ರಿಧಿ ದಾವಣಗೆರೆಯ ಹುಡುಗಿ. ಲಂಗ ದಾವಣಿ ತೊಟ್ಟರೆ ವಾರಿಧಿ! ಮಾಡರ್ನ್ ಡ್ರೆಸ್ ನಲ್ಲಿ ಬೇಬಿ ಡಾಲ್!! ಎರಡು ರೀತಿಯಲ್ಲೂ ಆಕರ್ಷಿಸಬಲ್ಲ ಈಕೆಯ ಮೈ ಬಣ್ಣ ಕಂಡೇ ಬೆಣ್ಣೆ ಅಂತಾರೆ ಸ್ನೇಹಿತೆಯರು. ಮೂಲತಃ ಇಲೆಕ್ಟ್ರಿಕಲ್ ಇಂಜಿನಿಯರ್. ಮೂರು ನಾಲ್ಕು ವರ್ಷಗಳ ಕಾಲ ಡಿಜಿಟಲ್ ಮಾರ್ಕೆಟಿಂಗ್ ವಿಭಾಗದಲ್ಲಿ ಕೆಲಸ ಮಾಡಿದ್ದು, ಇದೀಗ ಮಾಡೆಲಿಂಗ್ ಮೇಲಿನ ಆಸಕ್ತಿಯಿಂದಾಗಿ ವೃತ್ತಿಯನ್ನು ತೊರೆದಿದ್ದಾರೆ. ನೋಟ, ಮೈಮಾಟದಲ್ಲಷ್ಟೇ ಅಲ್ಲ; ಮಾತು ಪ್ರತಿಭೆಯಲ್ಲೂ ಕೊರತೆಯೇ ಇರದ ಸಾಧನೆಯ ಒರತೆ ಈ ಸುಂದರಿ.
ಮಾಡೆಲಿಂಗ್ ಮೇಲೆ ನಿಮಗೆ ಆಸಕ್ತಿ ಮೂಡಿದ್ದು ಹೇಗೆ?
ಕಾಲೇಜ್ ದಿನಗಳಿಂದಲೇ ಮಾಡೆಲಿಂಗ್ ಅಂದರೆ ನನಗೆ ಪ್ಯಾಷನ್. ಸ್ಪೋರ್ಟ್ಸ್, ಅಥ್ಲೆಟಿಕ್ಸ್ ನಲ್ಲಿ ಹೇಗೆ ಸಕ್ರಿಯವಾಗಿದ್ದೆನೋ, ಹಾಗೆಯೇ ಮಾಡೆಲಿಂಗ್ ನಲ್ಲಿಯೂ ಇದ್ದೆ. 2017ರಲ್ಲಿ ಮಿಸ್ ನಾರ್ತ್ ಕರ್ನಾಟಕ ಆಗಿ ಬಿರುದು ದೊರಕಿತ್ತು. ತುಮಕೂರು ಜಿಲ್ಲೆಯ ಶೋ ಸ್ಟಾಪರ್ ಆಗಿಯೂ ಗುರುತಿಸಿಕೊಂಡಿದ್ದೆ. ಈಗ ಫ್ಯಾಷನ್ ಶೋಗಳಲ್ಲಿ ತೀರ್ಪುಗಾರ್ತಿಯಾಗಿ ಮುಂಬೈ, ದೆಹಲಿ, ಲಖ್ನೋ, ಕೊಯಂಬತ್ತೂರು, ಹೈದರಾಬಾದ್ ಗಳಲ್ಲಿ ಶೋಗಳಲ್ಲಿ ಪಾಲ್ಗೊಂಡ ಅನುಭವ ಇದೆ.
ಮಾಡೆಲ್ ಆಗಿರುವ ಕಾರಣ ಸಿನಿಮಾ ಆಫರ್ಸ್ ಗೆ ಕೊರತೆ ಇರಲಿಕ್ಕಿಲ್ಲ ಅಲ್ಲವೇ?
ನನಗೆ ಹೊಸಬರ ತಂಡಗಳಿಂದ ಆಫರ್ ಬರುತ್ತಿವೆ. ಆದರೆ ನನಗೆ ತಂಡದ ಬಗ್ಗೆ ಏನೂ ಗೊತ್ತಿರದ ಕಾರಣ ನಾನು ಅವುಗಳನ್ನು ಒಪ್ಪಿಕೊಳ್ಳುವುದಿಲ್ಲ. ಯಾಕೆಂದರೆ ನಮ್ಮಲ್ಲಿ ಬರುವ ಸಾಕಷ್ಟು ಹೊಸಬರ ಸಿನಿಮಾಗಳು ಬಂದಿದ್ದು ಹೋಗಿದ್ದು ಯಾರಿಗೂ ಗೊತ್ತಾಗುವುದಿಲ್ಲ. ದೊಡ್ಡ ಬ್ಯಾನರ್ ಚಿತ್ರ ಸಿಕ್ಕರೆ ಅಥವಾ ಒಳ್ಳೆಯ ಸ್ಟೋರಿ ಬಂದರೆ ಖಂಡಿತವಾಗಿ ಮಾಡೋಣ ಅಂತ ಇದ್ದೀನಿ.
ನಟನೆಗೆಂದು ನೀವು ಮಾಡಿಕೊಂಡಿರುವ ತಯಾರಿ ಏನು..?
ನಾನು ಕ್ಲಾಸಿಕಲ್ ಡಾನ್ಸ್ ಕಲಿತಿದ್ದೀನಿ. ವೇದಿಕೆಗಳಲ್ಲಿ ಭರತನಾಟ್ಯ ಮಾಡುತ್ತಿರುತ್ತೇನೆ. ಮಾಡೆಲಿಂಗ್ ನಲ್ಲಿ ಮಾಡರ್ನ್ ಡ್ರೆಸ್ ತೊಡುವಂತೆ ಕ್ಲಾಸಿಕಲ್ ಡಾನ್ಸ್ ಗೆ ಸಂಪ್ರದಾಯಸ್ಥ ಉಡುಗೆಯಲ್ಲೂ ಕಂಫರ್ಟ್ ಆಗಿ ಕಾಣಿಸಬಲ್ಲೆ. ಅಲ್ಲಿಂದಲೇ ವೈವಿಧ್ಯಮಯ ಭಾವ, ಪಾತ್ರಗಳನ್ನು ಹೇಗೆ ನಿರ್ವಹಿಸುತ್ತೇನೆಂದು ತೋರಿಸಬಲ್ಲೆ.
ಇದೇ ರೀತಿ ಯಾವೆಲ್ಲ ವೈವಿಧ್ಯಮಯ ಹವ್ಯಾಸಗಳಿವೆ ನಿಮ್ಮಲ್ಲಿ?
ನಮ್ಮದೇ ಒಂದು ಫೌಂಡೇಶನ್ ಇದೆ. ರಿದ್ಧಿ ಸಿದ್ಧಿ ಎಂದು ಅದರ ಹೆಸರು. ಅದರ ಮೂಲಕ ವೃದ್ಧಾಶ್ರಮ ಮತ್ತು ಅನಾಥಾಶ್ರಮಗಳನ್ನು ನಡೆಸುತ್ತೇನೆ. ಪೆಯಿಂಟಿಂಗ್ಸ್ ಮಾಡ್ತೀನಿ. ಬೈಕ್ ರೈಡ್ ಮಾಡ್ತೀನಿ. ಎಲ್ಲ ಫೋರ್ ವೀಲರ್ ಓಡಿಸ್ತೀನಿ. ಸೋಲೊ ಟ್ರಿಪ್ ಹೋಗ್ತಿರ್ತೀನಿ. ಲಕ್ಸುರಿ ಕಾರುಗಳ ಬಗ್ಗೆ ತಿಳ್ಕೊಳ್ಳೋದು ಮತ್ತೊಂದು ಹವ್ಯಾಸ. ಕುದುರೆ ಸವಾರಿ ಕೂಡಾ ಮಾಡುತ್ತೇನೆ. ಇವೆಲ್ಲದರ ಜೊತೆಗೆ ಚೆನ್ನಾಗಿ ಅಡುಗೆ ಕೂಡ ಮಾಡ್ತೀನಿ. ಹೆಣ್ಣುಮಕ್ಕಳಾದರೇನು? ಎಲ್ಲವನ್ನು ಕಲಿತಿರಬೇಕು ಅನ್ನೋದು ನನ್ನ ಅಭಿಪ್ರಾಯ.
ಮನೆಯಲ್ಲಿನ ಪ್ರೋತ್ಸಾಹದ ಬಗ್ಗೆ ಹೇಳಿ
ಕುಟುಂಬದಿಂದ ಪ್ರೋತ್ಸಾಹ ಇರದಿದ್ದರೆ ನಾನು ಈ ಹಂತಕ್ಕೆ ಬರುವುದೇ ಸಾಧ್ಯವಿರಲಿಲ್ಲ. ನನ್ನ ತಂದೆ ಸರ್ಕಾರಿ ಕೆಲಸದಲ್ಲಿದ್ದಾರೆ. ತಾಯಿ ಗೃಹಿಣಿ. ತಂಗಿ ಸಿವಿಲ್ ಇಂಜಿನಿಯರ್. ಇವರೆಲ್ಲರೂ ನನ್ನೆಲ್ಲ ತರಲೆಗಳನ್ನು ಕ್ಷಮಿಸಿ ಬೆಂಬಲವಾಗಿ ನಿಂತಿದ್ದಾರೆ.
ಸದ್ಯಕ್ಕೆ ಯಾವುದಾದರೂ ಪ್ರಾಜೆಕ್ಟ್ ನಲ್ಲಿ ತೊಡಗಿಸಿಕೊಂಡಿದ್ದೀರ?
‘ಲಖ್ನೋ ಇಷ್ಕ್’ ನಿರ್ದೇಶಕ ಆನಂದ್ ರಾವುತ್ ಹೊಸ ಆಲ್ಬಂ ಪ್ರಾಜೆಕ್ಟ್ ಬಗ್ಗೆ ಮಾತುಕತೆ ನಡೆಯುತ್ತಿದೆ. ಉಳಿದಂತೆ ಕ್ಯಾಟಲಗ್ ಜಾಹೀರಾತುಗಳ ಫೊಟೊ ಶೂಟ್ ನಡೆಯುತ್ತಿರುತ್ತವೆ.
ನಿಮ್ಮ ಜೀವನದ ಗುರಿ ಏನು?
ಜೀವನ ತುಂಬ ಚಿಕ್ಕದು. ಮುಗಿಯುವುದರೊಳಗೆ ಕೋಶ ಓದಿ, ದೇಶ ಸುತ್ತೋದೇ ಮುಖ್ಯ. ಜಗತ್ತಿನ ಒಂದು ಪರ್ಸೆಂಟ್ ಕೂಡ ನೋಡದೆ ಸಾಯುವುದಕ್ಕಿಂತ ಸಾಕಷ್ಟು ವಿದೇಶಗಳನ್ನು ಸುತ್ತಬೇಕು. ಲ್ಯಾಂಬೊರ್ಗಿನಿಯಂಥ ಕಾರು ಕೊಳ್ಳಬೇಕು. ಮದುವೆಯ ಬಳಿಕ ವಿದೇಶದಲ್ಲೆಲ್ಲಾದರೂ ಸೆಟಲಾಗಿ ಅಲ್ಲಿನ ಜೀವನ ರೀತಿಯನ್ನು ಅರಿಯುವುದು.. ಹೀಗೊಂದಷ್ಟು ಕನಸುಗಳಿವೆ.