ಸ್ನೇಹಾ ಎನ್ನುವ ಅಪರೂಪದ ನಿರೂಪಕಿ

ಜನಿಸಿದ್ದು ಚಿಕ್ಕಮಗಳೂರು ಬಾಳೆಹೊನ್ನೂರಿನ ಕರಗಣೆ ಎನ್ನುವಲ್ಲಿ. ಆದರೆ ಧ್ವನಿಯಾಗಿದ್ದು ರಾಜಧಾನಿ ಬೆಂಗಳೂರಿನಲ್ಲಿ! ಹೌದು, ಇದು ಯುವ ನಿರೂಪಕಿ ಸ್ನೇಹಾ ನೀಲಪ್ಪ ಗೌಡ ಸದ್ದು ಮಾಡಿರುವ ಸುದ್ದಿ. ಮಲೆನಾಡಿನ ಕೃಷಿಕ ಕುಟುಂಬದಲ್ಲಿ ಹುಟ್ಟಿ ಬಿ ಎಸ್‌ ಸಿ ಮುಗಿಸಿ ಬೆಂಗಳೂರಿಗೆ ಬಂದು ಅದಾಗಲೇ ನಾಲ್ಕು ವರ್ಷಗಳಾಗಿವೆ. ಅಷ್ಟರೊಳಗೆ ನಾಲ್ಕು ಒಳ್ಳೆಯ ಮಾತುಗಳನ್ನು ಪಡೆಯಲು ಸಾಧ್ಯವಾಗಿರುವುದು ಇವರ ಹಿರಿಮೆ.

ಶಾಲಾ ಕಾಲೇಜುನ ದಿನಗಳಿಂದಲೂ ವೇದಿಕೆ ಕಾರ್ಯಕ್ರಗಳಲ್ಲಿ ಭಾಷಣ, ನಿರೂಪಣೆಯ ಹೊಣೆ ಇವರದೇ. ಮುಂದೆ ಇವರನ್ನು ಬೆಂಗಳೂರಿಗೆ ಸೆಳೆದಿದ್ದು ಕೂಡ ರಾಜ್ಯದ ಪ್ರಮುಖ ವಾಹಿನಿಗಳಲ್ಲಿನ ನಿರೂಪಕಿಯರೇ! ಬಣ್ಣದ ಲೋಕದ ನಿರೂಪಕಿಯರಂತೆ ತನಗಷ್ಟೊಂದು ಗ್ಲಾಮರ್ ಇಲ್ಲ ಎನ್ನುವುದು ಸ್ನೇಹಾಗಿರುವ ಅಂಜಿಕೆ. ಆದರೆ ನಿರೂಪಣೆ ಮಾಡುತ್ತಿದ್ದ ವೇದಿಕೆಯಿಂದಲೇ ಯುವ ನಿರ್ದೇಶಕ ಮಹೇಶ್ ಎದ್ದು ನಿಂತು, “ನಿಮ್ಮ ಕಂಠ ತುಂಬ ಮಧುರವಾಗಿದೆ” ಎಂದು ಮೆಚ್ಚಿಕೊಂಡಿದ್ದೂ ಇದೆ! ವೇದಿಕೆ ಕಾರ್ಯಕ್ರಮದ ನಿರೂಪಣೆಯ ವಿಚಾರಕ್ಕೆ ಬಂದರೆ ಬೆಂಗಳೂರಿನಲ್ಲಿ ಆಂಗ್ಲ ಮಿಶ್ರಿತ ನಿರೂಪಣೆಯೇ ಟ್ರೆಂಡ್! ಅವರ ನಡುವೆ ಆಂಗ್ಲ ಗೊತ್ತಿದ್ದರೂ ಬಳಸದಿರುವ ನಿರೂಪಕಿಯರಲ್ಲಿ ಅಪರ್ಣಾ ವಸ್ತಾರೆ ಜನಪ್ರಿಯರು. ಅದೇ ದಾರಿಯಲ್ಲಿರುವ ಯುವ ನಿರೂಪಕಿ ಸ್ನೇಹಾ ಎಂದರೆ ಒಪ್ಪಲೇಬೇಕು.

