
ನಟ ದುನಿಯಾ ವಿಜಯ್ ತಮ್ಮ ಸಲಗ ಚಿತ್ರದಲ್ಲಿ ನಟಿಸಿದ ಸುಶೀಲ್ ಅವರ ಆತ್ಮಹತ್ಯೆ ಬಗ್ಗೆ ನೊಂದು ಫೇಸ್ಬುಕ್ ನಲ್ಲಿ ಬರೆದ ವಿಚಾರ ಇದು.
‘ಸಲಗ’ ಚಿತ್ರದಲ್ಲಿ ಒಂದು ಒಳ್ಳೆಯ ಪೊಲೀಸ್ ಪಾತ್ರವಿದೆ. ಅದನ್ನು ಒಬ್ಬ ಸ್ಫುರದ್ರೂಪಿ ಹುಡುಗ ನಿರ್ವಹಿಸಿದ್ದ. ಆತನ ಹೆಸರು ಸುಶೀಲ್ ಅಂತ. ಮಂಡ್ಯದವನು. ಆತನ ನೋಡ್ತಿದ್ರೆ ಮುಂದೊಮ್ಮೆ ಹೀರೋ ಆಗಬಹುದಾದ ಹುಡುಗ ಅಂತ ಮನಸ್ಸಲ್ಲೇ ಅಂದ್ಕೊಂಡಿದ್ದೆ. ಆದ್ರೆ ಅದೇನಾಯ್ತೋ ಗೊತ್ತಿಲ್ಲ; ನಿನ್ನೆ ಇರಬೇಕು ಆತ್ಮಹತ್ಯೆ ಮಾಡ್ಕೊಂಡಿದ್ದಾನೆ ಅಂತ ಗೊತ್ತಾಯ್ತು. ನನಗೆ ಈಗಲೂ ನಂಬೋಕೆ ಆಗ್ತಿಲ್ಲ. ಇಂಡಸ್ಟ್ರೀನಲ್ಲಿ ಬೆಳೆಯಬೇಕು ಅಂತ ಬರೋರು ಸಿನಿಮಾದಲ್ಲಿ ಒಂದೊಳ್ಳೆಯ ಅವಕಾಶ ಸಿಕ್ಕಮೇಲೂ ಚಿತ್ರ ಬಿಡುಗಡೆಗೂ ಕಾಯದೆ ಆತ್ಮಹತ್ಯೆ ಮಾಡೋದು ಅಂದರೆ ಏನು?! ನಿಮ್ಮ ಸಮಸ್ಯೆ ಎಷ್ಟೇ ದೊಡ್ಡದಿರಬಹುದು. ಆದರೆ ಸಾವು ಅದಕ್ಕೆ ಪರಿಹಾರವಾಗುತ್ತಾ? ಸಮಸ್ಯೆಗೆಲ್ಲ ಸಾವಲ್ಲೇ ಉತ್ತರ ಕಾಣೋದಾದ್ರೆ ಬಹುಶಃ ಭೂಮೀಲಿ ಯಾರೊಬ್ಬರೂ ಉಳಿದಿರಲ್ಲ ಅನ್ಸುತ್ತೆ!
ಸುಶೀಲ್ ವಯಸ್ಸು ಮೂವತ್ತರ ಆಸುಪಾಸು ಇರಬಹುದು. ನಮ್ಜತೆ ಶೂಟಿಂಗಲ್ಲಿದ್ದಿದ್ದು ಬೆರಳೆಣಿಕೆ ದಿನಗಳಷ್ಟೇ. ಅಷ್ಟಕ್ಕೇನೇ ನಮಗಿಷ್ಟೊಂದು ನೋವಾಗ್ತಿದೆ. ಹಾಗಾದರೆ ಈ ಮೂವತ್ತು ವರ್ಷಗಳ ಕಾಲ ಜತೆಗಿದ್ದ ಮನೆಯವರಿಗೆ ಹೇಗಾಗಬೇಡ?! ಸತ್ತ ಮೇಲೆ ಮಾತನಾಡಿ ಉಪಯೋಗವಿಲ್ಲ ನಿಜ. ಆದರೆ ನನಗೇನೋ ಈ ವರ್ಷದ ಸಾವುಗಳ ಸರಣಿ ಇಲ್ಲಿಗೆ ಮುಗಿಯುತ್ತೆ ಅಂತ ಅನಿಸ್ತಿಲ್ಲ! ಯಾಕೆಂದರೆ ಪರಿಸ್ಥಿತಿ ಹಾಗಿದೆ. ಜನ ಕೊರೊನಾ ರೋಗಕ್ಕಷ್ಟೇ ಭಯಪಡುತ್ತಿಲ್ಲ; ಕೆಲಸ ಇರದೆ ಬದುಕಿನ ಭರವಸೆಯನ್ನೇ ಕಳೆದುಕೊಳ್ಳುತ್ತಿದ್ದಾರೆ. ಹಾಗಾಗಿ ನನ್ನ ಮನವಿ ಅಂಥವರಿಗೂ ಕೂಡ ಆಗಿದೆ.
