ಮರೆಯದ ಗಾಯಗಳಿಗೆ ಸಾಕ್ಷಿಯಾಗುವ ‘ಫೋಟೋ’

ಚಿತ್ರ : ಫೋಟೋ
ನಿರ್ದೇಶನ: ಉತ್ಸವ್ ಗೋನವಾರ
ನಿರ್ಮಾಣ: ಮಸಾರಿ ಟಾಕೀಸ್‌
ತಾರಾಗಣ: ಮಹಾದೇವ ಹಡಪದ್, ಸಂಧ್ಯಾ ಅರಕೆರೆ, ವೀರೇಶ್ ಗೋನವಾರ ಮತ್ತಿತರರು

ಈ ಸಿನಿಮಾಗೆ ಇಟ್ಟಿರುವ ಫೋಟೋ ಎನ್ನುವ ಹೆಸರೇ ನಮ್ಮ ಯೋಚನೆಗಳನ್ನು ನಿಲ್ಲಿಸಿಬಿಡುತ್ತದೆ. ಚಿತ್ರ ನೋಡಿದ ಬಳಿಕ ನಮ್ಮ ಮನಸು ಕೂಡ ಒಂದರೆಕ್ಷಣ ನಿಶ್ಚಲವಾಗಿ ಬಿಡುತ್ತದೆ. ಬೆಂಗಳೂರಿಗೆ ಬಂದು ವಿಧಾನ ಸೌದ ನೋಡಬೇಕು; ಅದರ ಮುಂದೆ ನಿಂತು ಒಂದು ಫೊಟೊ ತೆಗೆಯಬೇಕು ಎನ್ನುವುದು ಉತ್ತರ ಕರ್ನಾಟಕದ ಆ ಶಾಲಾ ಬಾಲಕನ‌ ಕನಸು. ದುರ್ಗ್ಯಾ ಎನ್ನುವುದು ಅವನ ಹೆಸರು. ಆದರೆ ವಿಧಾನ ಸೌದ ನೋಡುವ ಆಸೆಗೆ ನೀಡಬೇಕಾಗಿ ಬರುವ ಬೆಲೆ ಮಾತ್ರ ಚಿತ್ರ ನೋಡಿಯೇ ಅರಿಯಬೇಕು.

ಫೋಟೋ ಎನ್ನುವ ಈ‌ ಸಿನಿಮಾ, ಲಾಕ್ಡೌನ್ ಸಂದರ್ಭಕ್ಕೆ ಸಾಕ್ಷಿಯಾದ ಕತೆ ಎಂದು, ಈಗಾಗಲೇ ಚಿತ್ರತಂಡ ತಿಳಿಸಿದೆ. ಆದರೆ ಸಿನಿಮಾ ನೋಡುತ್ತಿದ್ದ ಹಾಗೇ ಪ್ರತಿಯೊಬ್ಬ ಬಡ ಭಾರತೀಯ ಅನುಭವಿಸಿದ ದುರಂತಗಳು ಕಟ್ಟು ಹಾಕಿದ ಭಾವಚಿತ್ರಗಳಂತೆ ಎದೆ ತಟ್ಟುತ್ತವೆ. ದಿಢೀರನೆ ಸಾರಲಾದ ಲಾಕ್ಡೌನ್. ವಾಹನಗಳಿದ್ದವರಷ್ಟೇ ತಕ್ಷಣಕ್ಕೆ ಊರು ಸೇರಲು ಸಿಗುವ ಅವಕಾಶ. ನಡೆದೇ ಊರು ಸೇರಲು ಹೊರಟವರ ದುರಂತ ಕ್ಷಣಗಳು. ಗೋ ಕೊರೊನ ನಾಟಕ.. ಎಲ್ಲವೂ ಮುಗಿದು ಬಡವರ ಹೆಣದ ರಾಶಿ ಬಿದ್ದ ಮೇಲೆ ದೀಪ ಬೆಳಗಿ ಒಗ್ಗಟ್ಟು ಪ್ರದರ್ಶಿಸಿದ ರೀತಿ.! ಇವೆಲ್ಲವನ್ನೂ ಮತ್ತೆ ನೆನಪಿಸುವ ಘಟನೆಗಳು ಚಿತ್ರದಲ್ಲಿವೆ.

ಚಿತ್ರದಲ್ಲಿ ರಾಜಕಾರಣಿಗಳನ್ನು, ರಾಜಕೀಯವನ್ನು ಅಥವಾ ಒಂದು ಪಕ್ಷವನ್ನು ವಿಡಂಬನೆ ಮಾಡಲಾಗಿಲ್ಲ. ಆದರೆ ನಿಜವಾಗಿ ನಡೆದ ಘಟನೆ ಎಷ್ಟೊಂದು ಅಮಾನವೀಯವಾಗಿತ್ತು ಎಂದು ಶಾಶ್ವತವಾಗಿ ದಾಖಲಿಸು ವ ಪ್ರಯತ್ನ ಮಾಡಲಾಗಿದೆ. ಹೀಗಾಗಿಯೇ ಚಿತ್ರ ಮುಗಿದ ಬಳಿಕ ನಿರ್ದೇಶಕರನ್ನು ಅಭಿನಂದಿಸುವ ಧೈರ್ಯ ಯಾರಿಗೂ ಬರುವುದಿಲ್ಲ. ನಮ್ಮ ಆಪ್ತ ಬಂಧುವಿನ ಶವ ಇರುವ ಮನೆಗೆ ದಾರಿ ತೋರಿದ ವ್ಯಕ್ತಿಗೆ ಹೇಗೆ ತಕ್ಷಣ ಧನ್ಯವಾದ ಹೇಳಲು ಸಾಧ್ಯವಿಲ್ಲವೋ.. ಅದೇ ಶವದ ಮನೆಯ ಮೌನ ಇಲ್ಲೂ ನಮಗೆ ಕಾಡುತ್ತದೆ. ಎಂದೂ, ಯಾರೂ ಮರೆಯದಂಥ ದಾರಿಯನ್ನು ನಿರ್ದೇಶಕ ಉತ್ಸವ್ ಗೋನವಾರ ತೋರಿಸಿದ್ದಾರೆ.

ಚಿತ್ರದ ಕೇಂದ್ರಬಿಂದುವಾದ ದುರ್ಗ್ಯಾನ ಪಾತ್ರಕ್ಕೆ ಜೀವ ನೀಡಿರುವ ಹಿರಿಮೆ ಬಾಲನಟ ವೀರೇಶ್ ಗೋನವಾರಗೆ ಸಲ್ಲುತ್ತದೆ. ಈತನ ಕೂಲಿ ಕಾರ್ಮಿಕ ತಂದೆಯಾಗಿ ರಂಗನಟ ಮಹಾದೇವ ಹಡಪದ ಅಭಿನಯಿಸಿದ್ದಾರೆ. ಸಂಧ್ಯಾ ಅರಕೆರೆ ತಾಯಿಯ ಪಾತ್ರವಾಗಿ ಬಾಳಿದ್ದಾರೆ. ಈ ಪ್ರಧಾನ ಪಾತ್ರಧಾರಿಗಳ ಆಯ್ಕೆ ಸೇರಿದಂತೆ ಪ್ರತಿಯೊಬ್ಬ ಕಲಾವಿದರಿಂದಲೂ ಸಹಜತೆಯ ಅಭಿನಯವನ್ನಷ್ಟೇ ಹೊರತಂದಿರುವ ನಿರ್ದೇಶಕ ಉತ್ಸವ್ ಗೋನವಾರ ನಿಜಕ್ಕೂ ಪ್ರಶಂಸಾರ್ಹರು. ಹಿನ್ನೆಲೆ ಸಂಗೀತ ನೀಡದಿರುವುದು, ಪ್ರತಿ ದೃಶ್ಯಗಳನ್ನು ಸಹಜವಾದ ವೇಗದಲ್ಲಿ ತೋರಿಸಿರುವುದುಸ ಕೂಡ ಹೆಚ್ಚಿನ ನೈಜತೆ ತಂದುಕೊಟ್ಟಿದೆ.

ಇದೊಂದು ಕಲಾತ್ಮಕ ಶೈಲಿಯಲ್ಲಿ ಚಿತ್ರೀಕರಿಸಲಾದ ಸಿನಿಮಾ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಇಂಥ ಚಿತ್ರದಲ್ಲೂ ಡಿ ಬಾಸ್ ದರ್ಶನ್ ಹೆಸರು ಪ್ರಸ್ತಾಪವಾಗುತ್ತದೆ. ಪಾಸಿಟಿವ್ ಆಗಿರುವ ಸಾಕಷ್ಟು ಸಹಜ ತಮಾಷೆಗಳ‌ ನಡುವೆ ದರ್ಶನ್ ಹೆಸರು ಸೇರಿಕೊಂಡ ಬಗೆ ಏನು ಎಂದು ದರ್ಶನ್ ಅಭಿಮಾನಿಗಳು ಥಿಯೇಟರ್ ಗೆ ಕಾಲಿಟ್ಟಲ್ಲಿ ಫೊಟೊ‌ ಕಮರ್ಷಿಯಲ್ ಗೆಲವು ಕಾಣುವುದು ಶತಸಿದ್ಧ.

Recommended For You

Leave a Reply

error: Content is protected !!
%d bloggers like this: