ತನಿಷಾ ಕುಪ್ಪಂಡ ನಟಿಯಾಗಿ ಎಲ್ಲರಿಗೂ ಗೊತ್ತು. ಆದರೆ ಈ ಬಾರಿ ಕೋಣ ಚಿತ್ರದ ಮೂಲಕ ನಿರ್ಮಾಪಕಿಯಾಗಿ ದೊಡ್ಡ ಮಟ್ಟದ ಅವತಾರವನ್ನೇ ಎತ್ತಿದ್ದಾರೆ. ಸಿನಿಮಾ ಇದೇ ವಾರ ತೆರೆಗೆ ಬರುತ್ತಿದೆ.
ತನಿಷಾ ಕುಪ್ಪಂಡ ಒಂದು ಚಿತ್ರ ನಿರ್ಮಾಣ ಮಾಡಿ ಅದರಲ್ಲಿ ನಟಿಸುತ್ತಿದ್ದಾರೆ ಅಂದರೆ ಅದು ನಾಯಕಿ ಪ್ರಧಾನ ಚಿತ್ರವೇ ಇರಬೇಕು ಎನ್ನುವ ಊಹೆ ಸಾಮಾನ್ಯ. ಮಾತ್ರವಲ್ಲ ಆ ನಾಯಕಿ ಪಾತ್ರ ಖುದ್ದಾಗಿ ತನಿಷಾ ಮಾಡುತ್ತಾರೆ ಎನ್ನುವ ನಿರೀಕ್ಷೆ ಕೂಡ ಸಹಜ. ಆದರೆ ಇವೆಲ್ಲವನ್ನೂ ಸುಳ್ಳಾಗಿಸುವಂತೆ ಸೆನ್ಸೇಶನಲ್ ಸ್ಟಾರ್ ಕೋಮಲ್ ಕುಮಾರ್ ರನ್ನೇ ನಾಯಕರಾಗಿಸಿದ್ದಾರೆ. ಮಾತ್ರವಲ್ಲ ಗ್ಲಾಮರ್ ಗೆ ಹೆಸರಾದ ತಾವು ನಟನಾ ಪ್ರಧಾನ ಪಾತ್ರವನ್ನು ನಿರ್ವಹಿಸಿದ್ದಾರೆ.
ದುಡ್ಡು ಮಾಡಬೇಕು, ಸ್ಟಾರ್ ಆಗುವ ಪಾತ್ರ ಮಾಡಬೇಕು ಎನ್ನುವ ಕಾರಣಕ್ಕೆ ನಿರ್ಮಾಣ ಕ್ಷೇತ್ರಕ್ಕೆ ಪ್ರವೇಶಿಸುವವರ ಮಧ್ಯೆ ತನಿಷಾ ಕುಪ್ಪಂಡ ವಿಭಿನ್ನವಾಗಿ ಕಾಣಿಸುತ್ತಾರೆ. ತಾವೇ ದುಡ್ಡು ಹಾಕಿದ್ದರೂನು ಇಲ್ಲಿ ಡಿಗ್ಲಾಮರೈಸ್ಡ್ ಆಗಿರುವ ಪಾತ್ರವನ್ನೇ ಆಯ್ದುಕೊಂಡಿರುವುದು ತನಿಷಾ ಬುದ್ಧಿಮತ್ತೆಗೆ ಸಾಕ್ಷಿಯಾಗಿದೆ. ಮಾತ್ರವಲ್ಲ ಇದೀಗ ಚಿತ್ರ ನಿರ್ಮಾಣ ಪೂರ್ತಿಯಾದ ಬಳಿಕ ನಿರ್ಮಾಪಕಿಯ ಹುದ್ದೆ ಎಷ್ಟು ದೊಡ್ಡದು ಎನ್ನುವ ಅನುಭವವಾಗಿದೆ ಎನ್ನುತ್ತಾರೆ.
ತನಿಷಾ ಈ ಹಿಂದೆ ತಮಿಳಿನಲ್ಲಿ ‘ಲಕ್ಷ್ಮೀ ಸ್ಟೋರ್ಸ್’ ಎನ್ನುವ ಧಾರಾವಾಹಿಯೊಂದರಲ್ಲಿ ನಟಿಸುತ್ತಿದ್ದರು. ಆಗ ಅದರ ನಿರ್ಮಾಪಕಿಯೂ ಆಗಿದ್ದ ಖುಷ್ಬೂ ಅದರಲ್ಲಿ ಪ್ರಮುಖ ಪಾತ್ರವನ್ನು ಕೂಡ ನಿಭಾಯಿಸುತ್ತಿದ್ದರು. ಆದರೆ ಲೊಕೇಶನ್ ಗೆ ಬಂದಾಗ ಅಲ್ಲಿ ಖುಷ್ಬೂ ಅವರಿಗೆ ನಿರ್ಮಾಪಕಿಯಾಗಿ ಸಿಕ್ಕಂಥ ಮರ್ಯಾದೆ, ಅವರು ತೆಗೆದುಕೊಳ್ಳುತ್ತಿದ್ದ ತೀರ್ಮಾನಗಳು ಇವೆಲ್ಲವನ್ನು ನೋಡಿದಾಗ ತಮಗೂ ಇಂಥದೊಂದು ಜವಾಬ್ದಾರಿಯ ಸ್ಥಾನಮಾನ ನಿಭಾಯಿಸಬೇಕು ಎನ್ನುವ ಆಸೆ ಹುಟ್ಟಿದ್ದಾಗಿ ಹೇಳ್ತಾರೆ ತನಿಷಾ. ಇದೀಗ ತನಿಷಾ ಕನಸು ನನಸಾಗಿದೆ. ನಿರ್ಮಾಪಕಿಯಾದ ಮೇಲೆ ಕೂಡ ತಮ್ಮ ಯೋಚನಾ ಶೈಲಿಯಲ್ಲಿ ಸ್ವಲ್ಪವೂ ಬದಲಾವಣೆ ಮಾಡಿಕೊಂಡಿಲ್ಲ. ಒಂದೊಳ್ಳೆಯ ಪ್ರಾಜೆಕ್ಟ್ ತರಬೇಕು ಎನ್ನುವ ಉದ್ದೇಶವನ್ನಷ್ಟೇ ಇರಿಸಿಕೊಂಡಿದ್ದಾರೆ. ಇದಕ್ಕೆ ನಿರ್ದೇಶಕರ ಜತೆಯಲ್ಲೇ ಸ್ಟಾರ್ ನಾಯಕ ಕೋಮಲ್ ಸಹಕಾರವೂ ದೊರಕಿದೆ.
ಕೋಮಲ್ ಕುಮಾರ್ ಅಂದೊಡನೆ ಜಗ್ಗೇಶ್ ತಮ್ಮ ಎನ್ನುವುದು, ಹಾಸ್ಯಾತ್ಮಕ ಪಾತ್ರಗಳೋ ಇಮೇಜ್ ಎನ್ನುವುದು ನೆನಪಾಗುವುದು ಸಹಜ. ಆದರೆ ಕೋಮಲ್ ಮಾತ್ರ ಪ್ರತಿ ಬಾರಿಯೂ ಚಿತ್ರದಿಂದ ಚಿತ್ರಕ್ಕೆ ವೈವಿಧ್ಯಮಯ ಪಾತ್ರಗಳನ್ನು ಆಯ್ಕೆ ಮಾಡುತ್ತಾ ಬಂದಿದ್ದಾರೆ. ಪ್ರಸ್ತುತ ಕೋಣದಲ್ಲಿ ಕೂಡ ಜಾತ್ರೆಗಳಲ್ಲಿ ಕಂಪ್ಯೂಟರ್ ಇಟ್ಕೊಂಡು ಭವಿಷ್ಯ ಹೇಳುತ್ತಾ ಅಲೆದಾಡುವ ಅಲೆಮಾರಿಯ ಪಾತ್ರ ನಿರ್ವಹಿಸಿದ್ದಾರೆ. ಆತನದೊಂದು ಪ್ರೇಮದಾಂಪತ್ಯದ ಹಿನ್ನೆಲೆ ಕೂಡ ಈ ಸಿನಿಮಾದಲ್ಲಿದೆ. ಆದರೆ ಅವೆಲ್ಲವನ್ನೂ ದಾಟಿ ಕೋಮಲ್ ಈಚಿತ್ರದಲ್ಲಿ ತುಸು ಹೆಚ್ಚೇ ತೊಡಗಿಸಿಕೊಂಡಿದ್ದಾರೆ.
ಸಾಮಾನ್ಯವಾಗಿ ಚಿತ್ರರಂಗ ಪ್ರವೇಶಿಸಿ ಒಂದು ಸಿನಿಮಾ ಮಾಡುತ್ತಿದ್ದ ಹಾಗೆ ತನ್ನನ್ನು ತಾನೇ ಸ್ಟಾರ್ ಎಂದುಕೊಳ್ಳುವವರೇ ಅಧಿಕ. ಆದರೆ ಜಗ್ಗೇಶ್ ಎನ್ನುವ ಸ್ಟಾರ್ ನಟನ ತಮ್ಮನಾಗಿದ್ದರೂ ತಮ್ಮನ್ನು ಸೆನ್ಸೇಶನಲ್ ಸ್ಟಾರ್ ಎನ್ನುವ ಬಿರುದು ಇದ್ದರೂ ತಮ್ಮ ಅಂಕೆ ಎಷ್ಟು ಎಂದು ತಮಗೆ ಗೊತ್ತು ಎಂದು ವಿನಯ ಪ್ರದರ್ಶಿಸುತ್ತಾರೆ ಕೋಮಲ್. ಅವರ ಪ್ರಕಾರ ತಾವು ಎ ಕೆಟಗರಿಯಲ್ಲಿರುವ ನಟರ ಸಾಲಿನಲ್ಲಿಲ್ಲ. ತಮಿಳಲ್ಲಿ ಅವಕಾಶ ಸಿಕ್ಕಿದರೂ ನಾನು ಅವರಿಗೆಲ್ಲ ಪರಿಚಿತ ನಟ ಎಂದುಕೊಂಡಿಲ್ಲ. ನಿರ್ಮಾಪಕನಾಗಿಯೂ ಅನುಭವ ಇರುವ ಕಾರಣ ನಿರ್ಮಾಣದಲ ಹಣ ಪೋಲಾಗದಿರುವುದು ಮುಖ್ಯ ಎನ್ನುತ್ತಾರೆ. ತನಗೆ ಕ್ಯಾರವಾನ್ ಗೆ ಹಾಕುವ ದುಡ್ಡು ವೇಸ್ಟ್. ಪರದೆಯ ಮೇಲೆ ಕಾಣಿಸುವ ಖರ್ಚು ಮಾತ್ರ ಕಥೆಗೆ ಅಗತ್ಯವಾಗಿರುತ್ತದೆ ಎನ್ನುತ್ತಾರೆ. ಚಿತ್ರದ ಹಾಡುಗಳ ಹಕ್ಕು ತಾವೇ ಪಡೆದಿದ್ದಾರೆ. ಇದೆಲ್ಲವೂ ಕೋಮಲ್ ಅವರಿಗೆ ಚಿತ್ರದ ಮೇಲಿರುವ ನಂಬಿಕೆಯನ್ನು ತೋರಿಸುತ್ತದೆ.
ತನಿಷಾ ಕುಪ್ಪಂಡ ಬಿಗ್ ಬಾಸ್ ಮೂಲಕ ಹೆಸರಾದವರು. ಕೋಣ ಚಿತ್ರದಲ್ಲಿ ಕೂಡ ಬಿಗ್ ಬಾಸ್ ಸೇರಿದಂತೆ ಕಿರುತೆರೆ ರಿಯಾಲಿಟಿ ಶೋಗಳ ಪ್ರಮುಖ ಕಲಾವಿದರ ದಂಡೇ ಇದೆ. ಇವೆಲ್ಲದರೊಂದಿಗೆ ಇದು ಮೂಢ ನಂಬಿಕೆಯ ವಿರುದ್ಧ ಸಂದೇಶ ಸಾರುವ ಸಿನಿಮಾ ಎಂದಿದ್ದಾರೆ ಕೋಮಲ್. ಹೀಗಾಗಿಯೇ ಕೋಣದ ಪಾತ್ರ ಏನು ಎನ್ನುವುದು ಎಲ್ಲರಲ್ಲೂ ಕುತೂಹಲ ಮೂಡಿಸಿದೆ.
