ಸದ್ಯದಲ್ಲೇ ಜಗ್ಗೇಶ್ ಪುತ್ರನ ‘ಕಾಗೆಮೊಟ್ಟೆ’

ಜನಪ್ರಿಯ ನಟ ಜಗ್ಗೇಶ್ ಅವರ ಹಿರಿಯಪುತ್ರ ಗುರುರಾಜ್ ನಾಯಕನಾಗಿ ಅಭಿನಯಿಸಿರುವ ಚಿತ್ರ ಕಾಗೆಮೊಟ್ಟೆ. ಈಗಾಗಲೇ ರಿಲೀಸ್‌ಗೆ ಸಿದ್ಧವಾಗಿರುವ ಕಾಗೆಮೊಟ್ಟೆ ಚಿತ್ರವನ್ನು ಸೆಪ್ಟೆಂಬರ್ ಎರಡನೇ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಮೂವರು ಲೋಕಲ್ ಹುಡುಗರ ಕಥೆಯನ್ನಿಟ್ಟುಕೊಂಡು ನಿರ್ದೇಶಕ‌ ಚಂದ್ರಹಾಸ ಅವರು ಈ ಚಿತ್ರವನ್ನು ನಿರೂಪಿಸಿದ್ದಾರೆ. ಕಾಗೆ ಶನೀಶ್ವರನ ವಾಹನ, ಶನಿ ಹೆಗಲೇರಿದರೆ ಕೊನೆಯವರೆಗೆ ಬಿಡಲ್ಲ, ಅದೇರೀತಿ ಈ ಮೂರೂ ಜನ ಹುಡುಗರು ಯಾರ ಹಿಂದಾದ್ರೂ ಬಿದ್ದರೆ ಸುಲಭದಲ್ಲಿ ಬಿಡುವವರೇ ಅಲ್ಲ, ಇನ್ನೂ ಮೊಟ್ಟೆಯಂತಿರುವ ಇವರು ಬೆಳೆದಮೇಲೆ ಯಾವರೀತಿ ಇರಬಹುದು ಎಂಬ ಪರಿಕಲ್ಪನೆಯೊಂದಿಗೆ ಚಂದ್ರಹಾಸ್ ಅವರು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.

ಕಳೆದ ಲಾಕ್‌ಡೌನ್‌ಗೂ ಮುಂಚೆಯೇ ರೆಡಿಯಾಗಿದ್ದ ಈ ಚಿತ್ರದಲ್ಲಿ ಗುರುರಾಜ್ ಜಗ್ಗೇಶ್ ಜೊತೆ ಕೆ.ಮಾದೇಶ್ ಹಾಗೂ ಹೇಮಂತ್ ಇನ್ನಿಬ್ಬರು ಗೆಳೆಯರಾಗಿ ನಟಿಸಿದ್ದಾರೆ.  ಕನ್ನಡದವರೇ ಆದ ತನುಜಾ ಚಿತ್ರದ ನಾಯಕಿಯಾಗಿ ನಟಿಸಿದ್ದಾರೆ, ಸಹ ನಿರ್ಮಾಪಕರಾಗಿ  ಸುಬ್ಬರಾಯುಡು ಹಾಗೂ ಹೆಚ್.ಎನ್.ಶ್ರೀನಿವಾಸಯ್ಯ ಇವರ ಜೊತೆ ಕೈಜೋಡಿಸಿದ್ದಾರೆ. 'ಪಿಳ್ಳಾ, ಗೋವಿ, ಕೃಷ್ಣನ ಕಥೆ' ಎನ್ನುವ ಟ್ಯಾಗ್‌ಲೈನ್ ಈ ಚಿತ್ರಕ್ಕಿದೆ. 

ಹಳ್ಳಿಯಲ್ಲಿ ಸಣ್ಣಪುಟ್ಟ ರಾಬರಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಈ ಮೂವರು ಹುಡುಗರು ಒಮ್ಮೆ ಒಂದು ದೊಡ್ಡ ಉದ್ದೇಶ ಇಟ್ಟುಕೊಂಡು ಬೆಂಗಳೂರಿಗೆ ಆಗಮಿಸುತ್ತಾರೆ, ಯಾವುದೇ ಹಿನ್ನೆಲೆ ಇಲ್ಲದೆ ಸಿಟಿಗೆ ಬಂದ ಇವರು ತಾವಂದುಕೊಡಿದ್ದನ್ನು ಮಾಡಿದರೇ, ಇಲ್ಲವೇ ಎನ್ನುವುದೇ ಕಾಗೆಮೊಟ್ಟೆ ಚಿತ್ರದ ಕಥಾಹಂದರ.

ಕೊಳ್ಳೇಗಾಲ, ಚಾಮರಾಜನಗರ ಅಲ್ಲದೆ ಬೆಂಗಳೂರಿನ ಹಲವಾರು ಸ್ಲಂಗಳಲ್ಲಿ ಚಿತ್ರದ ಶೂಟಿಂಗ್ ನಡೆಸಲಾಗಿದೆ.
ಈ ಮೂವರು ಹುಡುಗರಿಗೆ ನಗರದಲ್ಲಿ ಬೆನ್ನೆಲುಬಾಗಿ ನಿಲ್ಲುವ ವೇಶ್ಯೆಯ ಪಾತ್ರವನ್ನು ಸೌಜನ್ಯ ಎಂಬ ನಟಿ ನಿರ್ವಹಿಸಿದ್ದಾರೆ. ಚಿತ್ರದಲ್ಲಿ ಮೂರು ಹಾಡುಗಳಿದ್ದು, ಶ್ರೀವತ್ಸ ಸಂಗೀತ ಸಂಯೋಜನೆ ಮಾಡಿದ್ದಾರೆ. ನಾಗೇಂದ್ರ ಪ್ರಸಾದ್, ಜಯಂತ್ ಕಾಯ್ಕಿಣಿ, ಕವಿರಾಜ್ ಹಾಗೂ ನಟ ಜಗ್ಗೇಶ್ ಸಹ ಹಾಡೊಂದಕ್ಕೆ ಸಾಹಿತ್ಯ ರಚಿಸಿದ್ದಲ್ಲದೆ ಅದಕ್ಕೆ ತಾವೇ ದನಿಯಾಗಿದ್ದಾರೆ. ಪಿ.ಎಲ್. ರವೀ ಚಿತ್ರದ ಕ್ಯಾಮೆರಾ ವರ್ಕ್ ನಿಭಾಯಿಸಿದ್ದಾರೆ. ಸೂಪರ್‌ಸ್ಟಾರ್ ರಜನೀಕಾಂತ್‌ರ ಆಪ್ತಸ್ನೇಹಿತ ರಾಜ್ ಬಹದೂರ್ ಅವರು ಕೂಡ ಒಂದು ಪಾತ್ರವಾಗಿದ್ದಾರೆ.

Recommended For You

Leave a Reply

error: Content is protected !!