಲಾವಿದರ ಸಂಘಗಳಲ್ಲಿಯೂ ಈ ತರಹದ ಶಿಬಿರಗಳನ್ನು  ನಾವು ನಡೆಸಿ ಇಂತಹ ಪ್ರಶಸ್ತಿ ವಿಜೇತರನ್ನು ನಾವು ಕರೆಸಿ ಅವರ ಅನುಭವನ್ನ ಹಂಚಿಕೊಳ್ಳಲು ಅವಕಾಶ ಕಲ್ಪಿಸಿ ಕೊಡಬೇಕು. ಬಳಿಕ  ಅವರಿಗೆ ಒಂದಿಷ್ಟು ಗೌರವ ಧನವನ್ನು ಕೂಡ ನೀಡಬೇಕು ಇದರಿಂದ ಅವರಲ್ಲಿ ಖಂಡಿತವಾಗಿ ಮಾನಸಿಕ ಸ್ಥೈರ್ಯ ಬೆಳೆಯುತ್ತದೆ ಹಾಗೂ ಜನಮನ್ನಣೆ ಕೂಡ ಹೆಚ್ಚಾಗ್ತಾ ಹೋಗುತ್ತದೆ.
ನಿರ್ಮಾಪಕರು ಕೂಡ ಕೆಲವು ಶಿಬಿರಗಳನ್ನು ಪ್ರತಿ ವರ್ಷ ನಡೆಸಬೇಕು. ಸಾಕಷ್ಟು ಹೂಡಿಕೆದಾರರಿಗೆ ಆಸಕ್ತಿ ಇರುತ್ತದೆ; ನಾವು ಇಲ್ಲಿ ಬಂದು ಸಿನಿಮಾ ಮಾಡಬೇಕು ಎಂದು! ಹಲವು ಭಾಗಗಳಿಂದ ಬರುತ್ತಿರುತ್ತಾರೆ.. ಅವರಿಗೆಲ್ಲ ಇದು ತುಂಬಾ ಉಪಯೋಗ ಆಗುತ್ತದೆ ಹಾಗೂ ಅವರಿಗೆ  ಒಂದು ದಾರಿ ದೀಪವೂ ಆಗಬಹುದು.

ಕಡಿಮೆ ಬಜೆಟ್ ಚಿತ್ರಗಳತ್ತ ಕಾಳಜಿ ಇರಲಿ

ಲೋ ಬಜೆಟ್ ಸಿನಿಮಾ ಮಾಡುವವರಿಗೆ ಹೆಚ್ಚು ಅವಕಾಶ ಸಿಗಬೇಕು. ಒಟಿಟಿ ಪ್ಲಾಟ್ ಫಾರ್ಮ್ ಗಳು ಸಾಕಷ್ಟು ಇವೆ. ವೇಬ್ ಸೀರಿಸ್  ಶುರು ಆಗಿವೆ, ಆದರೆ ನಮ್ಮಲ್ಲಿ ಪ್ರಯತ್ನಗಳು ಕಡಿಮೆ ಆಗಿವೆ. ಪ್ರಯತ್ನಗಳು ಹೆಚ್ಚಾಗಬೇಕು. ಇಂತಹ ಪ್ರತಿಭಾವಂತರನ್ನು, ಪ್ರಶಸ್ತಿ ವಿಜೇತರನ್ನು ಕರೆದು ಅವಕಾಶ ಕಲ್ಪಿಸಿ ಕೊಡಬೇಕು ಎಂದು ಕೇಳಿಕೊಳ್ಳುತ್ತೇನೆ. ಎಕ್ಸಿಬ್ಯೂಟರ್ಸ್ ಹಾಗೂ ಡಿಸ್ಟ್ರಿಬ್ಯೂಟರ್ಸ್ ಜೊತೆ ಒಂದು ಗಂಭೀರ ಚರ್ಚೆಯನ್ನು ನಡೆಸಿ ಒಂದೋ ಎರಡೋ ಶೋಗಳನ್ನು ಇಂತಹ ಚಿತ್ರಗಳಿಗೆ ಕಲ್ಪಿಸಿ ಕೊಡಬೇಕು. ಈ ತರಹದ ಸಾಕಷ್ಟು ಪ್ರಯತ್ನಗಳು ನಡೆದಾಗ ಇಂತಹ ಪ್ರತಿಭೆಗೆ ಮಾರುಕಟ್ಟೆ ನಿರ್ಮಾಣ ಆಗುತ್ತವೆ. ನಾನು ನನ್ನ ವಾಹಿನಿಯವರನ್ನು  ಕೂಡ ಕಳಕಳಿಯಿಂದ ಕೇಳಿ ಕೊಳ್ಳುತ್ತೇನೆ ಅವರು ಕೂಡ ಇಂತಹ ಪ್ರತಿಭೆಗಳಿಗೆ ಪ್ರೊತ್ಸಾಹ ನೀಡಬೇಕು, ಇಂತಹ ಸಿನಿಮಾವನ್ನು  ತೆಗೆದುಕೊಳ್ಳಿ,ಅಥವಾ ಇಂತಹ ಸಿನಿಮಾಕ್ಕೆ ಒಂದು ಸ್ಲಾಟ್ ಕೊಡಿ ಎಂದು ವೀಕ್ಷಕರಲ್ಲೂ ಕೂಡ ಕಳಕಳಿಯಿಂದ  ಕೈ ಮುಗಿದು ಕೇಳಿಕೊಳ್ಳುತ್ತೇನೆ. ಹಾಗೂ ಮಾಧ್ಯಮದವರು ಕೂಡ ಈ ವಿಚಾರದಲ್ಲಿ ಬೆಂಬಲಿಸುವ ನಂಬಿಕೆ ನನಗಿದೆ. ಇಂತಹ  ನಿಜವಾದ ಪ್ರತಿಭೆಗಳಿಗೆ ನೀವು ಪ್ರೊತ್ಸಾಹಿಸಿ, ಆಶೀರ್ವಾದಿಸಿ, ಹಾರೈಸಿ. ನಮ್ಮಲ್ಲಿ ಒಳ್ಳೊಳ್ಳೆಯ ಕಲಾಕೃತಿಗಳು  ಬಂದರೇನೇ  ಹೊರ ರಾಜ್ಯದವರಿಗೆ, ಹೊರ ದೇಶದವರಿಗೆ ನಾವು  ಮಾದರಿ ಆಗುತ್ತೇವೆ ಎನ್ನುವ ನಂಬಿಕೆ, ಭರವಸೆ ನನಗೆ ಇದೆ.

Recommended For You

Leave a Reply

error: Content is protected !!
%d bloggers like this: