ವಿನೋದ್ ಪ್ರಭಾಕರ್ ನಟನೆಯ ಬಹು ನಿರೀಕ್ಷಿತ ಸಿನಿಮಾ ಬಲರಾಮನ ದಿನಗಳು. ಆ ದಿನಗಳು ಎನ್ನುವ ಗಮನಾರ್ಹ ಚಿತ್ರ ನೀಡಿದ್ದ ನಿರ್ದೇಶಕ ಕೆ. ಎಮ್ ಚೈತನ್ಯ ನಿರ್ದೇಶನದ ಸಿನಿಮಾ ಇದು. ಈ ಬಾರಿ ಕಲ್ಕಿ 2898 ಎ.ಡಿ ಖ್ಯಾತಿಯ ಸಂಗೀತ ನಿರ್ದೇಶಕ ನಾರಾಯಣ್ ಸಂಗೀತ ನೀಡಿದ್ದಾರೆ. ಚಿತ್ರದ ಹಾಡುಗಳು ಟಿ ಸಿರೀಸ್ ಸಂಸ್ಥೆಗೆ ನೀಡಲಾದ ಸಂಭ್ರಮವನ್ನು ಕೇಕ್ ಕತ್ತರಿಸಿ ಆಚರಿಸಲಾಯಿತು.
ಚಿತ್ರದ ನಾಯಕ ವಿನೋದ್ ಪ್ರಭಾಕರ್ ಮಾತನಾಡಿ “ನನ್ನ ವೃತ್ತಿ ಬದುಕಿನಲ್ಲಿ ದೊಡ್ಡ ಮೊತ್ತದ ಮ್ಯೂಸಿಕ್ ರೈಟ್ಸ್ ಪಡೆದುಕೊಂಡ ಸಿನಿಮಾ ಇದು” ಎಂದರು. ಟಿ ಸೀರೀಸ್ ಸಂಸ್ಥೆ ಹಾಡುಗಳನ್ನು ಕೊಂಡಿದ್ದು ಸಂಸ್ಥೆಯ ಸೌತ್ ಹೆಡ್ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಸಂತೋಷ್ ನಾರಾಯಣ್ ಅವರ ಸಂಗೀತವೇ ಈ ಚಿತ್ರಕ್ಕೆ ಪಿಲ್ಲರ್. ಮೊದಲ ಟ್ಯೂನ್ ಬಂದಾಗಲೇ ನಮಗೆ ಇಷ್ಟವಾಗಿತ್ತು ಎಂದು ವಿನೋದ್ ಪ್ರಭಾಕರ್ ಹೇಳಿದರು.
ಚಿತ್ರದ ನಾಯಕಿ ಸಂಜನಾ ಆನಂದ್ ಮಾತನಾಡಿ ನಾನು ಈ ಸಿನಿಮಾವನ್ನು ಸಂತೋಷ್ ನಾರಾಯಣ್ ಅವರಿಗಾಗಿ ಒಪ್ಪಿಕೊಂಡೆ. ಅವರ ಸಂಗೀತದಲ್ಲಿ ಒಂದು ಸಿನಿಮಾ ಮಾಡುವುದು ನನ್ನ ಕನಸಾಗಿತ್ತು. ಈಗ ನನಸಾಯಿತು ಎಂದು ಖುಷಿ ವ್ಯಕ್ತಪಡಿಸಿದರು.
ಪದ್ಮಾವತಿ ಫಿಲ್ಮ್ಸ್ ಬ್ಯಾನರ್ ನಲ್ಲಿ ಪದ್ಮಾವತಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ನಿರ್ಮಾಪಕಿಯ ಪುತ್ರ ಹಾಗೂ ಸಹ ನಿರ್ಮಾಪಕ ಶ್ರೇಯಸ್ ಮಾತನಾಡಿ “ಇಬ್ಬರು ಮಹಿಳೆಯರು ಈ ಚಿತ್ರ ನಿರ್ಮಾಣದಲ್ಲಿ ನನ್ನ ಶಕ್ತಿಯಾಗಿದ್ದಾರೆ” ಎಂದು, ತಾಯಿ ಮತ್ತು ನಿರ್ದೇಶಕರ ಪತ್ನಿಯ ಹೆಸರನ್ನು ಉಲ್ಲೇಖಿಸಿದರು. ಯಾಕೆಂದರೆ ಸಂತೋಷ್ ನಾರಾಯಣ್ ಸಂಗೀತ ಬೇಕೆನ್ನುವ ತನ್ನ ಮತ್ತು ವಿನೋದ್ ಪ್ರಭಾಕರ್ ಪ್ರಯತ್ನ ಸಫಲವಾಗಲು ಅವರೇ ಕಾರಣ ಎಂದರು. “ಪ್ರಸ್ತುತ ಕಲ್ಕಿ ಪಾರ್ಟ್ 2 ಗೆ ಸಂಗೀತ ಕೊಡುತ್ತಿದ್ದಾರೆ. ಅವರು ಈ ಸಣ್ಣ ಬಜೆಟ್ ಚಿತ್ರ ಒಪ್ತಾರಾ? ನಮ್ಮ ಸಿನಿಮಾದ ಅರ್ಧ ಬಜೆಟ್ ಅವರಿಗೇನೇ ಕೊಡಬೇಕಾಗುತ್ತೆ” ಅಂತ ನಿರ್ದೇಶಕರು ಹೇಳಿದ್ರು. ಅವರು ಒಪ್ಪಿದ ಬಳಿಕ ಒಟ್ಟು ಚಿತ್ರದ ಬಜೆಟ್ ಹೆಚ್ಚಾದಾಗ, ಟಿ ಸಿರೀಸ್ ಗೆ ಹಾಡಿನ ರೈಟ್ಸ್ ಕೊಟ್ಟು ನಮಗೆ ಹೊಸ ಸಿನಿಮಾ ಮಾಡುವಷ್ಟು ಹಣ ಗಳಿಸಲು ಸಾಧ್ಯವಾಯಿತು ಎಂದರು.
ನಿರ್ದೇಶಕ ಕೆ.ಎಮ್. ಚೈತನ್ಯ ತಾವು ಸಂಗೀತದ ಬಗ್ಗೆ ಮಾತ್ರ ಮಾತಾಡುವುದಾಗಿ ಹೇಳಿದರು. “ಆ ದಿನಗಳು ಟೈಮ್ ನಲ್ಲಿ ನನ್ನ ಅಸಿಸ್ಟೆಂಟ್ ಆಗಲು ಬಂದಿದ್ದವರು ಕಾರ್ತಿಕ್ ಸುಬ್ಬರಾಜು. ಅವರ ಚಿತ್ರಕ್ಕೆ ಸಂಗೀತ ನೀಡಿ ಹೆಸರದಾವರು ಸಂತೋಷ್ ನಾರಾಯಣ್. ಹೀಗಾಗಿ ಕಾರ್ತಿಕ್ ಸುಬ್ಬರಾಜು ಮೂಲಕ ಸಂತೋಷ್ ನಾರಾಯಣ್ ಅವರನ್ನು ಸಂಪರ್ಕಿಸಿದೆ. ಈಗ ಗ್ಯಾಂಗ್ ಸ್ಟರ್ ಸಿನಿಮಾ ಮ್ಯೂಸಿಕ್ ಅಂದರೆ ಭಾರತದಲ್ಲೇ ಸಂತೋಷ್ ನಾರಾಯಣ್ ಅಂತ ಆಗಿದ್ದಾರೆ. ಇಂದು ರಿಲೀಸಾಗಿರುವ “ಶುರು.. ಶುರು..” ಹಾಡಿನ ಟ್ಯೂನ್ ಕೇಳಿಯೇ ಜಯಂತ್ ಕಾಯ್ಕಿಣಿ ಖುಷಿ ಪಟ್ಟಿದ್ದರು. ಅದ್ಭುತವಾಗಿ ಸಾಹಿತ್ಯ ಬರೆದು ಕೊಟ್ಟರು. ಹಾಡಿನ ಕೋರಿಯೋಗ್ರಫಿಯಲ್ಲಿ ವಿನೋದ್ ಪ್ರಭಾಕರ್ ಮತ್ತು ನಾಯಕಿ ಸಂಜನಾ ಆನಂದ್ ಇನ್ ವಾಲ್ವ್ ಆಗಿದ್ದಾರೆ. ಇನ್ನು ಹಾಡಿನ ಬಗ್ಗೆ ಕೇಳುಗರೇ ಹೇಳಬೇಕು ಎಂದರು.
