
ನಟ ಅನಂತ್ ನಾಗ್ ಅವರಿಗೆ ಪದ್ಮಭೂಷಣದ ಗೌರವ ಘೋಷಿಸಲ್ಪಟ್ಟಿದೆ. ಇದೇ ಸಂಭ್ರಮದ ಸಂದರ್ಭದಲ್ಲೇ ಅನಂತ್ ನಾಗ್ ರಂಗಸೌರಭದ ರಾಜ್ಯಮಟ್ಟದ ನಾಟಕ ಸ್ಪರ್ಧೆಯನ್ನು ಉದ್ಘಾಟಿಸಿದ್ದಾರೆ. ಬಳಿಕ ವೇದಿಕೆಯಲ್ಲಿ ಭಾವುಕವಾದ ಮಾತುಗಳನ್ನು ಹಂಚಿಕೊಂಡಿದ್ದಾರೆ.
“ಮಠಗಳಲ್ಲಿ ಓದುತ್ತಾ ಬೆಳೆದ ನನಗೆ, ಹೊಸ ಲೋಕವಾಗಿ ಕಂಡಿದ್ದು ರಂಗ ಭೂಮಿ. ಅವಕಾಶ ಸಿಕ್ಕಿದಾಗ, ಪ್ರಯತ್ನ ಪಡೋಣ, ವಿಫಲವಾದಲ್ಲಿ ಮರಳಿ ಮಠಕ್ಕೆ ಹೋಗೋಣ ಎಂದು ಅಂದುಕೊಂಡಿದ್ದೆ. ರಂಗ ಭೂಮಿಗೆ ನಾನು ಚಿರಋಣಿ. ಇವತ್ತು ನಾನು ಏನಾಗಿದ್ದೇನೋ, ಅದಕ್ಕೆ ಬಲವಾದ ಬುನಾದಿ ರಂಗ ಭೂಮಿ, ಅದು ಕಲಿಸಿದ ಶಿಸ್ತು , ಪಾಠ ” ಎಂದ ಅನಂತನಾಗ್, ತಮ್ಮ ಶಂಕರ್ ನಾಗ್ ಅವರ ನಿರ್ದೇಶನದಲ್ಲಿ ರಂಗದ ಮೇಲೆ ನಟಿಸಿದ್ದನ್ನೂ ನೆನಪಿಸಿಕೊಂಡರು. ಹದಿನೈದು ಪುಟಗಳ ಅವರ ಸ್ವಗತ ವನ್ನು, ಮತ್ತು ಅದಕ್ಕೆ ಜನರು ತೋರಿದ ಪ್ರೀತಿಯನ್ನು ನೆನೆದರು.

ಈ ವರ್ಷದ ರಂಗಸೌರಭ ಪತಾಕೆಯನ್ನು ಪ್ರದರ್ಶಿಸುವ ಮೂಲಕ ಅನಂತ ನಾಗ್ ರಂಗಸ್ಪರ್ಧೆಗೆ ಅಧಿಕೃತ ಚಾಲನೆ ನೀಡಿದರು. ರಾಜ್ಯಾದ್ಯಂತ 21 ಕಾಲೇಜ್ ಗಳಿಂದ ನಾಟಕ ಸ್ಪರ್ಧೆ ನಡೆಯಲಿದ್ದು ಈ ಸ್ಪರ್ಧೆಯಲ್ಲಿ ‘ಮಹಾನಟ’ನಾಗಿ ಗುರುತಿಸಿಕೊಂಡವರಿಗೆ ನೀಡಲಿರುವ ವಿಶೇಷ ನಟರಾಜ ಶಿಲ್ಪದ ಅನಾವರಣವನ್ನು ಕೂಡ ಅನಂತ್ ನಾಗ್ ನೆರವೇರಿಸಿದರು. ಈ ಶಿಲ್ಪವನ್ನು ಇರಿಸಿದ ತೇರನ್ನು ಆಯಾ ನಾಟಕಕ್ಕೆ ಸಂಬಂಧಿಸಿದ 21 ಮಂದಿ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಡೊಳ್ಳು ವಾದನದೊಂದಿಗೆ ವೇದಿಕೆಯ ಮನ್ನೆಲೆಗೆ ಎಳೆದು ತಂದಿದ್ದು ವಿಶೇಷವಾಗಿತ್ತು.

ಇಂಥದೊಂದು ಶಿಲ್ಪವನ್ನು ವಿನ್ಯಾಸಗೊಳಿಸಿದ ಖ್ಯಾತ ಕಲಾನಿರ್ದೇಶಕ ಶಶಿಧರ ಅಡಪ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ ನಾಗರಾಜ ಮೂರ್ತಿ ವೇದಿಕೆಯ ಅಧ್ಯಕ್ಷತೆ ವಹಿಸಿದ್ದರು.
ಫೆಬ್ರವರಿ 21ರಿಂದ ನಿತ್ಯವೂ ರಾಜ್ಯದ ವಿವಿಧ ಕಾಲೇಜ್ಗಳಿಂದ ಒಂದೂವರೆ ಗಂಟೆಗಳ ಮೂರು ನಾಟಕಗಳ ಪ್ರದರ್ಶನ ನೆರವೇರಲಿದೆ. ಮಾರ್ಚ್ 1ರಂದು ಶನಿವಾರ ಸಂಜೆ 5ಗಂಟೆಗೆ ವಿಜೇತರಿಗೆ ಪ್ರಶಸ್ತಿ ಪ್ರದಾನ ನಡೆಯಲಿದೆ.
ವರದಿ: ವೈಷ್ಣವಿ ಎನ್ ರಾವ್
ಸಿ ಎಂ ಎಸ್- ಜೈನ್ ಡೀಮ್ಡ್ ಟು ಬಿ ಯೂನಿವರ್ಸಿಟಿ