ಇಂದು ಕನ್ನಡ ಚಿತ್ರರಂಗದಲ್ಲಿ ಹಲವಾರು ಮಂದಿ ನಿರ್ಮಾಪಕರಿದ್ದಾರೆ. ಆದರೆ ಅವರಲ್ಲಿ ಸಿನಿಮಾ ನಿರ್ಮಾಣವನ್ನೇ ಮುಖ್ಯವಾಗಿರಿಸಿಕೊಂಡವರು ಬೆರಳೆಣಿಕೆಯ ಮಂದಿ ಮಾತ್ರ. ಬಡ್ಡಿಗೆ ದುಡ್ಡು ಪಡೆದವರು, ಸಿನಿಮಾ ಮೋಹದಿಂದ ಆಸ್ತಿ ಮಾರಿ ಯಾಮಾರಿ ಹೋದವರೆಲ್ಲ ನಿರ್ಮಾಪಕರು ಎನಿಸಿರುವ ಸಂದರ್ಭದಲ್ಲಿ ವೀರಾಸ್ವಾಮಿಯವರು ಎಂದರೆ ಒಂದು ರೀತಿ ಅದ್ಭುತ ಎಂದೇ ಹೇಳಬಹುದು. ಇಂದಿನ ತಲೆಮಾರಿಗೆ ಅವರು ನಟ, ನಿರ್ದೇಶಕ ರವಿಚಂದ್ರನ್ ಅವರ ತಂದೆ ಎನ್ನುವುದಕ್ಕಿಂತ ಹೆಚ್ಚಿನ ವಿಚಾರಗಳೇ ಗೊತ್ತಿಲ್ಲ. ಇಂಥ ಸಂದರ್ಭದಲ್ಲಿ ವೀರಾಸ್ವಾಮಿಯವರ ನಿರ್ಮಾಣ ಬದುಕಿನ ವಿಶೇಷ ವಿಚಾರವೊಂದನ್ನು ಇಲ್ಲಿ ಹಂಚಿಕೊಂಡಿದ್ದೇವೆ.
ಇಂದು ಸಿನಿಮಾ ನಿರ್ಮಾಪಕರು ಒಂದು ಚಿತ್ರವನ್ನು ನಿರ್ಮಿಸಲು ಹೇಗೆ ಮುಂದಾಗುತ್ತಾರೆ ಎನ್ನುವುದು ಎಲ್ಲರಿಗೂ ಗೊತ್ತು. ಪರಭಾಷೆಯ ಚಿತ್ರಗಳನ್ನು ಗಮನಿಸುತ್ತಾ ಇರುತ್ತಾರೆ. ಅಲ್ಲಿ ಚಿತ್ರವೊಂದು ಒಳ್ಳೆಯ ಕಲೆಕ್ಷನ್ ಮಾಡಿದೆ ಎಂದು ಗೊತ್ತಾದರೆ ಸಾಕು, ಅದರ ರಿಮೇಕ್ ರೈಟ್ಸ್‌ಗಾಗಿ ಪ್ರಯತ್ನ ಮಾಡುತ್ತಾರೆ. ಸಿನಿಮಾ ಹೇಗಿದೆ? ಅದು ಯಾಕೆ ಹಿಟ್ ಆಗಿರಬಹುದು? ಅಲ್ಲಿನ ಜನತೆಗೆ ಇಷ್ಟವಾಗಿರುವ ಅಂಶಗಳೆಲ್ಲ ಇಲ್ಲಿನವರಿಗೂ ಇಷ್ಟವಾಗಬಹುದೇ? ತಮಿಳಲ್ಲಿ ಆ ನಟ ಮಾಡಿದ ಪಾತ್ರ ಕನ್ನಡದ ಯಾವ ನಟನಿಗೆ ಒಪ್ಪಬಲ್ಲದು? ಎನ್ನುವಂಥ ವಿಚಾರಗಳ ಬಗ್ಗೆ ಯಾವುದೇ ಯೋಚನೆ ಮಾಡುವುದಿಲ್ಲ. ಹಾಗಾಗಿಯೇ ಪರಭಾಷೆಯ ಹಿಟ್ ಸಿನಿಮಾಗಳು ಕೂಡ ಕನ್ನಡದಲ್ಲಿ ಫ್ಲಾಪ್ ಆಗುತ್ತಿರುವ ಎಷ್ಟೋ ಉದಾಹರಣೆಗಳು ನಮ್ಮ ಕಣೆದುರಿಗಿವೆ. ವೀರಾಸ್ವಾಮಿಯವರು ಯಾವ ಸಿನಿಮಾ ಹಿಟ್ ಆಗಬಲ್ಲದೆಂದು ತೀರ್ಮಾನಿಸುತ್ತಿದ್ದರು ಅಂತ ಏನಲ್ಲ. ಆದರೆ ಸಿನಿಮಾ ಕತೆ ಕೇಳುವಾಗಲೇ ಆ ಚಿತ್ರ ಯಾರಿಗೆ ಇಷ್ಟವಾಗಬಹುದು ಎನ್ನುವ ಬಗ್ಗೆ ಯೋಚಿಸಬಲ್ಲವರಾಗಿದ್ದರು.
ತಮಗೆ ನಿರ್ದೇಶಕರು ಅಥವಾ ಕತೆಗಾರರು ಕತೆ ಹೇಳಲು ಬರುವಾಗ ಅವರು ತಾವೊಬ್ಬರೇ ಕತೆ ಕೇಳಲು ಕುಳಿತುಕೊಳ್ಳುತ್ತಿರಲಿಲ್ಲ. ಕತೆಗಾರ, ನಿರ್ದೇಶಕ ಮತ್ತು ತಮ್ಮ ಜತೆಗೆ ಟೀ ಕೊಡುವ ಆಫೀಸ್ ಬಾಯ್ ಕೂಡ ಅಲ್ಲೇ ಇರುವಂತೆ ಹೇಳುತ್ತಿದ್ದರಂತೆ. ಕತೆ ಹೇಳಿ ಮುಗಿದ ಮೇಲೆ ಆಫೀಸ್ ಬಾಯ್‌ನಲ್ಲಿ ಮೊದಲು ಕತೆ ಹೇಗೆ ಅನಿಸಿತು ಎಂದು ಕೇಳುತ್ತಿದ್ದರಂತೆ. ಯಾಕೆಂದರೆ ಅವರು ಆಫೀಸ್ ಬಾಯ್ ಮೂಲಕ ಈ ಕತೆಯನ್ನು ಒಬ್ಬ ಗಾಂಧಿಕ್ಲಾಸ್ ಪ್ರೇಕ್ಷಕ ಹೇಗೆ ಸ್ವೀಕರಿಸುತ್ತಾನೆ ಎನ್ನುವುದನ್ನು ಅರಿತುಕೊಳ್ಳುತ್ತಿದ್ದರು. ಇಂದು ಕತೆಯೇ ಇಲ್ಲದೆ ಚಿತ್ರ ಮಾಡಲು ಮುಂದಾಗುವ ನಿರ್ದೇಶಕರು, ತಮ್ಮ ಕತೆ ತಮಗಷ್ಟೇ ಅರ್ಥವಾದರೆ ಸಾಕು ಎಂದುಕೊಳ್ಳುವವರು ಸಾಕಷ್ಟು ಮಂದಿ ಇದ್ದಾರೆ. ಅಂಥದ್ದರಲ್ಲಿ ಎಲ್ಲ ದರ್ಜೆಯ ಪ್ರೇಕ್ಷಕರಿಗೆ ಇಷ್ಟವಾಗುವ ಚಿತ್ರಗಳನ್ನು ಮಾಡಬೇಕು ಎನ್ನುವ ವೀರಾಸ್ವಾಮಿಯವರ ಪ್ರಯತ್ನ ಖಂಡಿತವಾಗಿಯೂ ಗಮನಾರ್ಹ ಹಾಗೂ ಪ್ರಶಂಸಾರ್ಹ ಎನಿಸುತ್ತದೆ. ಅವರ ಸಂಸ್ಥೆಯಿಂದ ಬಂದಂಥ ಚಿತ್ರಗಳು ಕೂಡ ಅವರ ಆಯ್ಕೆಯ ಶ್ರೇಷ್ಠತೆಗೆ ಕನ್ನಡಿಯಾಗಿವೆ. ಅವುಗಳಿಗೆ ಉದಾಹರಣೆಯಾಗಿ ನಾಗರಹಾವು',
ಭೂತಯ್ಯನ ಮಗ ಅಯ್ಯು’, ನಾ ನಿನ್ನ ಮರೆಯಲಾರೆ',
ಚಕ್ರವ್ಯೂಹ’ ಹೀಗೆ ಚಿತ್ರಗಳನ್ನು ಪಟ್ಟಿ ಮಾಡುತ್ತಾ ಹೋಗಬಹುದು. ಅವರು ಇಂದು ಬದುಕಿದ್ದರೆ ಅವರಿಗೆ ಎಂಬತ್ತೆಂಟು ವರ್ಷಗಳು ತುಂಬಿರುತ್ತಿತ್ತು. ಅವರ ಸ್ಮರಣೆಯ ಮುಂದೆ ಈ ಲೇಖನದ ಮೂಲಕ ಸಿನಿಕನ್ನಡ.ಕಾಮ್‌ನ ನಮನ.