‘ಮತ್ತೆ ಮನ್ವಂತರ’ ಶುಭಾರಂಭ

ಕನ್ನಡದಲ್ಲಿ ಕಿರುತೆರೆ ಧಾರಾವಾಹಿಗಳಿಗೆ ಶ್ರೇಷ್ಠ ಮಾದರಿ ಹಾಕಿಕೊಟ್ಟವರು ಟಿ ಎನ್ ಸೀತಾರಾಮ್. ‘ಮಾಯಾಮೃಗ’ದ ಮೂಲಕ ಒಂದು ಮನ್ವಂತರ ಸೃಷ್ಟಿಸಿದ ಅವರು ಹೊಸದಾಗಿ ‘ಮತ್ತೆ ಮನ್ವಂತರ’ಕ್ಕೆ ಕಾಲಿಟ್ಟಿದ್ದಾರೆ. ಅಂದರೆ ಹೊಸ ಧಾರಾವಾಹಿಗೆ ‘ಮತ್ತೆ ಮನ್ವಂತರ’ ಎಂದು ಹೆಸರಿಟ್ಟು ಎಲ್ಲ ವರ್ಗದ ಪ್ರೇಕ್ಷಕರನ್ನು ಕಿರುತೆರೆಯೊಳಗೆ ಸೆರೆ ಮಾಡಲು ಮಾಡಲು ಬಂದಿದ್ದಾರೆ.

ಪೂರ್ವಾಶ್ರಮದಲ್ಲಿ ಉಡುಪಿ ಕೃಷ್ಣಮಠದ ಸ್ವಾಮೀಜಿಯಾಗಿದ್ದ ವಿದ್ಯಾಭೂಷಣರು ಹಾಡುವ ಸ್ವಾಮೀಜಿ ಎಂದು ಹೆಸರಾಗಿದ್ದವರು. ಇದೀಗ ಅವರ ಪುತ್ರಿ, ಗಾಯಕಿಯೂ ಆಗಿರುವ ಮೇಧಾ ವಿದ್ಯಾಭೂಷಣ್ ‘ಮತ್ತೆ ಮನ್ವಂತರ’ ಧಾರಾವಾಹಿಯ ಮೂಲಕ ನಾಯಕಿಯಾಗುತ್ತಿದ್ದಾರೆ. ಮತ್ತೊಂದು ‌ಪ್ರಧಾನ ಪಾತ್ರದಲ್ಲಿ ಖ್ಯಾತ ರಂಗಕರ್ಮಿ, ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸದಸ್ಯರಾದ ರಮೇಶ್ ಬೇಗಾರ್ ಅವರ ಪುತ್ರಿ ನಾಗಶ್ರೀ ಬೇಗಾರ್ ನಟಿಸುತ್ತಿದ್ದಾರೆ.

ಹೀಗೆ ಧಾರ್ಮಿಕ ಹಾಗೂ ಕಲಾರಂಗದಲ್ಲಿ ಖ್ಯಾತನಾಮರಾದ ಇಬ್ಬರ ಪ್ರತಿಭಾವಂತ ಸುಪುತ್ರಿಯರನ್ನು ಒಟ್ಟು ಸೇರಿಸಿಕೊಂಡು ಸೀತಾರಾಮ್ ಅವರು ಹೇಳಹೊರಟಿರುವ ಕತೆ ಏನಿರಬಹುದು ಎನ್ನುವ ಬಗ್ಗೆ ಸಾಕಷ್ಟು ಕುತೂಹಲ ಹುಟ್ಟಿಕೊಂಡಿದೆ. ನಾಗಶ್ರೀ, ಮೇಧಾ ಜೊತೆಗೆ ಚಂದನ್ ಶಂಕರ್ ಅವರು ಅಭಿನಯಿಸಿರುವ ಪ್ರಥಮ ದೃಶ್ಯದೊಂದಿಗೆ ಧಾರಾವಾಹಿಯ ಚಿತ್ರೀಕರಣಕ್ಕೆ ಚಾಲನೆ ನೀಡಲಾಯಿತು. ಮೊದಲ ದೃಶ್ಯಕ್ಕೆ ಸೀತಾರಾಮ್ ಅವರ ಪತ್ನಿ ಗೀತಾ ಅವರು ‘ಆಕ್ಷನ್’ ಹೇಳಿದ್ದು ವಿಶೇಷವಾಗಿತ್ತು.

ಆಸ್ಥಾನ ಕಲಾವಿದರ ಸಮಾಗಮ!

ಧಾರಾವಾಹಿಯ ಪ್ರಧಾನ ಪುರುಷ ಪಾತ್ರಗಳಲ್ಲಿ ಒಬ್ಬರಾಗಿ ಅಲ್ಲಿದ್ದ ಚಂದನ್ ಶಂಕರ್ ಸೀತಾರಾಮ್ ಅವರ ಜೊತೆ ಚಿತ್ರಕತೆಯ ವಿಭಾಗದಲ್ಲಿ ಕೈ ಜೋಡಿಸಿರುವ ಅನುಭವಿ. ಉಳಿದಂತೆ ಪ್ರಶಾಂತ್ ಶೆಟ್ಟಿ ಎನ್ನುವ ಹೊಸ ಮುಖವನ್ನು ‘ಮತ್ತೆ ಮನ್ವಂತರ’ದ ಮೂಲಕ ಅನಾವರಣಗೊಳಿಸಲಿದ್ದಾರೆ ಎಂದು ತಿಳಿದು ಬಂದಿದೆ. ‘ಮಗಳು ಜಾನಕಿ’ಯಲ್ಲಿ ಮಗನ‌ ಪಾತ್ರ ಮಾಡಿದ ಅಭಿಲಾಷ್ ಅವರು ಇದರಲ್ಲೂ ಒಳ್ಳೆಯತನದಿಂದ ಕೂಡಿರುವ ಪಾತ್ರ ನೀಡಿರುವುದಾಗಿ ತಿಳಿಸಿದರು. ಸೀತಾರಾಮ್ ಅವರ ‘ಮುಕ್ತ’ ಧಾರಾವಾಹಿಯ ಮೂಲಕ ಸ್ವಾಮೀಜಿಯ ಪಾತ್ರದಿಂದ ಗುರುತಿಸಿಕೊಂಡಿದ್ದ ಅಜಿತ್ ಹಂಧೆ ಇಲ್ಲಿಯೂ ಒಂದು ಮುಖ್ಯ ಭೂಮಿಕೆ ನಿರ್ವಹಿಸಲಿದ್ದಾರೆ ಎಂದ ಟಿ ಎನ್ ಸೀಯವರು “ಮುಕ್ತದಲ್ಲಿ ನನಗೆ ಅತ್ಯಂತ ಮೆಚ್ಚುಗೆಯ ಕಲಾವಿದರಾಗಿದ್ದ ಇವರು ನಟನೆಗೆ ಒಂದು ಗಂಟೆ ಮೊದಲೇ ಪಾತ್ರವನ್ನು ಆವಾಹಿಸಿಕೊಂಡು ಧ್ಯಾನಸ್ಥ ಸ್ಥಿತಿಗೆ ಹೋಗುತ್ತಿದ್ದರು. ಪಾತ್ರದೆಡೆಗಿನ ಅವರ ಸಮರ್ಪಣಾಭಾವ ಮೆಚ್ಚುವಂಥದ್ದು” ಎಂದರು.

ನಟಿ ಮಾಳವಿಕಾರನ್ನು ‘ಮಾಯಾಮೃಗ’ದ ಮೂಲಕ ಹೆಸರುವಾಸಿ ಮಾಡಿದ ಕೀರ್ತಿ ಹೊತ್ತಿರುವ ಸೀತಾರಾಮ್ ಅವರು ಇಲ್ಲಿಯೂ ಮಾಳವಿಕಾ ಅವರಿಗೆ ಒಂದು ಪಾತ್ರ ನೀಡಿರುವುದನ್ನು ಅವರ ಸಮ್ಮುಖದಲ್ಲಿಯೇ ಘೋಷಿಸಿದರು. ಅಪರ್ಣಾ ವಸ್ತಾರೆಯವರ ಬಳಿಕ ನಿರೂಪಣೆಯಲ್ಲಿ ಅದೇ ಗುಣಮಟ್ಟವನ್ನು ತೋರುತ್ತಿರುವ ಜನಪ್ರಿಯ ನಿರೂಪಕಿ ರೂಪಾ ಗುರುರಾಜ್ ಅವರು ಕೂಡ ‘ಮತ್ತೆ ಮನ್ವಂತರ’ದ ಭಾಗವಾಗಿರುವುದು ವಿಶೇಷ. ಇವಿಷ್ಟು ಕಲಾವಿದರ ಕುರಿತಾದ ಸದ್ಯದ ಮಾಹಿತಿ. ಆದರೆ ಟಿ ಎನ್ ಎಸ್ ಅವರ ಧಾರಾವಾಹಿಯ ಅಭಿಮಾನಿಗಳು ಅರಿತಿರುವಂತೆ ಧಾರಾವಾಹಿ ಮುಂದುವರಿದ ಹಾಗೆ ಅದರೊಳಗೆ ರಾಜ್ಯದ ಎಲ್ಲ ಅತಿರಥ ಮಹಾರಥರೂ ಬಂದು ಹೋಗಬಹುದಾದ ಸಾಧ್ಯತೆ ಇರುವುದನ್ನು ಅಲ್ಲಗಳೆಯುವಂತಿಲ್ಲ!

