ಕಲಾನಿರ್ದೇಶಕರಾಗಿ ವೃತ್ತಿಬದುಕು ಆರಂಭಿಸಿ ನಟರಾಗಿ ಖ್ಯಾತಿ ಪಡೆದ ದಿನೇಶ್ ಮಂಗಳೂರು ನಿಧನರಾಗಿದ್ದಾರೆ. ಬ್ರೈನ್ ಸ್ಟ್ರೋಕ್ ನಿಂದಾಗಿ ಕುಂದಾಪುರದ ಸರ್ಜನ್ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ದಿನೇಶ್ (62) ಇಂದು ಮುಂಜಾನೆ 3.30ಕ್ಕೆ ನಿಧನರಾದರು.
ದಿನೇಶ್ ಮಂಗಳೂರು ಅವರಿಗೆ ಕಳೆದ ಒಂದು ವರ್ಷದ ಹಿಂದೆಯೇ ಸ್ಟ್ರೋಕ್ ಹೊಡೆದಿತ್ತು. ಇದರಿಂದ ಸರಿಯಾಗಿ ಮಾತನಾಡಲು ಸಾಧ್ಯವಾಗುತ್ತಿರಲಿಲ್ಲ. ಚಿತ್ರರಂಗದಿಂದ ದೂರವಾಗಿ ಕುಂದಾಪುರದಲ್ಲಿ ವಾಸವಾಗಿದ್ದರು.
ಮೂಲತಃ ಸಾಲಿಗ್ರಾಮ ಕೋಟದಿಂದ ಬಂದ ಕುಟುಂಬ ಇವರದ್ದು. ಆದರೆ ದಿನೇಶ್ ಹುಟ್ಟಿದ್ದು 1964ರಲ್ಲಿ ಘಟ್ಟದ ಮೇಲಿನ ಸಂತೆಕಟ್ಟೆ ಗ್ರಾಮದ ಕಾಲಸಸಿಯಲ್ಲಿ. ದಿನೇಶ್ ಮಂಗಳೂರು ಎಂದೇ ಜನಪ್ರಿಯರಾದ ಇವರ ಅಧಿಕೃತ ಹೆಸರು ದಿನೇಶ್ ಕೆ.ವಿ ಪೈ (ಕಾಲಸಸಿ ವೆಂಕಟೇಶ್ ಪೈ) ಎನ್ನುವುದಾಗಿತ್ತು.
ಕಾಲೇಜ್ ದಿನಗಳಲ್ಲಿ ಆಟೋಟ ಸ್ಪರ್ಧೆಗಳಲ್ಲಿ ಮಾತ್ರ ಆಸಕ್ತಿ ಹೊಂದಿದ್ದ ದಿನೇಶ್ ಗೆ ಕಲಾವಿದನಾಗುವ ಯಾವುದೇ ಕನಸಿರಲಿಲ್ಲ. ಆದರೆ ಕಾಲೇಜಿನಲ್ಲಿ ಮಾಡಿದ ‘ಈಡಿಪಸ್’ ನಾಟಕದ ಪಾತ್ರದಿಂದ ಅಭಿನಯದ ರುಚಿ ಸಿಕ್ಕಿತ್ತು. ಬೆಂಗಳೂರು ಬಸ್ ಹತ್ತಿ ಆದರ್ಶ ಫಿಲ್ಮ್ ಇನ್ಸ್ಟಿಟ್ಯೂಟ್ ಸೇರಿಕೊಂಡಿದ್ದರು. ಅಲ್ಲಿ ನಟ ಶಶಿಕುಮಾರ್ ಬ್ಯಾಚ್ಮೇಟ್ ಆಗಿದ್ದರು.
ಟಿ ಎಸ್ ನಾಗಾಭರಣ ಗರಡಿಯ ಪ್ರತಿಭೆ
ಖ್ಯಾತ ನಿರ್ದೇಶಕ ನಾಗಾಭರಣರಿಗೆ ಸಹಾಯಕರಾಗಿ ವೃತ್ತಿ ಬದುಕು ಶುರುಮಾಡಿದ ದಿನೇಶ್ ಮೊದಲ ಚಿತ್ರ ‘ಒಂಟಿ ಧ್ವನಿ’ ಅಗಿತ್ತು. ಹಾಗೆಯೇ ‘ಬೆನಕ’ ತಂಡದ ಮೂಲಕ ರಂಗಭೂಮಿ ನಂಟು ಶುರುವಾಗಿತ್ತು. ಭರಣರು ‘ಚಿನ್ನಾರಿ ಮುತ್ತ’ದ ಮೂಲಕ ದಿನೇಶ್ ರನ್ನು ಕಲಾ ನಿರ್ದೇಶನ ವಿಭಾಗಕ್ಕೆ ಸೇರಿಸಿದ್ದರು. ನಾಗರಭರಣರೇ ನಿರ್ದೇಶಿಸಿದ ಸಹಸ್ರಫಣ್ ಎನ್ನುವ ಹಿಂದಿ ಧಾರಾವಾಹಿ ಮೂಲಕ ಸ್ವತಂತ್ರ ಕಲಾನಿರ್ದೇಶಕರಾದರು. ಮೊದಲ ಕಲಾನಿರ್ದೇಶನ ಮಾಡಿದ ಚಿತ್ರ ‘ಜನುಮದ ಜೋಡಿ. ಪ್ರಶಸ್ತಿ ವಿಜೇತ ‘ನಾಗಮಂಡಲ’ ಚಿತ್ರದ ಕಲಾನಿರ್ದೇಶನದಲ್ಲಿ ಶಶಿಧರ ಅಡಪರ ಜತೆ ಕೈ ಜೋಡಿಸಿದ್ದರು. ದಿನೇಶ್ ರನ್ನು ಕಲಾವಿದರಾಗಿಯೂ ನಾಗಭರಣರೇ ಪರಿಚಯಿಸಿದ್ದರು. 1987ರಲ್ಲಿ ತೆರೆಕಂಡ ‘ಆಸ್ಫೋಟ’ದಲ್ಲಿ ತಮ್ಮ ಅಸಿಸ್ಟೆಂಟ್ ಆಗಿದ್ದಾಗಲೇ ದಿನೇಶ್ ಗೆ ನಟಿಸುವ ಅವಕಾಶ ನೀಡಿದ್ದರು. ಶಿವರಾಜ್ ಕುಮಾರ್ ನಟನೆಯ ನಂಜುಂಡಿಯಲ್ಲಿ ಕಂಬಳದ ಓಟಗಾರನಾಗಿ ಕಾಣಿಸಿದ್ದರು. ವಿಶ್ವ, ದಳವಾಯಿ, ಚಿಗುರಿದ ಕನಸು, ಮಾತಾಡು ಮಾತಾಡು ಮಲ್ಲಿಗೆ, ಸುದೀಪ್ ನಿರ್ದೇಶನದ ‘ಶಾಂತಿ ನಿವಾಸ’ ಸೇರಿದಂತೆ ಸುಮಾರು 50 ಸಿನಿಮಾಗಳಿಗೆ ಕಲಾನಿರ್ದೇಶನ ಮಾಡಿದ್ದರು.
‘ಶೆಟ್ಟಿ’ ಪಾತ್ರಗಳಿಂದಲೇ ಜನಪ್ರಿಯತೆ..!

ಬೆಂಗಳೂರು ಭೂಗತ ಲೋಕದ ಕಥೆ ಹೇಳಿದ ‘ಆ ದಿನಗಳು’ ಚಿತ್ರದ ‘ಶೆಟ್ಟಿ: ಪಾತ್ರ ನಟನಾಗಿ ಇವರಿಗೆ ಹೊಸ ಬ್ರೇ ನೀಡಿತ್ತು. ರಕ್ಷಿತ್ ಶೆಟ್ಟಿ ನಿರ್ದೇಶನದ ‘ಉಳಿದವರು ಕಂಡಂತೆ’, ಪ್ರಶಾಂತ್ ನೀಲ್ ನಿರ್ದೇಶನದ ‘ಕೆಜಿ ಎಫ್’ ಚಿತ್ರಗಳಲ್ಲಿಯೂ ಶೆಟ್ಟಿ ಪಾತ್ರದಲ್ಲೇ ಗಮನ ಸೆಳೆದಿದ್ದರು.
ಲಗ್ಗೆರೆ ನಿವಾಸದಲ್ಲಿ ಅಂತಿಮ ದರ್ಶನ
ಆರಂಭಕಾಲದಲ್ಲಿ ಬಡತನದ ಬದುಕು ಕಂಡಿದ್ದ ದಿನೇಶ್ ಬೆಂಗಳೂರು ದೂರದರ್ಶನ ಇದ್ದ ಕಟ್ಟಡದ ಫ್ಲೋರ್ ಮ್ಯಾನೇಜರ್ ಆಗಿಯೂ ವೃತ್ತಿಯಲ್ಲಿದ್ದರು. ಕಲಾವಿದನಾಗಿ ಮಾಡಿದ ರಂಗಭೂಮಿಗೆ ಸದಾ ಋಣಿಯಾಗಿದ್ದ ಇವರು
ರಂಗಭೂಮಿ ಮಂದಿಯನ್ನು ಸಬಲೀಕರಣಗೊಳಿಸಲು ಬೆಟ್ಟದ ಕೆಳಗೆ ರಂಗವೇದಿಕೆ ಸಿದ್ಧಪಡಿಸಿಕೊಂಡಿದ್ದರು.
ಸಿನಿಕನ್ನಡದ ಜತೆ ಮಾತನಾಡಿದ ದಿನೇಶ್ ಮಂಗಳೂರು ಕಿರಿಯ ಪುತ್ರ ಸಜನ್, ತಂದೆಯ ನಿಧನದ ಬಗ್ಗೆ ವಿವರ ನೀಡಿದ್ದಾರೆ. ಎರಡು ವಾರಗಳ ಹಿಂದೆ ಅನಾರೋಗ್ಯದಿಂದ ಕುಂದಾಪುರದ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ವಾರದ ಹಿಂದೆ ಮತ್ತೊಮ್ಮೆ ಬ್ರೈನ್ ಸ್ಟ್ರೋಕ್ ಆಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ 3.30ರ ಹೊತ್ತಿಗೆ ಕುಂದಾಪುರದಿಂದ ಸರ್ಜನ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾಗಿ ತಿಳಿಸಿದ್ದಾರೆ. ಕುಂದಾಪುರದಿಂದ ಪಾರ್ಥಿವ ಶರೀರವನ್ನು ಬೆಂಗಳೂರಿಗೆ ತರಲಾಗುತ್ತಿದೆ. ನಾಳೆ ಮಂಗಳವಾರ ಲಗ್ಗೆರೆಯ ಸ್ವಗೃಹಕ್ಕೆ ಸಮೀಪ ದಿನೇಶ್ ಅಂತ್ಯಕ್ರಿಯೆ ನಡೆಸುವ ಬಗ್ಗೆ ಕುಟುಂಬ ಯೋಜನೆ ಹಾಕಿಕೊಂಡಿದೆ.
ದಿನೇಶ್ ಅವರ ಇಬ್ಬರು ಗಂಡುಮಕ್ಕಳು ಕೂಡ ಚಿತ್ರರಂಗದಲ್ಲೇ ತೊಡಗಿಸಿಕೊಂಡಿದ್ದಾರೆ. ಹಿರಿಯ ಪುತ್ರ ಪವನ್ ಸೂರ್ಯ ಸಿದ್ದಾರ್ಥ್ ಎನ್ನುವ ಹೆಸರಿನಲ್ಲಿ ಸೇನಾಪುರ ಚಿತ್ರದಲ್ಲಿ ನಾಯಕರಾಗಿದ್ದರು. ಕಿರಿಯ ಪುತ್ರ ಸಜನ್. ದಿನೇಶ್ ಪತ್ನಿ ಭಾರತಿ ಕೂಡ ರಂಗಭೂಮಿ ಕಲಾವಿದೆಯಾಗಿ ಗುರುತಿಸಿಕೊಂಡಿದ್ದಾರೆ.
