ಕೆಜಿಎಫ್‌ ಶೂಟಿಂಗ್ ಬಗ್ಗೆ ಹರೀಶ್‌ ರಾಯ್‌

ಕೆಜಿಎಫ್ ತಂಡ ಉಡುಪಿ, ಮಲ್ಪೆಯಲ್ಲಿ ಚಿತ್ರೀಕರಣ ಮುಗಿಸಿಕೊಂಡು ಮರಳಿದೆ. ಈ ಬಾರಿ ಚಿತ್ರೀಕರಣದ ಸಣ್ಣ ಪುಟ್ಟ ಸನ್ನಿವೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ. ಕಳೆದ ಬಾರಿಯಷ್ಟು ಎಚ್ಚರಿಕೆ ವಹಿಸಿಲ್ಲವೇ? ಯಾಕೆ ಹೀಗೆ ಎನ್ನುವ ಪ್ರಶ್ನೆ ಮೂಡುತ್ತಿರುವಂತೆ ಕಾಸಿಂ ಭಾಯ್ ಪಾತ್ರಧಾರಿ ಹರೀಶ್ ರೋಯ್ ಕೂಡ ಸೆಟ್‌ನಲ್ಲಿ ತಾವು ಇದ್ದ ಒಂದಷ್ಟು ದೃಶ್ಯಗಳನ್ನು ಹಂಚಿಕೊಂಡಿದ್ದಾರೆ. ಈ ಬಗ್ಗೆ ಅವರಲ್ಲೇ ವಿಚಾರಿಸಿದಾಗ ಸಿನಿಕನ್ನಡ.ಕಾಮ್ ಗೆ ತಿಳಿದಂಥ ಮಾಹಿತಿಯನ್ನು ಇಲ್ಲಿ ನೀಡಿದ್ದೇವೆ.

ಶುಕ್ರವಾರ ರಾತ್ರಿಯೇ ಹಿಂದಿರುಗಿದ್ದೇವೆ. ನಾನು ನೆನಪಿಗಾಗಿ ಫೊಟೋ ತೆಗೆಸಿಕೊಂಡೆ. ಉಡುಪಿಯ ಸಾರ್ವಜನಿಕರು ವಿಡಿಯೋ ಮಾಡಿದ್ದಾರೆ. ಯಶ್ ಅವರ ಫೊಟೋಗಳು ಕೂಡ ಹೊರಗೆ ಬಂದಿವೆ. ಉಡುಪಿಯ ಮೀನುಗಾರರನ್ನು ಇಂಥ ವಿಷಯಗಳಲ್ಲಿ ಬೆದರಿಸುವುದು ಅಸಾಧ್ಯದ ಮಾತು. ಅವರು ಅಲ್ಲೇ ಹುಟ್ಟಿ ಬೆಳೆದವರು. ನಾವು ಒಮ್ಮೆಲೆ ಅವರ ಜಾಗಕ್ಕೆ ಹೋಗಿ ಅಧಿಕಾರ ಮಾಡಲು ಹೊರಟರೆ ಅದನ್ನು ತಕ್ಷಣಕ್ಕೆ ಅವರಿಂದ ಒಪ್ಪಲು ಸಾಧ್ಯವಾಗುವುದಿಲ್ಲ. ಒಳ್ಳೆಯತನದಿಂದ ಹೇಳಿದರೆ ಒಳ್ಳೆಯವರು. ಅದೇ ದಬಾಯಿಸಿದರೆ ಅವರಷ್ಟು ಕೆಟ್ಟವರು ಬೇರೆ ಇಲ್ಲ.

ಮಗನಿಗೊಂದು ಹಸ್ತಲಾಘವ!

ಕೊರೊನಾ ಕಾರಣ ಕಳೆದ ಬಾರಿಯಂತೆ ಮುಂಬೈ, ಚೆನ್ನೈಗಳಲ್ಲಿ ಚಿತ್ರೀಕರಣ ಮಾಡಲಾಗಿತ್ತು. ಅಲ್ಲಿ ಜನ ದಟ್ಟಣೆ ಇಲ್ಲದ ಸಮುದ್ರ ತೀರ ಶೂಟಿಂಗ್‌ಗೆ ಲಭ್ಯವಿರುತ್ತವೆ. ಆದರೆ ಇಲ್ಲಿ ಬೋಟ್‌ ತಂಗುವ ತೀರ ಪ್ರದೇಶವಾಗಿ ಒಂದೇ ಜಾಗ ಇರುವುದರಿಂದ ಮತ್ತು ಯಶ್‌ ಸರ್‌ ಬಗ್ಗೆ ಕರಾವಳಿಯಲ್ಲಿಯೂ ಕ್ರೇಜ್ ಇರುವುದರಿಂದ ಜನರನ್ನು ತಡೆಯುವುದು ಕಷ್ಟವಾಗಿತ್ತು. ನನ್ನ ಮಗ ರೋನಿತ್ ರಾಯ್‌ ಕೂಡ ಇದ್ದಾನೆ. ಈ ಕೈಗಳಿಂದ ಶೇಕ್ ಹ್ಯಾಂಡ್ ಮಾಡ್ತೀನಿ ಭಯ ಇಲ್ಲ ತಾನೇ ಎಂದರು. ಭಯ ಎನ್ನುವ ಕಾರಣಕ್ಕೆ ಕನ್ನಡದ ನಂಬರ್ ಒನ್ ನಿರ್ದೇಶಕನಿಗೆ ಹಸ್ತಲಾಘವ ನೀಡದಿರಲು ರೋನಿತ್ ಕೂಡ ತಯಾರಿರಲಿಲ್ಲ. ಅಂದಹಾಗೆ ಈ ಚಿತ್ರದಲ್ಲಿ ನನ್ನ ಮಗ ನಟಿಸುತ್ತಿಲ್ಲ. ಆದರೆ ಚಿತ್ರೀಕರಣ ತೋರಿಸಲೆಂದು ಕರೆದುಕೊಂಡಿದ್ದೆ. ಆತ ಇನ್ನೂ ವಿದ್ಯಾರ್ಥಿ. ನನಗೆ ಓಂ ಸಿನಿಮಾದಲ್ಲಿ ರಾಯ್ ಎನ್ನುವ ಪಾತ್ರ ಇತ್ತು. ಹಾಗಾಗಿ ನನ್ನ ಹೆಸರಿನ ಜತೆಗೆ ಇಂದಿಗೂ ರಾಯ್ ಸೇರಿಕೊಂಡಿದೆ. ಅದನ್ನೇ ನನ್ನ ಮಗನ ಹೆಸರಿಗೂ ವರ್ಗಾಯಿಸಿದ್ದೇನೆ. ಹಾಗಾಗಿ ಆತ ರೋನಿತ್ ರಾಯ್ ಆಗಿದ್ದಾನೆ ಎಂದು ಹೆಸರಿನ ಬಗ್ಗೆ ವಿವರವನ್ನೂ ನೀಡಿದರು ಹರೀಶ್ ರಾಯ್.

ಸೋಮವಾರದಿಂದ ಹೈದರಾಬಾದ್‌ಗೆ

ಮುಂದಿನ ಚಿತ್ರೀಕರಣ ಹೈದರಾಬಾದ್‌ನಲ್ಲಿ ನಡೆಯುವ ಸಾಧ್ಯತೆ ಇದೆ. ಸೋಮವಾರ ನಾವು ಹೈದರಾಬಾದ್‌ಗೆ ಹೊರಡಲಿದ್ದೇವೆ. ಸಂಜಯ್‌ ದತ್ ಅವರ ಬಹುತೇಕ ದೃಶ್ಯಗಳು ಚಿತ್ರೀಕರಿಸಲ್ಪಟ್ಟಿವೆ. ಆದರೆ ನನಗೆ ತಿಳಿದಿರುವಂತೆ ಒಂದಷ್ಟು ಕ್ಲೈಮ್ಯಾಕ್ಸ್ ದೃಶ್ಯಗಳು ಬಾಕಿ ಇವೆ. ಆದರೆ ಸಂಜಯ್‌ ದತ್ ಅವರ ದೇಹಸ್ಥಿತಿಯಲ್ಲಿ ಬದಲಾವಣೆಯಾಗಿದೆ. ನನಗಂತೂ ಸಂಜುಬಾಬ ಎಂದರೆ ಬಹಳ ಇಷ್ಟ. ಹಾಗಾಗಿ ಈ ಬಗ್ಗೆ ನಾನೇ ನಿರ್ದೇಶಕರಲ್ಲಿ ಪ್ರಸ್ತಾಪಿಸಿದೆ. ಆದರೆ ಅವರು ತುಂಬ ಕೂಲ್ ಆಗಿಯೇ ಪ್ರತಿಕ್ರಿಯಿಸಿದರು. ನಾನಂತೂ ಇಷ್ಟು ದೊಡ್ಡ ಪ್ರಾಜೆಕ್ಟ್ ನಿರ್ದೇಶಕರೊಬ್ಬರು ಪ್ರಶಾಂತ್ ನೀಲ್‌ ಅವರಂತೆ ಕೂಲ್ ಆಗಿರುವ ಮತ್ತೊಬ್ಬರನ್ನು ನೋಡಿಲ್ಲ. ಬಹುಶಃ ಅವರ ತಲೆಯಲ್ಲಿ ಪ್ರತಿಯೊಂದಕ್ಕೂ ಪರ್ಯಾಯ ವ್ಯವಸ್ಥೆಗಳು ಮೊದಲೇ ತಯಾರಾಗಿರಬೇಕು. ಹಾಗಾಗಿ ಅವರಲ್ಲಿ ಆ ಬಗ್ಗೆ ಯಾವುದೇ ಆತಂಕವಿಲ್ಲ.

Recommended For You

Leave a Reply

error: Content is protected !!
%d bloggers like this: