ಚಲನಚಿತ್ರ ಪತ್ರಕರ್ತರ ಬೆಂಬಲ ಇರದಿದ್ದರೆ ನಾವು ಈ ಮಟ್ಟಕ್ಕೇರಲು ಸಾಧ್ಯವಾಗುತ್ತಿರಲಿಲ್ಲ ಎಂದು ರಾಷ್ಟ್ರ ಪ್ರಶಸ್ತಿ ವಿಜೇತ ಗಿರೀಶ್ ಕಾಸರವಳ್ಳಿ ಕೃತಜ್ಞತೆ ಸೂಚಿಸಿದರು. ಅವರು ‘ಕರ್ನಾಟಕ ಚಲನಚಿತ್ರ ಪತ್ರಕರ್ತರ ಸಂಘ’ದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡುತ್ತಿದ್ದರು.
“ಕನ್ನಡದಲ್ಲಿ ಹೊಸ ಅಲೆಯ ಸಿನಿಮಾಗಳು ಬೆಳೆಯಲು ಸರ್ಕಾರದಿಂದ ಸಿಗುವ ಸಬ್ಸಿಡಿಯಷ್ಟೇ ಪ್ರಮುಖ ಬೆಂಬಲ ದೊರಕಿದ್ದು ಪತ್ರಕರ್ತರ ಪ್ರಶಂಸೆಗಳಿಂದ” ಎಂದು ಗಿರೀಶ್ ಕಾಸರವಳ್ಳಿ ಹೇಳಿದ್ದಾರೆ.
ಈ ಹಿಂದೆ 70ರ ದಶಕದಲ್ಲಿ ಚಲನಚಿತ್ರ ಪತ್ರಕರ್ತರ ಸಂಘ ಇತ್ತು. ಆಗ ಅವರು ಸಿನಿಮಾ ವಿಮರ್ಶೆ ಮಾಡುತ್ತಿದ್ದರು. ಮಾತ್ರವಲ್ಲ ಮುಂದಿನ ವಾರದೊಳಗೆ ಅದೇ ಚಿತ್ರತಂಡವನ್ನು ಕರೆಸಿ ಮಾತುಕತೆ ನಡೆಸುತ್ತಿದ್ದರು. ಇಲ್ಲಿ ಅವರು ಬರೆದ ವಿಮರ್ಶೆಯನ್ನು ಪ್ರಶ್ನಿಸಲು ಚಿತ್ರತಂಡಕ್ಕೂ ಅವಕಾಶ ಇರುತ್ತಿತ್ತು. ತಾವು ಯಾಕೆ ಹಾಗೆ ಚಿತ್ರೀಕರಿಸಿದ್ದೇವೆ ಎಂದು ಹೇಳಲು ಚಿತ್ರತಂಡಕ್ಕೂ ಅವಕಾಶಕ್ಕೂ ಸಿಗುತ್ತಿತ್ತು ಎಂದು ಅಂದಿನ ಸಂದರ್ಭವನ್ನು ನೆನಪಿಸಿಕೊಂಡರು.
ಸಿನಿಮಾ ಮಾತ್ರವಲ್ಲ, ಚಿತ್ರದ ಹಿನ್ನೆಲೆ ಕೂಡ ಗಮನಿಸಬೇಕು
ಪತ್ರಕರ್ತರು ಸಿನಿಮಾ ವಿಮರ್ಶೆ ಮಾಡುವಾಗ ಆ ಸಿನಿಮಾ ಮೂಡಿದ ಹಿನ್ನೆಲೆಯನ್ನು ಗಮನಿಸಬೇಕು. ಪುಟ್ಟಣ್ಣನ ಸಿನಿಮಾ ಬಗ್ಗೆ ವಿಮರ್ಶೆ ಮಾಡುವಾಗ ಅವರಿಗಿದ್ದ ಧಾರ್ಮಿಕ, ರಾಜಕೀಯ, ಸಾಂಸ್ಕೃತಿಕ ಹಿನ್ನೆಲೆ ಅರ್ಥಮಾಡಿಕೊಂಡರೆ ಹೆಚ್ಚು ಅರ್ಥವಾಗುತ್ತೆ. ಅವರ ಸಿನಿಮಾ ಯಾವ ಸಂದರ್ಭದಲ್ಲಿ ಏನು ಹೇಳಲು ಹೊರಟಿತು? ಹೇಗೆ ಯಶಸ್ವಿಯಾಯಿತು ಹೇಗೆ ಸೋತಿತು ಎಂದು ಅರಿಯುವ ಪ್ರಯತ್ನ ಮಾಡಬಹುದು. ಇದು ಸಾಮಾನ್ಯರಿಗೆ ಸಾಧ್ಯವಾಗುವುದಿಲ್ಲ. ಸಿನಿಮಾ ಪತ್ರಕರ್ತರು ಇಂಥವುಗಳನ್ನು ಮಾಡಿ ದಾಖಲಿಸಬೇಕಾಗುತ್ತದೆ ಎಂದು ಕಾಸರವಳ್ಳಿಯವರು ಸಲಹೆ ನೀಡಿದರು.
ಈ ಹಿಂದೆ 70ರ ದಶಕದಲ್ಲಿ ಚಲನಚಿತ್ರ ಪತ್ರಕರ್ತರ ಸಂಘ ಇತ್ತು. ಆಗ ಅವರು ಸಿನಿಮಾ ವಿಮರ್ಶೆ ಮಾಡುತ್ತಿದ್ದರು. ಮಾತ್ರವಲ್ಲ ಮುಂದಿನ ವಾರದೊಳಗೆ ಅದೇ ಚಿತ್ರತಂಡವನ್ನು ಕರೆಸಿ ಮಾತುಕತೆ ನಡೆಸುತ್ತಿದ್ದರು. ಇಲ್ಲಿ ಅವರು ಬರೆದ ವಿಮರ್ಶೆಯನ್ನು ಪ್ರಶ್ನಿಸಲು ಚಿತ್ರತಂಡಕ್ಕೂ ಅವಕಾಶ ಇರುತ್ತಿತ್ತು. ತಾವು ಯಾಕೆ ಹಾಗೆ ಚಿತ್ರೀಕರಿಸಿದ್ದೇವೆ ಎಂದು ಹೇಳಲು ಚಿತ್ರತಂಡಕ್ಕೂ ಅವಕಾಶಕ್ಕೂ ಸಿಗುತ್ತಿತ್ತು ಎಂದು ಅಂದಿನ ಸಂದರ್ಭವನ್ನು ನೆನಪಿಸಿಕೊಂಡರು.
ಕಮರ್ಷಿಯಲ್ ಗೆಲುವೊಂದೇ ಸಿನಿಮಾದ ಗೆಲುವಲ್ಲ..!
ಒಂದು ಸಮಾಜವನ್ನು ಆಳುತ್ತಿರುವ ಸಿದ್ಧಾಂತಗಳನ್ನು ಇಟ್ಟುಕೊಂಡು ಚಿತ್ರ ಮಾಡಿ ಗೆಲ್ಲುವುದು ಸುಲಭ. ಆದರೆ ಸಮಾಜವನ್ನು ಪ್ರಶ್ನಿಸುವ, ಟೀಕಿಸುವ, ವಿಶ್ಲೇಷಿಸುವ ಚಿತ್ರಗಳು ಯಾವತ್ತೂ ಯಶಸ್ವಿಯಾಗಿಲ್ಲ. ಹಾಗಾಗಿ ಆ ಯಶಸ್ಸು ಒಂದೇ ಮಾನದಂಡ ಆಗಬಾರದು. ಗೆಲುವು ಕಂಡ ಸಿನಿಮಾಗಳ ಹಿಂದಿನ ಧೋರಣೆಗಳು ಅನಾರೋಗ್ಯಕರವಾಗಿರುತ್ತದೆ. ಅದನ್ನೇ ಮೆರೆಸಿದರೆ ಅದು ಸಮಾಜಕ್ಕೂ ಧಕ್ಕೆ ತರುತ್ತದೆ. ಅದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಇಂಥ ಪ್ರಯತ್ನಗಳನ್ನು ಸಂಘ ಮಾಡಬೇಕು. ಆಗ ಮಾತ್ರ ಪತ್ರಕರ್ತರು ಸಿನಿಮಾ ಮಾಧ್ಯಮದ ಕೊಂಡಿಯಾಗಲು ಸಾಧ್ಯ ಎಂದರು.
ಕನ್ನಡ ಸಿನಿಮಾಗಳು ರಾಷ್ಟ್ರಮಟ್ಟದಲ್ಲಿ ಹೆಸರಾಗಬೇಕು
ಕನ್ನಡ ಸಿನಿಮಾಗಳನ್ನು ರಾಷ್ಟ್ರೀಯ ಮಟ್ಟದಲ್ಲಿ ಪ್ರಾಜೆಕ್ಟ್ ಮಾಡುವ ಪ್ರಯತ್ನಗಳಾಗಬೇಕು. ಕಾಂತಾರ ಆಗಿದ್ದರೆ ಅದಕ್ಕೆ ಕಾರಣ ಆ ಚಿತ್ರದ ಶಕ್ತಿ. ಅದು ತಾನಾಗಿಯೇ ಪ್ರೊಜೆಕ್ಟ್ ಮಾಡಿಕೊಂಡಿದೆ. ಇನ್ನು ಕೆಜಿಎಫ್ ಯಶಸ್ಸಿನ ಬಗ್ಗೆ ನಾನು ಉತ್ಸುಕನಾಗಿಲ್ಲ. ಯಾಕೆಂದರೆ ಬೇರೆ ಕಾರಣಗಳಿಂದಾಗಿ ಅದು ಯಶಸ್ವಿಯಾಗಿದೆ. ಕಾಂತಾರದ ಯಶಸ್ಸಿನಲ್ಲಿ ಕೆಲಸ ಮಾಡಿರುವ ಕನ್ನಡದ ಅಸ್ಮಿತೆಯ ಬಗ್ಗೆ ಮಾತನಾಡಬಹುದು. ಅದರ ಕುರಿತಾದ ಭಿನ್ನಾಭಿಪ್ರಾಯಗಳನ್ನು ರಾಷ್ಟ್ರೀಯ ಮಟ್ಟದಲ್ಲಿ ಮಾತನಾಡಬಹುದು. ಕಾಂತಾರದ ಹೊರತು ಕನ್ನಡದಲ್ಲಿ ಕಳೆದ ವರ್ಷಗಳಿಂದ ಐದಾರು ಚಿತ್ರಗಳು ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿವೆ. ಬಳೆಕೆಂಪ, ಪಿಂಕಿ ಎಲ್ಲಿ, ಪೆದ್ರೊ ಹೀಗೆ ಸಾಕಷ್ಟು ಸಿನಿಮಾಗಳು ಪ್ರಶಸ್ತಿಗಳನ್ನು ಬಾಚಿವೆ. ಜನಮನಸು ಗೆದ್ದಿವೆ. ಆದರೆ ಇವುಗಳನ್ನು ಕನ್ನಡದ ಹೆಮ್ಮೆಯಾಗಿ ರಾಷ್ಟ್ರಮಟ್ಟದಲ್ಲಿ ಜನಗಳಿಗೆ ತಲುಪಿಸುವ ಕೆಲಸ ಪತ್ರಕರ್ತರ ಸಂಘದ ಮೂಲಕ ಆಗಬೇಕಾಗಿದೆ.
ನಮ್ಮ ಹೆಗ್ಗಳಿಕೆ ಕಮರ್ಷಿಯಲ್ ಗಳಿಕೆ ಮಾತ್ರವಲ್ಲ, ಅಸ್ಮಿತೆ ಸಾರುವ ಸಿನಿಮಾಗಳು ಕೂಡ ಆಗಿವೆ. ಇವುಗಳ ಕುರಿತಾದ ಕಾರ್ಯಕ್ರಮಗಳು ರಾಜ್ಯಗಳ ಆಚೆಯೂ ನಡೆಯಬೇಕು ಎಂದಿದ್ದಾರೆ.
ಕರ್ನಾಟಕ ಚಲನಚಿತ್ರ ಪತ್ರಕರ್ತರ ಸಂಘದ ಲಾಂಛನವನ್ನು ಗಿರೀಶ್ ಕಾಸರವಳ್ಳಿಯವರು ಬಿಡುಗಡೆಗೊಳಿಸಿದರು. ಹಿರಿಯ ಪತ್ರಕರ್ತೆ ಡಾ.ವಿಜಯಮ್ಮ ಮತ್ತು ಬಾನಾ ಸುಬ್ರಹ್ಮಣ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪತ್ರಕರ್ತ ಶರಣು ಹುಲ್ಲೂರು ಕಾರ್ಯಕ್ರಮ ನಿರೂಪಿಸಿದರು.