ರಾಜಕೀಯ ಪ್ರವೇಶದ ಬಗ್ಗೆ ವಿನೋದ್ ಆಳ್ವ ನೇರ ಮಾತು!

ಕನ್ನಡ ಚಿತ್ರರಂಗದಲ್ಲಿ ಇಂದು ಮಂಗಳೂರು ಕರಾವಳಿಯ ಶೆಟ್ಟರ ಹುಡುಗರು ಸದ್ದು ಮಾಡುತ್ತಿರುವುದಾಗಿ ಹೇಳಲಾಗ್ತಿದೆ. ಆದರೆ ಇವರೆಲ್ಲರ ಹುಟ್ಟಿಗೂ ಮೊದಲೇ ಗಾಂದಿನಗರಕ್ಕೆ ಕಾಲಿಟ್ಟ ಮಂಗಳೂರಿನ ಬಂಟರ ಯುವಕನೊಬ್ಬ ಕನ್ನಡ ಮಾತ್ರವಲ್ಲ, ತೆಲುಗು ಚಿತ್ರರಂಗದಲ್ಲೂ ಹೆಸರು ಮಾಡಿದ್ದಾರೆ. ಸ್ಟಾರ್ ನಾಯಕರಾಗಿದ್ದಾರೆ. ಅವರೇ ವಿನೋದ್ ಆಳ್ವ. ಸುಮಾರು 140 ಚಿತ್ರಗಳಲ್ಲಿ ನಾಯಕರಾಗಿರುವ ಇವರು ಪ್ರಸ್ತುತ ವಿಶೇಷ ಪೋಷಕ ಪಾತ್ರಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಇದಕ್ಕೊಂದು ಉತ್ತಮ ಉದಾಹರಣೆ, ದರ್ಶನ್ ನಟನೆಯ ಕಾಟೇರ ಚಿತ್ರದ ಕಾಳೇಗೌಡನ ಪಾತ್ರ.

ಸಿನಿಮಾದಲ್ಲಿ ಅಪರೂಪದ ಪಾತ್ರಗಳನ್ನಷ್ಟೇ ಒಪ್ಪಿಕೊಳ್ಳುವ ವಿನೋದ್ ಆಳ್ವ, ಇತ್ತೀಚೆಗಷ್ಟೇ ಬೆಂಗಳೂರಿನ ಯಲಹಂಕದ ತಮ್ಮ ಫಾರ್ಮ್​ಹೌಸ್​ನಲ್ಲಿ CINIಕನ್ನಡಕ್ಕೆ ಮಾತಿಗೆ ಸಿಕ್ಕಿದ್ದರು. ರಾಜ್ಯದ ಆಗುಹೋಗುಗಳ ಮಾತಿನ ನಡುವೆ, ‘ವಿನೋದ್ ಆಳ್ವ ರಾಜಕೀಯಕ್ಕೆ ಎಂಟ್ರಿಯಾಗ್ತಾರ’ ಎಂದು ಕೇಳಿದಾಗ, ಇವರು ನೀಡಿದ ಉತ್ತರ ಅಷ್ಟೇ ಆಸಕ್ತಿಕರವಾಗಿತ್ತು.

ನಟರಾಗಲು ಬಯಸಿರದ ನೀವು ಸೌತ್ ಇಂಡಿಯಾದಲ್ಲೇ ಸ್ಟಾರ್ ಆಗಿ ಮೆರೆದಿದ್ದೀರಿ. ಮುಂದೆ ರಾಜಕಾರಣಕ್ಕೂ ಕಾಲಿಡುವ ಸಾಧ್ಯತೆ ಇದೆಯೇ?
ಸಿನಿಮಾರಂಗಕ್ಕೆ ಬರುವ ಮೊದಲು ನಟನೆಯ ಬಗ್ಗೆ ಗೊತ್ತಿರಲಿಲ್ಲ. ಹಾಗಾಗಿ ಎಂಟ್ರಿಯಾದ ಬಳಿಕ ಅರ್ಥಮಾಡಿಕೊಂಡು ನಟನಾದೆ. ಆದರೆ ರಾಜಕೀಯ ಹಾಗಲ್ಲ. ರಾಜಕಾರಣ ಮಾಡದಿದ್ದರೂ ರಾಜಕೀಯ ಕ್ಷೇತ್ರದ ಬಗ್ಗೆ ಎಲ್ಲ ಗೊತ್ತಿದೆ. ರಾಜಕಾರಣಿಗಳು ಯಾರು ಹೇಗೆ ಏನು ಎಂದು ತಿಳಿದಿದೆ. ಇದು ನನಗೆ ಹೇಳಿದ ಕೆಲಸ ಅಲ್ಲ. ನಮಗೆ ನಮ್ಮದೇ ಆದ ಮೈಂಡ್‌ಸೆಟ್‌ ಇದೆ. ರಾಜಕಾರಣದಿಂದ ಮಾಡಬೇಕಾಗಿರುವುದು ಸಮಾಜ ಸೇವೆ. ಅದನ್ನು ಮಾಡುವಂಥ ದೊಡ್ಡ ದೊಡ್ಡ ರಾಜಕಾರಣಿಗಳ ಪರಿಚಯ ನನಗೆ ಇದೆ. ಏನಾದರೂ ಕೆಲಸ ಹೇಳಿದರೆ, ಅವರೇ ಮಾಡಿಕೊಡುತ್ತಾರೆ.

ರಾಜಕಾರಣಿಗಳ ವರ್ತನೆ ಇಷ್ಟವಾಗದ ಕಾರಣ ನೀವು ರಾಜಕೀಯದಿಂದ ದೂರ ಇದ್ದೀರ?
ಹಾಗೇನಿಲ್ಲ, ಅದರಲ್ಲೂ ನಮ್ಮ ದಕ್ಷಿಣ ಕನ್ನಡದ ರಾಜಕಾರಣಿಗಳು, ಬಹಳ ಪ್ರೀತಿಯಿಂದ ಮಾತನಾಡುತ್ತಾರೆ. ಈಗ ನಮ್ಮ ಪುತ್ತೂರಿನಲ್ಲಿ ಅಶೋಕ್‌ ರೈ ಇದ್ದಾರೆ. ಬಡವರಿಗೆ ತುಂಬಾ ಸಹಾಯ ಮಾಡುತ್ತಾರೆ. ಅಶೋಕ್‌ ರೈ ಅವರು ತುಂಬಾ ಯಂಗ್.‌ ಅವರಿಗೆ ಇನ್ನೂ ಕೂಡಾ ಭವಿಷ್ಯ ಇದೆ. ಮತ್ತೆ ಅವರು ಕೂಡ ರಾಜಕೀಯಕ್ಕೆ ಎಂಟ್ರಿ ನೀಡುವ ಮೊದಲೇ ಶ್ರೀಮಂತರಾಗಿದ್ದವರು. ರಿಯಲ್‌ ಎಸ್ಟೇಟ್‌ ಎಲ್ಲಾ ಮಾಡಿ, ಆಮೇಲೆ ಸದಾನಂದ ಗೌಡ ಅವರ ಜೊತೆ ಇದ್ದರು. ಮೊದಲು ಪಕ್ಷ ಬೇರೆ ಇತ್ತು. ಈಗ ಅವರಿಗೆ ಕಾಂಗ್ರೆಸ್‌ನಲ್ಲಿ ಸೀಟ್‌ ದೊರಕಿ ಪುತ್ತೂರಿನಲ್ಲಿ ಒಳ್ಳೆ ಕೆಲಸ ಮಾಡ್ತಿದ್ದಾರೆ. ಅದರಲ್ಲೂ ಬಡವರಿಗೆ ಕೂಡಲೇ ಸ್ಪಂದಿಸುವ ವ್ಯಕ್ತಿತ್ವ ಅವರದು. ಇದನ್ನೆಲ್ಲ ಕಣ್ಣಾರೆ ನೋಡಿರುವ ನನಗೆ ಇಂಥ ರಾಜಕಾರಣಿಯ ಬಗ್ಗೆ ಅಭಿಮಾನ ಇದೆ.

ಸಾಕಷ್ಟು ರಾಜಕಾರಣಿಗಳ ಪರಿಚಯ ಇರುವ ನೀವು ಅಶೋಕ್ ರೈ ಬಗ್ಗೆ ನೀವಾಗಿಯೇ ಹೇಳಿಕೊಂಡಿದ್ದೀರಿ. ಇದಕ್ಕೆ ಏನಾದರೂ ವಿಶೇಷ ಕಾರಣವಿದೆಯೇ?
ರಾಜಕೀಯದ ಬಗ್ಗೆ ಸಾಮಾನ್ಯವಾಗಿ ಆಡುವಾಗ ಬಂದ ಮಾತಿದು. ಇದೆಲ್ಲ ಪ್ಲ್ಯಾನ್ ಹಾಕಿ ಹೇಳುವುದಲ್ಲ. ಅಶೋಕ್ ರೈ ಬಗ್ಗೆ ನಾನು ಆರಂಭದಿಂದಲೂ ಬಲ್ಲೆ. ಇವರ ಕಾರ್ಯಕರ್ತರೆಲ್ಲ ಅಲ್ಲಲ್ಲಿ ಇದ್ದಾರೆ. ಇವರೆಲ್ಲ ತಕ್ಷಣವೇ ಜನಗಳ ಕಷ್ಟಕ್ಕೆ ಸ್ಪಂದಿಸುವುದನ್ನು ಕಣ್ಣಾರೆ ಕಂಡಿದ್ದೇನೆ. ಅಶೋಕ್‌ ರೈ ಅವರ ಬಳಿ ತಮ್ಮ ಕಷ್ಟದ ಬಗ್ಗೆ ಹೇಳಿದರೆ, ಅವರು ತಕ್ಷಣವೇ ಐದು ಸಾವಿರ, ಹತ್ತು ಸಾವಿರ ಕೊಟ್ಟು ಸಹಾಯ ಮಾಡಿರುವುದು ನನಗೂ ಗೊತ್ತು. ಇದೇ ಕಾರಣದಿಂದಲೇ ಅಶೋಕ್‌ ರೈ ಅವರಿಗೆ ಪುತ್ತೂರಲ್ಲಿ ಪಕ್ಷಾತೀತವಾಗಿ ಒಳ್ಳೆಯ ಹೆಸರಿದೆ. ಸಂಸ್ಕೃತಿಯ ವಿಚಾರ ಬಂದಾಗಲೂ ಸದಾ ಮುನ್ನುಗ್ಗುವ ಇವರು ಬೆಂಗಳೂರಿನಲ್ಲಿಯೂ ಕಂಬಳ ಆಯೋಜಿಸಿ ದಾಖಲೆ ಮಾಡಿರುವುದು ನಿಮಗೂ ಗೊತ್ತಿರಬಹುದು.

ಮೊದಲೇ ಶ್ರೀಮಂತರಾಗಿರುವವರು ರಾಜಕೀಯಕ್ಕೆ ಬಂದರೆ ಉತ್ತಮ ಅಂತೀರ?
ಶ್ರೀಮಂತರೇ ಬರಬೇಕು ಅಂತ ಅಲ್ಲ. ಶ್ರೀಮಂತರಾಗಿದ್ದುಕೊಂಡೂ ಇನ್ನಷ್ಟು ಭ್ರಷ್ಟಾಚಾರ ಮಾಡಬೇಕು ಎನ್ನುವವರ ಬಗ್ಗೆ ನಾನೇನೂ ಹೇಳುವುದಿಲ್ಲ. ಆದರೆ ಅಶೋಕ್ ರೈಯಂಥವರು ಸಮಾಜ ಸೇವೆಯಲ್ಲೇ ಖುಷಿ ಕಾಣುತ್ತಾರೆ. ಅವರಲ್ಲಿ ನೇತಾರನ ಎಲ್ಲ ಉತ್ತಮ ಲಕ್ಷಣಗಳನ್ನು ಕಂಡಿದ್ದೇನೆ. ಪುತ್ತೂರಿನಲ್ಲೇ ಕೆಲವೊಂದು ರಸ್ತೆಗಳನ್ನು ಅವರು ತಮ್ಮ ಸ್ವಂತ ದುಡ್ಡಿನಲ್ಲಿಯೇ ಮಾಡಿ ಕೊಟ್ಟಿದ್ದೂ ಇದೆ! ಒಂದು ದೇವಸ್ಥಾನ, ಸುಮಾರು ಹತ್ತು ಹದಿನೈದು ಮನೆಗಳಿರುವ ಏರಿಯಾಗೆ ರಸ್ತೆಯೇ ಇರಲಿಲ್ಲ. ಅದನ್ನೆಲ್ಲ ಅವರೇ ಮಾಡಿದ್ದಾರೆ. ಮಾತ್ರವಲ್ಲ, ಅವರದೇ ನೇತೃತ್ವದಲ್ಲಿರುವ ದೇವಸ್ಥಾನವೂ ಊರಲ್ಲಿದೆ. ಇಂಥವರು ರಾಜಕೀಯದಲ್ಲಿರುವ ತನಕ ನನ್ನಂಥವರು ಎಂಟ್ರಿಯಾಗುವ ಅಗತ್ಯ ಇಲ್ಲ.

Recommended For You

Leave a Reply

error: Content is protected !!