
ಕನ್ನಡ ಚಿತ್ರರಂಗದ ಯುವ ನಿರ್ದೇಶಕಿ ಮತ್ತು ನಟ ನಿಹಾಲ್ ವೈವಾಹಿಕ ಬದುಕಿಗೆ ಕಾಲಿಟ್ಟಿದ್ದಾರೆ. ಬೆಂಗಳೂರಿನ ಮಲ್ಲೇಶ್ವರದ ಟಿಟಿಡಿ ಕಲ್ಯಾಣ ಮಂಟಪದಲ್ಲಿ ಇಂದು ವಿವಾಹ ಸಮಾರಂಭ ನೆರವೇರಿತು.
ನಟಿಯರಾದ ವಿನಯಾ ಪ್ರಸಾದ್, ಪ್ರಥಮಾ ಪ್ರಸಾದ್ ಸೇರಿದಂತೆ ಚಿತ್ರರಂಗದ ಗಣ್ಯರು ಈ ಸಮಾರಂಭದಲ್ಲಿ ಪಾಲ್ಗೊಂಡು ಶುಭಕೋರಿದರು. ಫೆಬ್ರವರಿ 17ರಂದು ಧಾರವಾಡದ ವೀರೇಂದ್ರ ಹೆಗಡೆ ಕಲಾಕ್ಷೇತ್ರದಲ್ಲಿ (ದಂಪತಿಯ ತವರೂರಿನಲ್ಲಿ)ಆರತಕ್ಷತೆ ನೆರವೇರಲಿದೆ.

ರಿಷಿಕಾ ಶರ್ಮ 2018ರಲ್ಲಿ ಟ್ರಂಕ್ ಸಿನಿಮಾ ನಿರ್ದೇಶಿಸಿ ಸುದ್ದಿಯಾಗಿದ್ದರು. ಚಿತ್ರದಲ್ಲಿ ಪ್ರಧಾನ ಪಾತ್ರವಹಿಸಿದ್ದ ನಿಹಾಲ್ ಈಗ ರಿಷಿಕಾ ನಿಜ ಜೀವನಕ್ಕೆ ನಾಯಕರಾಗಿದ್ದಾರೆ. ಬಳಿಕ ಇದೇ ಜೋಡಿ ‘ವಿಜಯಾನಂದ’ ಸಿನಿಮಾ ಮೂಲಕವೂ ಪ್ರೇಕ್ಷಕರ ಮನಸೆಳೆದಿತ್ತು. ಉದ್ಯಮಿ, ರಾಜಕಾರಣಿ ವಿಜಯ್ ಸಂಕೇಶ್ವರ್ ಪಾತ್ರದಲ್ಲಿ ನಿಹಾಲ್ ನಟಿಸಿದ್ದರೆ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ ಕೀರ್ತಿ ರಿಷಿಕಾ ಶರ್ಮರದ್ದಾಗಿತ್ತು. ವರ್ಷಗಳ ಹಿಂದೆ ಇಬ್ಬರೂ ಸೇರಿ ನಿರ್ಮಾಣ ಸಂಸ್ಥೆಯೊಂದನ್ನು ಹುಟ್ಟುಹಾಕಿದ್ದರು.
9 ವರ್ಷಗಳ ಪ್ರೇಮ ಸಾಫಲ್ಯ!
ರಿಷಿಕಾ ಮತ್ತು ನಿಹಾಲ್ ಪ್ರೀತಿ, ಪ್ರೇಮ, ಪ್ರಣಯ ಶುರುವಾಗಿ ಒಂಬತ್ತು ವರ್ಷಗಳೇ ಕಳೆದಿವೆ. ಆದರೆ ತಮ್ಮಿಬ್ಬರ ನಡುವೆ ಇಂಥದೊಂದು ಸಂಬಂಧ ಇದೆ ಎನ್ನುವುದನ್ನು ಇಬ್ಬರೂ ಎಲ್ಲೂ ತೋರಿಸಿಕೊಟ್ಟಿರಲಿಲ್ಲ. ಜೊತೆಜೊತೆಯಲ್ಲೇ ಪ್ರಾಜೆಕ್ಟ್ ನಡೆಯುತ್ತಿದ್ದರೂ ಇಬ್ಬರ ನಡುವೆ ಸ್ನೇಹವಷ್ಟೇ ಇದೆ ಎನ್ನುವುದು ಎಲ್ಲರ ನಂಬಿಕೆಯಾಗಿತ್ತು. ಸ್ನೇಹದಾಚೆಗಿನ ವರ್ತನೆ ತೋರದ ವೃತ್ತಿಪರತೆಯನ್ನು ಇಬ್ಬರೂ ಕಾಯ್ದುಕೊಂಡಿದ್ದರು. “ನಿಜ ಹೇಳಬೇಕೆಂದರೆ ತಮ್ಮ ತಮ್ಮ ಮನೆಯಲ್ಲಿ ಕೂಡ ಎರಡು ವರ್ಷದ ಹಿಂದೆಯಷ್ಟೇ ಈ ಸತ್ಯ ಹೊರಗಿಟ್ಟಿದ್ದೆವು” ಎಂದು ರಿಷಿಕಾ ಸಿನಿಕನ್ನಡದ ಜೊತೆಗೆ ಮನಸು ಬಿಚ್ಚಿದ್ದಾರೆ.

‘ಕನ್ನಡ ಚಿತ್ರರಂಗದ ಭೀಷ್ಮ’ ಎಂದೇ ಬಿರುದಾಂಕಿತರಾದ ಜಿ.ವಿ ಅಯ್ಯರ್ ರಿಷಿಕಾ ಶರ್ಮ ತಾತ ಎನ್ನುವುದನ್ನು ಸ್ಮರಿಸಬಹುದು.
ರಿಷಿಕಾ ನಿಹಾಲ್ ವಿವಾಹದೊಂದಿಗೆ ಕನ್ನಡ ಚಿತ್ರರಂಗದ ಸೆಲೆಬ್ರಿಟಿ ದಂಪತಿಗಳ ಸಾಲಿಗೆ ಮತ್ತೊಂದು ಹೊಸ ಸೇರ್ಪಡೆಯಾಗಿದೆ. ನವಜೋಡಿಗೆ ಸಿನಿಕನ್ನಡದ ಶುಭಾಶಯಗಳು.