ಸುದೀಪ್ ಚಿತ್ರಕ್ಕೆ ವಿದೇಶೀ ನಟಿಯೇಕೆ?

ಸುದೀಪ್ ನಾಯಕರಾಗಿರುವ ಬಹುನಿರೀಕ್ಷಿತ ಚಿತ್ರ ‘ವಿಕ್ರಾಂತ್ ರೋಣ’. ಅನೂಪ್ ಭಂಡಾರಿ ನಿರ್ದೇಶನದ ಈ ಚಿತ್ರದಲ್ಲಿ ಶ್ರೀಲಂಕಾ ಮೂಲದ ಜಾಕ್ವಲಿನ್ ಫೆರ್ನಾಂಡೀಸ್ ನಟಿಸಿರುವ ವಿಚಾರ ಎಲ್ಲರಿಗೂ ಗೊತ್ತು. ಆದರೆ ಕನ್ನಡದ ನಟಿ, ಐಟಂ ಡಾನ್ಸರ್ ಆಗಿರುವ ಸೋನಿಯಾ ಸೇನ್ ಈ ಬಗ್ಗೆ ತಮ್ಮ ವಿರೋಧ ವ್ಯಕ್ತಪಡಿಸಿದ್ದಾರೆ. ಕಾರಣವೇನು ಎನ್ನುವುದರ ಸಂಪೂರ್ಣ ವಿವರವನ್ನು ಸಿನಿಕನ್ನಡ.ಕಾಮ್ ಇಲ್ಲಿ ನಿಮ್ಮ ಮುಂದಿರಿಸಿದೆ.

“ವಿಕ್ರಾಂತ್ ರೋಣ ಪ್ಯಾನ್ ಇಂಡಿಯಾ ಸಿನಿಮಾ ಆಗಿ ಬರುತ್ತಿರುವುದು ಗೊತ್ತು. ಹಾಗಾಗಿ ಎಲ್ಲ ಭಾಷೆಗಳಲ್ಲಿ ಸಲ್ಲುವ ಕಲಾವಿದರ ಅಗತ್ಯ ಇರಬಹುದು. ಹಾಗಂತ ಭಾರತದೊಳಗಿನ‌ ಕಲಾವಿದರನ್ನು ಬಳಸುವ ವಿಚಾರದಲ್ಲಿ ನನಗೆ ಯಾವುದೇ ವಿರೋಧವಿಲ್ಲ. ಆದರೆ ವಿದೇಶದ ನಟಿ ಯಾಕೆ?” ಎನ್ನುವುದು ನಟಿ‌ ಸೋನಿಯಾ ಸೇನ್ ಪ್ರಶ್ನೆ.

ಮಾತು ಮುಂದುವರಿಸುವ ಅವರು “ನಾನು ಕೂಡ ಮೂಲತಃ ಕೊಲ್ಕತ್ತಾದವಳು. ಈಗ ಬೆಂಗಳೂರಲ್ಲಿದ್ದುಕೊಂಡು ಒಂದಷ್ಟು ಕನ್ನಡ ಸಿನಿಮಾಗಳಲ್ಲಿ ಅವಕಾಶ ಪಡೆದುಕೊಂಡಿದ್ದೇನೆ. ಆದರೆ ವಿದೇಶದ ಸಿನಿಮಾಗಳಿಂದ ಅವಕಾಶ ಬಂದಿಲ್ಲ. ಅದು ಸಾಧ್ಯವೂ ಇಲ್ಲ. ನನಗಷ್ಟೇ ಅಲ್ಲ; ನಮ್ಮ ದೇಶದ ಎಷ್ಟು ಮಂದಿ ನಟಿಯರಿಗೆ ವಿದೇಶದಿಂದ ಸಿನಿಮಾ ಅವಕಾಶಕ್ಕಾಗಿ ಆಹ್ವಾನ ದೊರಕಿದೆ ಹೇಳಿ?!” ಎನ್ನುತ್ತಾರೆ.

ಸುದೀಪ್ ಇರಬೇಕಾದರೆ ಭಯವೇಕೆ?

ಸಾಮಾನ್ಯವಾಗಿ ವಿದೇಶದ ಜನಪ್ರಿಯ ಕಲಾವಿದರನ್ನು ಹಾಕುವುದಕ್ಕೆ ಕೂಡ ಒಂದು ಕಾರಣವಿರುತ್ತದೆ. ಅವರ ಮೂಲಕ ಚಿತ್ರ ವಿದೇಶದಲ್ಲಿಯೂ ಗಮನ ಸೆಳೆಯಬಹುದು ಎನ್ನುವುದು ಲೆಕ್ಕಾಚಾರ. ಆದರೆ ಸುದೀಪ್ ಅವರು ಇಂಥ ಲೆಕ್ಕಗಳನ್ನು ಮೀರಿದವರು. ಇಂದು ಅವರಿಗೆ ನಮ್ಮ ರಾಜ್ಯದಲ್ಲಿ ಮಾತ್ರವಲ್ಲ, ‘ಈಗ’ ಸಿನಿಮಾ ತೆರೆಕಂಡಿದಾಗಿನಿಂದ ದೇಶದಲ್ಲೆಲ್ಲ ಅಭಿಮಾನಿಗಳನ್ನು ‌ಪಡೆದುಕೊಂಡಿದ್ದಾರೆ. ಮಾತ್ರವಲ್ಲ, ವಿದೇಶಗಳಲ್ಲಿಯೂ ಅವರಿಗೆ ಕೊರತೆ ಇಲ್ಲ. ಜಪಾನ್ ದೇಶದಲ್ಲಿನ ಅವರ ಫ್ಯಾನ್ಸ್ ಬಗ್ಗೆ ಬಾಲಿವುಡ್ ಇಂಡಸ್ಟ್ರಿಯ ಟಿವಿ ಶೋ‌ ಒಂದರಲ್ಲೇ ಹೇಳಲಾಗಿದೆ. ಹೀಗಿರುವಾಗ ಜಾಕ್ವೆಲಿನ್ ಫೆರ್ನಾಂಡಿಸ್ ಎನ್ನುವ ನಟಿಯಿಂದ ಸುದೀಪ್ ಅವರ ಸಿನಿಮಾಗೆ ಪ್ರಚಾರ ಸಿಗುತ್ತದೆ ಎನ್ನುವುದು ಸುಳ್ಳು. ಬಾಲಿವುಡ್ ಮೆರೆಸಿದ ಆ ಶ್ರೀಲಂಕಾದ ನಟಿಯನ್ನು ಕನ್ನಡಕ್ಕೆ ತರುವ ಯಾವ ಅಗತ್ಯವೂ ಇರಲಿಲ್ಲ. ಈಗ ಆಕೆ ಸುದೀಪ್ ಅವರಿಂದಾಗಿ ದಕ್ಷಿಣ ಭಾರತೀಯರಿಗೂ ಹೆಚ್ಚು ಪರಿಚಿತರಾಗುತ್ತಾರೆ. ಇದರಿಂದ ಆಕೆಗೆ ಉಪಯೋಗವೇ ಹೊರತು ವಿಕ್ರಾಂತ್ ರೋಣ ಪಡೆದುಕೊಂಡಿದ್ದೇನು ಎಂದು ಪ್ರಶ್ನಿಸಿದ್ದಾರೆ.

ಭಾರತೀಯ ನಟಿಯರು ಎಲ್ಲಿ ಹೋಗಬೇಕು?

ನಮ್ಮ ಭಾರತೀಯ ಸಿನಿಮಾಗಳಲ್ಲಿ ಇತ್ತೀಚೆಗೆ ನಾಯಕರದ್ದೇ ಹವಾ. ನಾಯಕಿ ಪ್ರಧಾನ ಚಿತ್ರಗಳು ಅಪರೂಪ. ಹೀಗಿರುವಾಗ ಸ್ಟಾರ್ ನಾಯಕರ ಸಿನಿಮಾಗಳಲ್ಲಿ ಸಣ್ಣ ಪಾತ್ರದ ಮೂಲಕ ಕಾಣಿಸಿಕೊಂಡರೂ ಅದು ಚಿತ್ರ ಇಂದು ದೇಶದಾದ್ಯಂತ ತಲುಪುವಂತಾಗುತ್ತದೆ. ಹಾಗಾಗಿ ನಮ್ಮ ಸ್ಟಾರ್ ನಟರು ನಮ್ಮ ಕಲಾವಿದರಿಗೇನೇ ಮಾನ್ಯತೆ ನೀಡುವ ಪರಿಪಾಠ ಬೆಳೆಸದಿದ್ದರೆ ಇಲ್ಲಿನ ನಟಿಯರ ಪಾಡೇನು? ನಮ್ಮನ್ನಂತೂ ವಿದೇಶೀ‌ ಚಿತ್ರಗಳಲ್ಲಿ ಕರೆಯುವುದೇ ಇಲ್ಲ!

ರಾಖಿ ಸಾವಂತ್ ಅಂಥ ಗ್ಲಾಮರಸ್ ಪ್ರತಿಭಾವಂತೆಯನ್ನು ವಿವಾದಕ್ಕೆ ಬಳಸಿಕೊಂಡಷ್ಟು ಯಾರೂ ನಟನೆಗಾಗಿ ಬಳಸಲಿಲ್ಲ. ಹಾಗಾಗಿಯೇ ಆಕೆ ಪಾಕಿಸ್ತಾನದ ಆಫರ್ ಒಪ್ಪಬೇಕಾಗಿ ಬಂತು. ಕೊರೊನಾ ಬಂದ ಮೇಲೆ ಕಲಾವಿದರ ಪಾಡು ಹೇಗಾಗಿದೆ ಎನ್ನುವುದು ಚಿತ್ರೋದ್ಯಮಕ್ಕೆ ಸಂಬಂಧಿಸಿದ ಎಲ್ಲರಿಗೂ ಅರಿವಾಗಿರುವ ಸತ್ಯ. ಇಂಥ ಸಂದರ್ಭದಲ್ಲಿ ಇಲ್ಲಿಯೂ ನಮ್ಮನ್ನು ಕಡೆಗಣಿಸಿದರೆ ನಮ್ಮಂಥವರು ಪಾಕಿಸ್ತಾನದ ಅವಕಾಶಗಳಿಗೆ ಕೈ ಚಾಚದೆ ಬೇರೇನು ತಾನೇ ಮಾಡಲು ಸಾಧ್ಯ?

ದೇಶದೊಳಗೆ ಎಂಥೆಂಥಾ ನಟಿಯರಿಲ್ಲ?

ಕನ್ನಡದ ನಟಿಯರು ಇಂದು ಪಕ್ಕದ ತಮಿಳು, ತೆಲುಗು, ಬಾಲಿವುಡ್ ತನಕ ಜನಪ್ರಿಯರಾಗಿದ್ದಾರೆ. ಶ್ರದ್ಧಾ ಶ್ರೀನಾಥ್, ರಶ್ಮಿಕಾ ಮಂದಣ್ಣ, ಪ್ರಣೀತಾ ಸುಭಾಷ್ ಹೀಗೆ ಹೆಸರು ಪಟ್ಟಿ ಮಾಡುತ್ತಾ ಹೋಗಬಹುದು. ಕೆಜಿಎಫ್ ಮೂಲಕ ಒಂದು ಹಾಡಿಗಾಗಿ ತಮನ್ನಾ ಅವರು ಬಂದಿದ್ದನ್ನೂ ಒಪ್ಪಿಕೊಳ್ಳೋಣ. “ಅದೇ ರೀತಿ ವಿಕ್ರಾಂತ್ ರೋಣಾ ಚಿತ್ರಕ್ಕೆ ಕೂಡ ದೇಶದೊಳಗಿನ ಯಾವುದೇ ನಟಿ ಅಥವಾ ನವಪ್ರತಿಭೆಯನ್ನು ಬಳಸಿಕೊಂಡಿದ್ದರೆ ಸುದೀಪ್ ಅವರನ್ನು ಆ ನಟಿಯ ಕುಟುಂಬ, ಆಕೆ ಇರುವ ಚಿತ್ರೋದ್ಯಮ ಜೀವನ ಪರ್ಯಂತ ನೆನಪಿಸುವ ಹಾಗಿರುತ್ತಿತ್ತು. ಉದಾಹರಣೆಗೆ ನನ್ನದು ಮೂಲತಃ ಕೊಲ್ಕತ್ತಾ. ಬೆಂಗಳೂರಿಗೆ ಬಂದು ಸಿನಿಮಾಗಳಲ್ಲಿ ನಟಿಸಿದೆ, ಐಟಮ್ ಡ್ಯಾನ್ಸ್ ಮಾಡಿದೆ. ಇದರ ನಡುವೆ ಕನ್ನಡವನ್ನೂ ಕಲಿತೆ. ಅವಕಾಶಗಳ ಕೊರತೆಯಾದಾಗ ಇಲ್ಲೇ ಒಂದು ಕಾಫಿಶಾಪ್ ಕೂಡ ನಡೆಸುತ್ತಿದ್ದೇನೆ. ನಾಡಿನೆಡೆಗೆ ಇಂಥ ಬದ್ಧತೆ, ಪ್ರೀತಿ ನಿಮಗೆ ವಿದೇಶೀ ನಟಿಯರಿಂದ ಪಡೆಯಲು ಸಾಧ್ಯವೇ? ಹಾಗಾಗಿ ಇನ್ನಾದರೂ ಸುದೀಪ್ ಅವರಂಥ ಸ್ಟಾರ್ ನಟರು ತಮ್ಮ ಚಿತ್ರದಲ್ಲಿ ಭಾರತೀಯ ತಾರೆಯರಿಗೆ ಮಾ ಅವಕಾಶ ನೀಡಬೇಕು ಎನ್ನುವುದು ನನ್ನ ಮನವಿ ಎನ್ನುತ್ತಾರೆ” ಸೋನಿಯಾ ಸೇನ್.

ಅವರ ಈ ಪ್ರಶ್ನೆಯ ಬಗ್ಗೆ ‘ಸಿನಿಕನ್ನಡ.ಕಾಮ್’ ನಿರ್ದೇಶಕ ಅನೂಪ್ ಭಂಡಾರಿಯವರಲ್ಲಿ ಪ್ರಶ್ನಿಸಿದಾಗ “ಈ ಬಗ್ಗೆ ವಿವರಿಸಲು ಹೋದರೆ ಜಾಕ್ವಲಿನ್ ಅವರ ಪಾತ್ರದ ಬಗ್ಗೆ ವಿವರಣೆ ನೀಡಬೇಕಾದೀತು. ಅವೆಲ್ಲವೂ ಸಾಂದರ್ಭಿಕವಾಗಿ ಹೊರಗಿಡಬೇಕಾದ ವಿಚಾರಗಳು. ಹಾಗಾಗಿ ಸದ್ಯಕ್ಕೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ” ಎಂದಿದ್ದಾರೆ.

Recommended For You

Leave a Reply

error: Content is protected !!
%d bloggers like this: