ಸಿನಿ ಕಾರ್ಮಿಕ ವರ್ಗಕ್ಕೆ 37 ಲಕ್ಷ ನೀಡಿದ ನಿಖಿಲ್ ಕುಮಾರ್

ಕನ್ನಡ ಚಿತ್ರರಂಗದ ಯುವನಟ ನಿಖಿಲ್ ಕುಮಾರಸ್ವಾಮಿ ಸಿನಿಮಾ ಮತ್ತು ಟಿ.ವಿ ಕಾರ್ಮಿಕರಿಗೆ ಧನ ಸಹಾಯ ನೀಡುವ ಮೂಲಕ ಸಿನಿಮಾ ಕ್ಷೇತ್ರಕ್ಕೆ ತಮ್ಮ ಕೃತಜ್ಞತೆ ಸಲ್ಲಿಸಿದ್ದಾರೆ.

ಕೊರೊನಾ ವೈರಸ್ ದಾಳಿಯಿಂದ ಇಡೀ ದೇಶವೇ ಲಾಕ್ ಡೌನ್ ಸ್ಥಿತಿಗೆ ತಲುಪಿದೆ. ಎಲ್ಲಾ ಉದ್ಯಮಗಳ‌ ಜತೆಗೆ ಚಿತ್ರರಂಗ ಕೂಡ ಸ್ಥಗಿತವಾಗಿದೆ. ಜನರು ಕೆಲಸ ಇಲ್ಲದೇ ದುಡಿಮೆಯಿಲ್ಲದೇ ಮನೆಯಲ್ಲೇ ಕೂರಬೇಕಾಗಿದೆ. ಅದರಲ್ಲಿ ಕೂಡ ಸಿನಿಮಾ ಉದ್ಯಮದಲ್ಲಿ ದಿನಗೂಲಿ ನಂಬಿ ಬದುಕುತ್ತಿದ್ದ ಸಿನಿಮಾ ಕಾರ್ಮಿಕ ವರ್ಗಕ್ಕೆ ಇದರಿಂದ ತೀವ್ರ ಆಘಾತವಾಗಿದೆ. ಈ ಸಂದರ್ಭದಲ್ಲಿ ಕಾರ್ಮಿಕರಿಗೆ ನೆರವು ನೀಡಲು ಕನ್ನಡದ ಯುವನಟ ನಿಖಿಲ್ ಕುಮಾರ್ ಮನಸು ಮಾಡಿದ್ದಾರೆ. ಸಿನಿಮಾ ಕಾರ್ಮಿಕರಾದ ಲೈಟ್ಸ್ ಬಾಯ್ಸ್ ಅಸೋಸಿಯೇಷನ್, ಯುನಿಟ್ ಬಾಯ್ಸ್ ಅಸೋಸಿಯೇಷನ್, ಪ್ರೊಡಕ್ಷನ್ ಅಸೋಸಿಯೇಷನ್, ಫೈಟರ್ಸ್ ಅಸೋಸಿಯೇಷನ್, ಮೇಕಪ್ ಮೆನ್ ಹಾಗೂ ಇತ್ಯಾದಿ ವಿಭಾಗಗಳಲ್ಲಿ ಕೆಲಸ ಮಾಡುವ ಎಲ್ಲ ಸದಸ್ಯರ ಸುಮಾರು 3ಸಾವಿರ ಅಕೌಂಟ್’ಗಳಿಗೆ ನೇರವಾಗಿ ಧನ ಸಹಾಯ ನೀಡಿದ್ದಾರೆ.

ಕಿರುತೆರೆ ಕಾರ್ಮಿಕರಿಗೂ ಐದು ಲಕ್ಷ!

32 ಲಕ್ಷವನ್ನು ಸಿನಿಮಾ ಕಾರ್ಮಿಕರಿಗೆ ಮತ್ತು ಐದು ಲಕ್ಷವನ್ನು ಟಿ.ವಿ ಕೆಲಸಗಾರರಿಗೆ ನೀಡಲು ತೀರ್ಮಾನಿಸಿದ ನಿಖಿಲ್ ರಾಜ್ಯ ಚಲನಚಿತ್ರ ಕಾರ್ಮಿಕರ ಸಂಘದ ಕಾರ್ಯದರ್ಶಿ ರವೀಂದ್ರರ ಅವರ ಕೈಗೆ ಈ ಚೆಕ್ ತಲುಪಿಸಿದ್ದಾರೆ. ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಸಾರಾ ಗೋವಿಂದು ಅವರು ಚೆಕ್ ನೀಡಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜಯರಾಜ್, ಉಮೇಶ್ ಬಣಕಾರ್ ಮೊದಲಾದವರು ಉಪಸ್ಥಿತರಿದ್ದರು.

ನಿಖಿಲ್ ಸೇವೆಗೆ ವ್ಯಾಪಕ ಪ್ರಶಂಸೆ

ದಾನ ಮಾಡಿದ ಬಳಿಕ ಅದನ್ನು ಇತರ ವ್ಯಕ್ತಿಗಳ‌ ಕಾರ್ಯದ ಜತೆಗೆ ಹೋಲಿಸಬಾರದಂತೆ. ಆದರೆ ನಿಖಿಲ್ ಚಿತ್ರರಂಗಕ್ಕೆ ಕಾಲಿಟ್ಟು ಒಂದೆರಡು ವರ್ಷಗಳನ್ನಷ್ಟೇ ಆಗಿದೆ. ಈ ಅಲ್ಪಾವಧಿಯಲ್ಲಿ ಚಲನಚಿತ್ರ ಕಾರ್ಮಿಕರಿಗೆ ಸಹಾಯಧನ ವಿತರಿಸುವ ಮೂಲಕ ಚಿತ್ರರಂಗಕ್ಕೆ ಕೃತಜ್ಞತೆ ಸಲ್ಲಿಸಿರುವ ನಿಖಿಲ್ ಕುಮಾರ್ ಕಾರ್ಯವೈಖರಿಯ ಬಗ್ಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಜತೆಗೆ ಸಿನಿ ಕಾರ್ಮಿಕರ ಪರವಾಗಿ ರವೀಂದ್ರ ಅವರು ನಿಖಿಲ್ ಕುಮಾರ್ ಅವರನ್ನು ಶ್ಲಾಘಿಸಿ ಧನ್ಯವಾದ ತಿಳಿಸಿದ್ದಾರೆ.

ನಿಖಿಲ್ ಅವರು ಚಲನಚಿತ್ರ ಮಾತ್ರವಲ್ಲ; ರಾಜಕೀಯ ಕ್ಷೇತ್ರದ ಮೂಲಕವೂ ಗುರುತಿಸಿಕೊಂಡವರು. ರೈತರ ಕಾರ್ಮಿಕರ ಪರವಾದ ಪಕ್ಷವೆನಿಸಿರುವ ಜನತಾದಳದಲ್ಲಿ ಭರವಸೆಯ ಯುವನಾಯಕನಾಗಿರುವ ನಿಖಿಲ್ ಕಾರ್ಯವೈಖರಿ ಪಕ್ಷದ‌ ಕಾರ್ಯಕರ್ತರಲ್ಲಿಯೂ‌ ಖುಷಿ ಮೂಡಿಸಿದೆ. ಚುನಾವಣೆ ವೇಳೆ ಹಣಚೆಲ್ಲುವ ನಾಯಕರ ನಡುವೆ ಇಂಥ ಸಂದರ್ಭದಲ್ಲಿ ಮನಮಿಡಿದಿರುವ ನಿಖಿಲ್ ನಿಜವಾದ ಜನ ನಾಯಕನೆನಿಸಿಕೊಂಡಿದ್ದಾರೆ. ಈಗಾಗಲೇ ಮಾತುಗಾರಿಕೆಯ ಮೂಲಕ ತಮ್ಮ ಪ್ರಬುದ್ಧತೆಯನ್ನು ಹಲವಾರು ಬಾರಿ ತೋರ್ಪಡಿಸಿರುವ ನಿಖಿಲ್ ಇದೀಗ ನಡೆಯಿಂದಲೂ ಆದರ್ಶವೆನಿಸಿರುವುದು ಸುಳ್ಳಲ್ಲ.

Recommended For You

Leave a Reply

error: Content is protected !!