ಚಿತ್ರ: ಅಂದೊಂದಿತ್ತು ಕಾಲ
ನಿರ್ದೇಶಕ: ಕೀರ್ತಿ ಕೃಷ್ಣಪ್ಪ
ನಿರ್ಮಾಪಕ: ಭುವನ್ ಸುರೇಶ್
ತಾರಾಗಣ: ವಿನಯ್ ರಾಜ್ ಕುಮಾರ್, ಅದಿತಿ ಪ್ರಭುದೇವ, ನಿಶಾ ರವಿಕೃಷ್ಣನ್ ಮೊದಲಾದವರು
ಪುನೀತ್ ರಾಜ್ ಕುಮಾರ್ ಸಿನಿಮಾ ರಿಲೀಸ್ ವೇಳೆ ಸಂಭ್ರಮಿಸುವ ಯುವಕನಾಗಿ ನಾಯಕನ ರಂಗ ಪ್ರವೇಶ. ನಿರ್ದೇಶಕನಾಗುವ ಕನಸು ಕಾಣುವ ಈ ಯುವಕನ ಸಿನಿಮಾಸಕ್ತಿ ಶುರುವಾದ ಕಾಲದ ಕಥೆಯಲ್ಲಿ ನಾಗರಹಾವು ಸಿನಿಮಾವೇ ಸ್ಫೂರ್ತಿ. ಶಾಲೆಗೆ ಚಕ್ಕರ್ ಹಾಕಿ ಚಿತ್ರಮಂದಿರಕ್ಕೆ ಹೋಗಿ ನೋಡುವ ಸಿನಿಮಾ ರಣಧೀರ. ಮೊದಲ ಬಾರಿ ಮೆಚ್ಚಿದ ಹುಡುಗಿಯನ್ನು ಕಂಡಿದ್ದು ರಂಗನಾಯಕಿ ಚಿತ್ರದ ಪ್ರಚಾರದ ವೇಳೆ. ಡಾ.ರಾಜ್ ಕುಮಾರ್ ಕುಟುಂಬದ ಒಬ್ಬ ಯುವ ನಾಯಕನನ್ನು ಹೇಗೆ ಎಲ್ಲ ಸಿನಿಮಾ ಪ್ರೇಮಿಗಳು, ತಾರೆಯರ ಅಭಿಮಾನಿಗಳು ಮೆಚ್ಚಿ ಸ್ವೀಕರಿಸಬೇಕು. ಅದಕ್ಕಾಗಿ ಹೇಗೆ ಪೂರಕ ವಾತಾವರಣ ಸೃಷ್ಟಿಸಬೇಕು ಎನ್ನುವುದನ್ನು ಅರ್ಥಮಾಡಿಕೊಂಡೇನೇ ಇಂಥ ದೃಶ್ಯಗಳನ್ನು ಸೇರಿಸಿಕೊಂಡ ನವ ನಿರ್ದೇಶಕ ಕೀರ್ತಿ ಕೃಷ್ಣಪ್ಪ ಬುದ್ಧಿವಂತರು. ಆದರೆ ಒಟ್ಟು ಸಿನಿಮಾ ಕೂಡ ಇಷ್ಟೇ ಬುದ್ಧಿವಂತಿಕೆಯಿಂದ ಪೂರ್ತಿ ಮಾಡಿದ್ದಾರ ಎನ್ನುವುದು ಪ್ರಶ್ನೆ.
ಅಂದೊಂದಿತ್ತು ಕಾಲ ಎನ್ನುವ ಹೆಸರಲ್ಲೇ ಇದು ಫ್ಲ್ಯಾಶ್ ಬ್ಯಾಕ್ ಕಥೆ ಹೇಳುವ ಸಿನಿಮಾ ಎನ್ನುವುದು ಎಲ್ಲರಿಗೂ ಗೊತ್ತಾಗಿರುವ ವಿಚಾರ. ಇದಕ್ಕೆ ತಕ್ಕಂತೆ ಕುಮಾರ ಎನ್ನುವ ಹುಡುಗನ ಬಾಲ್ಯಾವಸ್ಥೆಯಿಂದಲೇ ಕಥೆ ಶುರುವಾಗುತ್ತದೆ. ಸಿನಿಮಾಗೀಳು ಅಂಟಿಸಿಕೊಂಡ ಹುಡುಗ ನಿರ್ದೇಶಕನಾಗುವ ಕನಸು ಹೊತ್ತು ಬೆಂಗಳೂರು ಸೇರುತ್ತಾನೆ. ಅವಕಾಶ ಎನ್ನುವುದು ಮರೀಚಿಕೆಯಾಗುತ್ತದೆ. ಈ ಪ್ರಯತ್ನದಲ್ಲೇ ಹೇಗೆ ಸಾಧನೆ ಮಾಡುತ್ತಾನೆ ಎನ್ನುವುದೇ ಚಿತ್ರದ ಪ್ರಮುಖ ಅಂಶ. ಇಂಥದೊಂದು ಎಳೆ ಸಿನಿಮಾಗೆ ಹೊಸದೇನೂ ಅಲ್ಲ. ಮಾತ್ರವಲ್ಲ ಸಿನಿಮಾರಂಗಕ್ಕೆ ಬರಬೇಕು ಎಂದು ತಯಾರಿ ಇಲ್ಲದೆ ಬಂದು ಧುಮುಕುವವರ ಸತ್ಯ ಕಥೆಯೂ ಹೌದು. ಆದರೆ ಇಂಥ ಸಂದರ್ಭದಲ್ಲಿ ಅವೆಲ್ಲಕ್ಕಿಂತ ವಿಭಿನ್ನಗೊಳಿಸಲು ವೈಯಕ್ತಿಕ ವಿಶೇಷ ಅನುಭವಗಳಿರಬೇಕು. ಒಂದು ತಾಯಿ ಸೆಂಟಿಮೆಂಟ್ ಬಿಟ್ಟರೆ ಅಂಥ ಮನತಾಕುವ ಸನ್ನಿವೇಶ ಇಲ್ಲಿ ಇಲ್ಲ ಎನ್ನುವುದೇ ಈ ಚಿತ್ರದ ದುರಂತ.
ಬಾಲ್ಯದಲ್ಲಿ ಕುಮಾರನ ಸ್ನೇಹಿತರ ಬಳಗದ ಕಥೆ ಇದೆ. ಆದರೆ ಅವೆಲ್ಲ ಕ್ಲೀಶೆಯಾಗಿ ಕಾಣುತ್ತದೆ. ಮಧ್ಯಂತರದ ಬಳಿಕ ಪ್ರೇಯಸಿಯ ಪ್ರವೇಶವಾಗುತ್ತದೆ. ಕುಮಾರನಲ್ಲಿ ಆಕೆಯ ನೆನಪಿಗೊಂದು ಫ್ಲ್ಯಾ ಬ್ಯಾಕ್ ಘಟನೆ ಇದೆ ಎನ್ನುವುದರ ಹೊರತು ಇದು ಕೂಡ ಮಾಮೂಲಿ ಪ್ರೇಮ. ಇವೆಲ್ಲಕ್ಕಿಂತ ಶಾಲಾದಿನಗಳ ಕ್ರಶ್ ಹುಡುಗಿಯನ್ನು ತೋರಿಸಿದ ರೀತಿ ಮತ್ತು ಅಲ್ಲಿಟ್ಟಿರುವ ಟ್ವಿಸ್ಟ್ ಆಕರ್ಷಕ. ಬಹುಶಃ ಇದು ಯಾವುದೋ ಪರಭಾಷಾ ಚಿತ್ರಗಳಿಂದ ಎತ್ತಿಕೊಂಡಿರಬಹುದೇ ಎನ್ನುವ ಸಂದೇಹ ಮೂಡಿದರೆ ಅದು ಹೊಸ ನಿರ್ದೇಶಕರ ಮೇಲಿನ ಅಪನಂಬಿಕೆ ಎನ್ನುವುದಲ್ಲ. ಆ ಮಟ್ಟದ ಸೃಜನಶೀಲತೆ ತೋರಿದ್ದಾರೆ!
ಕಥಾನಾಯಕ ಕುಮಾರನಾಗಿ ವಿನಯ್ ರಾಘವೇಂದ್ರ ಪಾತ್ರಕ್ಕೆ ತಕ್ಕ ನಟನೆ ನೀಡಿದ್ದಾರೆ. ಹಳ್ಳಿಯಿಂದ ನಿರ್ದೇಶಕನಾಗಲು ಬರುವ ಒಬ್ಬ ಹುಡುಗ ಹೇಗಿರುತ್ತಾನೋ ಹಾಗೆಯೇ ಕಾಣುತ್ತಾರೆ. ಮೀಸೆ, ಗಡ್ಡ ಬೋಳಿಸಿ ವಿದ್ಯಾರ್ಥಿಯಾದಾಗ ಒಪ್ಪಬಹುದು ಅನಿಸುವಂತೆ ಕಾಣಿಸಿದ್ದಾರೆ. ಸಹಾಯಕ ನಿರ್ದೇಶಕನಾಗಲು ಬಂದು ಅಡುಗೆ ಆಳಿನಂತಾಗುವ ದುಸ್ಥಿತಿಯನ್ನು ಹೇಸಿಕೊಳ್ಳದೆ ಅಭಿನಯಿಸಿದ್ದಾರೆ. ಇವೆಲ್ಲ ಕಾರಣಕ್ಕೆ ವಿನಯ್ ರಾಜ್ ಕುಮಾರ್ ಖಂಡಿತವಾಗಿ ಪ್ರಶಂಸಾರ್ಹರು. ಮಧ್ಯಂತರದ ಬಳಿಕ ಪ್ರವೇಶಿಸುವ ವಸುಂಧರಾ ಎನ್ನುವ ಪ್ರೇಯಸಿಯ ಪಾತ್ರವನ್ನು ಅದಿತಿ ಪ್ರಭುದೇವ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಹಾಡು, ಸಂಭಾಷಣೆ, ಭಾವುಕತೆ ಎಲ್ಲೆಲ್ಲೂ ಅದಿತಿಯ ಒಳಗೊಳ್ಳುವಿಕೆ ಎದ್ದು ಕಾಣುವಂತಿದೆ. ಆದರೆ ಚಿತ್ರದ ಪ್ರಮುಖ ಘಟ್ಟ ಅಂದರೆ ತಾಯಿ ಜತೆಗಿನ ದೃಶ್ಯ. ಕುಮಾರನ ತಾಯಿಯಾಗಿ ನಟಿಸಿರುವ ವೀಣಾ ಬಾಲಾಜಿ ತಮ್ಮ ಮಾತೃಪ್ರೀತಿಯನ್ನು ಮಾತಲ್ಲಿ, ನೋಟದಲ್ಲಿ ಮಾತ್ರವಲ್ಲ ಕೈ ಬೆರಳುಗಳ ಚಲನೆಯಲ್ಲೂ ತೋರಿಸಿದ್ದಾರೆ. ಬ್ಯಾನರ್ ಮೇಲೆ ಮಗನ ಹೆಸರಿರುವ ಜಾಗವನ್ನು ಮೊದಲ ಬಾರಿ ನೋಡಿ ಸವರುವಲ್ಲಿ ತಾಯಿಯ ಮಮತೆಯನ್ನು ಮನಮುಟ್ಟುವಂತೆ ಪ್ರದರ್ಶಿಸಿದ್ದಾರೆ. ಪೋಷಕ ಪಾತ್ರಗಳ ವಿಚಾರಕ್ಕೆ ಬಂದರೆ ಪ್ರೊಡಕ್ಷನ್ ಮ್ಯಾನೇಜರ್ ಸಂಪಂಗಿಯಾಗಿ ಕಡ್ಡಿಪುಡಿ ಚಂದ್ರು ಎಂದಿನಂತೆ ನೈಜ ನಟನೆ ನೀಡಿದ್ದಾರೆ.
