ಫೆಬ್ರವರಿ 9ರಂದು ‘ಸಿನಿ‌ 35’ ಸಂಭ್ರಮ

ಕರ್ನಾಟಕ ಚಲನಚಿತ್ರ ಛಾಯಾಗ್ರಾಹಕರ ಕುಟುಂಬದ ‌ಸಮಾರಂಭವು ಫೆಬ್ರವರಿ 9ರಂದು ಅದ್ದೂರಿಯಾಗಿ ನೆರವೇರಲಿದ್ದು, ಅಂದು ಬಿಡುಗಡೆಯಾಗಲಿರುವ ಹಾಡಿನ ಟೀಸರ್ ಬಿಡುಗಡೆ ಇಂದು ನೆರವೇರಿತು.

ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ‘ನಮ್ ರೇಡಿಯೋ’ ವರದಿಗಾರ್ತಿ ಪೂಜಾ ಅವರಿಗೆ ನೀಡುವ ಮೂಲಕ ಸಾಂಕೇತಿಕವಾಗಿ ಒಟ್ಟು ಮಾಧ್ಯಮ ವೃಂದವನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಯಿತು.

ಕಾರ್ಯಕ್ರಮದಲ್ಲಿ ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಜೆ.ಜೆ ಕೃಷ್ಣ ಸೇರಿದಂತೆ ಚಂದ್ರಶೇಖರ್, ಉಪಕಾರ್ಯದರ್ಶಿ ಜ್ಞಾನಮೂರ್ತಿ, ಅಣಜಿ ನಾಗರಾಜ್, ತುಳಸೀ ಗಣೇಶ್ ಮೊದಲಾದವರು ಮಾತನಾಡಿದರು. ಇದನ್ನು ಕರ್ನಾಟಕ ಚಲನಚಿತ್ರ ಛಾಯಾಗ್ರಾಹಕರ ಕುಟುಂಬದ ಸಮಾರಂಭವಾಗಿ ಆಚರಿಸಲಿದ್ದು, ಕಾರ್ಯಕ್ರಮದಲ್ಲಿ
108 ಜನ ಛಾಯಾಗ್ರಾಹಕರನ್ನು ಸನ್ಮಾನಿಸುವ ಜತೆಗೆ ಅವರ ಕುಟುಂಬದ ಮಂದಿಗೂ ಬಾಗಿನ ನೀಡಲಾಗುತ್ತದೆ ಎಂದು ಜೆಜೆ ಕೃಷ್ಣ ತಿಳಿಸಿದರು. ಈಗಲೇ ಕಾರ್ಯಕ್ರಮದ ಕುರಿತಾದ ಹಾಡೊಂದನ್ನು 100 ಕ್ಯಾಮೆರ ಮತ್ತು ನೂರು ಮಂದಿ ಛಾಯಾಗ್ರಾಹಕರ ಸಮ್ಮುಖದಲ್ಲಿ ಶೂಟ್ ಮಾಡಿ ದಾಖಲೆ ನಿರ್ಮಿಸಲಾಗಿದೆ. ಸಿದ್ಧಾರ್ಥ ರ್ಯಾಪರ್
ಅವರು ಛಾಯಾಗ್ರಹಕರಿಗೆ ಡೆಡಿಕೇಶನ್ ಆಗಿರುವ ಗೀತೆಗೆ ದನಿಯಾಗಿದ್ದಾರೆ. ಈ ಸಂದರ್ಭದಲ್ಲಿ ಚಿತ್ರನಟ ಉಪೇಂದ್ರ, ವಿನೋದ್ ಪ್ರಭಾಕರ್ ಮತ್ತು ಧನಂಜಯ ಮೊದಲಾದ ಗಣ್ಯರು ಆಗಮಿಸಿ ಶುಭಕೋರಿದ್ದಾಗಿ ಕೃಷ್ಣ ನೆನಪಿಸಿಕೊಂಡರು. ಕಾರ್ಯಕ್ರಮದ ಉದ್ಘಾಟನೆಯನ್ನು ಕ್ಯಾಮೆರಾಗಳ ಎಕ್ಸಿಬಿಷನ್ ಮೂಲಕ ನೆರವೇರಿಸಲಿದ್ದೇವೆ. ಅದೇ ಉದ್ಘಾಟನೆ. ಇದು ಮಾನವೀಯತೆಯ ಹಿನ್ನೆಲೆ ಇಟ್ಟುಕೊಂಡು ಮಾಡುವ ಕಾರ್ಯಕ್ರಮ. ಪರಭಾಷಾ ಛಾಯಾಗ್ರಾಹಕ ಸಂಘದ ಅಧ್ಯಕ್ಷರನ್ನು ಆಹ್ವಾನಿಸಿದ್ದೇವೆ ಎಂದು ಸಮಿತಿ ತಿಳಿಸಿದೆ.

‘ಸಿನಿ‌ 35’ ಆಚರಣೆಯ ಕಾರಣ

ಕ್ಯಾಮೆರಾದಲ್ಲಿ ನೆಗೆಟಿವ್ ಬಳಸುತ್ತಿದ್ದ ದಿನಗಳಿಂದಲೂ ನೆಗೆಟಿವ್ 35‌ ಎಂ ಎಂ ಮೂಲಕವೇ ಎಕ್ಸ್ ಪೋಸ್ ಮಾಡುತ್ತೇವೆ. ಆ ನೆನಪಿಗಾಗಿ ಛಾಯಾಗ್ರಾಹಕರ ಸಂಸ್ಥೆಗೆ 35 ವರ್ಷಗಳ ಆಚರಣೆ ಮಾಡುವ ಯೋಜನೆ ಹಾಕಿಕೊಂಡೆವು ಎಂದು ಕೃಷ್ಣ ತಿಳಿಸಿದ್ದಾರೆ. ಆ ದಿನ ಎಲ್ಲರಿಗೂ ಊಟ ತಿಂಡಿಯ ವ್ಯವಸ್ಥೆ ಕೂಡ ಇದ್ದು ಕಾರ್ಯಕ್ರಮದಲ್ಲಿ ಛಾಯಾಗ್ರಾಹಕರನ್ನು ಮಾತ್ರವಲ್ಲದೆ ಹಿರಿಯ ಪತ್ರಕರ್ತರು ಸೇರಿದಂತೆ ಚಿತ್ರರಂಗದಲ್ಲಿ ಗಮನಾರ್ಹ ಸೇವೆ ಸಲ್ಲಿಸಿಯೂ ಗುರುತಿಸಲ್ಪಡದೇ ಹೋದವರಿಗೆ ಸನ್ಮಾನ ಮಾಡಲಾಗುವುದಾಗಿ ತಿಳಿಸಲಾಗಿದೆ.

Recommended For You

Leave a Reply

error: Content is protected !!
%d bloggers like this: