
ರಜನಿಕಾಂತ್ ಪುತ್ರಿ ಐಶ್ವರ್ಯ ಜೊತೆಗಿನ ಸಂಬಂಧ ಕಡಿದುಕೊಂಡಿದ್ದಾರೆ ಚಿತ್ರ ನಟ ಧನುಶ್. ನಮ್ಮ ನಡುವಿನ ದಾಂಪತ್ಯ ಸಂಬಂಧ ಇಲ್ಲಿಗೆ ಕೊನೆಯಾಯಿತು ಎಂದು ಧನುಶ್ ಮಾಡಿರುವ ಟ್ವೀಟ್ ಅನ್ನು ಐಶ್ವರ್ಯ ಕೂಡ ಶೇರ್ ಮಾಡಿಕೊಂಡಿದ್ದಾರೆ.
ಟ್ವೀಟ್ ನಲ್ಲಿ ಬರೆದಿರುವುದೇನು?
18 ವರ್ಷಗಳ ಕಾಲ ಜೋಡಿಯಾಗಿ, ಸ್ನೇಹಿತರಾಗಿ, ದಂಪತಿಯಾಗಿ ಮತ್ತು ಪರಸ್ಪರ ಹಿತೈಷಿಗಳಾಗಿ ನಡೆಸಿದ ಒಗ್ಗಟ್ಟಿನ ಪಯಣದಲ್ಲಿ ಬೆಳವಣಿಗೆ, ಅರ್ಥ ಮಾಡಿಕೊಳ್ಳುವಿಕೆ ಹೊಂದಾಣಿಕೆಗಳಿದ್ದವು. ಇವತ್ತು ನಾವು ನಿಂತಿರುವಲ್ಲಿಂದ ನಮ್ಮ ದಾರಿಗಳು ಪ್ರತ್ಯೇಕವಾಗುತ್ತಿವೆ.. ಐಶ್ವರ್ಯ ಮತ್ತು ನಾನು ದಾಂಪತ್ಯದಿಂದ ದೂರಾಗಲು ತೀರ್ಮಾನಿಸಿದ್ದೇವೆ. ಪ್ರತ್ಯೇಕವಾಗಿ ನಮ್ಮನ್ನು ಅರ್ಥಮಾಡಿಕೊಳ್ಳಲು ಸಮಯತೆಗೆದುಕೊಳ್ಳುವುದು ಉತ್ತಮ ಎಂದುಕೊಂಡಿದ್ದೇವೆ.
ದಯವಿಟ್ಟು ನಮ್ಮ ನಿರ್ಧಾರಗಳನ್ನು ಗೌರವಿಸಿ ಮತ್ತು ಇದನ್ನು ನಿಭಾಯಿಸಲು ನಮಗೆ ಖಾಸಗಿತನವನ್ನು ನೀಡಿ.
ಓಂ ನಮಃ ಶಿವಾಯ
ಪ್ರೀತಿ ಹಂಚಿ
D
ಇವಿಷ್ಟು ಅವರ ಟ್ವಿಟ್ ನಲ್ಲಿರುವ ವಿಚಾರ.

ರಜನಿಕಾಂತ್ ಅವರ ಕಿರಿಯ ಪುತ್ರಿ ಸೌಂದರ್ಯ ಕೂಡ ಪ್ರೀತಿಸಿ ಮದುವೆಯಾದ ಏಳು ವರ್ಷಗಳಲ್ಲಿ ಪತಿ ಅಶ್ವಿನ್ ರಾಮ್ ಕುಮಾರ್ ಅವರಿಂದ ವಿಚ್ಚೇದಿತಳಾಗಿದ್ದರು. ಎರಡು ವರ್ಷಗಳ ಬಳಿಕ ವಿಶಾಗನ್ ಎನ್ನುವವರ ಜೊತೆಗೆ ಮರು ವಿವಾಹವಾಗಿ ಜೀವನ ನಡೆಸುತ್ತಿದ್ದಾರೆ. ಐಶ್ವರ್ಯ ಮತ್ತು ಧನುಶ್ ದಾಂಪತ್ಯದಲ್ಲಿ ಯಾತ್ರ(16) ಮತ್ತು ಲಿಂಗ(12)ಎನ್ನುವ ಇಬ್ಬರು ಗಂಡು ಮಕ್ಕಳಿದ್ದಾರೆ.
ವರ್ಷಾರಂಭವೇ ವಿಚ್ಛೇದನದಲ್ಲಿ!
ಸಾಮಾನ್ಯವಾಗಿ ವರ್ಷಾರಂಭದಿಂದ ವಿವಾಹಗಳ ಸಂಭ್ರಮ ಸಾಮಾನ್ಯ. ಆದರೆ ಕಳೆದ ವರ್ಷಾಂತ್ಯದಿಂದ ಆರಂಭವಾದ ವಿಚ್ಛೇದನದ ಘಟನೆಗಳು ಸಾಲು ಸಾಲಾಗಿ ಮುಂದುವರಿದಿವೆ. ಜುಲೈನಲ್ಲಿ ಆಮೀರ್ ಖಾನ್ ಕಿರಣ್ ರಾವ್ ಜೊತೆಗಿನ ಹದಿನೈದು ವರ್ಷಗಳ ದಾಂಪತ್ಯವನ್ನು ಕೊನೆಗೊಳಿಸಿ ಸುದ್ದಿಯಾದರೆ ನವೆಂಬರ್ ನಲ್ಲಿ ತೆಲುಗು ನಟ ನಾಗಚೈತನ್ಯ ಪತ್ನಿ ಸಮಂತಾಗೆ ವಿಚ್ಚೇದನ ನೀಡಿದ್ದಾಗಿ ಘೋಷಿಸಿದ್ದರು. ಇದೀಗ ಜನವರಿಯಲ್ಲಿ ಐಶ್ವರ್ಯ ಧನುಶ್ ವಿಚ್ಚೇದನ ಕೂಡ ಪ್ರೇಮ ವಿವಾಹದ ಬಳಿಕವೂ ಹೊಂದಾಣಿಕೆ ಮಾಡಿಕೊಳ್ಳಲಾಗದ ಆಧುನಿಕ ಸಂದರ್ಭಕ್ಕೆ ಮತ್ತೊಂದು ಉದಾಹರಣೆಯಾಗಿರುವುದು ವಿಪರ್ಯಾಸ.
