ಪ್ರಶಾಂತ್ ಸಂಬರಗಿ ಯಾಕೆ ಗೆಲ್ಲಬೇಕು?

ಬಿಗ್ ಬಾಸ್ ಎಂಟನೇ ಸೀಸನ್ ಹಲವಾರು ಕಾರಣಗಳಿಂದ ಕುತೂಹಲ ಮೂಡಿಸಿದೆ. ಮುಖ್ಯವಾಗಿ ಸೀಸನ್ ಇತಿಹಾಸದಲ್ಲೇ ಮೊದಲ ಬಾರಿಗೆ ಒಂದು ಬ್ರೇಕ್ ತೆಗೆದುಕೊಂಡು ಮುಂದುವರಿದ ಕೀರ್ತಿ ಇದರದ್ದು. ಸ್ಪರ್ಧಿಗಳು ಹೇಗಿರಬೇಕು ಮತ್ತು ಹೇಗಿರಬಾರದು ಎನ್ನುವುದನ್ನು ಮನೆಯೊಳಗಿನ ಸದಸ್ಯರೇ ತಮ್ಮ ಮಾತು, ವರ್ತನೆಗಳಿಂದ ನೇರಾ ನೇರ ಸಾಬೀತು ಮಾಡಿದ, ಹೇಳಿಕೊಂಡ ಸಂದರ್ಭಗಳನ್ನು ಕೂಡ ಈ ಸೀಸನ್ ಸೃಷ್ಟಿಸಿದೆ. ಇವೆಲ್ಲದರ ನಡುವೆ ಫೈನಲಿಸ್ಟ್‌ಗಳಲ್ಲಿ ಪ್ರಶಾಂತ ಸಂಬರಗಿ ವಿಜೇತರಾಗಬೇಕು ಎನ್ನುವ ಧ್ವನಿಯೂ ಗಟ್ಟಿಯಾಗುತ್ತಿದೆ. ನಿರ್ದೇಶಕ, ಸಂಭಾಷಣೆಕಾರ ರಾಜಶೇಖರ ರಾವ್ ಅವರ ಅನಿಸಿಕೆಯೊಂದಿಗೆ ಆ ಕುರಿತಾದ ಸಣ್ಣದೊಂದು ಅವಲೋಕನ ಇಲ್ಲಿದೆ.

ಆರಂಭದಿಂದಲೂ ಫೈನಲಿಸ್ಟ್ ಮಾತ್ರವಲ್ಲ ವಿಜೇತರ ಪಟ್ಟಿಯಲ್ಲಿಯೂ ಕೇಳಿ ಬರುತ್ತಿರುವ ಹೆಸರುಗಳು ಅರವಿಂದ್ ಮತ್ತು ಮಂಜು ಪಾವಗಡ ಅವರ ಹೆಸರುಗಳು. ಅದರಲ್ಲಿ ಮಂಜು ಅವರಿಗೆ ಮಾಸ್ ಅಭಿಮಾನಿಗಳಿದ್ದರೆ ಅರವಿಂದ್ ಅವರಿಗೆ ಕ್ಲಾಸ್ ಅಭಿಮಾನಿಗಳ ಜೊತೆಗೆ ರೇಸ್ ಅಭಿಮಾನಿಗಳ ಬೆಂಬಲವೂ ಇದೆ! ಮಂಜು ಪಾವಗಡ ಅವರು ಮಜಾ ಭಾರತ’ ರಿಯಾಲಿಟಿ ಶೋ ಹಿನ್ನೆಲೆಯಿಂದ ಬಂದವರು. ಅಲ್ಲಿನ ಕಾಮಿಡಿ ಇಮೇಜ್ ಹಾಗೆಯೇ ಮುಂದುವರಿಸಲು ಅವರಿಗೆ ಈ ರಿಯಾಲಿಟಿ ಶೋ ಕೂಡ ಸಹಾಯ ಮಾಡಿದೆ. ಆದರೆ ಅದಕ್ಕಿಂತ ಹೆಚ್ಚಾಗಿ ಅವರು ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಿದ್ದ ರೀತಿ ಮತ್ತು ಇತರ ಸದಸ್ಯರ ಬಗ್ಗೆ ಹೆಚ್ಚು ಕೆಸರೆರಚಾಟ ಮಾಡದಿರುವುದೇ ಹೆಚ್ಚು ಪಾಸಿಟಿವ್ ಆಗಿತ್ತು. ಕೆ.ಪಿ ಅರವಿಂದ್ ಅವರು ಹೆಚ್ಚು ಗಂಭೀರತೆಯಲ್ಲಿರುವುದು ಮತ್ತು ಸ್ಪರ್ಧೆಗಳನ್ನು ಗೆಲ್ಲುವ ವಿಚಾರದಲ್ಲಿ ಪ್ರೇಕ್ಷಕರ ಮನ ಗೆದ್ದವರು. ವೈಷ್ಣವಿಯವರು ಆರಂಭದಿಂದಲೂ ಕಾಯ್ದುಕೊಂಡು ಬಂದಿರುವ ಸಂಯಮತೆ ಮತ್ತು ಎರಡನೇ ಇನ್ನಿಂಗ್ಸ್‌ ವೇಳೆ ಹೆಚ್ಚಿಸಿಕೊಂಡ ತಮ್ಮ ಹಾಸ್ಯ ಮನೋಭಾವ ಅವರಅಗ್ನಿಸಾಕ್ಷಿ’ ಇಮೇಜ್‌ಗೆ ಮತ್ತಷ್ಟು ಮೆರುಗು ನೀಡಿದಂತಾಗಿದೆ. ಇನ್ನುಳಿದಂತೆ ದಿವ್ಯಾ ಉರುಡುಗ ಅವರು ಆರಂಭದಿಂದಲೂ ಸ್ಪರ್ಧೆಯಲ್ಲಿ ಪಾಲ್ಗೊಂಡು ಗಂಡು ಸ್ಪರ್ಧಿಗಳೊಂದಿಗೆ ಸಮಾನ ರೀತಿಯಲ್ಲಿ ನಡೆಸಿದ ಹೋರಾಟ, ನೇರವಾದ ಮಾತುಗಳು ಅವರಿಗೆ ಅಭಿಮಾನಿಗಳನ್ನು ಸೃಷ್ಟಿಸಿದೆ. ಇವರೆಲ್ಲರ ನಡುವೆ ಪ್ರಶಾಂತ್ ಸಂಬರಗಿ ಯಾಕೆ ವಿಭಿನ್ನ ಎನ್ನುವುದನ್ನು ಇಲ್ಲಿ ರಾಜಶೇಖರ ರಾವ್ ಅವರು ಬರೆದಿದ್ದಾರೆ.

“ಮನೆಯ ದೊಡ್ಡಣ್ಣನಂತೆ ಜವಾಬ್ದಾರಿಯುತ ನಡವಳಿಕೆ ಪ್ರದರ್ಶಿಸಿ ದೊಡ್ಡವರಾದ ಪ್ರಶಾಂತ ಸಂಬರಗಿ ನನ್ನ ಆಯ್ಕೆ.. ಸೆಲೆಬ್ರಟೀಸ್ ಗೆ ಇರುವ fan followers ಇಲ್ಲದೆ ತಮ್ಮ ನಡವಳಿಕೆಯಿಂದ ಮಾತ್ರ ಸ್ಪರ್ಧಿಸುವ ಪರಿಸ್ಥಿತಿ ಅವರದ್ದು.. ಟಾಸ್ಕ್ ಗಳಲ್ಲಿ ಶಕ್ತಿ ಮೀರಿ ಭಾಗವಹಿಸಿದ್ದಾರೆ.. ಅವರು ಮಗುವಿನಂತೆ ಮುಕ್ತವಾಗಿ ನಕ್ಕಿದ್ದಾರೆ, ನಗಿಸಿದ್ದಾರೆ.. ಬೇಸರವಾದಾಗ, ಅಸಹಾಯಕರಾದಾಗ ಭಾವೋದ್ರೇಕಕ್ಕೆ ಒಳಗಾಗಿ ಅತ್ತಿದ್ದಾರೆ.. ಪ್ರತಿಭಟಿಸಬೇಕಾದಾಗ ಸ್ಪಷ್ಟ ಮಾತುಗಳಲ್ಲಿ ಸಿಟ್ಟು ಪ್ರದರ್ಶಿಸಿದ್ದಾರೆ.. ಎಲ್ಲರ ಜೊತೆಗಿದ್ದೂ ಏಕಾಂಗಿಯಾಗಿ ಆಡಿದ್ದಾರೆ.. ಇನ್ನೊಬ್ಬರ ನೆರಳಿನಂತೆ ಹೋಗುತ್ತಿದ್ದ ದಿವ್ಯಾ ಉರುಡುಗ, ದಿವ್ಯಾ ಸುರೇಶ್ ರಿಗೆ ಬುದ್ಧಿ ಹೇಳಿ‌ ತಿಳಿ ಹೇಳಿದ್ದಾರೆ. ಶಮಂತ್, ವೈಷ್ಣವಿಗೆ ಬೆನ್ನು ತಟ್ಟಿದ್ದಾರೆ. ಅವರ ಕ್ರಿಯೆಗಳಲ್ಲಿ ಕಪಟ, ಕೃತ್ರಿಮತೆ ಇಲ್ಲ.. ಬೆನ್ನಿಗೆ ಚೂರಿ ಹಾಕುವ ಧೂರ್ತತನ ಇಲ್ಲ.. ಎಲ್ಲವೂ ನೇರಾ ನೇರ. ಸ್ಪರ್ಧಿಗಳೊಡನೆ ಜಗಳವಾಡಿದ ಕೆಲ‌ಸಮಯದಲ್ಲೇ ಎಲ್ಲ ಮರೆತು‌ ರಾಜಿ ಮಾಡಿಕೊಂಡಿದ್ದಾರೆ.. ಕ್ಷಮೆ ಕೇಳಿದ್ದಾರೆ, ಕಾರಣ ವಿವರಿಸಿದ್ದಾರೆ.. ಹಿರಿಯಣ್ಣನೊಬ್ಬ ನಡೆದು‌ಕೊಳ್ಳುವ ಪರಿ ಇದು..

ಎಲ್ಲದಕ್ಕಿಂತಲೂ‌ ಹೆಚ್ಚಿನ ಸವಾಲು ಅವರಿಗೆ ಇದ್ದದ್ದು ಅವರ ವಯಸ್ಸು. ಎಲ್ಲರೂ ಯುವ ಜನಾಂಗ. ಅವರ ನಡುವೆ ಮಧ್ಯ ವಯಸ್ಕನೊಬ್ಬ ಏಗುವುದು ಇದೆಯಲ್ಲಾ. ಅದು ಸಣ್ಣ ಮಾತಂತೂ ಅಲ್ಲವೇ ಅಲ್ಲ.. ಆದರೂ ಅವರೊಡನೆ ಅದೇ ವಯಸ್ಸಿನವನಂತೆ ಮೂಲೆಗುಂಪಾಗದಂತೆ ಅಂತಿಮ ಸುತ್ತಿನವರೆಗೆ ಬಂದು ತನ್ನ ಸಾಮರ್ಥ್ಯ ತೋರಿಸಿದ್ದಾರೆ.. ನನ್ನ ಓಟು ಪ್ರಶಾಂತ್ ಸಂಬರಗಿ ಅವರಿಗೆ..” ಎನ್ನುವುದು ರಾಜಶೇಖರ ರಾವ್ ಅವರ ಅಭಿಪ್ರಾಯ.

ಆದರೆ ಮಾತಿನ ಮೂಲಕ ಮನಸೆಳೆದಿರುವ ಪ್ರಶಾಂತ್ ಸಂಬರಗಿಯವರಿಗೆ ಅವರ ಮಾತೇ ಕೆಲವೊಮ್ಮೆ ಉಲ್ಟಾ ಆಗಿರುವುದೂ ಇದೆ. ಉದಾಹರಣೆಗೆ ಇತ್ತೀಚೆಗೆ ಅವರ ಫೇಮಸ್ ಹೇಳಿಕೆ ಒಂದಿದೆ. “ಫೈನಲಿಸ್ಟ್‌ಗಳ ಆಯ್ಕೆಯಾದ ಬಳಿಕ ಪ್ರಶಾಂತ್ ಅವರ ಹೇಳಿಕೆ ಇದು, ಈ ಪೈನಲಿಸ್ಟ್ ನಲ್ಲಿ ನನ್ನ ಆತ್ಮೀಯರು ಮಾತ್ರ ಇದ್ದಾರೆ” ಎನ್ನುವುದಾಗಿದೆ. ಹಾಗೆ ನೋಡಿದರೆ ಪ್ರಶಾಂತ್ ಸಂಬರಗಿಯವರು ಆತ್ಮಿಯತೆ ತೋರಿಸದೇ ಇದ್ದಿದ್ದು ಯಾರಿಗೆ? ಚಕ್ರವರ್ತಿ ಚಂದ್ರಚೂಡ್ ಅವರ ಎಂಟ್ರಿಯಾದಾಗ ಆತ್ಮೀಯ ಮಿತ್ರ ಎಂದರು. ಅವರೊಂದಿಗೆ ಸೇರಿಕೊಂಡು ಶಮಂತ್, ಪ್ರಿಯಾಂಕಾ ಇರುವ ತಂಡವನ್ನು ಕಟ್ಟಲು ಪ್ರಯತ್ನಿಸಿದರು. ಚಕ್ರವರ್ತಿ ಮುಂದೆ ದಿವ್ಯಾ ಸುರೇಶ್ ಅವರಿಗೆ ಬೈಯ್ದು ಬಳಿಕ ದಿವ್ಯಾ ಸುರೇಶ್ ಬಳಿಗೆ ಹೋಗಿ ನನ್ನ ಬೆಂಬಲವಿದೆ ಎಂದರು. ಆದರೆ ಹೀಗೆ ಅವರು ಬೆಂಬಲಿಸಿದ ಯಾರು ಈಗ ಫೈನಲಿಸ್ಟ್ ಪಟ್ಟಿಯಲ್ಲಿಲ್ಲ. ಒಂದು ವೇಳೆ ಚಂದ್ರಚೂಡ್, ಪ್ರಿಯಾಂಕಾ, ಶಮಂತ್ ಮತ್ತು ದಿವ್ಯಾ ಸುರೇಶ್ ಜೊತೆಗೆ ಪ್ರಶಾಂತ್ ಫೈನಲಿಸ್ಟ್ ಆಗಿದ್ದರೆ ಆಗಲೂ ತಾವು ಗುರುತಿಸಿದ ಸ್ನೇಹಿತರೇ ಇದ್ದಾರೆ ಎನ್ನಬಲ್ಲ ಚಾಣಾಕ್ಷ ಸಂಬರಗಿ. ಹಾಗಾಗಿ ಅವರ ಮಾತುಗಾರಿಕೆಗೆ ಮರಳಾಗಬೇಕಿಲ್ಲ ಎನ್ನುವುದು ಕೂಡ ಸತ್ಯ.

Recommended For You

Leave a Reply

error: Content is protected !!