‘ಕಲ್ಕಿ 2898 AD’ ಇದೀಗ ಅಮೆಜಾನ್ ನಲ್ಲಿ..!

ದೇಶದಲ್ಲೇ ದುಬಾರಿ ಬಂಡವಾಳ ಹಾಕಿ ನಿರ್ಮಾಣಗೊಂಡಿರುವ ಚಿತ್ರ, ಪ್ರಭಾಸ್ ನಾಯಕತ್ವದ ಕಲ್ಕಿ 2898 ಎ ಡಿ. ಇಂಥದೊಂದು ಚಿತ್ರವನ್ನು ರಿಲೀಸ್ ಗೂ ಮೊದಲು ಅಮೆಜಾನ್ ನಲ್ಲಿ ಯಾಕೆ ರಿಲೀಸ್ ಮಾಡುತ್ತಾರೆ ಎನ್ನುವ ಸಂದೇಹ ಸಹಜ. ಆದರೆ ಅಮೆಜಾನ್ ನಲ್ಲಿ ರಿಲೀಸಾಗುತ್ತಿರುವುದು ಕಲ್ಕಿಯ ಎರಡು ಪಾತ್ರಗಳ ಅನಿಮೇಶನ್ ರೂಪ.

ಕಲ್ಕಿ 2898 ಎಡಿ ಎರಡು ಎನ್ನುವುದು ಮುಂದುವರಿದ ಜಗತ್ತಿನ ಕತೆ. ಪೌರಾಣಿಕ ಹಾಗೂ ಪುರಾತನ ಕಾಲದ ಮಾದರಿಯ ಪಾತ್ರಗಳಲ್ಲಿ ಕಂಡಿರುವ ಪ್ರಭಾಸ್ ಈಗ ದಿಢೀರನೇ ಅಲ್ಟ್ರಾ ಮಾಡರ್ನ್ ಯುಗಕ್ಕೆ ಪ್ರವೇಶಿಸಲಿದ್ದಾರೆ. ಹೀಗಾಗಿ ಈ ಬದಲಾವಣೆಗೆ ಪ್ರೇಕ್ಷಕರನ್ನು ಸಿದ್ಧಪಡಿಸಬೇಕಾದ ಅನಿವಾರ್ಯತೆ ಎದುರಾಗಿದೆ. 2898ನೇ ವರ್ಷ ಎನ್ನುವ ನಿರ್ದೇಶಕನ ಕಲ್ಪನೆ ಹೇಗಿರಲಿದೆ ಎನ್ನುವುದರ ಸೂಚನೆಯನ್ನು ಮೊದಲೇ ಪ್ರೇಕ್ಷಕರಿಗೆ ನೀಡುವ ಪ್ರಯತ್ನ ನಡೆಸಲಾಗಿದೆ. ಇದಕ್ಕಾಗಿ ಪ್ರಭಾಸ್ ನ ಭೈರವ ಮತ್ತು ಯಾಂತ್ರೀಕೃತವಾದ ಬುಜ್ಜಿ ಎನ್ನುವ ಪಾತ್ರಗಳನ್ನು ಅನಿಮೇಶನ್ ಮೂಲಕ ಹೊರತರಲಾಗಿದೆ. ಸುಮಾರು 15 ನಿಮಿಷಗಳ‌ ಈ ಅನಿಮೇಶನ್ ಸಂಚಿಕೆಯ ಮೊದಲ ಸೀಸನ್ ಶುಕ್ರವಾರ ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆಯಾಗಿದೆ. ಚಿತ್ರ ಬಿಡುಗಡೆಗೂ ಮೊದಲು ಇಷ್ಟೇ ಕಾಲಾವಧಿಯ ಎರಡನೇ ಸಂಚಿಕೆ ಕೂಡ ರಿಲೀಸ್ ಆಗಲಿದೆ. ಮೊದಲ‌ ಸಂಚಿಕೆಯನ್ನು ಗುರುವಾರ ದೇಶ, ವಿದೇಶಗಳ ಪ್ರಮುಖ‌ ನಗರಗಳಲ್ಲಿ ಮಾಧ್ಯಮಗೋಷ್ಠಿ‌ ನಡೆಸಿ ರಿಲೀಸ್ ಮಾಡಲಾಗಿದೆ.

