ಗಣೇಶ ಚತುರ್ಥಿ‌ ಜೊತೆಗೆ ರಮೇಶ್ ಜನ್ಮದಿನ..!

ನಾಡಿನಾದ್ಯಂತ ಇಂದು ಗಣೇಶನ ಹಬ್ಬ.‌ ಕನ್ನಡ ಸಿನಿ ಪ್ರಿಯರು ಅದರೊಂದಿಗೆ ‌ರಮೇಶ್ ಅವರಿಗೂ ಇವತ್ತು ಶುಭ ಕೋರುತ್ತಾರೆ. ಯಾಕೆಂದರೆ ಇಂದು ನಟ ರಮೇಶ್ ಅರವಿಂದ್ ಜನ್ಮದಿನ. ಪತ್ರಕರ್ತ ನವೀನ್ ಸಾಗರ್ ಅವರು ರಮೇಶ್ ಅವರನ್ನು ನೆನಪಿಸಿಕೊಂಡ ರೀತಿ ಇದು.

ರಮೇಶ್ ಅರವಿಂದ್ ಏನಿದ್ರೂ ಅನ್ಯಭಾಷಿಗರಿಗೆ. ನಮಗೆ ರಮೇಶ್ ಅಂತಷ್ಟೇ ಅಂದ್ರೂ ಸಾಕು.. ಇನ್ಯಾವ ಬೇರೆ ರಮೇಶ್ ಮುಖವೂ ಕಣ್ಮುಂದೆ ಬರೋದಿಲ್ಲ. ಬರೋದು ನೀವೇ.

ಇವತ್ತಿನ ದಿನಮಾನದಲ್ಲಿ ಅಜಾತಶತ್ರುವಾಗಿ ಇರೋದು ಬಹುಶಃ ದೇವರಿಗೂ ಸಾಧ್ಯ ಇಲ್ಲ. ಕಡೇ ಪಕ್ಷ ಈ ಮನುಷ್ಯ ಯಾಕಿಷ್ಟು ಒಳ್ಳೇವ್ನು ಅಂತಾದ್ರೂ ಹೊಟ್ಟೆಕಿಚ್ಚಾಗಿ ಶತ್ರುಗಳು ಸೃಷ್ಟಿ ಆಗ್ತಾರೆ. ನೀವು ಅದಕ್ಕೂ ಅಪವಾದ! ನಿಮ್ಮನ್ನು ಹಾಗೂ ಸಹ ಯಾರೂ ದ್ವೇಷಿಸಲಾರರು.

ನಿಜ. ರಮೇಶ್ ಇಡೀ ಕಾಲುಶತಮಾನ ಚಿತ್ರರಂಗದಲ್ಲೂ ಚಿತ್ರರಂಗದಾಚೆಗೂ ಆಪ್ತಮಿತ್ರನಾಗಿ ಉಳಿದವರು.

ಭಾವುಕತೆಗೆ ಹೊಸ ಬಣ್ಣ ತಂದವರು ರಮೇಶ್. ಪ್ರೇಕ್ಷಕರ ಕಣ್ಣಲ್ಲಿ ನೀರು ಹರಿಸೋದಕ್ಕೆ ನಾಯಕಿಯರಿಂದ ಮಾತ್ರವೇ ಸಾಧ್ಯ ಎಂಬ ನಂಬಿಕೆಯನ್ನು ಹುಸಿಯಾಗಿಸಿದ್ದು ರಮೇಶ್. ಹಾಗಂತ ಅದ್ಭುತನಟರಾದ ಅನಂತ್ ನಾಗ್, ವಿಷ್ಣುವರ್ಧನ್, ರಾಜ್ ಕುಮಾರ್ ತಮ್ಮ ಅಭಿಮಾನಿ ಪ್ರೇಕ್ಷಕರ ಕಣ್ಣನ್ನು ತೇವಗೊಳಿಸಿಲ್ಲ ಅಂತಲ್ಲ. ಆದರೆ ರಮೇಶ್ ಅಭಿನಯ ಹಾಕಿಸಿದ ಕಣ್ಣೀರಿನ ವೆರೈಟಿಯೇ ವಿಭಿನ್ನ!

ರಮೇಶ್ ಅಭಿನಯದಲ್ಲಿ ಕಮಲ್ ಹಾಸನ್ ಛಾಯೆ ಕಂಡವರು ಹಲವರು. ಆದರೆ ಅಂಥ ಕಮಲ್ ಕೂಡ ರಮೇಶ್ ಅಭಿನಯ ನೋಡಿ ಕಮಾಲ್ ಅಂದುಬಿಟ್ರು. ತಮ್ಮ ಚಿತ್ರಗಳಲ್ಲಿ ರಮೇಶ್ ಗೆ ಪಾತ್ರ ನೀಡಿದ್ರು. ರಮೇಶ್ ನಿರ್ದೇಶನದ ಚಿತ್ರಕ್ಕೆ ಪ್ರೀತಿಯಿಂದ ಅಭಿನಯಿಸಲು ಬಂದ್ರು. ಒಂದೇ ಫ್ರೇಮಿನಲ್ಲಿ ಇಬ್ಬರ ಅಭಿನಯ ನೋಡುತ್ತಿದ್ದರೆ ರಮೇಶ್ ಗೆ ರಮೇಶ್ ಸಾಟಿ ಕಮಲ್ ಗೆ ಕಮಲ್ ಸಾಟಿ ಎಂಬಂತಿತ್ತು. ರಮೇಶ್ ಕಮಲ್ ರನ್ನು ಕಾಪಿ ಮಾಡ್ತಾರೆ ಅನ್ನೋ ಮಾತನ್ನು ಹಿಂತೆಗೆದುಕೊಳ್ಳುವಂತೆ!!!

ಸತತ ಏಳು ಎಂಟು ಚಿತ್ರಗಳು ಒಂದೇ ವರ್ಷದಲ್ಲಿ ಹಿಟ್ ಆದರೂ ಯಶಸ್ಸನ್ನು ನೆತ್ತಿಗೇರಿಸಿಕೊಳ್ಳದೇ ಬಿರುದುಬಾವಲಿಗಳು, ಸ್ಟಾರ್ ಗಿರಿಗಳು ಯಾವುದನ್ನೂ ನಿರೀಕ್ಷಿಸದೇ ಅಪ್ಪಟ ನಟನಾಗಿಯಷ್ಟೇ ಉಳಿಯೋಕೆ ಸಾಧ್ಯ ಆಗಿದ್ದಾದ್ರೂ ಹೇಗೆ?

ಇವತ್ತಿಗೂ ರಮೇಶ್ ಪಾಲಿಗೆ ಸಿಕ್ಕಿದ ಒಂದೇ ಒಂದು ಬಿರುದು ತ್ಯಾಗರಾಜ !! ತಮ್ಮ ಆರಂಭಿಕ ಹಿಟ್ ಚಿತ್ರಗಳಲ್ಲೆಲ್ಲ ಅವರು ನಾಯಕಿಯನ್ನು ತ್ಯಾಗ ಮಾಡಿ ಪ್ರೇಮಕ್ಕೊಂದು ಹೊಸ ಭಾಷ್ಯ ಬರೆದವರು. ಭಟ್ಟರು ಮುಂಗಾರು ಮಳೇಲಿ ಪ್ರೀತಿ ಮಧುರ ತ್ಯಾಗ ಅಮರ ಅಂತ ಬರೆಯೋ ಮೊದಲೇ ಅದನ್ನು ಪದೇಪದೆ ನಿರೂಪಿಸಿದ್ದವರು ರಮೇಶ್.
ಬಹುಶಃ ಆ ಬಿರುದೂ ಭಾರವಾಯ್ತೋ ಏನೋ… ಭಿನ್ನತೆಗೆ ತುಡಿದರು. ಅಳಿಸಿದ್ದು ಸಾಕು ನಗಿಸೋಣ ಎಂದು ನಿರ್ಧರಿಸಿದರು. ಆನಂತರ ಪೂರ್ತಿ ಒಂದು ದಶಕ ಪ್ರೇಕ್ಷಕರನ್ನು ಅದೆಷ್ಟು ನಗಿಸಿದರು ಅಂದ್ರೆ… ರಮೇಶ್ ರಲ್ಲಿ ಇಂಥ ಕಾಮಿಡಿ ಟೈಮಿಂಗ್ ಇರೋ ಇನ್ನೊಬ್ಬ ನಟನಿದ್ದಾನಾ ಅನಿಸೋಷ್ಟು! ತುಂಬ ಭಾವುಕರೇ ತುಂಬ ನಗಿಸೋಕೆ ಸಾಧ್ಯ ಅನ್ನೋ ಮಾತಿಗೆ ರಮೇಶ್ ಮತ್ತೊಂದು ಉದಾಹರಣೆಯಾದರು.

ಬಹುಶಃ ಅಷ್ಟೊಂದು ಹಿಟ್ ಪರ್ಸೆಂಟೇಜ್ ಇದ್ದರೂ… ನೂರು ಚಿತ್ರಗಳಲ್ಲಿ ನಾಯಕನಾಗಿ ನಟಿಸಿದರೂ ಕಟೌಟಿಗಾಗಿ ಹಪಹಪಿಸಲಿಲ್ಲ.. ಅಭಿಮಾನಿ ಸಂಘ ಬೇಕೆಂಬ ಹಂಬಲಕ್ಕೆ ಬೀಳಲಿಲ್ಲ… ತನ್ನನ್ನೂ ಒಂದು ಸ್ಟಾರ್ ಎಂಬ ಪ್ರಿಫಿಕ್ಸ್ ಕೊಟ್ಟು ಗುರುತಿಸಲಿ ಎಂದು ಆಸೆ ಪಡಲಿಲ್ಲ. ನಟನಾಗಿ ನಿರ್ದೇಶಕನಾಗಿ ವ್ಯಕ್ತಿಯಾಗಿ ಬೆಳೆಯುತ್ತಲೇ ಹೋದ್ರು.. ಬೆಳೆಯುತ್ತಲೇ ಹೋದ್ರು.

ವೀಕೆಂಡ್ ವಿಥ್ ರಮೇಶ್! ಆ ಸಾಧಕರ ಸೀಟಿನಲ್ಲಿ ಪ್ರತಿವಾರ ಒಬ್ಬೊಬ್ಬರನ್ನು ಕೂರಿಸಿ ಗೌರವಿಸಿ ಮಾತನಾಡುತ್ತಿದ್ದಾಗಲೂ, ಅವರ ಸಂದರ್ಶನ ನಡೆಸುತ್ತಿದ್ದಾಗಲೂ ನೋಡುಗರಿಗೆ ಅನಿಸ್ತಾ ಇದ್ದದ್ದು ಒಂದೇ..! ಆ ಸಾಧಕರ ಸೀಟಲ್ಲಿ ಪ್ರತಿವಾರವೂ ಕೂರುವ ಅರ್ಹತೆ ಇರೋದು ರಮೇಶ್ ಗೆ. ಒಂದೇ ಒಂದು ಕಪ್ಪುಚುಕ್ಕೆ ಇಲ್ಲದ ವ್ಯಕ್ತಿತ್ವದ ರಮೇಶ್ ತಾವೇ ಒಬ್ಬ ಸಾಧಕರಾಗಿದ್ರೂ ತಮಗಿಂತ ವಯಸ್ಸಿನಲ್ಲಿ ಸಾಧನೆಯಲ್ಲಿ ಕಿರಿಯರನ್ನು ಪರಿಚಯಿಸಿ ಹೊಗಳಿ ಪೂರ್ಣಮನಸ್ಸಿನಿಂದ ಮಾತನಾಡುತ್ತಿದ್ರು. ಅದು ರಮೇಶ್ ಅಂದ್ರೆ! ಬಹುಶಃ ರಮೇಶ್ ಅವ್ರನ್ನ ಸಾಧಕರ ಸೀಟಲ್ಲಿ ಕೂರಿಸಿ ಯೋಗರಾಜ್ ಭಟ್ ವೀಕೆಂಡ್ ವಿತ್ ರಮೇಶ್ ನಡೆಸಿಕೊಟ್ಟಾಗ ಆ ಕಾರ್ಯಕ್ರಮ ನಿಜಕ್ಕೂ ಸಂಪನ್ನವಾದದ್ದು.

ವಿಷ್ಣುವರ್ಧನ್, ಶಿವಣ್ಣ, ರವಿಚಂದ್ರನ್, ಅಂಬರೀಷ್, ದೇವರಾಜ್, ಶಶಿಕುಮಾರ್ ಹೀಗೆ ತಮ್ಮ ಕಾಲದ ಪ್ರತಿಯೊಬ್ಬ ನಾಯಕನ ಜೊತೆಗೂ ಯಾವ ಇಮೇಜ್ ಹಂಗಿಲ್ಲದೆ ಯಾವ ಶರತ್ತುಗಳಿಲ್ಲದೇ ಸ್ನೇಹಕ್ಕೆ ಮತ್ತು ಪಾತ್ರಕ್ಕಷ್ಟೇ ಪ್ರಾಮುಖ್ಯತೆ ಕೊಟ್ಟು ಅಭಿನಯಿಸಲು ಒಪ್ಪಿದ್ದು ರಮೇಶ್ ಅವರ ವ್ಯಕ್ತಿತ್ವವನ್ನ ನಿರೂಪಿಸತ್ತೆ.

ಇವತ್ತಿಗೂ ರಮೇಶ್ ವಿವಾದಗಳಿಂದ ದೂರ. ರಾಜಕೀಯ ಮಾತಾಡೋದಿಲ್ಲ. ನಟನಟಿಯರ ವಿವಾದಗಳಲ್ಲಿ ತಲೆ ಹಾಕೋದಿಲ್ಲ. ತಮ್ಮದಲ್ಲದ ಯಾವುದಕ್ಕೂ ಪ್ರತಿಕ್ರಿಯಿಸೋದಿಲ್ಲ. ರಮೇಶ್ ವಿವಾದಗಳನ್ನು ಹುಡುಕ್ಕೊಂಡ್ ಹೋಗೋದಿಲ್ಲ. ವಿವಾದಗಳೂ ರಮೇಶ್ ರನ್ನು ಹುಡುಕೋ ಧೈರ್ಯ ಮಾಡೋದಿಲ್ಲ. ಸಿನಿಮಾದ ನಡುವೆ ಬ್ರೇಕ್ ಸಿಕ್ಕರೆ ಟಿವಿ ಕಾರ್ಯಕ್ರಮಗಳಲ್ಲಿ ಬ್ಯುಸಿಯಾಗ್ತಾರೆ.. ಅಲ್ಲೊಂಚೂರು ಫ್ರೀ ಆದ್ರೆ… ಫೇಸ್ ಬುಕ್ಕಲ್ಲಿ ಪಾಸಿಟಿವ್ ಹಾಗೂ ಮೊಟಿವೇಷನಲ್ ವಿಡಿಯೋಗಳನ್ನು ಮಾಡಿ ಸಮಾಜಕ್ಕೆ ಹಂಚುತ್ತಾರೆ.

ಇತ್ತೀಚೆಗಷ್ಟೇ ಫೇಸ್ ಬುಕ್ಕಲ್ಲಿ ಅವರದ್ದೊಂದು ಹೊಸ ಲುಕ್ಕಿನ ಫೊಟೋ ಹರಿದಾಡಿತ್ತು. ರಮೇಶ್ ರನ್ನ ಕನ್ನಡದ ಅನಿಲ್ ಕಪೂರ್ ಎಂದು ಬಣ್ಣಿಸಿದವರಿದ್ದಾರೆ. ನಿಜ. ತಮ್ಮ ಶಿಸ್ತಿನ ಜೀವನದಿಂದ ದಿನೇದಿನೆ ಯಂಗ್ ಆಗ್ತಿದಾರೆ ರಮೇಶ್. ಈ‌ ನಡುವೆ ಮಗಳ ಮದುವೆ ಮಾಡಿ ಇನ್ನೇನು ಮೊಮ್ಮಗು ಕಾಣೋ ಹಂತದಲ್ಲಿದ್ರೂ ಖುದ್ದು ಇನ್ನೂ ಲವರ್ ಬಾಯ್ ಥರ ಕಾಣೋ ರಮೇಶ್ ಮಾತಿಗೆ ಕಿವಿಯಾಗೋಕೆ ಅದೆಷ್ಟು ಜನ ಕಾಯ್ತಿದ್ದಾರೆ. ರಮೇಶ್ ಮಾತಿನಲ್ಲೇ ಒಂದು ಎನರ್ಜಿ ಇದೆ. ಅವರ ಮಾತಿನ ವೇಗದಲ್ಲಿ ಒಂದು ಅದ್ಭುತ ಲವಲವಿಕೆ ಇದೆ. ರಮೇಶ್ ಚಿತ್ರಗಳು ನಿಮ್ಮನ್ನು ನಗಿಸಿರಬಹುದು ಅಳಿಸಿರಬಹುದು ಅಮೃತವರ್ಷಿಣಿಯಂಥ ಸಿನಿಮಾಗಳಲ್ಲಿ ನಿಮಗೆ ಅವರ ಮೇಲೊಂದು ಸಿಟ್ಟೂ ಬಂದಿರಬಹುದು. ಹಾಗೆಲ್ಲ ಒಬ್ಬ ಪ್ರೇಕ್ಷಕನಲ್ಲಿ ಭಾವ ಹುಟ್ಟಿಸದೇ ಹೋದರೆ ಕಲಾವಿದನಾಗಿಯೂ ವ್ಯರ್ಥ ಅಲ್ಲವೇ.? ಅಂಥ ಒಂದು ಸಾರ್ಥಕ ನಟನಾಬದುಕಿನ ಫ್ಲಾಶ್ ಬ್ಯಾಕ್ ಈ ದಿನ‌ ಅವರ ಜನ್ಮದಿನದ ಸಂದರ್ಭದಲ್ಲಿ ನೆನಪಾಯಿತು. ಅವರಿಗೆ ಹೃದಯಪೂರ್ವಕ ಶುಭಾಶಯಗಳು.

Recommended For You

Leave a Reply

error: Content is protected !!
%d bloggers like this: