ಇತ್ತೀಚಿನ ಪ್ರೇಕ್ಷಕರಿಂದ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಕೆ.ಜಿ.ಎಫ್ ಚಾಚ ಎಂದೇ ಗುರುತಿಸಿಕೊಂಡವರು ಹರೀಶ್ ರಾಯ್. ಅದಕ್ಕೂ ಮೊದಲು ಓಂ ಸಿನಿಮಾದಲ್ಲಿ ಶಿವಣ್ಣನಿಂದ “ರಾಯ್.. ರಾಯ್” ಎಂದೇ ಕರೆಸಿಕೊಂಡು ಜನಪ್ರಿಯರಾಗಿದ್ದರು. ಭೂಗತಲೋಕ ನಡುಗಿಸುವ ರೌಡಿಯಾಗಿ ನಟಿಸಿದ್ದ ಹರೀಶ್ ಅವರನ್ನು ಇದೀಗ ಕ್ಯಾನ್ಸರ್ ಎನ್ನುವ ಮಾರಕ ರೋಗ ಅಕ್ಷರಶಃ ನಡುಗಿಸುತ್ತಿದೆ.
ಹರೀಶ್ ರಾಯ್ ಗೆ ಕ್ಯಾನ್ಸರ್ ಕಾಡಿರುವುದು ಹೊಸ ಸುದ್ದಿಯಲ್ಲ. ಆದರೆ ವರ್ಷಗಳ ಹಿಂದೆಯೇ ಕ್ಯಾನ್ಸರ್ ಪೇಶೆಂಟ್ ಆಗಿ ಬಳಿಕ ಅದರಿಂದ ಚೇತರಿಸಿಕೊಂಡಂತೆ ಕಂಡಿದ್ದರು. ಆದರೆ ಇದೀಗ ರೋಗವು ತೀವ್ರವಾಗಿ ಉಲ್ಬಣಗೊಂಡಿದೆ. ಹರೀಶ್ ರಾಯ್ ಸಹಾಯಕ್ಕಾಗಿ ಆಗ್ರಹಿಸಿದ್ದಾರೆ.
ಹರೀಶ್ ರಾಯ್ ಗೆ ಹೆಸರು ಕೊಟ್ಟ ಸಿನಿಮಾಗಳ ನಾಯಕರು ಶಿವರಾಜ್ ಕುಮಾರ್ ಮತ್ತು ಯಶ್. ಆದರೆ ಹರೀಶ್ ರಾಯ್ ಗೆ ಕ್ಯಾನ್ಸರ್ ಕಾಡಿದ ಸಂದರ್ಭದಲ್ಲಿ ಶಿವರಾಜ್ ಕುಮಾರ್ ಕೂಡ ಚಿಕಿತ್ಸೆ ಪಡೆಯುತ್ತಿದ್ದರು. ಹಾಗಾಗಿ ಹರೀಶ್ ರಾಯ್ ವಿಚಾರ ಶಿವಣ್ಣನ ತನಕ ತಲುಪಿರುವ ಸಂದರ್ಭ ಕಡಿಮೆ. ಯಶ್ ಅವರಂತೂ ಕಷ್ಟ ಬಂದಾಗ ತನ್ನನ್ನು ನೆನಪಿಸುವಂತೆ ಹೇಳಿಕೊಂಡವರು. ಆದರೆ ಹರೀಶ್ ರಾಯ್ ಸ್ವಾಭಿಮಾನಿ. ಯಾರನ್ನೂ ನೇರವಾಗಿ ಸಂಪರ್ಕಿಸುವ ಪ್ರಯತ್ನ ಮಾಡಿಲ್ಲ. ಆದರೆ ಸೋಶಿಯಲ್ ಮೀಡಿಯಾದ ಮೂಲಕ ಹರೀಶ್ ರಾಯ್ ಅಸಹಾಯಕತೆಯ ಕೂಗು ಒಂದೇ ದಿನದಲ್ಲಿ ಧ್ರುವ ಸರ್ಜಾ ತನಕ ತಲುಪಿದೆ. ತಾನಿದ್ದೇನೆ ಎಂದು ಭರವಸೆ ನೀಡಿದ್ದಾಗಿ ಹರೀಶ್ ರಾಯ್ ಹೇಳಿದ್ದಾರೆ. ಇವೆಲ್ಲಕ್ಕಿಂತ ಆಚೆ ಎಲ್ಲರಿಗೆ ಕೃತಜ್ಞತೆ ಹೇಳುತ್ತಲೇ ದರ್ಶನ್ ಬಗ್ಗೆ ಮಾತಾಡಿ ಕಣ್ಣೀರಾಗಿದ್ದಾರೆ ಹರೀಶ್ ರಾಯ್.