ಇಂದು ನಿರೂಪಕಿ ಎಷ್ಟು ಚೆನ್ನಾಗಿ ಮಾತನಾಡುತ್ತಾರೆ ಎನ್ನುವುದಕ್ಕಿಂತ ಎಷ್ಟು ಜನಪ್ರಿಯತೆ ಪಡೆದಿದ್ದಾಳೆ ಎಂದು ಗಮನಿಸಿಕೊಂಡು ಅವಕಾಶ ನೀಡುವ ಸಂದರ್ಭಗಳೇ ಹೆಚ್ಚು. ಅದೇ ಕಾರಣಕ್ಕೆ ಕಿರುತೆರೆಗಳಲ್ಲಿ ನಟಿಯಾಗಿ ಗುರುತಿಸಿಕೊಂಡವರಿಗೆ ಹೆಚ್ಚು ಆದ್ಯತೆ! ಅಪರ್ಣಾ ಅವರಿಗೂ ಇರುವ ಆ ಹಿನ್ನೆಲೆ ಸ್ನೇಹಾಗೆ ಇಲ್ಲ ಎನ್ನುವುದೇ ಆಯೋಜಕರಿಗೆ ಕಾಡುವ ದೊಡ್ಡ ಕೊರತೆ! ಆದರೆ ಸುದ್ದಿ ವಾಹಿನಿಗಳಲ್ಲಿ ಕೆಲಸ ಮಾಡಿದ ಅನುಭವ ಸ್ನೇಹಾಗೂ ಇದೆ. ಆದರೆ ಈಗ ಧಾರಾವಾಹಿಗಳಲ್ಲಿ ನಟಿಸಲು ಗಮನ ಕೇಂದ್ರೀಕರಿಸಿದ್ದಾರೆ ಸ್ನೇಹಾ. ಈಗಾಗಲೇ ಸಿನಿಮಾಗಳಲ್ಲಿ ಸಣ್ಣಪುಟ್ಟ ಅವಕಾಶಗಳನ್ನು ಪಡೆಯುತ್ತಿದ್ದಾರೆ. ಸ್ಪಷ್ಟವಾಗಿ ಕನ್ನಡ ಮಾತನಾಡಬಲ್ಲ ನಟಿಯರಿಗೆ ಕೊರತೆ ಇದೆ ಎಂದು ಕೊರಗುವ ನಮ್ಮ ನಿರ್ದೇಶಕರು ಒಮ್ಮೆ ಸ್ನೇಹಾ ಜೊತೆಗೆ ಮಾತನಾಡಿದರೆ ಓಹ್ ಕನ್ನಡ ಇಷ್ಟು ಮಾಧುರ್ಯವಾಗಿದೆಯಾ ಎಂದು ಅಚ್ಚರಿಪಡಬಹುದೇನೋ. ಗ್ಲಾಮರಸ್ಸಾಗಿಲ್ಲ ಎಂದುಕೊಂಡಿದ್ದ ಸ್ನೇಹಾ ಒಬ್ಬ ನಟಿಗೆ ಬೇಕಾದ ಎತ್ತರ, ಅಂಗಸೌಷ್ಠವ ಹೊಂದಿದ್ದಾರೆ ಎನ್ನುವುದನ್ನು ಫೊಟೋ ಶೂಟ್ ಮೂಲಕ ಸಾಬೀತು ಮಾಡಿದ್ದಾರೆ. ಇನ್ನೇನಿದ್ದರೂ ಕನ್ನಡದ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ನಿರ್ದೇಶಕರು ಮನಸು ಮಾಡಬೇಕಿದೆ ಅಷ್ಟೇ.

Recommended For You

Leave a Reply

error: Content is protected !!
%d bloggers like this: