ಜನಪ್ರಿಯ ನಟ ರಕ್ಷಿತ್ ಶೆಟ್ಟಿ ವಿರುದ್ಧ ಖಾಸಗಿ ವಾಹಿನಿಯೊಂದು ಪ್ರಸಾರ ಮಾಡಿದ ಕಾರ್ಯಕ್ರಮದಲ್ಲಿ ಅವಮಾನಿಸಲಾಗಿರುವುದು ಸಿಂಪಲ್ ಸ್ಟಾರ್ ಅಭಿಮಾನಿಗಳನ್ನು ರೊಚ್ಚಿಗೆಬ್ಬಿಸಿದೆ. ಘಟನೆಯ ಬಗ್ಗೆ ರಕ್ಷಿತ್ ಶೆಟ್ಟಿಯವರು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ರೀತಿ ಕುತೂಹಲಕಾರಿಯಾಗಿದೆ.
ನಟ ರಕ್ಷಿತ್ ಶೆಟ್ಟಿಯವರನ್ನು ನಿಂದಿಸಿರುವ ಬಗ್ಗೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ. ಈ ಬಗ್ಗೆ ರಕ್ಷಿತ್ ಕೂಡಾ ಪ್ರತಿಕ್ರಿಯಿಸಿದ್ದು, “ನಿಮ್ಮ ಬಳಿ ಇರುವ ಅಸ್ತ್ರ ಟಿ ಆರ್ ಪಿಗಾಗಿ ನಡೆಸುತ್ತಿರುವ ಒಂದು ಸುದ್ದಿ ವಾಹಿನಿ ಆದರೆ ನನ್ನ ಬಳಿ ಜೀವನದಲ್ಲಿ ಅಳವಡಿಸಿರುವ ನೀತಿ, ಶ್ರದ್ಧೆ, ನನ್ನ ಸಿನಿಮಾ ಹಾಗೂ ಜನ ಬೆಂಬಲ ಎಲ್ಲವೂ ಇವೆ. ಇವುಗಳ ನಡುವೆ ಜಯ ಯಾರದೆಂದು ಸದ್ಯದಲ್ಲೇ ತೀರ್ಮಾನ ವಾಗಲಿದೆ” ಎಂದಿದ್ದಾರೆ . ಅಂದಹಾಗೆ ವಾಹಿನಿಯ ಆರೋಪಕ್ಕೆ ಜುಲೈ 11 ರಂದು ಉತ್ತರಿಸೋದಾಗಿ ಹೇಳಿ, ಎಲ್ಲರ ಕುತೂಹಲ ಕೆರಳಿಸಿದ್ದಾರೆ ರಕ್ಷಿತ್.
ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ರಕ್ಷಿತ್ ಅವರು ಹಂಚಿಕೊಂಡ ವಿವರವಾದ ಮಾಹಿತಿಯ ಭಾವಚಿತ್ರ ಇಲ್ಲಿ ಲಗತ್ತಿಸಿದ್ದೇವೆ.
ಈ ನಡುವೆ ರಕ್ಷಿತ್ ಶೆಟ್ಟಿಯ ಅಭಿಮಾನಿಗಳು ಕಳೆದ ಬುಧವಾರದಂದು ಅಂಥದೊಂದು ಕಾರ್ಯಕ್ರಮ ಪ್ರಸಾರ ಮಾಡಿರುವ ಪಬ್ಲಿಕ್ ಟಿವಿಯ ವಿರುದ್ಧ ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ. ಅಂದಿನ ‘ಸಿನಿ ಅಡ್ಡ’ ಕಾರ್ಯಕ್ರಮದಲ್ಲಿ “ರಕ್ಷಿತ್ ಪಾನಿಪುರಿ ಮಾರಲಿಕ್ಕೂ ನಾಲಾಯಕ್” ಎಂದು ಹೀಗಳೆದಿರುವುದನ್ನು ಪ್ರಶ್ನಿಸಿದ್ದಾರೆ. ಅದಕ್ಕಾಗಿ ಈ ಕೂಡಲೇ ವಾಹಿನಿ ಕ್ಷಮೆ ಕೋರಬೇಕೆಂದು ಹಾಗೂ ಕಾರ್ಯಕ್ರಮಕ್ಕೆ ಸಂಬಂಧಪಟ್ಟವರನ್ನು ಬಂಧಿಸಬೇಕೆಂದು ಶಂಕರ ನಾರಾಯಣದ ಭರತ್ ತಲ್ಲಂಜೆ ಎನ್ನುವವರು ಸ್ಥಳೀಯ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಅಂದಹಾಗೆ ರಕ್ಷಿತ್ ವಿರುದ್ಧ ಪ್ರಕರಣ ದಾಖಲಿಸಿದ್ದ ಲಹರಿ ವೇಲು ಅವರು ಅದನ್ನು ಕೈ ಬಿಟ್ಟಿರುವುದು ಎಲ್ಲರಿಗೂ ಗೊತ್ತು. ಆದರೆ ತಾವು ಕೂಡ ಪಾಲುದಾರರಾಗಿರುವ ಪಬ್ಲಿಕ್ ಟಿವಿಯ ಈ ಕಾರ್ಯಕ್ರಮದ ಮೂಲಕ ಸಮರ ಮುಂದುವರೆಯಿತೇ ಎನ್ನುವುದು ಕೆಲವರ ಪ್ರಶ್ನೆ. ಇದರಲ್ಲಿ ವೇಲು ಅವರ ಕೈವಾಡವಿದೆಯೇ ಎನ್ನುವುದು ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗಿರುವ ಸಂದೇಹ. ನಿಮ್ಮ ಈ ‘ಸಿನಿಕನ್ನಡ’ ಇಂಥ ಸಂದೇಹಗಳನ್ನು ಬೆಳೆದು ಹುತ್ತವಾಗಿಸಲು ಬಯಸದು! ಹಾಗಾಗಿ ನೇರವಾಗಿಯೇ ಲಹರಿ ಸಂಸ್ಥೆಯ ಮಾಲೀಕ ವೇಲು ಅವರನ್ನು ಸಂಪರ್ಕಿಸಿ ಈ ಬಗ್ಗೆ ಪ್ರಶ್ನಿಸಿದಾಗ ಅವರು ನೀಡಿದ ಉತ್ತರ ಇಲ್ಲಿದೆ.
ಪಬ್ಲಿಕ್ ಟಿವಿ ಕಾರ್ಯಕ್ರಮ ಮೂಡಿಸಿದ ವಿವಾದದಲ್ಲಿ ನಿಮ್ಮ ಹೆಸರನ್ನು ಸೇರಿದ್ದಕ್ಕೆ ಏನಂತೀರಿ?
ನನಗೂ ಪಬ್ಲಿಕ್ ಟಿವಿಗೂ ಸಂಬಂಧ ಇರಬಹುದು. ಆದರೆ ಅದರ ಎಡಿಟೋರಿಯಲ್ ಮತ್ತಿತರ ಕಾರ್ಯಕ್ರಮಗಳೊಂದಿಗೆ ನನಗೆ ಯಾವುದೇ ನಂಟು ಇಲ್ಲ. ನಿಜ ಹೇಳಬೇಕೆಂದರೆ ರಕ್ಷಿತ್ ಅವರ ಕುರಿತಾದ ಕಾರ್ಯಕ್ರಮವನ್ನು ನಾನು ನೋಡಿಯೇ ಇಲ್ಲ. ಈಗ ವಿವಾದ ಹೆಚ್ಚಾದ ಮೇಲೆ ಮಾತ್ರ ಅದರ ಬಗ್ಗೆ ತಿಳ್ಕೊಂಡೆ. ಇದು ಸತ್ಯ.
ಒತ್ತಾಯ ಪೂರ್ವಕವಾಗಿ ಕಾಂಪ್ರೊಮೈಸ್ ಆಗಿರುವ ಕಾರಣ ನಿಮಗೆ ಆ ಬಗ್ಗೆ ಹತಾಷೆ ಇರಲಿಲ್ಲವೇ?
ನನ್ನಲ್ಲಿ ವಿಜಯ್ ಕಿರಂಗದೂರು ಅವರು ನಾಲ್ಕೈದು ತಿಂಗಳಿನಿಂದ ಈ ವಿಚಾರವನ್ನು ಪರಿಹರಿಸಬೇಕು ಎಂದು ಹೇಳುತ್ತಿದ್ದರು. ಒಮ್ಮೆ ಅವರ ಮಾತಿಗೆ ಒಪ್ಪಿಕೊಂಡ ಮೇಲೆ ನಾನು ಯಾವತ್ತಿಗೂ ಬೇರೆ ರೀತಿಯಿಂದ ಯೋಚಿಸಿಲ್ಲ. ನಾನು ಇದುವರೆಗೆ ಯಾವುದೇ ವಿಚಾರಕ್ಕೆ ಸಂಬಂಧಿಸಿದ ಹಾಗೆ ಕಾನೂನು ಪ್ರಕಾರ ಹೋರಾಡಿದ್ದೇನೆಯೇ ಹೊರತು ವೈಯಕ್ತಿಕವಾಗಿ ದ್ಚೇಷ ಸಾಧಿಸಿದ ಉದಾಹರಣೆಗಳೇ ಇಲ್ಲ.
ರಕ್ಷಿತ್ ನಡುವಿನ ಕಾಂಪ್ರಮೈಸ್ ಮಾತುಕತೆ ಹೇಗಿತ್ತು?
ನಾವು ಅಲ್ಲಿ ಹಾಡು ವಿವಾದವಾದ ಬಗ್ಗೆ ಹೆಚ್ಚು ಮಾತನಾಡಲೇ ಇಲ್ಲ. ನಾನು ಕೂಡ ಸೊನ್ನೆಯಿಂದಲೇ ಬದುಕು ಶುರು ಮಾಡಿದ್ದೇನೆ. ನೀವು ಕೂಡ ಸಾಧನೆಯ ಬೆನ್ನೇರಿದವರು..ಎಂದು ಜೀವನದ ಬಗ್ಗೆ ಮಾತನಾಡಿದೆವು. ಜೀವನದಲ್ಲಿ ಕ್ಷಮೆ ಮತ್ತು ಪ್ರೀತಿ ಎರಡೂ ಇರಬೇಕಾಗುತ್ತದೆ.