ಪ್ರಸ್ತುತ ಅಮೆಜಾನ್ ನಲ್ಲಿ ‘ಬುಜ್ಜಿ ಆ್ಯಂಡ್ ಭೈರವ’ ಹೆಸರಲ್ಲಿ ಸೀಸನ್ ಒನ್ ಲಭ್ಯವಿದೆ.
ಈ ಸಂಚಿಕೆಯು ಇಂಗ್ಲಿಷ್ ಮತ್ತು ತೆಲುಗು ಭಾಷೆಯಲ್ಲಿ ಮಾತ್ರ ಇವೆ. ಇದರಲ್ಲಿನ‌ ಭೈರವ ಪಾತ್ರಕ್ಕೆ ಪ್ರಭಾಸ್ ಮುಖಛಾಯೆ ಇದೆ. ಭೈರವ ಪಾತ್ರಕ್ಕೆ ಖುದ್ದು ಪ್ರಭಾಸ್ ಕಂಠದಾನ ನೀಡಿದ್ದರೆ, ಬುದ್ಧಿ ಎನ್ನುವ ಯಾಂತ್ರಿಕ ಪಾತ್ರಕ್ಕೆ ಮಹಾನಟಿ ಖ್ಯಾತಿಯ ಕೀರ್ತಿ ಸುರೇಶ್ ಧ್ವನಿಯಾಗಿದ್ದಾರೆ. ಅಂದಹಾಗೆ ಇವೆರಡೂ ಕೂಡ ಚಿತ್ರದಲ್ಲಿ ಬರುವ ಪಾತ್ರಗಳೇ ಆದರೂ, ಅನಿಮೇಶನ್ ಮೂಲಕ ಬಿಡುಗಡೆ ಮಾಡಿರುವ ಯಾವುದೇ ದೃಶ್ಯಗಳು ಕಲ್ಕಿಯಲ್ಲಿ ಇರುವುದಿಲ್ಲ ಎಂದು ನಿರ್ದೇಶಕ ನಾಗ್ ಅಶ್ವಿನ್ ಸ್ಪಷ್ಟಪಡಿಸಿದ್ದಾರೆ. “ಈ ಎರಡು ಸಂಚಿಕೆಗಳಿಗಾಗಿ ಎರಡು ವರ್ಷಗಳ ಹಿಂದೆಯೇ ತಯಾರಿ ಶುರುವಾಗಿತ್ತು. ಹೈದರಾಬಾದ್ ನಲ್ಲಿ ಇದರ ಕೆಲಸಗಳು ನಡೆದಿದ್ದು ಛೋಟಾ ಭೀಮ್ ನಂಥ ದೇಶದ ಪ್ರಖ್ಯಾತ ಕಾಮಿಕ್ ಐಕಾನ್ ಪಾತ್ರಗಳ ಮಾದರಿಯಲ್ಲಿ ಇದನ್ನು ಸೃಷ್ಟಿಸಲಾಗಿದೆ. ಈ ಅನಿಮೇಶನ್‌ ಎನ್ನುವುದು ಸಿನಿಮಾ ಮಾಡಿದಷ್ಟೇ ಕಷ್ಟಕರವಾದ ಸಂಗತಿ. ಈ ಅನಿಮೇಶನ್ ತಯಾರಕರ ಬಗ್ಗೆ ಹೆಮ್ಮೆ ಇದೆ.
ಬುಜ್ಜಿ ಮತ್ತು ಭೈರವ ಫನ್ ಪಾತ್ರಗಳು ಎಲ್ಲರೂ ಇಷ್ಟಪಡುವಂಥ ಹಾಸ್ಯಮಯ ಪಾತ್ರಗಳಾಗಿವೆ. ಈ ಎರಡೂ ಪಾತ್ರಗಳು ಮನರಂಜನೆ ನೀಡಲಿವೆ. ನಿಮಗೆ ಮತ್ತು ಮಕ್ಕಳಿಗೆ ಇಷ್ಟವಾಗುವುದಾಗಿ ಅಂದುಕೊಂಡಿದ್ದೀನಿ” ಎಂದು ನಾಗ್ ಅಶ್ವಿನ್ ಭರವಸೆ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ನಡೆದ ಈ ಸುದ್ದಿಗೋಷ್ಠಿಯಲ್ಲಿ ಕಲ್ಕಿ ಚಿತ್ರವನ್ನು ಕರ್ನಾಟಕಕ್ಕೆ ವಿತರಿಸುತ್ತಿರುವ ಕೆವಿಎನ್ ನಿರ್ಮಾಣ ಸಂಸ್ಥೆಯ ಸುಪ್ರೀತ್ ಉಪಸ್ಥಿತರಿದ್ದರು.

Recommended For You

Leave a Reply

error: Content is protected !!