ಮಾಡೆಲಿಂಗ್ ಲೋಕದಲ್ಲಿ ಮಾಡಬಾರದ ತಪ್ಪುಗಳು!

ಚಿತ್ರ: ತಪಸ್ಸಿ
ನಿರ್ದೇಶನ: ಮ್ಯಾಥ್ಯು
ನಿರ್ಮಾಣ: ಬೆಂಗಳೂರು ಸ್ಟುಡಿಯೋಸ್
ತಾರಾಗಣ: ವಿ ರವಿಚಂದ್ರನ್, ಅಮಯ್ರಾ ಗೋಸ್ವಾಮಿ

ಚಿತ್ರದ ಹೆಸರೇ ಅರ್ಥವಾಗದ ಹಾಗಿದೆ. ತಪಸ್ಸಿ ಎನ್ನುವುದಕ್ಕೆ ಕನ್ನಡದಲ್ಲಿ ಅರ್ಥವಿಲ್ಲ. ಆದರೆ ಅದು ಅಗರ್ವಾಲ್ ಕುಟುಂಬದ ನಾಯಕಿಯ ಹೆಸರು. ಇದು ನಾಯಕಿ ಪ್ರಧಾನ ಚಿತ್ರ. ಆದರೆ ನಾಯಕಿಯ ಬಾಳಿನಲ್ಲಿ ಪ್ರಾಧಾನ್ಯತೆ ಇರುವ ಓರ್ವ ಪ್ರೊಫೆಸರ್ ಪಾತ್ರವನ್ನು ಕ್ರೇಜಿಸ್ಟಾರ್ ರವಿಚಂದ್ರನ್ ನಿರ್ವಹಿಸಿದ್ದಾರೆ.

ಸೈಕಾಲಜಿ ಪ್ರೊಫೆಸರ್ ವೈದ್ಯನಾಥ್ ಮನೆಯಲ್ಲಿ ಗೃಹಬಂಧನಕ್ಕೊಳಗಾದ ತಪಸ್ಸಿ ತಾನು ಹೊರಗೆ ಹೋಗಲೇಬೇಕು ಎಂದು ಹಠ ಹಿಡಿಯುತ್ತಾಳೆ.‌ ಆದರೆ ಯಾವ ಕಾರಣಕ್ಕೂ ನಿನ್ನನ್ನು ಹೊರಗೆ ಬಿಡುವುದಿಲ್ಲ ಎನ್ನುತ್ತಾರೆ ಪ್ರೊಫೆಸರ್. ಕೋಪದಿಂದ ಕೋಣೆ ಸೇರಿ ಕಂಠಪೂರ್ತಿ ಕುಡಿದು ಮತ್ತೆ ಬರುವ ತಪಸ್ಸಿ ಪ್ರೊಫೆಸರ್ ನ ತಳ್ಳಿ ಹಾಕುತ್ತಾರೆ. ಕುಸಿದು ಬಿದ್ದ ಪ್ರೊಫೆಸರ್ ತಲೆಗೆ ಏಟು ಮಾಡಿಕೊಳ್ಳುತ್ತಾರೆ. ಪ್ರೊಫೆಸರ್ ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆ ಪರದೆಯ ಮೇಲೆ ತಪಸ್ಸಿಯ ಹಿನ್ನೆಲೆಯ ಕಥೆ ತೆರೆದುಕೊಳ್ಳುತ್ತದೆ.

ಏಳನೇ ವರ್ಷ ವಯಸ್ಸಿದ್ದಾಗ ತಂದೆಯನ್ನು ಮತ್ತು 14ನೇ ವರ್ಷದಲ್ಲೇ ತಾಯಿಯನ್ನು ಕಳೆದುಕೊಂಡ ಅನಾಥೆ ತಪಸ್ಸಿ. ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟು ಸಾಧನೆಯ ಕನಸು ಕಾಣುವ ಈ ಚೆಲುವೆ ತನ್ನ ಅರಿವಿಲ್ಲದೆ ಕುಡಿತಕ್ಕೆ ದಾಸಿಯಾಗುತ್ತಾಳೆ. ಜತೆಯಲ್ಲೇ ಅನೈತಿಕ ಸಂಬಂಧಗಳನ್ನು ಬೆಳೆಸಿಕೊಳ್ಳುತ್ತಾಳೆ. ಮಾದಕ ದ್ರವ್ಯಕ್ಕೆ ಮನಸೋಲುತ್ತಾಳೆ. ತನ್ನದೇ ತಪ್ಪಿನಿಂದ ಬದುಕು ಹಾಳುಮಾಡಿಕೊಂಡ ತಪಸ್ಸಿ ನಟಿಯಾಗಲು ಚಿತ್ರರಂಗಕ್ಕೆ ಎಂಟ್ರಿ ನೀಡುತ್ತಾಳೆ. ಇಲ್ಲಿ ರಾಜೀವ್ ಮತ್ತು ರಾಜೇಶ್ ಎನ್ನುವ ಇಬ್ಬರು ಉತ್ತಮ ಸ್ನೇಹಿತರನ್ನು ಪಡೆಯುತ್ತಾಳೆ.‌ ಆದರೆ ತಪಸ್ಸಿಯ ದುರಭ್ಯಾಸಗಳ ಬಗ್ಗೆ ಅರಿತುಕೊಂಡ ಈ ಸ್ನೇಹಿತರು ಈಕೆಯನ್ನು ಬದಲಾಯಿಸಲೆಂದು ಪ್ರೊಫೆಸರ್ ವೈದ್ಯನಾಥ್ ಮನೆಗೆ ಕರೆತರುತ್ತಾರೆ. “ನಾನು ಡಾಕ್ಟರ್ ಅಲ್ಲ ಪ್ರೊಫೆಸರ್ ಅಷ್ಟೇ ” ಎನ್ನುವ ವೈದ್ಯನಾಥ್ ಆರಂಭದಲ್ಲಿ ತಪಸ್ಸಿಯನ್ನು ತಮ್ಮ ಜತೆಗಿರಿಸಲು ನಿರಾಕರಿಸುತ್ತಾರೆ. ಆದರೆ ಒಂದು ಹಂತದಲ್ಲಿ ಒಪ್ಪಿಕೊಂಡ ಬಳಿಕ ಇದೀಗ ಅವಳಿಂದಲೇ ತಲೆಗೆ ಏಟು ಮಾಡಿ ಆಸ್ಪತ್ರೆ ಸೇರುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಹೀಗೆ ಸಾಗುವ ಕಥೆ ಮುಂದೇನಾಗುತ್ತದೆ ಎನ್ನುವುದನ್ನು ನೋಡಲು ನೀವು ಚಿತ್ರ ಮಂದಿರಕ್ಕೆ ಹೋಗಬೇಕು. ಮಾತ್ರವಲ್ಲ ತಪಸ್ಸಿ ಬಾಳಲ್ಲಿ ನಡೆದ ಪ್ರಮುಖ ಘಟನೆಯ ಬಗ್ಗೆಯೂ ಕ್ಲೈಮ್ಯಾಕ್ಸ್ ನಲ್ಲಿ ತೋರಿಸಲಾಗಿದೆ.

ತಪಸ್ಸಿ ಪಾತ್ರವನ್ನು ನಟಿ ಅಮಯ್ರಾ ಗೋಸ್ವಾಮಿ ನಿರ್ವಹಿಸಿದ್ದಾರೆ. ಇದು ಇವರ ಮೊದಲ ಕನ್ನಡ ಚಿತ್ರವಾದರೂ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಪ್ರೊಫೆಸರ್ ವೈದ್ಯನಾಥ್ ಪಾತ್ರದಲ್ಲಿ ರವಿಚಂದ್ರನ್ ಕಾಣಿಸಿಕೊಂಡಿದ್ದಾರೆ. ಉಸಿರೇ, ಕನಸುಗಾರ ಚಿತ್ರಗಳಲ್ಲಿ ಕಾಣಿಸಿಕೊಂಡದ್ದಕ್ಕಿಂತಲೂ ಹೆಚ್ಚು ಡಿಗ್ಲಾಮರೈಸ್ ಆಗಿ ರವಿಚಂದ್ರನ್ ಕಾಣಿಸಿದ್ದಾರೆ. ಸಂಭಾಷಣೆಯ ಶೈಲಿಯೂ ಬದಲಾಗಿದೆ. ಉಳಿದಂತೆ ಫ್ಯಾಷನ್ ಶೋ ಅರೇಂಜ್ ಮಾಡುವ ಆರುಷ್ ಶೆಣೈ ಪಾತ್ರಧಾರಿ ಕೂಡ ಗಮನ ಸೆಳೆಯುತ್ತಾರೆ. ರಾಜೇಶ್ ಮತ್ತು ರಾಜೀವ್ ಪಾತ್ರಧಾರಿಗಳು ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸುವ ಪ್ರಯತ್ನ ಮಾಡಿದ್ದಾರೆ.

ಚಿತ್ರಕ್ಕೆ ಆಯ್ದುಕೊಂಡ ವಿಷಯ ಮತ್ತು ಸಂಭಾಷಣೆಯ ಕಾರಣದಿಂದ ಸಿನಿಮಾ ಒಂದಷ್ಟು ಗಟ್ಟಿತನ ಉಳಿಸಿಕೊಂಡಿದೆ. ಆದರೆ ಗ್ಲಾಮರ್ ಲೋಕದ ಕಥೆಯಲ್ಲಿ ದೃಶ್ಯಗಳಿಗೆ ಬೇಕಾದ ಅದ್ಧೂರಿತನ ತೋರಿಸುವಲ್ಲಿ ಚಿತ್ರದ ಬಜೆಟ್ ಸೋತಿದೆ. ಅದರಲ್ಲೂ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ನಟನೆಯಲ್ಲಿ ಹಾಡುಗಳೇ ಇರದ ಇಂಥದೊಂದು ಸಪ್ಪೆ ಚಿತ್ರವನ್ನು ಯಾವ ಅಭಿಮಾನಿಯೂ ನಿರೀಕ್ಷಿಸಲಾರ. ಮಾತ್ರವಲ್ಲ, ಚಿತ್ರದ ಪ್ರಮುಖ ದೃಶ್ಯವಾದ ಪ್ರೊಫೆಸರ್ ಬಿದ್ದು ತಲೆಗೆ ಏಟು ಮಾಡಿಕೊಳ್ಳುವ ದೃಶ್ಯ ತೀರ ನಾಟಕೀಯವಾಗಿದೆ. ಇಷ್ಟೆಲ್ಲ ಕೊರತೆ ಇದ್ದರೂ ಮಾಡೆಲಿಂಗ್ ಮಾದಕತೆಯನ್ನು ತೆರೆದಿಡುವಾಗ ನಿರ್ದೇಶಕರು ಎಲ್ಲೂ ಸಭ್ಯತೆಯ ಎಲ್ಲೆ ಮೀರಿಲ್ಲ ಎನ್ನುವ ಕಾರಣಕ್ಕಾಗಿ ಪ್ರಶಂಸಿಸಲೇಬೇಕು. ರವಿಚಂದ್ರನ್ ಪಾತ್ರವನ್ನು ಲೆಕ್ಚರರ್ ಮಾಡಿ ಮನೆಯಿಂದಲೇ ಮನ ಸೇರುವ ಮಾತುಗಳನ್ನಾಡಿಸಿದ್ದಾರೆ. ಈ ಮನೆಪಾಠ ಕೇಳ ಬಯಸುವ ಆಸಕ್ತರು ಖಂಡಿತವಾಗಿ ಚಿತ್ರ ನೋಡಬಹುದು.

Recommended For You

Leave a Reply

error: Content is protected !!