ಹಳೆಬೇರುಗಳ ಬಲದೊಂದಿಗೆ ಹೊಸ ಚಿಗುರಾಗಿ ಅರಳಲು ಬಂದಿದ್ದಾರೆ ನವ ನಿರ್ದೇಶಕ ಗುರು ಸಾವನ್. ಅವರಿಗೆ ಬೆಂಬಲವಾಗಿರುವ ಹಳೇಬೇರು ಎಂದರೆ ನಟ ದಿನೇಶ್ ಮಂಗಳೂರು. ಎಲ್ಲಕ್ಕಿಂತ ಮುಖ್ಯವಾಗಿ ಅನನ್ಯಾ ಭಟ್ ಎನ್ನುವ ಗಾನ ಪ್ರತಿಭೆಯನ್ನು ನಾಯಕಿಯಾಗಿಸುವ ಹೊಸ ಪ್ರಯೋಗಕ್ಕೂ ತಂಡ ಮುಂದಾಗಿರುವುದು ವಿಶೇಷ. ಈ ಎಲ್ಲ ವಿಚಾರಗಳು ಅನಾವರಣಗೊಂಡಿದ್ದು `ಸೇನಾಪುರ’ ಚಿತ್ರದ ಟೀಸರ್ ಬಿಡುಗಡೆಯ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ.
ನಿರ್ದೇಶಕರಾಗಿ ಗುರು ಸಾವನ್ ಅವರಿಗೆ ಇದು ಮೊದಲ ಚಿತ್ರ. ಆದರೆ ಚಿತ್ರರಂಗದಲ್ಲಿ ಅವರಿಗೆ ದಶಕದ ಅನುಭವ ಇದೆ. ಮೆಜೆಸ್ಟಿಕ್‌ನಿಂದ ಆರಂಭಿಸಿದ ಪಯಣ ಇಂದು ಗಾಂಧಿನಗರದಲ್ಲಿ ಸಿನಿಮಾದ ಕ್ಯಾಪ್ಟನ್ ಆಫ್ ಶಿಪ್ ಸ್ಥಾನಕ್ಕೆ ತಲುಪಿದೆ ಎಂದರೆ ಅದರಲ್ಲಿ ಅವರ ಪ್ರಯತ್ನದ ಪಾಲು ಹೆಚ್ಚೇ ಇದೆ. ಅದನ್ನು ನೆನಪಿಸಿಕೊಳ್ಳುತ್ತಾ ಮಾತು ಶುರು ಮಾಡಿದ ಗುರು ಸಾವನ್ “ನಿರ್ಮಾಪಕರಾದ ರಾಹುಲ್ ದೇವ್ ಮತ್ತು ಅಮಿತ್ ಕುಮಾರ್ ಅವರು ನನ್ನನ್ನು ಮುಂಬೈಗೆ ಕರೆದೊಯ್ದು ಗ್ಯಾಂಗ್ಸ್ ಆಫ್ ಮಾಲ್ಗುಡಿ’ ಎನ್ನುವ ಚಿತ್ರ ಮಾಡಲು ಪ್ರಯತ್ನಿಸಿದರು. ಆದರೆ ಸಿನಿಮಾ ಮಾಡಲು ತಯಾರಾಗುವ ಹೊತ್ತಿಗೆ ಲಾಕ್ಡೌನ್ ಶುರುವಾಗಿತ್ತು. ಆ ಸಂದರ್ಭದಲ್ಲಿ ಊರಿಗೆ ಮರಳಿ ವೆಬ್ ಸೀರೀಸ್ ಮಾಡಲೆಂದು ತಯಾರಾಗಿದ್ದ ಕತೆ
ಸೇನಾಪುರ’ ಆಗಿತ್ತು! ಆದರೆ ಬಳಿಕ ಸಿನಿಮಾ ಮಾಡುವ ರೂಪುರೇಷೆ ಪಡೆದುಕೊಂಡಿತು. ಇದು ಸುಮಾರು ಹದಿನೈದು ವರ್ಷಗಳ ಹಿಂದೆ ಕರ್ನಾಟಕದಲ್ಲಿ ನಡೆದ ನಿಜ ಘಟನೆಗಳನ್ನು ಆಧಾರಿಸಿ ಮಾಡಲಾಗಿರುವಂಥ ಚಿತ್ರ. ಚಿತ್ರಕ್ಕೆ ನಾಯಕಿಯಾಗಿ ಅನನ್ಯಾ ಭಟ್ ಅವರನ್ನು ಆಯ್ಕೆ ಮಾಡುವಂತೆ ಸಲಹೆ ನೀಡಿದ್ದು ದಿನೇಶ್ ಮಂಗಳೂರು ಅವರ ಪುತ್ರ ಸೂರ್ಯ ಸಿದ್ದಾರ್ಥ್. ಈ ಚಿತ್ರದಲ್ಲಿ ಎರಡು ಅದ್ಭುತ ಹಾಡುಗಳನ್ನು ಮಾಡಿದ್ದಾರೆ. ಎರಡೂ ಕೂಡ ಚೆನ್ನಾಗಿದೆ. ಪ್ರಶಾಂತ್ ಸಾಗರ್ ಛಾಯಾಗ್ರಹಣ ಮಾಡಿದ್ದಾರೆ. ಅರ್ಜುನ್ ಶ್ರೀನಿವಾಸ್ ಸಂಕಲನ ಮಾಡಿದ್ದಾರೆ.
ಚಿತ್ರದ ನಾಯಕಿ ಅನನ್ಯಾ ಭಟ್ ಮಾತನಾಡಿ “ನನಗೆ ಬಹಳ ವಿಚಾರಗಳು ಬಯಸದೆ ಬಂದ ಭಾಗ್ಯವಾಗಿ ದೊರಕಿವೆ. ಅದೇ ರೀತಿ ವೆಬ್ ಸೀರೀಸ್ ಆಗಬೇಕಿದ್ದ ಕತೆ ಸಿನಿಮಾ ಆಗುವಾಗ ನಾನು ನಾಯಕಿಯಾಗಿದ್ದೇನೆ. ಮಹಿಳಾ ಪ್ರಧಾನ ಚಿತ್ರ ಎಂದು ಹೇಳುವವರೆಲ್ಲರೂ ನಿಜಕ್ಕೂ ಮಹಿಳೆಯ ಪಾತ್ರಕ್ಕೆ ನ್ಯಾಯ ಒದಗಿಸುವುದಿಲ್ಲ. ಆದರೆ ಇವರು ಚಿತ್ರದಲ್ಲಿ ನೀಡಿದ ಪ್ರಾಧಾನ್ಯತೆ ಯಾವ ಮಟ್ಟಕ್ಕೆ ಇದೆ ಎಂದರೆ ಟೀಸರ್‌ನಲ್ಲಿ ಕೂಡ ಹಿನ್ನೆಲೆ ಧ್ವನಿಯಾಗಿ ನನ್ನ ಕಂಠವನ್ನೇ ಬಳಸಿಕೊಂಡಿದ್ದಾರೆ. ಹಾಗಾಗಿ ಚಿತ್ರಕ್ಕೆ ನಾನು ನಾಯಕಿ ಎಂದು ಹೇಳಬಹುದಾದರೂ ಸಿನಿಮಾ ನೋಡಿದ ಮೇಲೆ ನಾಯಕನೂ ನಾನೇ ಎನ್ನುವ ಅನಿಸಿಕೆ ಪ್ರೇಕ್ಷಕರಿಗೆ ಮೂಡಿದರೆ ಅಚ್ಚರಿ ಇಲ್ಲ. ಯಾಕೆಂದರೆ ಚಿತ್ರದಲ್ಲಿ ನಾಯಕಿ ತರುವಂಥ ಬದಲಾವಣೆಗಳು ಆ ಮಟ್ಟದಲ್ಲಿರುತ್ತವೆ” ಎಂದರು.
ಸಿನಿಮಾವನ್ನು ಹಸಿರು ಗುಡ್ಡ ಬೆಟ್ಟ ತುಂಬಿರುವ ಸಂತೆ ಕಟ್ಟೆಯಲ್ಲಿ ಚಿತ್ರೀಕರಣ ಮಾಡಲಾಗಿದೆ. ಕಡಿಮೆ ಬಜೆಟ್‌ನಲ್ಲಿಯೂ ರಿಸ್ಕ್ ತೆಗೆದುಕೊಂಡು ಮಾಡಿರುವ ರೀತಿ ನೋಡಿದರೆ ಮೈ ನವಿರೇಳಿಸುವಂತಿತ್ತು ಎಂದ ಅನನ್ಯಾ ಭಟ್, ಚಿತ್ರೀಕರಣ ಕೊನೆಯ ಹಂತ ತಲುಪುತ್ತಿದ್ದಾಗಲಷ್ಟೇ ನನ್ನಲ್ಲೇ ಸಂಗೀತ ನೀಡಲು ತಿಳಿಸಿದರು. ನಾನು ಹತ್ತು ವರ್ಷ ಸಮಯ ತೆಗೆದುಕೊಂಡು ಸಂಗೀತ ನಿರ್ದೇಶನದ ಪ್ರಯತ್ನ ಮಾಡಬೇಕು ಎಂದುಕೊಂಡಿದ್ದೆ. ಆದರೆ ಈಗಲೇ ಅವಕಾಶ ಸಿಕ್ಕಾಗ ಚಾಲೆಂಜ್ ತರಹ ಅನಿಸಿತ್ತು. ಸಿನಿಮಾ ಬಗ್ಗೆ ಹೆಚ್ಚು ತಿಳಿದಿದ್ದ ಕಾರಣ ಸಂಗೀತ ನೀಡಲು ಸಹಾಯವಾಯಿತು ಎಂದಿದ್ದಾರೆ.
