ಚಿತ್ರ: ಸಹಾರಾ
ನಿರ್ದೇಶನ: ಮಂಜೇಶ್ ಭಗವತ್
ನಿರ್ಮಾಣ: ಎಮ್. ಗೌಡ
ತಾರಾಗಣ: ಸಾರಿಕಾ ರಾವ್, ಅಂಕುಶ್ ರಜತ್
ಎರಡು ಹೆಣ್ಣುಮಕ್ಕಳಾದ ಬಳಿಕ ಪತ್ನಿ ಮತ್ತೊಮ್ಮೆ ಗರ್ಭಿಣಿ. ಮೂರನೆಯದು ಗಂಡು ಮಗುವೇ ಆಗಲೆಂದು ಕಾಯುತ್ತಿರುವಾಗ ಮತ್ತೆ ಹೆಣ್ಣು ಮಗು. ಹಳ್ಳಿಯ ಬಡ ತಂದೆಗೆ ಅನಪೇಕ್ಷಿತ ಮಗುವಾಗಿ ಮೂರನೆಯದೂ ಹೆಣ್ಣಾಗುತ್ತದೆ. ಆದರೆ ತಂದೆಯ ಕೋಪವೆಲ್ಲ ಮೊದಲ ಮಗಳು ಜಯಶ್ರೀಯಲ್ಲಿ. ಆದರೆ ಮುಂದೆ ದೇಶವೇ ಹೆಮ್ಮೆ ಪಡುವಂತೆ ಕ್ರಿಕೆಟ್ ನ ಸಹಾರಾ ಕಪ್ ತಂದು ಸಾಧನೆ ಮಾಡುವ ಕತೆ ಈ ಚಿತ್ರದ್ದು.
ಜಯಶ್ರೀ ತಾಯಿಗೆ ಅನಾರೋಗ್ಯ ಎನ್ನುವ ಕಾರಣದಿಂದ ತಾನೇ ಮನೆಗೆಲಸ ಮಾಡಲು ಹೋಗುತ್ತಾಳೆ. ಕೆಲಸ ಮಾಡುವ ಮನೆಯ ಯುವಕ ಕ್ರಿಕೆಟ್ ಪ್ರ್ಯಾಕ್ಟೀಸ್ ಮಾಡುತ್ತಿರುತ್ತಾನೆ. ಆತನ ಮೇಲೆ ಜಯಶ್ರೀ ಮನದಲ್ಲಿ ಒಲವಿರುತ್ತದೆ. ಆದರೆ ಆತ ತನ್ನ ಸ್ನೇಹಿತನ ಜತೆ ಸೇರಿ ಜಯಶ್ರೀಗೆ ವಂಚಿಸುತ್ತಾನೆ.
ಜಯಶ್ರೀ ಮನೆಯನ್ನು, ಊರನ್ನು ತೊರೆಯಬೇಕಾಗತ್ತದೆ. ಇಂಥ ಪರಿಸ್ಥಿತಿಗೆ ತಲುಪುವಂತೆ ಮಾಡಿದ ಘಟನೆ ಯಾವುದು? ಮಂಡ್ಯ ಬಿಟ್ಟು ಬೆಂಗಳೂರು ಸೇರಿದ ಯುವತಿ ಭಾರತೀಯ ಕ್ರಿಕೆಟ್ ತಂಡವನ್ನು ಸೇರುವ ಮಟ್ಟಕ್ಕೆ ಬೆಳೆದಿದ್ದು ಹೇಗೆ ಮೊದಲಾದ ಕುತೂಹಲಕಾರಿ ಅಂಶಗಳನ್ನು ಪರದೆಯ ಮೇಲೆ ನೋಡುವುದೇ ಸೊಗಸು.
ನಿರ್ದೇಶಕ ಮಂಜೇಶ್ ಭಗವತ್ ಜಯಶ್ರೀ ಪಾತ್ರದ ಮೂಲಕ ಹಳ್ಳಿ ಹುಡುಗಿಯ ಕತೆಯನ್ನಷ್ಟೇ ಹೇಳಿಲ್ಲ. ಸಾಧನೆಗೆ ಪ್ರಯತ್ನಿಸುವ ಪ್ರತಿ ಹೆಣ್ಣು ಮಕ್ಕಳಿಗೂ ಸ್ಫೂರ್ತಿ ತುಂಬುವ ಸಂದೇಶ ನೀಡಿದ್ದಾರೆ.
ಜಯಶ್ರೀಯಾಗಿ ಸಾರಿಕಾ ರಾವ್ ನಟನೆ ಮನೋಜ್ಞ. ಹಳ್ಳಿಯ ಮುಗ್ದೆ ರಾಷ್ಟ್ರಮಟ್ಟದ ಕ್ರಿಕೆಟ್ ಆಟಗಾರ್ತಿಯಾಗಿ ಬದಲಾಗುವ ರೀತಿ ನೈಜವಾಗಿ ತೋರಿಸಿದ್ದಾರೆ. ಜಯಶ್ರೀ ತಂದೆಯಾಗಿ ಮಂಜುನಾಥ್ ಹೆಗ್ಡೆ ನಟನೆ ಎಂದಿನಂತೆ ಆಕರ್ಷಕ. ಅತಿಥಿ ಪಾತ್ರದಲ್ಲಿ ಎಂಟ್ರಿ ನೀಡಿರುವ ಸುಧಾರಾಣಿ, ಎರಡೇ ದೃಶ್ಯಗಳಲ್ಲಿ ಕ್ರಿಕೆಟ್ ಕೋಚ್ ಒತ್ತಡವನ್ನು ಕಟ್ಟಿಕೊಟ್ಟಿದ್ದಾರೆ.
ಚಿತ್ರದ ಆರಂಭ ಮಧ್ಯಂತರ ಮತ್ತು ಅಂತ್ಯದಲ್ಲಿ ಕಿಚ್ಚ ಸುದೀಪ್ ಧ್ವನಿಯ ನಿರೂಪಣೆಯಿದೆ. ಅದರಲ್ಲೇ ಹೇಳುವಂತೆ ಇದು ಜಯಶ್ರೀ ಎನ್ನುವ ಒಬ್ಬ ಮುಗ್ದ ಹುಡುಗಿಯ ಕತೆ. ನಲುಗಿ ಹೋದ ಹೆಣ್ಣುಮಗಳು ಹೇಗೆ ಬೆಳಗಿ ನಿಂತು ಸಾಧಿಸಬಹುದು ಎನ್ನುವ ಸ್ಫೂರ್ತಿ ತುಂಬುವ ಚಿತ್ರ. ಹಾಗಾಗಿಯೇ ಈ ಚಿತ್ರಕ್ಕೆ ಸಹಾರಾ ಎನ್ನುವ ಕ್ರಿಕೆಟ್ ಪಂದ್ಯಕ್ಕೆ ಸೀಮಿತವಾದ ಹೆಸರು ಎಷ್ಟು ಉಚಿತ ಎಂದು ಅನಿಸದೇ ಇರದು.