ಗೀತ ರಚನೆಕಾರ ಜಯಂತ್ ಕಾಯ್ಕಿಣಿ ಮಾತನಾಡಿ, ಚೈತನ್ಯ ನನ್ನ ಆತ್ಮೀಯ ಸ್ನೇಹಿತ. “ಚೈತನ್ಯನಂಥ ಪ್ರಗತಿಪರ ನಿರ್ದೇಶಕ ಚಿತ್ರರಂಗದಲ್ಲಿ ಸಕ್ರಿಯವಾಗಿರುವುದು ಖಷಿಯ ವಿಚಾರ. ಸಂತೋಷ್ ನಾರಾಯಣ್ ಸಂಗೀತಕ್ಕೆ ಹಾಡು ಬರೆಯುವುದು ನನಗೆ ಚಾಲೆಂಜ್ ಅಗಿತ್ತು” ಎಂದರು.

ಇದು ಪ್ರತಿಭಾವಂತರ ತಂಡ!
“ಆ ದಿನಗಳು ಅದ್ಭುತವಾದ ಸಿನಿಮಾ. ಸಂಗೀತದಲ್ಲಿ ಇಳಯರಾಜ ನನಗೆ ತಂದೆ ಸಮಾನರು. ಅದಕ್ಕೆ ಅವರ ಸಂಗೀತದ ಹಾಡುಗಳನ್ನು ಕೇಳಿದ್ದೆ. ಇದೀಗ ಈ ಚಿತ್ರಕ್ಕೆ ನಾನು ಸಂಗೀತ ಕೊಟ್ಟಿದ್ದೇನೆ” ಎಂದರು ಸಂಗೀತ ನಿರ್ದೇಶಕ ಸಂತೋಷ್ ನಾರಾಯಣ್.
“ಈ ತಂಡ ತುಂಬ ಪ್ರತಿಭಾವಂತರದ್ದು. ಆದರೆ ವೇದಿಕೆ ಮೇಲೆ ಇರುವ ಎಲ್ಲರೂ ಕೂಡ ಸಾಮಾನ್ಯರಂತೆ ಇದ್ದಾರೆ. ಎಲ್ಲರೂ ನನ್ನ ಸಂಗೀತದ ಬಗ್ಗೆ ಮೆಚ್ಚುಗೆಯ ಮಾತನಾಡಿದ್ದೀರಿ, ವಂದನೆಗಳು” ಎನ್ನುತ್ತಾ ಚಿತ್ರ ತಂಡದ ಬಗ್ಗೆ ಸುದೀರ್ಘವಾಗಿಯೇ ಮಾತನಾಡಿದರು.
ಚಿತ್ರದಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿರುವ ವಿನಯ್ ಗೌಡ ಮಾತನಾಡಿ ಈ ಹಾಡಿನಲ್ಲಿ ವಿನೋದ್ ಪ್ರಭಾಕರ್ ಮತ್ತು ಸಂಜನಾ ಆನಂದ್ ಪೇಂಟಿಂಗ್ ನಂತೆ ಕಾಣಿಸ್ತಿರೋದಾಗಿ ಹೇಳಿದರು. ತಮ್ಮ ಪಾತ್ರ ಡ್ರೀಮ್ ರೋಲ್. ಇದುವರೆಗಿನ ಎಲ್ಲಾ ಪಾತ್ರಗಳಿಗಿಂತ ವಿಭಿನ್ನ ಸ್ಥಾನ ಈ ಚಿತ್ರದಲ್ಲಿನ ತಮ್ಮ ‘ಕತ್ತಿ’ ಪಾತ್ರಕ್ಕಿದೆ ಎಂದರು. ಕಲಾವಿದರಾದ ರವೀಂದ್ರ, ಅಭಯ್ ಪುನೀತ್ ಮೊದಲಾದವರು ಉಪಸ್ಥಿತರಿದ್ದರು.

