ಸಾಮಾನ್ಯವಾಗಿ ಸ್ಟಾರ್ ಸಿನಿಮಾಗಳು ಬಿಡುಗಡೆಯಾದೊಡನೆ ಪೈರಸಿಯಾಗುವುದನ್ನು ನೋಡಿರುತ್ತೇವೆ. ಇದೀಗ ಹೊಸಬರ ಸಿನಿಮಾವಾದ ‘ಅಘೋರ’ ಚಿತ್ರಕ್ಕೂ ಇದೇ ಪರಿಸ್ಥಿತಿ ಬಂದಿರುವುದು ವಿಪರ್ಯಾಸ. ಅದಕ್ಕೆ ಅಘೋರ ಮೂಡಿಸಿರುವ ಕ್ರೇಜ್ ಕಾರಣವಾಗಿರಬಹುದು ಎನ್ನುವುದು ಚಿತ್ರತಂಡದ ಅನಿಸಿಕೆ.
ಸ್ಟಾರ್ ಸಿನಿಮಾಗಳು ಪೈರಸಿಯಲ್ಲಿ ಬಂದರೂ ಅದನ್ನು ನೋಡದ ಅಭಿಮಾನಿಗಳಿದ್ದಾರೆ. ಅದೇ ರೀತಿ ಅಘೋರ ಚಿತ್ರ ಕೂಡ ಪೈರಸಿಗೆ ಬದಲು ಥಿಯೇಟರಲ್ಲೇ ನೋಡುವಂತಿದೆ. ಯಾಕೆಂದರೆ ಚಿತ್ರದ ಹೈಲೈಟ್ ಆಗಿರುವ ಛಾಯಾಗ್ರಹಣ ಮತ್ತು ವಿಶುಯಲ್ ಎಫೆಕ್ಟ್ಸ್ ಅನ್ನು ಥಿಯೇಟರಲ್ಲೇ ನೋಡಿದರೆ ಆಕರ್ಷಣೆ ಆಗಲಿದೆ.
ಮಾರ್ಚ್ 4ರಂದು ರಿಲೀಸ್ ಆಗಿರುವ ಅಘೋರ ಚಿತ್ರಕ್ಕೆ ಪ್ರೇಕ್ಷಕರು ಮಾತ್ರವಲ್ಲ ವಿಮರ್ಶಕರಿಂದಲೂ ಉತ್ತಮ ಪ್ರಶಂಸೆ ದೊರೆತಿದೆ. ಹಾರರ್ ಸಿನಿಮಾವನ್ನು ಇಷ್ಟಪಡುವ ಪ್ರೇಕ್ಷಕ ವರ್ಗದಿಂದ ಚಪ್ಪಾಳೆ ಗಿಟ್ಟಿಸಿದಂಥ ಚಿತ್ರ ಇದು
ಬಿಡುಗಡೆಯಾದ ಬಹುತೇಕ ಕಡೆಗಳಲ್ಲಿ ಹೌಸ್‍ಫುಲ್ ಪ್ರದರ್ಶನ ಕಾಣುತ್ತಿದೆ.
ಚಿತ್ರ ದೊಡ್ಡ ದೊಡ್ಡ ಪರಭಾಷಾ ಸಿನಿಮಾಗಳಿಗೂ ಸವಾಲು ಹಾಕಿರುವ ಕನ್ನಡ ಸಿನಿಮಾ. ಆದರೆ ಪೈರಸಿಯಿಂದಾಗಿ ಚಿತ್ರತಂಡಕ್ಕೆ ಸಂಕಷ್ಟ ಎದುರಾಗಿದೆ. ಚಿತ್ರ ತಂಡ ಇದುವರೆಗು 500 ಕ್ಕೂ ಹೆಚ್ಚು ಪೈರಸಿ ಲಿಂಕಗಳನ್ನು ಡಿಲಿಟ್ ಮಾಡಿಸಿದೆ. ಡಿಲೀಟ್ ಮಾಡಿದ ನಂತರವು ಪದೇ ಪದೆ ಅಪ್‍ಲೋಡ್ ಆಗುತ್ತಿರುವ ಸಿನಿಮಾದ ವಿಡಿಯೊಗಳು ಚಿತ್ರತಂಡಕ್ಕೆ ತಲೆನೋವಾಗಿದೆ.
ಅಘೋರ ಇತ್ತೀಚಿನ ವರ್ಷಗಳಲ್ಲಿ ಬಂದ ಅತ್ಯುತ್ತಮ ಹಾರರ್ ಸಿನಿಮಾ ಎಂಬ ಹೆಗ್ಗಳಿಕೆ ಗಳಿಸಿತ್ತು. ಹಲವು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು, ವಿವಿಧ ವಿಭಾಗಗಳಲ್ಲಿ 16ಕ್ಕೂ ಹೆಚ್ಚು ಪ್ರಶಸ್ತಿಗಳಿಗೆ ಭಾಜನವಾಗಿರುವ ಸಿನಿಮಾ ಇದು.
ಪ್ರಮೋದ್ ರಾಜ್ ನಿರ್ದೇಶನದ ಈ ಚೊಚ್ಚಲ ಚಿತ್ರಕ್ಕೆ ಸಿನಿ ಪ್ರಿಯರಿಂದ ಮೆಚ್ಚುಗೆ ದೊರಕಿತ್ತು. ಪುನೀತ್ ಗೌಡ ನಿರ್ಮಿಸಿ, ನಾಯಕನಾಗಿದ್ದು, ಅವರ ನಟನೆಗೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.
ಚಿತ್ರದ ಹೈಲೈಟ್ ಕೆಜಿಎಫ್, ಮಿ. & ಮಿಸಸ್ ರಾಮಾಚಾರಿ ಖ್ಯಾತಿಯ ಅಶೋಕ್ ಶರ್ಮ ಆಗಿದ್ದರು.
ಅಘೋರ ಪಾತ್ರದಲ್ಲಿ ವಿಭಿನ್ನ ಗೆಟಪ್‍ನಲ್ಲಿ ಮಿಂಚಿರುವ ಹಿರಿಯ ಪೋಷಕ ನಟ ಅವಿನಾಶ್, ರಚನಾ ದಶರಥ್ ಮತ್ತು ದ್ರವ್ಯಾ ಶೆಟ್ಟಿ ಒಬ್ಬರಿಗೊಬ್ಬರು ಪೈಪೋಟಿಗೆ ಬಿದ್ದಂತೆ ನಟಿಸಿದ್ದಾರೆ. ಈಗಾಗಲೇ ವೈರಲ್ ಆಗಿರುವ ಚಿತ್ರದ ಪಾರ್ಟಿ ಸಾಂಗ್ ಚಿತ್ರದ ಜನಪ್ರಿಯತೆ ಹೆಚ್ಚಿಸಲು ಕಾರಣವಾಗಿದೆ.