“ನಾನು ಚೆನ್ನಾಗಿದ್ದಾಗಲೇ ನನ್ನ ಬಗ್ಗೆ ಅಕ್ಕರೆ, ಕಾಳಜಿ ತೋರಿದವರು ದರ್ಶನ್. ಇಂಥ ಸಂದರ್ಭದಲ್ಲಂತೂ ನನ್ನ ಕೈ ಬಿಡುತ್ತಲೇ ಇರಲಿಲ್ಲ. ಆದರೆ ಅವರಿಂದ ನನಗೆ ಈಗ ಸಹಾಯ ಸಿಕ್ಕಿಲ್ಲ ಎನ್ನುವುದಕ್ಕಿಂತಲೂ ಅವರ ಇಂದಿನ ಪರಿಸ್ಥಿತಿ ಬಗ್ಗೆಯೇ ನನಗೆ ಬೇಸರವಾಗಿದೆ. ನನ್ನ ಪಾಲಿನ ಪುಣ್ಯಾತ್ಮ ಅವರು. ಅಂಥ ದೊಡ್ಡ ಸ್ಟಾರ್ ಆರೋಪ ಹೊತ್ತು ಜೈಲು ಸೇರಿರುವುದು ನಿಜಕ್ಕೂ ನೋವಾಗಿದೆ. ಈ ಬಗ್ಗೆ ನಾನು ಅವತ್ತಿನಿಂದಲೇ ಹೇಳುತ್ತಾ ಬಂದಿದ್ದೇನೆ. ಮೊದಲು ಆದಷ್ಟು ಬೇಗ ಅವರು ನಿರಪರಾಧಿಯಾಗಿ ಹೊರಗೆ ಬರುವಂತಾಗಲಿ” ಎಂದು ಹಾರೈಸಿದ್ದಾರೆ. ದರ್ಶನ್ ಬಗ್ಗೆ ಮಾತನಾಡುವಾಗ ಹರೀಶ್ ರಾಯ್ ಕಣ್ಣೀರಧಾರೆಯನ್ನೇ ಹರಿಸಿದ್ದಾರೆ.
ವಿಶೇಷ ಏನೆಂದರೆ ದರ್ಶನ್ ಗೆ ಈ ಸುದ್ದಿ ತಲುಪದಿದ್ದರೂ ಅಭಿಮಾನಿಗಳು ಸಹಾಯಕ್ಕೆ ಮುಂದಾಗಿದ್ದಾರೆ. ಅಭಿಮಾನಿಗಳ ಇಂಥ ಹೃದಯವಂತ ವ್ಯಕ್ತಿತ್ವ ನೋಡಿಯೇ ದರ್ಶನ್ ಅವರಿಗೆ ‘ಸೆಲೆಬ್ರಿಟೀಸ್’ ಎಂದು ಕರೆಯುತ್ತಾರೆ. ತಾವು ಯಾವ ಸೆಲೆಬ್ರಿಟಿಗೂ ಕಡಿಮೆ ಇಲ್ಲ ಎನ್ನುವಂತೆ ಹರೀಶ್ ರಾಯ್ ಅಕೌಂಟ್ ಗೆ ಹ ಕಳಿಸಲು ಶುರುಮಾಡಿದ್ದಾರೆ. ಕಳಿಸುವ ಮೊತ್ತ ಎಷ್ಟು ಎನ್ನುವುದಕ್ಕಿಂತ ಕಳಿಸುವ ಮನಸು ತೋರಿರುವುದು ಯಾರ ಅಭಿಮಾನಿಗಳು ಎನ್ನುವುದು ಖಂಡಿತವಾ ಮುಖ್ಯವಾಗುತ್ತದೆ. ಹರೀಶ್ ರಾಯ್ ಆರೋಗ್ಯ ಆದಷ್ಟು ಬೇಗ ಸುಧಾರಿಸಲಿ ಎಂದು ಸಿನಿಕನ್ನಡ ಹಾರೈಸುತ್ತದೆ.
Google Pay/ PhonePe- 9606960656
ನಟ ಹರೀಶ್ ರಾಯ್ ಅವರಿಗೆ ಸಹಾಯ ಮಾಡಲು ಇಚ್ಛಿಸುವವರು, ಈ ಕೆಳಗಿನ ಬ್ಯಾಂಕ್ ಖಾತೆಗೆ ಅಥವಾ UPI ನಂಬರ್ ಗೆ ಹಣವನ್ನು ಪಾವತಿಸಬಹುದು.
Name – Harish Roy
Account Number – 38510865963
IFSC code – SBIN0004408
Bank – State Bank Of India
