ಇತ್ತೀಚೆಗಷ್ಟೇ ತೆಲುಗು ಚಿತ್ರ `ಅಖಂಡ’ದಲ್ಲಿ ಬಾಲಕೃಷ್ಣ ಅಬ್ಬರಿಸಿರುವುದನ್ನು ನೋಡಿರುತ್ತೀರಿ. ಇದೀಗ ಅಂಥದೇ ಒಂದು ಅಬ್ಬರದ ಸಿನಿಮಾ ಕನ್ನಡದಲ್ಲಿಯೂ ತಯಾರಾಗಿದೆ. ಈ ಸಿನಿಮಾದ ಹೆಸರೇ ಅಘೋರ.
ಹೆಸರೇ ಸೂಚಿಸುವಂತೆ ಇದು ಅಘೋರಿಯ ಕತೆ. ಅವಿನಾಶ್ ಅವರು ಪ್ರಧಾನ ಪಾತ್ರದಲ್ಲಿರುವುದು ವಿಶೇಷ.ಅಘೋರಿಯ ಕತೆ ಎನ್ನುವುದನ್ನು ಚಿತ್ರದ ಶೀರ್ಷಿಕೆ ಗೀತೆ ಈಗಾಗಲೇ ಜಗಜ್ಜಾಹೀರುಗೊಳಿಸಿದೆ. ತೇಜಸ್ ಕುಮಾರ್ ಅವರ ಪ್ರಾಸಬದ್ಧ ಸಾಲುಗಳು ಅಘೋರ ಚಿತ್ರದ ಎಳೆಎಳೆಯನ್ನು ಹೊರಗಿಡುವ ಪ್ರಯತ್ನ ಮಾಡಿದೆ. ತ್ಯಾಗರಾಜ್ ಸಂಗೀತದಲ್ಲಿ ಪಂಚಮ್ ಜೀವ ಕಂಠ ಹಾಡಿಗೆ ಜೀವ ತುಂಬಿದೆ.
ಮೋಕ್ಷ ಸಿನಿಮಾಸ್ ಬ್ಯಾನರ್ ನಲ್ಲಿ ತಯಾರಾಗಿರುವ ಈ ಸಿನಿಮಾ ತುಂಬ ಕುತೂಹಲಕಾರಿಯಾದ ಚಿತ್ರಕತೆಯನ್ನು ಹೊಂದಿದೆ. ಅದನ್ನು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ವೈರಲಾಗುತ್ತಿರುವ ಈ ಸಿನಿಮಾದ ಟ್ರೇಲರ್ ಸಾಬೀತು ಪಡಿಸಿದೆ. ಸಾವು ಅಂತ್ಯವಲ್ಲ, ಮರು ಹುಟ್ಟು ಇದೆ. ಆದರೆ ಈ ಮರುಹುಟ್ಟಿನ ನಡುವೆ ಇರುವ ಕಾಲಾವಕಾಶದಲ್ಲಿ ಏನು ನಡೆಯುತ್ತದೆ? ಅದನ್ನು ಈ ಸಿನಿಮಾದಲ್ಲಿ ತೋರಿಸಿರುವ ಬಗ್ಗೆ ಟ್ರೇಲರ್ ನಲ್ಲಿ ದಟ್ಟ ಸೂಚನೆ ಇದೆ. ಹಾಗಾಗಿಯೇ ಇದೊಂದು ದೆವ್ವದ ಚಿತ್ರವೇ ಇರಬೇಕು ಎನ್ನುವ ನಿಲುವು ಪ್ರೇಕ್ಷಕರಲ್ಲಿ ಮೂಡುತ್ತದೆ.
ನಿರ್ದೇಶಕರ ಪ್ರಕಾರ ಸೃಷ್ಟಿಯ ಬಳಿಕ ನಾವು ಕಾಲಕ್ಕೆ ತಕ್ಕಂತೆ ಪಂಚಭೂತ ಮತ್ತು ಋತುಗಳಲ್ಲಿ ಆಗುತ್ತಿರುವ ಬದಲಾವಣೆಗಳನ್ನು ನೋಡುತ್ತಿದ್ದೇವೆ. ಹಾಗಾದರೆ ಇದೆಲ್ಲವನ್ನು ನಿಯಂತ್ರಿಸುತ್ತಿರುವುದು ಯಾರು? ಈ ಬಗ್ಗೆ ಆಳವಾಗಿ ಯೋಚಿಸಿದಾಗ ನಾವು ದೇವರ ಬಗ್ಗೆ ಅರಿತುಕೊಂಡಿದ್ದು ಎಷ್ಟೊಂದು ಕಡಿಮೆ ಎನ್ನುವ ಅರಿವಾಗುತ್ತದೆ. ಈ ಎಲ್ಲ ಅಂಶಗಳನ್ನು ಅಘೋರ ಸಿನಿಮಾದ ಕತೆ, ಚಿತ್ರಕತೆಯನ್ನು ರಚಿಸಲಾಗಿದೆ. ಮುಖ್ಯವಾಗಿ ಕರ್ಮವು ಮನುಷ್ಯರನ್ನು ಮಾತ್ರವಲ್ಲ, ದೇವರನ್ನು ಕೂಡ ಹೇಗೆ ಹಿಂಬಾಲಿಸಿತ್ತು ಎನ್ನುವುದರ ಉದಾಹರಣೆಯೊಂದಿಗೆ ಚಿತ್ರದ ಸಂದೇಶವನ್ನು ಪ್ರೇಕ್ಷಕರ ಮುಂದೆ ಇಡಲು ಚಿತ್ರತಂಡ ಸನ್ನದ್ಧವಾಗಿದೆ. ಅದಕ್ಕೆ ಪೂರಕವಾದ ಘಟನೆಯನ್ನು ರಾಮಾಯಣ ಮತ್ತು ಮಹಾಭಾರತಗಳ ಮೂಲಕ ನೀಡಲಾಗಿದೆ. ರಾಮಾಯಣದಲ್ಲಿ ಶ್ರಿರಾಮನು ಅಡಗಿ ನಿಂತು ವಾಲಿಯನ್ನು ಕೊಲ್ಲುತ್ತಾನೆ. ಈ ವಂಚನೆಗೆ ಶಾಸ್ತಿ ಮಾಡಲು ವಾಲಿಯು ಬೇಡನ ವೇಷದಲ್ಲಿ ಮರುಜನ್ಮ ಪಡೆಯುತ್ತಾನೆ. ಆಗ ಶ್ರೀಕೃಷ್ಣನ ಅವತಾರದಲ್ಲಿದ್ದ ರಾಮನನ್ನು ಬೇಡನಾದ ವಾಲಿ ಕೊಲ್ಲುವ ದೃಶ್ಯವನ್ನು ನೆನಪಿಸಲಾಗುತ್ತದೆ. ಅಂದರೆ ಕಾರಣಗಳೇನೇ ಇದ್ದರೂ, ದೇವರು ಕೂಡ ಮಾಡಿದ ಕರ್ಮಗಳ ಫಲವನ್ನು ಅನುಭವಿಸಲೇಬೇಕು ಎನ್ನುವುದು ಚಿತ್ರದ ಕತೆ ಹೇಳುವ ಸಿದ್ಧಾಂತ.
ಬಿಡುಗಡೆಗೂ ಮೊದಲು 32 ಪ್ರಶಸ್ತಿಗಳು!
ಹಾಗಂತ `ಅಘೋರ’ ದೇವರನ್ನು ಕಮರ್ಷಿಯಲ್ ರೂಪಗೊಳಿಸಿದ ಚಿತ್ರ ಎಂದು ಭಾವಿಸಬೇಕಿಲ್ಲ. ಯಾಕೆಂದರೆ, ಚಿತ್ರದ ವಸ್ತು, ಗುಣ ಮಟ್ಟ ಮತ್ತು ಸಾರುವ ಸಂದೇಶಗಳಿಗಾಗಿ ರಾಷ್ಟ್ರ, ಅಂತಾರಾಷ್ಟ್ರ ಮಟ್ಟದಲ್ಲಿ ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿರುವ ಸಿನಿಮಾ ಇದು. 16ಕ್ಕೂ ಅಧಿಕ ಅಂತಾರಾಷ್ಠ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡ ಸಿನಿಮಾ ಇದು. ಬೆಸ್ಟ್ ಡೆಬ್ಯುಟ್ ಡೈರೆಕ್ಷನ್, ಶ್ರೇಷ್ಠ ಚಿತ್ರಕತೆ, ಶ್ರೇಷ್ಠ ಛಾಯಾಗ್ರಹಣ, ಶ್ರೇಷ್ಠ ನಟ, ಶ್ರೇಷ್ಠ ಖಳ ನಟ, ಶ್ರೇಷ್ಠ ಖಳನಟಿ, ಶ್ರೇಷ್ಠ ಪ್ರಸಾದನ ವಿವಿಧ ವಿಭಾಗಗಳಲ್ಲಿ 32 ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ.
ನಿರ್ದೇಶಕರಾದ ನೃತ್ಯ ನಿರ್ದೇಶಕ!
ನೃತ್ಯ ನಿರ್ದೇಶನದಿಂದ ಚಿತ್ರ ನಿರ್ದೇಶನಕ್ಕೆ ಮುಂದಾದವರ ಪಟ್ಟಿಯಲ್ಲಿ ಪ್ರಭುದೇವ ಅಗ್ರಗಣ್ಯರು. ಇದೀಗ ಅದೇ ಸಾಲಿನಲ್ಲಿ ಪ್ರಮೋದ್ ರಾಜ್ ಎನ್ ಎಸ್ ಕೂಡ ಸೇರಿಕೊಂಡಿದ್ದಾರೆ. ಶ್ರೇಷ್ಠ ನಿರ್ದೇಶನದ ಪ್ರಶಸ್ತಿ ಕೂಡ ಲಭಿಸಿರುವುದು ಇವರಲ್ಲಿದ್ದ ಪ್ರತಿಭೆಗೆ ಕನ್ನಡಿಯಾಗಿದೆ. ಚಿತ್ರದಲ್ಲಿ ಅವಿನಾಶ್ ಜೊತೆಗೆ ಅಶೋಕ್ ಶರ್ಮ, ಪುನೀತ್ ಗೌಡ, ರಚನಾ ದಶರಥ್, ದ್ರವ್ಯ ಶೆಟ್ಟಿ ಮೊದಲಾದವರು ನಟಿಸಿದ್ದಾರೆ.ನಾಗೇಂದ್ರ ಪ್ರಸಾದ್ ಸಂಗೀತ, ಸಾಹಿತ್ಯ, ಸಂಜಿತ್ ಹೆಗ್ಡೆ ಮತ್ತು ಸರಿಗಮಪ ಖ್ಯಾತಿಯ ಹನುಮಂತ ಹಾಗೂ ಸಚಿನ್ ಹಾಡಿದ್ದಾರೆ. ಮಾಸ್ ಮಾದ ಚಿತ್ರದ ಸಾಹಸ ನಿರ್ದೇಶಕರು. ಪುನೀತ್ ಎಂ ಎನ್ ಚಿತ್ರದ ನಿರ್ಮಾಪಕರು. ಇದೇ ಫ್ರೆಬ್ರವರಿ 25ರಂದು ಸಿನಿಮಾ ತೆರೆಗೆ ತರಲು ಯೋಜನೆ ಹಾಕಲಾಗಿದೆ.