ಕರಿ ಹೈದ ಕರಿ ಅಜ್ಜ ಸಿನಿಮಾದ ಚಿತ್ರೀಕರಣ ಪೂರ್ತಿಯಾಗಿದೆ. ನಿರ್ದೇಶಕ ಸುಧೀರ್ ಅತ್ತಾವರ ಅವರು ಚಿತ್ರೀಕರಣದ ಅನುಭವವನ್ನು ಮಾಧ್ಯಮಗೋಷ್ಠಿಯಲ್ಲಿ ಹಂಚಿಕೊಂಡಿದ್ದಾರೆ.
ಕೊರಗಜ್ಜನ ಮೇಲಿನ ನಂಬಿಕೆ ದಕ್ಷಿಣ ಕನ್ನಡಿಗರಿಗೆ ಬಾಲ್ಯದಿಂದಲೇ ಮೈಗೂಡಿ ಬರುತ್ತದೆ. ಕ್ರಿಕೆಟ್ ಆಡುವಾಗ ಚೆಂಡು ಕಾಣೆಯಾದರೆ ಕೊರಗಜ್ಜನಲ್ಲಿ ಪ್ರಾರ್ಥಿಸುತ್ತೇವೆ. ಆಗ ಚೆಂಡು ಕಾಣಿಸಿಕೊಂಡು ಮೂಡಿದಂಥ ಅಚ್ಚರಿ ಇಳಿ ವಯಸ್ಸಿನ ತನಕವೂ ಮುಂದುವರಿಯುತ್ತಲೇ ಇರುತ್ತದೆ. ಬಹುಶಃ ಕರಾವಳಿಯಲ್ಲಿ ಕೊರಗಜ್ಜನಿಗೆ ಹರಕೆ ಹೇಳಿಕೊಳ್ಳದವರು ಅಪರೂಪ ಎಂದಿದ್ದಾರೆ.
ಇತ್ತೀಚೆಗೆ ಕೊರಗಜ್ಜನಿಗೆ ಹರಕೆಯಾಗಿ ವಿಸ್ಕಿ, ಬಿಯರ್ ಇಡುತ್ತಿದ್ದಾರೆ. ಕೊರಗಜ್ಜ ಇದ್ದಿದ್ದು 12ನೇ ಶತಮಾನದಲ್ಲಿ. ಸುಮಾರು 850 ವರ್ಷಗಳ ಹಿಂದೆ ವಿಸ್ಕಿ, ಬಿಯರ್ ಇತ್ತೇ? ಕೊರಗಜ್ಜನಿಗೂ ಕಳ್ಳಿಗೂ ಸಂಬಂಧ ಇದೆ. ಹಾಗಾಗಿ ಕಳ್ಳು ಇಡುವುದು ಸೂಕ್ತ. ಅದರ ಹೊರತು ವಿಸ್ಕಿ ಬ್ರ್ಯಾಂಡಿ ನೀಡುವುದು ಎಷ್ಟು ಸರಿ ಎಂದು ಸುಧೀರ್ ಅತ್ತಾವರ್ ಹೇಳಿದರು.
ಮುಂದುವರಿದು ಮಾತನಾಡಿದ ಅವರು, ಭಕ್ತರು ಭಕ್ತಿಯಲ್ಲಿ ಏನೇ ಕೊಟ್ಟರೂ ಸ್ವೀಕರಿಸುತ್ತಾನೆ ಎನ್ನುವುದು ಸತ್ಯ. ಆದರೆ ಶಬರಿ ಎಂಜಲು ಮಾಡಿ ಹಣ್ಣು ಶ್ರೀರಾಮನಿಗೆ ಕೊಟ್ಟಿದ್ದು ಮತ್ತು ಕಣ್ಣಪ್ಪ ಮಾಂಸವನ್ನೇ ಶಿವನಿಗೆ ಅರ್ಪಿಸಿದ್ದು ತಮ್ಮ ಮುಗ್ದತೆಯಿಂದ. ಆದರೆ ಇಂದು ನಮಗೆ ಕೊರಗಜ್ಜನ ಹರಕೆ ತೀರಿಸಲು ಬೇರೆ ಬೇರೆ ದಾರಿಗಳಿವೆ. ವಿಸ್ಕಿ ಬ್ರ್ಯಾಂಡಿಗೆ ಒತ್ತು ನೀಡಬೇಕಿಲ್ಲ ಎಂದಿದ್ದಾರೆ.