ಆರತಿ ಬೆಳಗಿದ ಅಜ್ಜಿಯ ಕಂಡು ಆನಂದಾಶ್ರು ಸುರಿಸಿದ ಕಿಚ್ಚ ಸುದೀಪ್..!

ಕಳೆದ ಎರಡು ದಿನಗಳಲ್ಲಿ (ಶನಿವಾರ ಮತ್ತು ಭಾನುವಾರ) ನಟ ಕಿಚ್ಚ ಸುದೀಪ್ ಜೂಮ್ ಕಾಲ್ ಮೂಲಕ ಅಭಿಮಾನಿಗಳ ಜತೆಗೆ ಸಂವಾದ ನಡೆಸಿದರು. ಎರಡು ದಿನವೂ ಎರಡೆರಡು ಗಂಟೆಗಳ ಕಾಲ ಸುದೀಪ್ ನಡೆಸಿದ ಮಾತುಕತೆ ಪಾಲ್ಗೊಂಡ ಅಭಿಮಾನಿಗಳಿಗೆ ಮಾತ್ರವಲ್ಲ, ವೀಕ್ಷಿಸಿದ ಪ್ರತಿಯೊಬ್ಬರಿಗೂ ಸಂಭ್ರಮ ತುಂಬುವ ರೀತಿಯಲ್ಲಿತ್ತು. ಆದರೆ ಎಲ್ಲಕ್ಕಿಂತ ಮುಖ್ಯವಾಗಿ ಮೈಸೂರಿನ ಹಿರಿಯ ಮಹಿಳೆಯೊಬ್ಬರ ಮಾತಿಗೆ ಪ್ರತಿಕ್ರಿಯಿಸುತ್ತಾ ಸುದೀಪ್ ಕಣ್ಣುಗಳಲ್ಲಿ ನೀರು ತುಂಬಿಕೊಂಡಿದ್ದು ಅನಿವರ್ಚನೀಯ ಸಂದರ್ಭ ಎಂದೇ ಹೇಳಬಹುದು.

‘ಕರ್ನಾಟಕ ಕಿಚ್ಚ ಸುದೀಪ್ ಫ್ಯಾನ್ಸ್ ಅಸೋಸಿಯೇಶನ್’ (ರಿ) ನಡೆಸಿಕೊಟ್ಟ ಲೈವ್ ಕಾರ್ಯಕ್ರಮದಲ್ಲಿ ಸುಮಾರು ಇಪ್ಪತ್ತರಷ್ಟು ಮಂದಿ ಇಪ್ಪತ್ತು ಕಡೆಗಳಿಂದ ಏಕಕಕಾಲದಲ್ಲಿ ಪರದೆಯ ಮೇಲೆ ಸ್ಪಂದಿಸುತ್ತಿದ್ದರು. ಎಲ್ಲರೂ ತಮ್ಮ ತಮ್ಮ ಶೈಲಿಯಲ್ಲಿ, ಕಿಚ್ಚನ ಮುಂದೆ ತಮ್ಮ ಅಭಿಮಾನವನ್ನು ಪ್ರದರ್ಶಿಸಿದರು. ಎಲ್ಲವನ್ನು ಮೆಚ್ಚಿಕೊಂಡ ಸುದೀಪ್ ಮೈಸೂರಿನ ಪದ್ಮಾ ಎನ್ನುವ ಹಿರಿಯ ಮಹಿಳೆ ಮಾತಿಗೆ ಕಾದು ನಿಂತಿರುವುದನ್ನು ಕಂಡು ಅವರನ್ನು ಕಾಯಿಸದೇ ಬೇಗ ಮಾತನಾಡಿ ಮುಗಿಸುವ ಎಂದು ನಿರೂಪಕಿಗೆ ಸೂಚಿಸಿದರು. ಆದರೆ ಅವರ ಜತೆಗೆ ಒಂದು ವಿಶೇಷ ಮಾತುಕತೆಯೇ ನಡೆಸಬೇಕಾಗಿರುವ ಕಾರಣ ಕೊನೆಯಲ್ಲಿ ಸಂಪರ್ಕಿಸುವ ಯೋಜನೆ ಹಾಕಿದ್ದೇವೆ ಎಂದು ನಿರೂಪಕಿ ತಿಳಿಸಿದರು. ಕೊನೆಗೂ ಆ ಕ್ಷಣ ಬಂದೇ ಬಿಟ್ಟಿತು.

ಬಿಗ್ ಬಾಸ್ ಅಭಿಮಾನಿ ಅಜ್ಜಿ..!

