ಕನ್ನಡ ಚಿತ್ರರಂಗದಲ್ಲಿ ಕರಿಯದಂಥ ಬ್ಲಾಕ್ ಬಸ್ಟರ್ ಹಿಟ್ ನೀಡಿದ ನಿರ್ಮಾಪಕರಾಗಿ ಗುರುತಿಸಿಕೊಂಡ ಆನೇಕಲ್ ಬಾಲರಾಜ್ ಪುತ್ರ ಸಂತೋಷ್ ಬಾಲರಾಜ್ ನಿಧನರಾಗಿದ್ದಾರೆ.
2009ರಲ್ಲಿ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದ ಸಂತೋಷ್ ಬಾಲರಾಜ್ ಭರವಸೆ ಮೂಡಿಸಿದ್ದ ಕಲಾವಿದರಾಗಿದ್ದರು. ಆದರೆ ಬದುಕೇ ಭರವಸೆ ಕಳೆದುಕೊಂಡು ಸಾವು ನೀಡಿದೆ. ಮಂಗಳವಾರ ಬೆಳಿಗ್ಗೆ 10ಗಂಟೆ ಸುಮಾರಿಗೆ ಈ ಸಾವು ಸಂಭವಿಸಿದೆ. ಜಾಂಡೀಸ್ ನಿಂದ ಬಳಲುತ್ತಿದ್ದ ಸಂತೋಷ್ ಬಾಲರಾಜ್ 34ನೇ ವರ್ಷದಲ್ಲೇ ಸಾವು ಕಂಡಿದ್ದಾರೆ.
ತಂದೆಯ ನಿರ್ಮಾಣದ ಕೆಂಪ ಚಿತ್ರದ ಮೂಲಕ ಎಂಟ್ರಿಕೊಟ್ಟಿದ್ದ ಬಾಲರಾಜ್ ಒಲವಿನ ಓಲೆ, ಜನ್ಮ ಮೊದಲಾದ ಚಿತ್ರಗಳಲ್ಲಿ ನಟಿಸಿದ್ದಾರೆ. 2015ರಲ್ಲಿ ತೆರೆಕಂಡ ‘ಗಣಪ’ ಸೇರಿದಂತೆ ಪ್ರತಿಯೊಂದು ಚಿತ್ರಗಳಲ್ಲೂ ನೈಜ ಅಭಿನಯಕ್ಕೆ ಹೆಸರಾಗಿದ್ದರು. 8ವರ್ಷದ ಹಿಂದೆ ತೆರೆಕಂಡ ಕರಿಯಾ 2 ಚಿತ್ರಕ್ಕೆ ದರ್ಶನ್ ಕರಿಯ ಚಿತ್ರದೊಂದಿಗೆ ಹೋಲಿಕೆ ಮಾಡುವ ಸಂದರ್ಭ ಇದ್ದರೂ ತಮ್ಮದೇ ಶೈಲಿಯಿಂದ ಪ್ರೇಕ್ಷಕರ ಮನ ಗೆದ್ದ ನಟ ಸಂತೋಷ್ ಬಾಲರಾಜ್. ಈ ಚಿತ್ರದ ‘ಮುದ್ದಾಗಿ ನೀನು ನನ್ನಾ ನೋಡಿದೇ..’ ಹಾಡಂತೂ ಇಂದಿಗೂ ಜನಪ್ರಿಯ. ನಾಯಕಿ ಪ್ರಿಯಾಂಕಾ ಬಿಗ್ ಬಾಸ್ ಮೂಲಕವೂ ಸದ್ದು ಮಾಡಿದ್ದರು. ಆದರೆ ಮುದ್ದಾದ ನೋಟದ ಯುವಕ ಇಂದು ಶಾಶ್ವತವಾಗಿ ಕಣ್ಮಚ್ಚಿದ್ದಾರೆ. ‘ಬರ್ಕ್ ಲೀ’ ಮತ್ತು ‘ಸತ್ಯ’ ಎನ್ನುವ ಎರಡು ಸಿನಿಮಾಗಳು ತೆರೆಗೆ ಬರುವ ಮೊದಲೇ ಇಹಲೋಕ ತ್ಯಜಿಸಿದ್ದಾರೆ. ಕರಿಯ 2 ಚಿತ್ರದ ನಾಯಕಿ ಮಯೂರಿ ಕ್ಯಾತರಿ ಸೇರಿದಂತೆ ಚಿತ್ರರಂಗದ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಅಂತಿಮ ದರ್ಶನ ವ್ಯವಸ್ಥೆ
ರಾಗಿಗುಡ್ಡ ಆಂಜನೇಯ ದೇವವಸ್ಥಾನ ಸಮೀಪವಿರುವ ಮನೆಯಲ್ಲಿ ಸಂತೋಷ್ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮಂಗಳವಾರ ಅಪರಾಹ್ನ 2.30ರಿಂದ ಬುಧವಾರ ಬೆಳಿಗ್ಗೆ 10ಗಂಟೆಯ ತನಕ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಬಳಿಕ ಪಾರ್ಥಿವ ಶರೀರವನ್ನು ಆನೇಕಲ್ ಗೆ ಕೊಂಡೊಯ್ಯಲಾಗುವುದು. ಅಲ್ಲೇ ಅಂತ್ಯ ಸಂಸ್ಕಾರ ನಡೆಯಲಿದೆ.
ತಿಂಗಳ ಹಿಂದೆಯಷ್ಟೇ ಸಂತೋಷ್ ಗೆ ಮದುವೆ ಮಾತುಕತೆ ನಡೆದಿತ್ತು. ತಂದೆ ಆನೇಕಲ್ ಬಾಲರಾಜ್ ವರ್ಷದ ಹಿಂದೆ ಅಪಘಾತದಲ್ಲಿ ತೀರಿ ಹೋಗಿದ್ದರು. ಅಕ್ಕ, ಭಾವ ಮತ್ತು ತಾಯಿ ಮತ್ತು ಚಿತ್ರೋದ್ಯಮ ಎಲ್ಲವನ್ನೂ ತೊರೆದ ಸಂತೋಷ ಬಹುದೂರ ತೆರಳಿದ್ದಾರೆ. .