ಹಿರಿಯ ಪೋಷಕನಟ ದಿನೇಶ್ ಮಂಗಳೂರು ಅವರು “ಸೇನಾಪುರದ ಶಕ್ತ ಅಶಕ್ತರ ನಡುವಿನ ಸೇನಾನಿ ನಾನು. ನನ್ನ ಶಕ್ತಿಯನ್ನೆಲ್ಲ ಉಪಯೋಗಿಸಿ ನಟಿಸಿದ್ದೇನೆ. ನಾನು ಪ್ರತಿನಿಧಿಸುವಂಥ 2000ದಲ್ಲಿ ನಡೆದ ಘಟನೆಗಳ ಪ್ರತಿರೂಪವನ್ನು ಮತ್ತೆ ಚಿತ್ರದ ಮೂಲಕ ಪ್ರತಿನಿಧಿಸಿದ್ದೇನೆ. ಅದಕ್ಕೆ ಕಾರಣ, ನಿರ್ದೇಶಕ ಗುರು ಸಾವನ್. ನಟನಾದಿಂದಲೂ ಜೊತೆಗಿದ್ದ ಅನನ್ಯಾ ಜೊತೆಗೆ ಈ ಸಿನಿಮಾದಲ್ಲಿಯೂ ಜೊತೆಗೆ ನಟಿಸಲು ಅವಕಾಶ ಸಿಕ್ಕಿದ್ದಕ್ಕೆ ಖುಷಿಯಿದೆ” ಎಂದರು. ಒಳ್ಳೆಯ ತಂಡದ ಜೊತೆಗೆ ಸೇರಿ ‘ಸೇನಾಪುರ’ದಲ್ಲಿ ಕೆಲಸ ಮಾಡಿರುವುದೇ ಖುಷಿಯ ಅನುಭವ ಎನ್ನುವುದು ನವನಟಿ ಸಿಂಧು ಅವರ ಅಭಿಪ್ರಾಯವಾಗಿತ್ತು. ಮತ್ತೋರ್ವ ನವನಟಿ ಅಮೂಲ್ಯ ಮಾತನಾಡಿ “ಚಿತ್ರತಂಡ ಸಂಪೂರ್ಣವಾಗಿ ಬೆಂಬಲ ನೀಡಿದೆ” ಎಂದರು. ಮುಂಬೈನಿಂದ ಬಂದಿರುವ ನಟಿ ರೀನಾ “ನನಗೆ ಗುರು ಸಾವನ್ ಅವರು ಒಂದಷ್ಟು ಸಮಯದಿಂದ ಪರಿಚಯ. ಕತೆ ತುಂಬ ಅದ್ಭುತವಾಗಿದೆ. ಅವರ ಕೆಲಸ, ಕಲಾವಿದರ ಬಗ್ಗೆ ಅವರಿಗಿರುವ ಕಾಳಜಿಯನ್ನು ಗಮನಿಸಿ ಖುಷಿಯಾಗಿದ್ದೇನೆ. ಅದರಲ್ಲಿಯೂ ಅನನ್ಯಾ ಮತ್ತು ದಿನೇಶ್ ಅವರೊಡನೆ ಕೆಲಸ ಮಾಡಿದ ಅನುಭವ ಚೆನ್ನಾಗಿದೆ” ಎಂದರು.
ಹಿರಿಯ ಪೋಷಕ ನಟ ಪರಮೇಶ್ ಅವರು ಮಾತನಾಡಿ ಚಿತ್ರದಲ್ಲಿ ತಮ್ಮದು ವಿಶೇಷವಾದ ಪಾತ್ರ. ಅದರ ಬಗ್ಗೆ ಏನೂ ಹೇಳಲಾಗದು. ಆದರೆ ನಿರ್ದೇಶಕರ ಜೊತೆಗಿನ ಪರಿಚಯವನ್ನು ಹೇಳಲೇಬೇಕು. ನಮ್ಮ ಪರಿಚಯವಾಗಿ ಹತ್ತು ವರ್ಷವಾಗಬಹುದು. ಅಂದಿನಿಂದಲೂ ಅವರ ಸಿನಿಮಾ ಆಸಕ್ತಿಯನ್ನು ನೋಡಿಕೊಂಡೇ ಬಂದಿದ್ದೇನೆ ಎಂದರು. ನಟ ಶೇಖರ್ ರಾಜ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿಮಲಾಸ್ ಎಂಟರ್ಟೇನ್ಮೆಂಟ್ ಮತ್ತು ಅಂಸ ಕ್ರಿಯೇಶನ್ಸ್ ಅಡಿಯಲ್ಲಿ ಸೇನಾಪುರ ಚಿತ್ರ ನಿರ್ಮಾಣಗೊಳ್ಳುತ್ತಿದ್ದು ಸದ್ಯಕ್ಕೆ ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ.