ನಿರ್ದೇಶಕ ಮಹೇಶ್ ಕುಮಾರ್ ಮತ್ತೊಂದು ಪ್ರಾಜೆಕ್ಟ್ ಜತೆ ಸಿದ್ಧವಾಗಿದ್ದಾರೆ. ಈ ಬಾರಿ ಮಹೇಶ್ ಚಿತ್ರದಲ್ಲಿ ಚಿಕ್ಕಣ್ಣ ಕಾಣಿಸುತ್ತಿರುವುದು ವಿಶೇಷ.
ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಮಹೇಶ್ ಕುಮಾರ್ ಮತ್ತು ಜ್ಯೂನಿಯರ್ ರೆಬಲ್ ಸ್ಟಾರ್ ಅಭಿಷೇಕ್ ಗೌಡ ಕಾಂಬಿನೇಶನ್ ನಲ್ಲಿನ ಸಿನಿಮಾ ಸಿದ್ಧಗೊಳ್ಳಬೇಕಿತ್ತು. ಆದರೆ ನವಜಾತ ಶಿಶುವಿಗೆ ತಂದೆಯಾಗಿರುವ ಅಭಿಷೇಕ್ ಇನ್ನಷ್ಟು ಕಾಲ ಕುಟುಂಬಕ್ಕೆ ಮೀಸಲಿಡಲು ತೀರ್ಮಾನಿಸಿದ್ದಾರೆ. ಮಾತ್ರವಲ್ಲ, ಅದೊಂದು ಐತಿಹಾಸಿಕ ಮಾದರಿ ಸಿನಿಮಾವಾದ ಕಾರಣ ಚಿತ್ರಕ್ಕಾಗಿ ವಿಶೇಷ ತಯಾರಿಯನ್ನೂ ಮಾಡಬೇಕಾಗಿದೆ. ಇದರ ಮಧ್ಯದಲ್ಲೇ ಮಹೇಶ್ ಕುಮಾರ್ ಚಿಕ್ಕಣ್ಣನ ಜತೆ ಸಿನಿಮಾ ಮಾಡುತ್ತಿದ್ದಾರೆ.
ಹಾಸ್ಯನಟನಾಗಿ ಎಲ್ಲರನ್ನೂ ನಗಿಸಿರುವ ಚಿಕ್ಕಣ್ಣನಿಗೆ ನಾಯಕನಾಗಿ ಇದು ನಾಲ್ಕನೇ ಸಿನಿಮಾ. ಕೆ ಸೋಮಶೇಖರ್ ನಿರ್ಮಾಣದಲ್ಲಿ ಸಿನಿಮಾ ಸಿದ್ಧಗೊಳ್ಳಲಿದ್ದು ಅಕ್ಟೋಬರ್ ನಿಂದ ಚಿತ್ರೀಕರಣ ಶುರುವಾಗಲಿದೆ. ಇತ್ತೀಚೆಗಷ್ಟೇ ನಿಶ್ಚಿತಾರ್ಥ ಮಾಡಿಕೊಂಡಿರುವ ಚಿಕ್ಕಣ್ಣ ಮದುವೆಗೂ ಮೊದಲು ಮತ್ತೊಮ್ಮೆ ನಾಯಕನಾಗಲು ಸಿದ್ಧರಾಗಿದ್ದಾರೆ.
ಮಹೇಶ್ ಕುಮಾರ್ ನಿರ್ದೇಶನದಲ್ಲಿ ನೀನಾಸಂ ಸತೀಶ್ ನಾಯಕರಾಗಿ ನಟಿಸಿದ ಅಯೋಗ್ಯ ಚಿತ್ರ ಶತದಿನೋತ್ಸವ ಆಚರಿಸಿ ಎಲ್ಲರ ಗಮನ ಸೆಳೆದಿತ್ತು. ಬಳಿಕ ಶ್ರೀಮುರಳಿ ನಟನೆಯ ಮದಗಜ ಚಿತ್ರದ ಮೂಲಕ ಮತ್ತೊಂದು ಗೆಲವು ಕಂಡಿದ್ದರು. ಮಹೇಶ್ ಮತ್ತೊಮ್ಮೆ ಸತೀಶ್ ರಚಿತಾ ಜೋಡಿಯನ್ನು ಒಂದಾಗಿಸಿರುವ ಅಯೋಗ್ಯ 2 ಚಿತ್ರೀಕರಣ ಪೂರ್ತಿಯಾಗಿದೆ. ಇತ್ತೀಚೆಗಷ್ಟೇ ವೈವಾಹಿಕ ಬದುಕಿಗೂ ಕಾಲಿಟ್ಟಿರುವ ಮಹೇಶ್ ಕುಮಾರ್ ಅವರದ್ದು ಚಿತ್ರರಂಗದಲ್ಲಿ ಸದಾ ಚುರುಕಿನ ಹೆಜ್ಜೆ. ಇದೀಗ ಅಯೋಗ್ಯ 2 ಬಿಡುಗಡೆಗೂ ಮೊದಲೇ ಮಹೇಶ್ ಹೊಸ ಚಿತ್ರವನ್ನು ಘೋಷಿಸಿದ್ದಾರೆ. ಅಕ್ಟೋಬರ್ ಐದರಂದು ಚಿತ್ರದ ಮುಹೂರ್ತ ನೆರವೇರಲಿದ್ದು, ಅದೇ ದಿನ ಶೀರ್ಷಿಕೆಯನ್ನು ಘೋಷಿಸಲಿದ್ದಾರೆ.