ನಿರ್ದೇಶನ ವಿಭಾಗದಲ್ಲೂ ಹೊಸತನ

ಇಂದು ಕನ್ನಡದಲ್ಲಿ ಸಹಜಾಭಿವ್ಯಕ್ತಿಯ ಧಾರಾವಾಹಿಗಳಿಂದ ಯಾರಾದರೂ ಜನಪ್ರಿಯ ನಿರ್ದೇಶಕರಿದ್ದರೆ ಅವರಲ್ಲಿ ಬಹಳಷ್ಟು ಮಂದಿ ಸೀತಾರಾಮ್ ಶಿಷ್ಯರೇ ಆಗಿರುತ್ತಾರೆ ಎನ್ನುವುದು ವಾಸ್ತವ. ಉಳಿದವರು ಸೀತಾರಾಮ್ ಅವರಿಂದ ಪ್ರಭಾವಿತರಾದವರಾಗಿರುತ್ತಾರೆ. ಅದು ಅವರಿಗಿರುವ ಶಕ್ತಿ. ಪ್ರತಿ ಬಾರಿ ಹೊಸ ತಂಡ ಕಟ್ಟುವಾಗಲೂ ಅದರಲ್ಲೊಂದು ಟಿಎನ್ ಸೀ ತನ ಭದ್ರವಾಗಿರುತ್ತದೆ. ಹಾಗೆಯೇ ಈ ಬಾರಿಯೂ ಪ್ರಧಾನ ನಿರ್ದೇಶನದ ಹೊಣೆ ಹೊತ್ತಿರುವ ಸೀತಾರಾಮ್ ಅವರ ಬಳಿ ಸಂಚಿಕೆ ನಿರ್ದೇಶಕರಾಗಲು ಒಬ್ಬ ಯುವ ನಾಯಕ ನಟನೇ ಜೊತೆಯಾಗಿದ್ದಾರೆ! ಅವರು ಬೇರೆ ಯಾರೂ ಅಲ್ಲ, ‘ಮೂಕಜ್ಜಿಯ ಕನಸು’ ಸೇರಿದಂತೆ ಕಲಾಮೌಲ್ಯ ಸಾರುವ ಚಿತ್ರಗಳಲ್ಲಿ ನಟಿಸಿ ಹೆಸರು ಮಾಡಿರುವ ಸಿದ್ದಾರ್ಥ ಮಾಧ್ಯಮಿಕ. ಅವರು ನಟಿಸಿ ಮುಗಿಸಿರುವ ಒಂದಷ್ಟು ಸಿನಿಮಾಗಳು ಕೋವಿಡ್ ಸಮಸ್ಯೆಗೆ ನಲುಗಿವೆ. ಹಾಗಾಗಿ ಕಿರುತೆರೆ ಕಡೆಗೆ ಗಮನ ನೀಡಿರುವ ಅವರು ಸಾಹಿತ್ಯ, ಧಾರ್ಮಿಕ ವಿಚಾರಗಳನ್ನು ಓದಿಕೊಂಡಿದ್ದು ತೀಕ್ಷ್ಣಮತಿ ಎಂದು ಸೀತಾರಾಮ್ ಮೆಚ್ಚುಗೆ ವ್ಯಕ್ತಪಡಿಸಿದರು. ತಮ್ಮ ಮಗಳು ಅಶ್ವಿನಿ ಸಂಭಾಷಣೆಯಲ್ಲಿ ಸದಾ ಜೊತೆಗಿದ್ದು ತಾವು ದುಃಖದ ಸನ್ನಿವೇಶಗಳಿಗೆ ಅಕ್ಷರವಾದರೆ ಮಗಳಿಂದ ಹಾಸ್ಯದ ಮಾತುಗಳನ್ನು ಬರೆಸುವುದಾಗಿ ಹೇಳಿ ನಗುವ ವಾತಾವರಣ ಮೂಡಿಸಿದರು. ಜೊತೆಗೆ ಧಾರಾವಾಹಿಯ ನಿರ್ದೇಶನದಲ್ಲಿ ತಮ್ಮ ಬಲಗೈಯಂತಿರುವ ಸಹಾಯಕ ಸುಶಾಂತ್ ಅವರಿಗೆ ಒಂದು ಪಾತ್ರವನ್ನು ಕೂಡ ನೀಡಿದ್ದು ಅದಕ್ಕೆ ‘ಚಾರ್ಲಿ ಚಾಪ್ಲಿನ್ ನಂಜುಂಡ’ ಎಂದು ನಾಮಕರಣ ಮಾಡಲಾಗಿದೆ ಎಂದರು. ಈಗ ನಗುವ ಸರದಿ ಎಲ್ಲರದಾಯಿತು. ಅಂದಹಾಗೆ ‘ಮಗಳು ಜಾನಕಿ’ಯ ಸಂಚಿಕೆ ನಿರ್ದೇಶಕ ‘ಮಹೇಶ್ ಗಳಗನಾಥ’ ಅವರು ಕೂಡ ಇಲ್ಲಿನ ನಿರ್ದೇಶನ ವಿಭಾಗದಲ್ಲಿಯೂ ಇರುವುದಾಗಿ ಸೀತಾರಾಮ್ ತಿಳಿಸಿದರು. ಇವರೆಲ್ಲರ ಜೊತೆಗೆ ತಮ್ಮ ಗೌರಿಬಿದನೂರಿನ ಆತ್ಮೀಯ ಸ್ನೇಹಿತ ಕೃಷ್ಣಪ್ಪ ಅವರ ಪುತ್ರ ನವನೀತ ಕೂಡ ನಿರ್ದೇಶನ ಕ್ಷೇತ್ರದ ನವಮುಖವಾಗಿ ಎಂಟ್ರಿ ನೀಡುತ್ತಿರುವುದಾಗಿ ತಿಳಿಸಿದರು.

ಮತ್ತೆ ಎಚ್ಚೆಸ್ವಿ- ವಿಜಯ ಪ್ರಕಾಶ್

“ಮಣ್ಣ ತಿಂದ ಸಿಹಿ ಹಣ್ಣ ನೀಡಿ ಮರ ನೀಡಿ ನೀಡಿ ಮುಕ್ತ..” ಎನ್ನುವ ಸಾಲುಗಳ ಮೂಲಕ ಎಚ್ ಎಸ್ ವೆಂಕಟೇಶ ಮೂರ್ತಿ ಮತ್ತು ಗಾಯಕ ವಿಜಯ ಪ್ರಕಾಶ್ ಅವರನ್ನು ಕನ್ನಡದ ಆಪ್ತ ಜೋಡಿ ಮಾಡಿದ ಕೀರ್ತಿ ಸೀತಾರಾಮ್ ಅವರದ್ದು. ಅದೇ ಜೋಡಿಯಿಂದಲೇ “ಊರ ಸೇರಬಹುದೇ ನೀನು; ದಾರಿ ಮುಗಿಯದೇ..” ಎನ್ನುವ ಗೀತೆಯೂ ‘ಮಗಳು ಜಾನಕಿ’ ಮೂಲಕ‌ ಜನಪ್ರಿಯವಾಗಿತ್ತು. ಇದೀಗ ‘ಮತ್ತೆ ಮನ್ವಂತರ’ದ ಮೂಲಕ ಇಬ್ಬರ ಹ್ಯಾಟ್ರಿಕ್ ಸಂಗಮವಾಗುತ್ತಿದೆ. ಎಚ್ಚೆಸ್ವಿಯವರಂತೂ ಸೀತಾರಾಮ್ ಅವರ ಬಹುತೇಕ ಧಾರಾವಾಹಿಗಳ ಶೀರ್ಷಿಕೆ ಗೀತೆಗೆ ಪೆನ್ನು ಹಿಡಿದಿದ್ದಾರೆ. ಸಿ ಅಶ್ವಥ್ ಅವರ ಬಳಿಕ ತಾವು ಮೆಚ್ಚುವ ಸಂಗೀತ ನಿರ್ದೇಶಕರೆಂದು ಟಿ ಎನ್ ಎಸ್ ಅವರ ಬಾಯಿಯಿಂದ ಹೊಗಳಿಕೆ ಪಡೆದ ಪ್ರವೀಣ್ ಡಿ ರಾವ್ ಈ ಗೀತೆಗೆ ಸಂಗೀತ ನೀಡುತ್ತಿದ್ದಾರೆ. ಹಾಗಾಗಿ ಗೀತೆಯ ಬಗ್ಗೆ ಸಹಜವಾದ ನಿರೀಕ್ಷೆಗಳು ಉದ್ಭವಿಸಿವೆ.

ಆತ್ಮೀಯರೊಡನೆ ಟಿ ಎನ್ ಎಸ್ ಸಂಭ್ರಮ

ಕೋವಿಡ್ ಕಾರಣ ಹೆಚ್ಚು ಜನ ಸೇರಿಸಬಾರದು ಎಂದು ಮೊದಲೇ ನಿರ್ಧರಿಸಲಾಗಿತ್ತು. ಆದರೆ ದೊಡ್ಡ ಗಣಪತಿ ದೇಗುಲದ ಎದುರು ಬದಿಯಲ್ಲಿದ್ದ ‘ಶ್ರೀ ಲಕ್ಷ್ಮಿ ವೆಂಕಟೇಶ್ವರ’ ದೇವಾಲಯದ ಮುಹೂರ್ತಕ್ಕೆ ಸೀತಾರಾಮ್ ಆತ್ಮೀಯರೆಲ್ಲ ಆಗಮಿಸಿ ಶುಭ ಕೋರಿದರು.

ಸಮಾರಂಭಕ್ಕೆ ಆಗಮಿಸಿದ ಪ್ರತಿಯೊಬ್ಬರನ್ನೂ ಹಠಕ್ಕೆ ಬಿದ್ದು ಎಲ್ಲರಿಗೂ ಪರಿಚಯ ಮಾಡಿಸಿ ಕೊಡುತ್ತಿದ್ದರು. “ನನ್ನ ಧಾರಾವಾಹಿಗಳಲ್ಲಿ ನಾನು ಸದಾ ಲಾಯರ್ ಸಿ ಎಸ್ ಪಿ, ನನ್ನ ತಮ್ಮ ಸದಾ ಮುಖ್ಯಮಂತ್ರಿ ಎಂದು ತಮಾಷೆ ಮಾಡುವವರಿದ್ದಾರೆ. ಅಂಥ ನನ್ನ ತಮ್ಮ ಬಾಲಿ ಬಂದಿದ್ದಾನೆ. ಅಳಿಯ ಅನೀಶ್ ಇದ್ದಾರೆ ಎನ್ನುತ್ತಾ ತಮ್ಮ ಬಂಧುಗಳಷ್ಟೇ ಆತ್ಮೀಯರಾದ ಸ್ನೇಹಿತರನ್ನು ಪರಿಚಯಿಸುತ್ತಾ “ನನ್ನ ಹನ್ನೊಂದರಷ್ಟು ಧಾರಾವಾಹಿಗಳ ನಿರ್ಮಾಣ ನಿರ್ವಹಣದ ಜೊತೆಗೆ ಸಹನಿರ್ಮಾಪಕರಾಗಿಯೂ ಗುರುತಿಸಿರುವ ಕಷ್ಟ ಸುಖಗಳಲ್ಲಿ ಭಾಗಿಯಾಗಿರುವ ಗುರು ಪ್ರಸಾದ್ ಮುದ್ರಾಡಿ, ಮುಕ್ತ ಸೇರಿದಂತೆ ತಮ್ಮ ಹೆಚ್ಚಿನ ಎಲ್ಲಾ ಧಾರಾವಾಹಿಗಳಲ್ಲಿಯೂ ಜೊತೆಗಿರುವ ನೀಲಿ ಯಾನೇ ನೀಲಕಂಠೇಗೌಡ, ‘ಮಹಾಪರ್ವ’ದಲ್ಲಿ “ಕಟ್ಟುವೆವು ನಾವು ಹೊಸ ನಾಡೊಂದನು ರಸದ ಬೀಡೊಂದನು..” ಗೀತೆಗೆ ರಾಗ ಹಾಕಿ ಹಾಡಿದ ಪಿಕೆ ಕೃಷ್ಣಮೂರ್ತಿ, ಸಾಹಿತಿ ಮುದ್ದುಕೃಷ್ಣ ಮೊದಲಾದವರನ್ನು ಪರಿಚಯಿಸಿದರು. ಇವರೆಲ್ಲರ ಜೊತೆಗೆ
‘ಮತ್ತೆ ಮನ್ವಂತರ’ ಧಾರಾವಾಹಿಯ ನಿರ್ಮಾಣ ನಿರ್ವಹಣೆ ನೋಡಿಕೊಳ್ಳಲಿರುವ ಶ್ರೀನಾಥ್ ಹಾಲನಾಯಕನ ಹಳ್ಳಿ, 17 ವರ್ಷಗಳಿಂದ ಲೆಕ್ಕ ಪತ್ರ ಪರಿಶೋಧಕರಾಗಿರುವ ಸಂದೀಪ, ಮುಧೋಳದಿಂದ ಬಂದು ಬಹಳ ವರ್ಷಗಳಿಂದ ತಮ್ಮ ಚಾಲಕರಾಗಿ, ಆಪ್ತಕಾರ್ಯದರ್ಶಿಯಾಗಿ ಜೊತೆಗಿರುವ ಸೈದು ಮೊದಲಾದವರನ್ನು ಆತ್ಮೀಯವಾಗಿ ಪರಿಚಯಿಸಿದರು.

ಟಿ ಎನ್ ಸೀತಾರಾಮ್ ಅವರ ‘ಭೂಮಿಕಾ’ ಸಂಸ್ಥೆಯ 27ನೆಯ ಧಾರಾವಾಹಿ ಇದು. ‘ಕಲರ್ಸ್’ ಕನ್ನಡ ವಾಹಿನಿಯ ಮುಖ್ಯಸ್ಥರಾದ ಪರಮೇಶ್ವರ ಗುಂಡ್ಕಲ್ ಅವರ ಜೊತೆಗೆ ಸೇರಿ‌ ಸ್ವತಃ ಟಿ ಎನ್ ಸೀತಾರಾಮ್ ಅವರು ರಚಿಸಿರುವ ಕತೆಗೆ ನಿರ್ಮಾಣ ಸಹಾಯಿಯಾಗಿ ತಮ್ಮ ಸ್ನೇಹಿತರಾದ ಉದ್ಯಮಿ ರಾಮಚಂದ್ರ ಅವರನ್ನು ಸೇರಿಸಿಕೊಂಡಿದ್ದಾರೆ ಸೀತಾರಾಮ್. ವಿಶ್ವಜಿತ್ ರಾವ್ ಅವರು ಪ್ರಧಾನ ಛಾಯಾಗ್ರಾಹಕರು. ಅದ್ಭುತ ನಿರೀಕ್ಷೆಗಳಿಗೆ ಕಾರಣವಾಗಿರುವ ‘ಮತ್ತೆ ಮನ್ವಂತರ’ಕ್ಕೆ ಸಿನಿಕನ್ನಡದ ಹಾರ್ದಿಕ ಶುಭಾಶಯಗಳು.

Recommended For You

Leave a Reply

error: Content is protected !!
%d bloggers like this: