ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್ ಚಾಪ್ಟರ್ 2 ಸಿನಿಮಾ ಇಂದು ಮುಂಜಾನೆಯಿಂದಲೇ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಚಿತ್ರದ ಕೊನೆಯಲ್ಲಿ ಚಾಪ್ಟರ್ ಮೂರು ಇದೆ ಎನ್ನುವುದರ ಸ್ಪಷ್ಟ ಸೂಚನೆ ನೀಡಲಾಗಿದೆ.
ಕೆಜಿಎಫ್ ಚಾಪ್ಟರ್ ಮೂರು ಬರುತ್ತಾ ಎನ್ನುವ ಬಗ್ಗೆ ಈಗಾಗಲೇ ಸಾಕಷ್ಟು ಪ್ರಶ್ನೆಗಳನ್ನು ನಿರ್ದೇಶಕ ಪ್ರಶಾಂತ್ ನೀಲ್ ಹಾಗೂ ಯಶ್ ಅವರಲ್ಲಿ ಕೇಳಲಾಗಿತ್ತು. ಆದರೆ ಆವಾಗಲೆಲ್ಲ ಒಂದೇ ಚಿತ್ರಕ್ಕಾಗಿ ಇನ್ನಷ್ಟು ವರ್ಷ ನೀಡಲು ಸಾಧ್ಯವಿಲ್ಲ ಎಂದು ತಮಾಷೆಯಿಂದ ಹಾರಿಕೆಯ ಉತ್ತರ ನೀಡಿದ್ದರು. ಆದರೆ ಇದೀಗ ಚಿತ್ರ ಕೊನೆಯಲ್ಲಿ ರಾಕಿ ಭಾಯ್ ನ ಭೂಗತ ಜಗತ್ತಿನ ಇನ್ನಷ್ಟು ಕತೆಗಳು ಚಾಪ್ಟರ್ ಮೂರರಲ್ಲಿದೆ ಎನ್ನುವ ಸೂಚನೆ ನೀಡಲಾಗಿದೆ.
ನಿರೀಕ್ಷೆಯಂತೆ ಕೆಜಿಎಫ್ ಚಾಪ್ಟರ್ ಎರಡರ ಅಂತ್ಯದಲ್ಲಿ ರಾಕಿಭಾಯ್ ಅಂತ್ಯವಾಗಿದೆ. ಹಾಗಾದರೆ ಕತೆಯನ್ನು ಹೇಗೆ ಮುಂದುವರಿಸುತ್ತಾರೆ ಎನ್ನುವ ಸಂದೇಹ ಸಹಜ. ಚಾಪ್ಟರ್ ಒಂದರಲ್ಲೇ ಸಾವಿಗೀಡಾದ ರಾಕಿಯ ತಾಯಿ, ಎರಡರಲ್ಲಿಯೂ ಕಾಣಿಸಿದ್ದಾರೆ. ಅದೇ ರೀತಿ ಚಾಪ್ಟರ್ ಎರಡರಲ್ಲೇ ಕೊನೆಯಾದ ರಾಕಿಯ ಬದುಕಿನ ಫ್ಲ್ಯಾಶ್ ಬ್ಯಾಕ್ ಘಟನೆಗಳು ಚಾಪ್ಟರ್ ಮೂರರಲ್ಲಿ ಇರಲಿವೆ.
ವಿದೇಶದಲ್ಲಿ ರಾಕಿ!
ಕೆಜಿಎಫ್ ಚಾಪ್ಟರ್ ಎರಡರ ಅಂತ್ಯದಲ್ಲಿ ರಾಕಿಗಾಗಿ ಭಾರತೀಯ ಸಶಸ್ತ್ರ ಪಡೆ ಬೆನ್ನುಬಿದ್ದಂತೆ ವಿದೇಶದಿಂದಲೂ ಪೊಲೀಸರು ಬೇಟೆಯಾಡುತ್ತಾರೆ. ಅವರು ರಾಕಿಯನ್ನು ಹುಡುಕಾಡಲು ಕಾರಣ ಏನು ಎಂದು ನೋಡಿದಾಗ ವಿದೇಶದಲ್ಲಿ ರಾಕಿ ಕ್ರೈಮ್ ನಡೆಸಿರುವುದಾಗಿ ತಿಳಿದು ಬರುತ್ತದೆ.
ಕೆಜಿಎಫ್ ಗೆ ಬಂದ ಮೇಲೆ ಕೆಲವು ವರ್ಷಗಳ ಕಾಲ ರಾಕಿ ವಿದೇಶಕ್ಕೂ ಹೋಗಿರುತ್ತಾನೆ. ಹಾಗಾಗಿ
ರಾಕಿ ಭಾಯ್ ಫ್ಯಾಶ್ ಬ್ಯಾಕ್ ಕತೆ ಪೂರ್ತಿ ವಿದೇಶದಲ್ಲಿ ನಡೆಯಲಿದೆ.
ಆದರೆ ವಿದೇಶದಲ್ಲಿ ನಡೆಯುವ ರಾಕಿಭಾಯ್ ಕತೆಯನ್ನು ಹೇಗೆ ಕೆಜಿಎಫ್ ಹೆಸರಲ್ಲಿ ಮುಂದುವರಿಸುತ್ತಾರೆ ಎನ್ನುವುದಕ್ಕೆ ನಿರ್ದೇಶಕರೇ ಉತ್ತರಿಸಬೇಕು.