ರವಿಚಂದ್ರನ್ ಯಾವಾಗ ಬರುತ್ತಾರೆ ಎಂದು ಕಾಯುವ ಪ್ರೇಕ್ಷಕರಿಗೆ ರಿಯಾಲಿಟಿ ಶೋ ಒಂದರ ನಿರೂಪಕರಾಗಿ ಕ್ರೇಜಿಸ್ಟಾರ್ ಕಾಣಿಸುತ್ತಾರೆ. ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮವನ್ನು ಹೋಲುವ ಈ ಕಾರ್ಯಕ್ರಮಕ್ಕೆ ‘ಮೆಮೋರಿಸ್ ವಿತ್ ರವಿಚಂದ್ರನ್’ ಅಂತ ಹೆಸರು. ಇಲ್ಲಿ ರವಿಚಂದ್ರನ್ ತಮ್ಮದೇ ಪಾತ್ರವನ್ನು ಅಭಿನಯಿಸಿದ್ದಾರೆ. ಆದರೂ ಕುಮಾರನ ಪಾತ್ರ ಬಾಲ್ಯದಲ್ಲಿ ಕದ್ದುಮುಚ್ಚಿ ರಣಧೀರ ಚಿತ್ರ ನೋಡಿದ್ದನ್ನು ಹೇಳಿಕೊಳ್ಳುವುದಿಲ್ಲ.
ನಿರ್ದೇಶಕನಾಗುವ ಅವಕಾಶಕ್ಕಾಗಿ ಹೋರಾಡುವ ಕಥೆ ಕನ್ನಡಕ್ಕೆ ಹೊಸದೇನಲ್ಲ. ಆದರೆ ಹೊಸನಿರ್ದೇಶಕನ ಜತೆಗೆ Aಯಲ್ಲಿ ತೋರಿಸಿದಂಥ ಅದ್ಭುತ ಚಿತ್ರಕಥೆ ಇದ್ದಾಗಲೇ ಪ್ರೇಕ್ಷಕರು ಸ್ವೀಕರಿಸುತ್ತಾರೆ. ಅದರಾಚೆ ತೀರ ವೈಯಕ್ತಿಕ ಅಥವಾ ಸಾಮಾನ್ಯ ಅನಿಸುವ ಹೋರಾಟದ ಚಿತ್ರವಾದಾಗ ಅದು ‘ಯುಐ’ ಮಾದರಿಯಲ್ಲಿ ಮೂಲೆ ಸೇರುತ್ತದೆ. ಮೊದಲ ಚಿತ್ರದಲ್ಲೇ ಹೊಸ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಬಗ್ಗೆ ನಿರ್ದೇಶಕರಿಗೆ, ನಿರ್ಮಾಪಕರಿಗೆ, ವಿತರಕರಿಗೆ ಪಾಠ ಮಾಡಿದ್ದಾರೆ. ಈ ಚಿತ್ರದಿಂದ ಸ್ವತಃ ಏನು ಕಲಿತೆ ಎಂದು ಮುಂದಿನ ದಿನಗಳಲ್ಲಿ ಖುದ್ದಾಗಿ ನಿರ್ದೇಶಕರೇ ಹೇಳಬಹುದು. ಒಂದಂತೂ ನಿಜ. ಕೀರ್ತಿ ಕೃಷ್ಣಪ್ಪ ಭರವಸೆಯ ನಿರ್ದೇಶಕ.