ಪದ್ಮಾ ಎನ್ನುವ ಆ ಹಿರಿಯ ಜೀವದ ಜತೆಯಲ್ಲಿದ್ದ ಅವರ ಮಕ್ಕಳು ತಮ್ಮ ತಾಯಿಗೆ ಎಂಬತ್ತೈದು ವರ್ಷ. ಅವರು ಇದುವರೆಗೆ ಒಬ್ಬ ನಟನನ್ನು ಮೆಚ್ಚಿದ್ದರೆ ಅದು ನಿಮ್ಮನ್ನು ಮಾತ್ರ ಎಂದರು! ಸಾಮಾನ್ಯವಾಗಿ ಎಲ್ಲರೂ ಸುದೀಪ್ ಅವರನ್ನು ಸಿನಿಮಾಗಳ ಮೂಲಕ ಮೆಚ್ಚಿ, ಅದೇ ಕಾರಣಕ್ಕೆ ಬಿಗ್ ಬಾಸ್ ನೋಡುತ್ತಿದ್ದರು. ಆದರೆ ಪದ್ಮಮ್ಮನ ವಿಚಾರದಲ್ಲಿ ಇದು ತಿರುವು ಮುರುವಾಗಿತ್ತು. ಅವರು ಸುದೀಪ್ ಅವರ ನಿರೂಪಣೆಯನ್ನು ಕಂಡ ಬಳಿಕ ಬಿಗ್ ಬಾಸ್ ಕಾರ್ಯಕ್ರಮವನ್ನು, ಸುದೀಪ್ ಸಿನಿಮಾಗಳನ್ನು ನೋಡಲು ಆರಂಭಿಸಿದ್ದಾರೆ! ಶನಿವಾರ, ಭಾನುವಾರ ಬಂದರೆ ಬಿಗ್ ಬಾಸ್ ಬಿಟ್ಟು ಬೇರೆ ಕಾರ್ಯಕ್ರಮಗಳನ್ನು ನೋಡದ ಅಜ್ಜಿ ಅವರ ಈ ಹವ್ಯಾಸವನ್ನು ಬದಲಾಯಿಸಲು ಬಂದವರಿಗೆ ಕೂಡ ಕಿಚ್ಚ ಸುದೀಪ್ ಹುಚ್ಚು ಹಿಡಿಸಿಬಿಟ್ಟಿರುವುದು ಮತ್ತೊಂದು ವಿಶೇಷ!

ಲೈವ್ ನಲ್ಲಿ ಮಾತು ಶುರು ಮಾಡಿದೊಡನೆ, ಇಷ್ಟು ಹೊತ್ತು ಕಾಯಿಸಿದ್ದಕ್ಕಾಗಿ ಸುದೀಪ್ ಕ್ಷಮೆ ಯಾಚಿಸಿದರೆ, “ನಮಗಾಗಿ ನೀವು ಬಿಡುವು ಮಾಡಿಕೊಂಡು ಕುಳಿತಿರುವುದೇ ನಮ್ಮ ಅದೃಷ್ಟ” ಎಂದು ಕೈ ಮುಗಿದರು ಅಜ್ಜಿ. ಆದರೆ “ನೀವು ಹಿರಿಯರು, ನಮಗೆಲ್ಲ ಕೈ ಮುಗಿಯಬಾರದು” ಎಂದು ವಿನಂತಿಸಿಕೊಂಡರು ಸುದೀಪ್. ಅಂದಹಾಗೆ ಅಜ್ಜಿಯ ಮೊದಲ ಪ್ರಶ್ನೆ, “ಯಾವಾಗ ಬಿಗ್ ಬಾಸ್ ಶುರು?” ಎನ್ನುವುದಾಗಿತ್ತು. ಅದಕ್ಕೆ ತಮ್ಮದೇ ಆದ ಆಕರ್ಷಕ ನಗುವಿನೊಂದಿಗೆ ಪ್ರತಿಕ್ರಿಯಿಸಿದ ಸುದೀಪ್, “ಸದ್ಯಕ್ಕೆ ನಾನೇ ಬಿಗ್ ಬಾಸ್ ಮನೆಯೊಳಗೆ ಬಂಧಿಯಾದ ಹಾಗಿದ್ದೇನೆ. ಬಹುಶಃ ಕೋವಿಡ್ ಸಮಸ್ಯೆಗಳೆಲ್ಲ ಮುಗಿದ ಮೇಲೆ ನವೆಂಬರ್ ಹೊತ್ತಿಗೆ ಸಂಚಿಕೆ ಶುರುವಾಗುವ ಸಾಧ್ಯತೆ ಇದೆ” ಎಂದರು. “ಇನ್ನು ಮುಂದೆ ಎಪಿಸೋಡ್ ಶೂಟಿಂಗ್ ನಲ್ಲಿ ಪಾಲ್ಗೊಳ್ಳುವಾಗ ನೀವು ಕೂಡ ನೋಡುತ್ತಿರುತ್ತೀರಿ ಎನ್ನುವುದು ನನ್ನ ಮನದಲ್ಲಿ ಓಡ್ತಾ ಇರುತ್ತದೆ. ತಮ್ಮಂಥ ಹಿರಿಯರು ನೋಡುತ್ತಿರುವುದು ಖುಷಿ ತಂದಿದೆ” ಎಂದ ಸುದೀಪ್, “ಈ ಬಾರಿಯ ಸಂಚಿಕೆಯ ಚಿತ್ರೀಕರಣ ನೋಡಲು ನೀವು ಬನ್ನಿ. ನೇರವಾಗಿ ಮುಂದೆ ಕುಳಿತು ವೀಕ್ಷಣೆ ಮಾಡಿ” ಎಂದು ವಿಶೇಷ ಆಹ್ವಾನವಿತ್ತರು.

ನೀವೇ ನನ್ನ ಸಂಪಾದನೆ

ಮಾತಿನ ಕೊನೆಯಲ್ಲಿ ಅಜ್ಜಿ ಅಲ್ಲಿಂದಲೇ ಆರತಿ ಎತ್ತಿ ಸುದೀಪ್ ಗೆ ಯಾರ ಕಣ್ಣೂ ಬೀಳದಿರಲಿ ಎಂದು ದೃಷ್ಟಿ ತೆಗೆದರು. “ಅಮ್ಮನಿಗೆ ಕಾಲುಗಳ ಅಸೌಖ್ಯದಿಂದಾಗಿ ಎದ್ದು ನಿಲ್ಲಲಾಗುತ್ತಿಲ್ಲ.. ಕ್ಷಮಿಸಿ, ಅವರು ಕುಳಿತಲ್ಲೇ ಆರತಿ ಬೆಳಗುತ್ತಾರೆ” ಎಂದಾಗ ತುಂಬ ಭಾವುಕರಾದ ಕಿಚ್ಚ ತಮ್ಮ ನಿಯಂತ್ರಣಕ್ಕೆ ಸಿಗದೆ ಉದುರಿದ ಕಣ್ಣೀರನ್ನು ಒರೆಸಿಕೊಂಡರು. “ನಾನು ಸಾಮಾನ್ಯವಾಗಿ ಕಣ್ಣೀರಾಗುವುದೇ ಇಲ್ಲ. ಆದರೆ ನಿಮ್ಮ ಪ್ರೀತಿ ನನ್ನನ್ನು ಕಣ್ತುಂಬಿಕೊಳ್ಳುವಂತೆ ಮಾಡಿತು” ಎಂದರು. ಇದೇ ಸಂದರ್ಭದಲ್ಲಿ `ರಾಷ್ಟ್ರಮಟ್ಟದ ಕಿಚ್ಚ ಸುದೀಪ್ ಅಭಿಮಾನಿಗಳ ಸಂಘ’ದ (AIBKSFA)ಲೋಗೋ ವನ್ನು ಲಾಂಚ್ ಮಾಡಲಾಯಿತು.

‘ಕಿಚ್ಚ ಕ್ರಿಯೇಶನ್ಸ್’ ಮೂಲಕ ನಡೆಸಲಾದ ಈ ಲೈವ್ ಕಾರ್ಯಕ್ರಮದಲ್ಲಿ “ಒಬ್ಬ ಶ್ರಮಿಕ ತನ್ನ ಬ್ಯಾಂಕ್ ಅಕೌಂಟ್ ಓಪನ್ ಮಾಡಿ ಸಂಪಾದನೆ ನೋಡಿದಾಗ ಉಂಟಾಗಬಹುದಾದ ತೃಪ್ತಿ ನನಗೆ ದೊರಕಿತು. ಕಿರಿಯರಿಂದ ಹಿರಿಯರ ತನಕ ಇಷ್ಟೊಂದು ಮಂದಿಯ ಅಭಿಮಾನ ಪಡೆದಿರುವುದಕ್ಕೆ ಸಾರ್ಥಕ ಭಾವ ಮೂಡಿದೆ” ಎಂದು ಸುದೀಪ್ ಹೇಳಿದ ಮಾತು ಅಭಿಮಾನಿಗಳ ಮನಸು ತಟ್ಟುವಂತಿತ್ತು.

Recommended For You

Leave a Reply

error: Content is protected !!