ನಾವೆಲ್ಲ ರಾಮ ಸೀತೆ ಕಥೆ ಕೇಳಿಯೇ ಬೆಳೆದಿರುತ್ತೇವೆ. ದೇವರಾಗಿದ್ದರೂ ಮನುಷ್ಯ ರೂಪದಲ್ಲಿ ಎಷ್ಟೊಂದು ಕಷ್ಟ ಅನಿಭವಿಸಬೇಕಾಗಿತ್ತೆ ಅನ್ನೋದು ಅದರ ತಾತ್ಪರ್ಯ. ಅಂಥ ಕಷ್ಟ ನಮಗೆಲ್ಲ ಬಂದೇ ಇರುವುದಿಲ್ಲ. ಆದರೂ ಬದುಕು ಸಾಕಾಗಿ ಬಿಡುತ್ತದೆ ಅನ್ನೋದೇ ವಿಪರ್ಯಾಸ. ನಮ್ಮ ಧರ್ಮ ಓದಿ ಕೈ ಮುಗಿಯೋಕಷ್ಟೇ ಇರೋದಲ್ಲ. ಬದುಕಲ್ಲಿ ಅಳವಡಿಸೋಕೂ ಹೌದು. ಇಲ್ಲಿ ಸ್ಟಾರಾಗಿರೋ ಪ್ರತಿಯೊಬ್ಬರೂ ಒಂದಲ್ಲ ಒಮ್ಮೆ ಪಾತಾಳದಷ್ಟು ಕಷ್ಟ ಕಂಡೇ ಇರುತ್ತಾರೆ. ಅಭಿಮನ್ಯು ತರಹ ಒಳಗೆ ಬರುವ ಕಥೆ ಮಾತ್ರ ತಿಳಿದು ಮುನ್ನುಗ್ಗಿ ಬಂದು ಕೈ ಚೆಲ್ಲಿದರೆ ಅದು ಸಾಧನೆ ಅಲ್ಲ; ವೇದನೆ.
ನೀವೇನೂ ಸತ್ತು ಹೋಗ್ತೀರಿ; ನಿಮಗೆ ಬೆಂಕಿ ಇಡಬೇಕಾದರೆ ಅಲ್ಲಿ ಜೀವ ಇರುವುದಿಲ್ಲ. ಆದರೆ ಜತೆಗಿರುವ ತಾಯಿ, ತಂದೆ, ಮಡದಿ ಜೀವನಪೂರ್ತಿ ಬೆಂಕಿಯಲ್ಲಿದ್ದಂಥ ಬದುಕು ಕೊಡ್ತೀರಲ್ಲ? ಇದೇನು ನ್ಯಾಯ? ಆತ್ಮಹತ್ಯೆ ಖಂಡಿತವಾಗಿ ತಪ್ಪು. ಸುಶೀಲ್ ಆತ್ಮಕ್ಕೆ ಶಾಂತಿ ಸಿಗಲಿ. ಆದರೆ ಮುಂದೆ ಯಾವ ತಂದೆ ತಾಯಿಗೂ ಇಂಥ ದುಃಖ ಎದುರಿಸುವ ಸಂದರ್ಭ ಬಾರದಿರಲಿ.